ಅಲ್ಲಮಪ್ರಭುಗಳು

ಅಲ್ಲಮಪ್ರಭುಗಳು

ಕಂಗಳ ಕರುಳ ಕೊಯ್ದವರ,                    

ಮನದ ತಿರುಳ ಹುರಿದವರ,                             

ಮಾತಿನ ಮೊದಲ ಬಲ್ಲವರ;                          

ಎನಗೊಮ್ಮೆ ತೋರಾ ಗುಹೇಶ್ವರಾ.

                    ಅಲ್ಲಮಪ್ರಭುಗಳು

                         ವಚನ ಅನುಸಂಧಾನ*

ಅಲ್ಲಮಪ್ರಭುಗಳ ಈ ಮೇಲಿನ ಚೌಪದಿಯಂಥಾ ಅನನ್ಯವಾದ ವಚನವನ್ನು ಓದಿ ಅನುಭಾವವನ್ನು ಮಾಡಿ ಅನುಭವಿಸುವುದೆಂದರೆ; ನಿಜವಾಗಿಯೂ ಅದೊಂದು ಅನುಪಮವಾದ ಆನಂದದಾಯಕ ಕ್ಷಣವೇ ಆಗಿದೆ. ನಾಲ್ಕೇ ನಾಲ್ಕು ಸಾಲುಗಳ ಈ ವಚನದೊಳಗೆ ಹುದುಗಿರುವ ಅನುಭಾವದ ಆ ಅನುಪಮ ಅನನ್ಯನುಡಿ ಅಡುಗೆಯನ್ನ ಖುದ್ದಾಗಿ ಉಂಡು, ಅದರೊಳಗಿನ ಜ್ಞಾನರಸ ಪಾಕದ ಸಾರ ಸ್ವಾರಸ್ಯವನ್ನು ಸವಿದು, ಅನುಭವಿಸಿ, ಹೊಂದಿದ ದಿವ್ಯವಾದ ಆ ಪರಮಾನಂದದ ಸುಖವನ್ನ ಸ್ವತಃ ಅನುಭವಿಸುವುದೇ ಒಂದು ಅದ್ಭುತವಾದ ಮತ್ತು ಸೊಗಸಾದ ಸುಂದರ ಸುಖಾನುಭವವಾಗಿದೆ! 

ಸುಪ್ರಸಿದ್ಧ ಜ್ಞಾನಿಗಳು ವ್ಯೋಮಕಾಯ ಶರಣರು ಆದ ಅಲ್ಲಮಪ್ರಭುಗಳ ವಚನ ಅನುಭಾವವನ್ನು ನಿರ್ವಚನ ಮಾಡುವುದೆಂದರೆ; ಅದು ಕಂಬಳದ ಕೋಣನ ಬಾಲ ಹಿಡಿದು ಕೆಸರು ಗದ್ದೆಗೆ ಇಳಿದು ಓಡಿದಂತೆಯೇ ಸರಿ! ಆದರೆ ಇಲ್ಲಿ ಆ ಗುರಿಯನ್ನ ಮುಟ್ಟುದು ಬಿಡುವುದು ಅಲ್ಲಿ ಓಡುವವನ ಶಕ್ತಿ ಸಾಮರ್ಥ್ಯವನ್ನ ಮಾತ್ರ ಅವಲಂಬಿಸಿರುತ್ತದೆ. ಅಂತೆಯೇ ಇಲ್ಲಿ ಅಲ್ಲಮಪ್ರಭುಗಳ ಈ ವಚನದ ಅನುಭಾವವನ್ನು ಹಿಂಬಾಲಿಸುವುದೂ ಕೂಡಾ ಕಂಬಳದ ಓಟದ ಹಾಗೆನೇ ಕಷ್ಟ ಸಾಧ್ಯ!! ಇರಲಿ.

ಈಗ ಇಲ್ಲಿ ಪ್ರಸ್ತುತ ಈ ವಚನದಲ್ಲಿ ಮುಖ್ಯವಾಗಿ ಕಂಡುಬರುವಂತೆ, ಮೊದಲಿನ ಮೂರು ಸಾಲುಗಳಲ್ಲಿ ಬಳಸಿರುವ; ಕಣ್ಣು ಮನ ಮಾತು ಇವು ಮೂರೂ ಪದಗಳು ಇಲ್ಲಿ ಮುಖ್ಯವಾದ ಹಾಗೂ ಮಹತ್ವದ ಸ್ಥಾನವನ್ನು ಪಡೆದಿವೆ. ಈ ಮೂರೂ ಪದಗಳೇ ಪ್ರಸ್ತುತ ವಚನದ ಅನುಭಾವ ದ್ರವ್ಯವ ನ್ನು ತಮ್ಮಲ್ಲಿಯೇ ಇಂಬಿಟ್ಟುಕೊಂಡ ಅಮೃತದ ಕುಂಡದ ರೀತಿಯ ಪದಗಳಾಗಿವೆ. ಹಾಗಾಗಿ ಇವು ಗಳನ್ನು ಸರಿಯಾಗಿ ಗ್ರಹಿಸಿ ಅರ್ಥವ್ಯಾಪ್ತಿಯ ಆಳ ಅಗಲವನ್ನು ಅನುಸರಿಸಿ ಅನುಭಾವವನ್ನ ಮಾಡಿ ಅರಿತುಕೊಂಡರೆ ಮಾತ್ರ ಈ ವಚನ ಒಳಗೊಂಡ ಮುಂದಿನ ಅರ್ಥಗ್ರಹಿಕೆಯ ಸಾಧನೆಗೆ ಅವುಗಳು ಪಾವಟಿಗೆಗಳೇ ಆಗಬಲ್ಲವು. ಹಾಗಾಗಿ ಇಲ್ಲಿ ಈ ಮೂರೂ ಪದಗಳೊಡಮುರಿದು ಮುಪ್ಪುರಿಯಾ ಗಿ ಹುರಿಗೊಂಡ ಹಗ್ಗದಂತೆ ಗಟ್ಟಿಯಾದಾಗಲೇ ಆ ಹಗ್ಗವನ್ನು ಬಳಸಿಕೊಂಡು ವಚನಾಂತರಾಳದಲ್ಲಿ ಇಳಿದು ಅಲ್ಲಿ ಇರುವಂಥ ಅನುಭಾವದ ಅಮೃತ ವನ್ನು ತರಲು ಸಾಧ್ಯವಾದೀತು! ಎನಿಸುತ್ತದೆ.

ಕಣ್ಣು ; ಭೌತಿಕ ಶರೀರದ ಪಂಚ ಜ್ಞಾನೇಂದ್ರಿಯ ಗಳಲ್ಲೇ ಪ್ರಮುಖವಾದ ಅನುಭವದ ಅನುಭೂತಿ ನೀಡುವ ಅಂಗವಾಗಿದೆ.ಈ ಲೌಕಿಕ ಪ್ರಪಂಚದಲ್ಲಿ ನಡೆಯುವಂಥಾ ಆಗು ಹೋಗುಗಳ ಪ್ರಪ್ರಥಮ ಅನುಭವ ದರ್ಶನವೇ ಈ #ಕಣ್ಣಿಂದ. ತನ್ಮೂಲಕ ದಕ್ಕುವ ಅನುಭವವೇ ಭವದ ಬದುಕಿಗೆ ಬೇರುಗ ಳನ್ನು ಆಳವಾಗಿ ಇಳಿ ಬಿಡುತ್ತದೆ. ಆ ಮೂಲಕವೇ ಸಾಧ್ಯವಾಗುವ ಭವ ಜೀವನದ ಬಾಂಧವ್ಯ ಇಲ್ಲಿ ಚಿಗುರಿ ಪುನರಪಿ ಶುರುವಾಗುತ್ತದೆ. ಭವದ ಬದು ಕಿನ ಅಪೇಕ್ಷೆಯ ಈ ಕರುಳ ಸಂಬಂಧವನ್ನ ಸಾಧ್ಯ ವಾಗಿಸುವ ಆಶೆಗಣ್ಣಿನ ಈ ಕರುಳ ಮಿಡಿತವನ್ನು ಕಡಿದು ಕೊಂಡರೆ ಮಾತ್ರವೇ ಈ ಭವ ಜೀವನದ ಬದುಕಿನ ಪುನರಪಿ ಜನನ ಮರಣದ ಬಯಕೆಯ ಬಾಂಧವ್ಯವವನ್ನ ಪೂರ್ತಿಯಾಗಿ ಕಳಚಿಕೊಳ್ಳಲು ಸಾಧ್ಯವಾಗಬಹುದಾಗಿದೆ ಎನಿಸುತ್ತದೆ.

ಅದರಂತೆಯೇ ಪ್ರಸ್ತುತ ಈ ವಚನದ ಎರಡನೇ ಸಾಲಿನಲ್ಲಿ ಬರುವ ಮನಸ್ಸು ಬಹು ಮುಖ್ಯವಾ ದ ಅಂಗ ತತ್ವವಾಗಿದೆ. ಇದು ಇಹ ಪರವನ್ನು ಬೆಸೆ ಯುವ ಅಮೂರ್ತ ರೂಪದ ಅಂಗವಾಗಿದೆ. ಈ ಭೌತಿಕ ಶರೀರದ ಮೂಲಕ ದೊರೆತ ಅನುಭವದ ಸಾರ ಸರ್ವಸ್ವವನ್ನೂ ಆಧ್ಯಾತ್ಮಿಕ ನೆಲೆಗೆ ತಲುಪಿ ಸಬಲ್ಲ ಅತ್ಯಂತ ಪ್ರಮುಖವಾದ ಸಾಧನವೇ ಈ ಮನಸ್ಸಾಗಿದೆ. ಇದರ ಮಹತ್ವವನ್ನು ಸರಿಯಾಗಿ ಅರಿತು ಅನುಭವಿಸಿ, ಲೌಕಿಕ ಬದುಕಿನ ಇತಿ ಮಿತಿ ಗಳನ್ನ ಮೀರಿ ಆ ಅನುಭವದ ಅನನ್ಯ ಮಕರಂದ ವನ್ನು ಹೊತ್ತು, ಊರ್ಧ್ವಮುಖಿಯಾಗಿ ಷಟಸ್ಥಲ ಪಾವಟಿಗೆಗಳ ದಾಟಿ ಸಹಸ್ರಾರದ ಮೇರು ಶಿಖರ ವನ್ನು ಏರುವುದು ಈ ಭಾವಾರೂಢದ 'ಮನಸ್ಸು" ಮಾತ್ರ. ಈ ಭಾವಾರೂಢದ ಪರಿಶುದ್ಧ ಮನಸ್ಸಿನ ಬೀಜವನ್ನಾಗ ಅಲ್ಲಿ ಬಿತ್ತಿ ಬೆಳೆಯ ಬಹುದಾಗಿದೆ. ಆಗ ಅದು ನಿಜಕ್ಕೂ ಸೃಜನಶೀಲವಾದದ್ದೂ ಆಗಿ ರುತ್ತದೆ ಕೂಡಾ. ಆದ್ರೆ ಈ 'ಮನಸ್ಸಿ'ನ ಬೀಜವು ಅಧೋಮುಖಿಯಾದರೆ!? ಅದು ಮತ್ತೆ ಭವದಲ್ಲಿ ಮೊಳಕೆ ಒಡೆಯುವುದು! ಅದಕ್ಕೆಂದೇ ಅದನ್ನು 'ಹುರಿ'ದರೆ ಅಕಸ್ಮಾತ್ ಎದೆಯ ಮಣ್ಣಿಗೆ ಬಿದ್ದರೂ 'ಹುರಿದ ಬೀಜ' ವು ಮೊಳಕೆ ಒಡೆಯಲಾರದು!! ವಾವ್ ಹೇಗಿದೆ ನೋಡಿದಿರಾ ಅಲ್ಲಮಪ್ರಭುಗಳ ಅನುಭಾವದ ಪರಿ.

ಇನ್ನು ಮೂರನೇ ಸಾಲಿನಲ್ಲಿ ಬರುವ ' ಮಾತು ' ಎನ್ನುವ ಪದ. ಈ 'ಮಾತು' ಎನ್ನುವ ಬೀಜ ಪದ ವನ್ನು ಮನಸ್ಸು ಮಾತ್ರ ಬಿತ್ತುವಂಥಾದ್ದು. 'ಭಾವ ಬೀಜ' ವನ್ನು ಸ್ಥಳದಿಂದ ಸ್ಥಳಕ್ಕೆ ಪ್ರಸಾರ ಮಾಡಿ, ಭವಜೀವನದ ಹೃದ್ಭೂಮಿಗೆ ಮತ್ತೆ ಭವದಬದುಕ ನ್ನ ಬಿತ್ತಿಬೆಳೆಯಲು 'ಮಾತಿನ' ಈ ಅಮಾತ್ಯಗುಣ ದ ಅಗತ್ಯವಿದೆ. ಇಂಥ ಮಹತ್ವದ ಬೀಜ ಮಾತಿನ ಮೊದಲನ್ನು ಅರಿತುಕೊಂಡು ಆಡುವುದು ಕೂಡ ಇನ್ನೂ ಮುಖ್ಯವಾಗುತ್ತದೆ. ಹಾಗಾಗಿ, ಶರೀರದ ಈ ಮುಖ್ಯ ಮೂರೂ ಅವಯವಗಳಾದ; ಕಣ್ಣು ಮನ ಮಾತು ಇವುಗಳ ಒಳ ಬೇತುಗಳ ಜಾಲದ ಇತಿ ಮಿತಿಗಳನ್ನು ಬಲ್ಲ ಮಲ್ಲರು ಮಾತ್ರವೇ ಇಲ್ಲಿ ಯೂ ಸಲ್ಲುವ ಮತ್ತು ಅಲ್ಲಿಯೂ ಸಲ್ಲುವ ಶರಣ ರಾಗುವರು. ಅಂಥವರನ್ನ ಕಾಣುವ ಹಂಬಲವನ್ನ ಅಲ್ಲಮಪ್ರಭುಗಳು ಪ್ರಸ್ತುತ ವಚನದ ಮೂಲಕ ಗುಹೇಶ್ವರನ ಸನ್ನಿಧಯಲ್ಲಿ ಮೊರೆಯಿಡುತ್ತಾರೆ. 

               ಅಳಗುಂಡಿ ಅಂದಾನಯ್ಯ