ದಸರಯ್ಯ ಶರಣ

ಸರ್ವಮಯ ನಿನ್ನ ಬಿಂದುವಾದಲ್ಲಿ
ಆವುದನಹುದೆಂಬೆ, ಆವುದನಲ್ಲಾಯೆಂಬೆ?
ಸರ್ವಚೇತನ ನಿನ್ನ ತಂತ್ರಗಳಿಂದ ಆಡುವವಾಗಿ
ಇನ್ನಾವುದ ಕಾಯುವೆ, ಇನ್ನಾವುದ ಕೊಲುವೆ?
ತರುಲತೆ ಸ್ಥಾವರ ಜೀವಂಗಳೆಲ್ಲಾ ನಿನ್ನ ಕಾರುಣ್ಯದಿಂದೊಗೆದವು. ಆರ ಹರಿದು
ಇನ್ನಾರಿಗೆ ಅರ್ಪಿಸುವೆ?
ತೊಟ್ಟು ಬಿಡುವನ್ನಕ್ಕ ನೀ
ತೊಟ್ಟುಬಿಟ್ಟ ಮತ್ತೆ ನೀ ಬಿಟ್ಟರೆಂದು
ಎತ್ತಿ ಪೂಜಿಸುತಿರ್ದೆ ದಸರೇಶ್ವರನೆಂದು.
ದಸರಯ್ಯ ಶರಣ. ವಚನ ಅನುಸಂಧಾನ
ಅಪ್ಪ ಬಸವಾದಿ ಶರಣರ ಅನುಭಾವಿಕ ನೆಲೆಯ ವಚನಗಳನ್ನು; ಕೇವಲ ಧಾರ್ಮಿಕ ಪರಿವೇಷದ, ಆಧ್ಯಾತ್ಮಿಕ ಔನ್ನತ್ಯದ ಅಥವಾ ನೈತಿಕ ನೆಲೆಗಟ್ಟಿನ ವಿಷಯಗಳ ವಿವೇಚನೆಗಳೆಂದು ಗೌರವಾದರವ ತೋರಿಸಿ ಅಲ್ಲಿಯೇ ನಿಲ್ಲಲಾಗದು. ಯಾಕೆಂದ್ರೆ, ಶರಣರ ಈ ವಚನಗಳ ರಚನೆಯ ವಿನ್ಯಾಸದಲ್ಲಿ ಅನನ್ಯವಾದ ಸಂಗತಿಗಳು ಅವಿತುಕೊಂಡಿವೆ. ಮುಖ್ಯವಾಗಿ ವಚನಗಳು ವೈಜ್ಞಾನಿಕ ವೈಚಾರಿಕ ಜೈವಿಕ ವೈದ್ಯಕೀಯ ನೈಸರ್ಗಿಕ ಆರ್ಥಿಕ ಹಾಗೂ ಸಮಾಜಿಕ ಮತ್ತು ಆಡಳಿತಾತ್ಮಕ ನಡೆಗಳು ಹೀಗೆ ಬಹುಮುಖಿಯಾದ ಆಯಾಮದಲ್ಲವು ವಿಸ್ತರಿಸಿ ಕೊಂಡಿರುವ ಸತ್ಯ ಸಂಗತಿಗಳ ವಿರಾಟ್ ಸ್ವರೂಪ ವನ್ನು ವಚನಗಳ ಓದಿನಲ್ಲಿ ಖಂಡಿತವಾಗಿಯೂ ಮನ ಗಾಣಬಹುದಾಗಿದೆ. ಪ್ರಸ್ತುತ ಈ ಮೇಲಿನ ದಸರಯ್ಯ ಶರಣರ ವಚನವು; "ಸಸ್ಯಗಳಿಗೂ ಜೀವ ಇದೆ" ಎನ್ನುವ ಆಧುನಿಕ ಜೀವವಿಜ್ಞಾನದ ತಾತ್ವಿಕ ಸಂಗತಿಯ ಕುರಿತಾದ ಒಳನೋಟವನ್ನು ಇಂಬಿಟ್ಟುಕೊಂಡ ವಿಸ್ಮಯ ನಿಜಕ್ಕೂ ನಿಬ್ಬೆರಗಿನ ದಾಗಿದೆ. ಇದನ್ನು ಈಗಿಲ್ಲಿ ಪ್ರಸ್ತುತ ಈ ವಚನದ ಅನುಸಂಧಾನವನ್ನು ಮಾಡುವ ಮೂಲಕ ಹೆಚ್ಚಿನ ಮಾಹಿತಿಯನ್ನು ಮಾಡಿಕೊಳ್ಳಬಹುದಾಗಿದೆ.
*ಸರ್ವಮಯ ನಿನ್ನ ಬಿಂದುವಾದಲ್ಲಿ*
*ಆವುದನಹುದೆಂಬೆ,* *ಆವುದನಲ್ಲಾಯೆಂಬೆ?*
*ಸರ್ವಚೇತನ ನಿನ್ನ* *ತಂತ್ರಗಳಿಂದ ಆಡುವವಾಗಿ*
*ಇನ್ನಾವುದ ಕಾಯುವೆ,* *ಇನ್ನಾವುದ ಕೊಲುವೆ?*
ಸಮಸ್ತವಾದ ಈ ಪಿಂಡಾಂಡ ಮತ್ತು ಬ್ರಹ್ಮಾಂಡಗ ಳಲ್ಲಿ ಕಂಡುಬರುವಂತಹ ಹಾಗೂ ಕಾಣದೇ ಇರು ವಂತಹ ಜಡ ಚೈತನ್ಯಾದಿ ಸಂಗತಿಗಳಿಗೆ ಎಲ್ಲಕ್ಕೂ ಅನಾದಿ ಮೂಲವು ಆ ಪರಮ ಚೈತನ್ಯಶಕ್ತಿಯೇ ಆಗಿರುವಾಗ ಇಂತಹ ವಿಷಯದಲ್ಲಿ ಯಾವುದನ್ನ ಹೌದು ಯಾವುದನ್ನು ಅಲ್ಲಾ ಎಂದು ನಿಖರವಾಗಿ ಹೇಳಲಾದೀತು? ಸಮಸ್ತಲೋಕದೊಳಗೆ ಇರುವ ವಿಶ್ವಾತ್ಮಕವಾದಂತಹ ಸರ್ವಮಯವೂ ಆದಂಥ ಚೇತನವೆಲ್ಲವೂ (ದೇವ) ನಿನ್ನ ತಂತ್ರದಿಂದಲೇ ಅವೆಲ್ಲವೂ ಚಲನವಲನೆಯ ಮಾಡುವುದರಿಂದ ಯಾವುದನ್ನು ಕಾಯುವೆ ಯಾವುದನ್ನ ಕೊಲ್ಲುವೆ ಎಂದು ದಯಾಮಯಿಯಾದ ಶರಣ ದಸರಯ್ಯ ತಮ್ಮ ಚಿಕಿತ್ಸಕ ಮನೋಭಾವದಿಂದ ಈ ವಚನದ ರಚನಾ ಪ್ರಾರಂಭದ ಸಾಲುಗಳಲ್ಲಿ ಕೇಳಿದ್ದಾರೆ. ತನ್ಮೂಲಕ ಅವರು ತಮ್ಮ ಸರ್ವಜೀವ ದಯಾ ಮಯದ ಅಂತಃಕರಣ ಉಳ್ಳ ಸಂವೇದನಾಶೀಲ ವಾದಂಥ ಭಾವವನ್ನು ವ್ಯಕ್ತಪಡಿಸಿದ್ದಾರೆ.
*ತರುಲತೆ ಸ್ಥಾವರ ಜೀವಂಗಳೆಲ್ಲಾ ನಿನ್ನ ಕಾರುಣ್ಯದಿಂದೊಗೆದವು.* *ಆರ ಹರಿದು*
*ಇನ್ನಾರಿಗೆ ಅರ್ಪಿಸುವೆ?*
ಗಿಡಮರ ತರುಲತೆಗಳೂ ಸ್ಥಾವರ ಮತ್ತು ಜೀವಗ ಳೆಲ್ಲವೂ ಅನಾದಿ ಲಿಂಗದಿಂದಲೇ ಹುಟ್ಟಿ ಬೆಳೆದಿ ರುವಾಗ ಯಾರನ್ನ ಅಥವಾ ಯಾವುದನ್ನ ಹರಿದು ಇನ್ನಾರಿಗೆ ಅರ್ಪಿಸುವೆ? ಎಂದು ತಮ್ಮ ಅರಿವುಳ್ಳ ಭಾವದ ಅನನ್ಯತೆಯ ವಿವೇಕವನ್ನು ವಚನದ ಈ ಸಾಲುಗಳ ಮೂಲಕ ಪ್ರಶ್ನಿಸುವಲ್ಲಿ ಮೆರೆದಿದ್ದಾರೆ.
*ತೊಟ್ಟು ಬಿಡುವನ್ನಕ್ಕ ನೀ
*ತೊಟ್ಟುಬಿಟ್ಟ ಮತ್ತೆ ನೀ ಬಿಟ್ಟರೆಂದು
*ಎತ್ತಿ ಪೂಜಿಸುತಿರ್ದೆ ದಸರೇಶ್ವರನೆಂದು.
ನಿತ್ಯವೂ ಲಿಂಗ ಪೂಜೆಗಾಗಿ ಹೂಗಳನ್ನು ತಂದು ಪೂಜೆ ಮಾಡಿಕೊಳ್ಳುವ ಪರಿಪಾಠ ಇಟ್ಟುಕೊಂಡ ಸೂಕ್ಷ್ಮ ಸಂವೇದನೆಯ ದಸರಯ್ಯ ಶರಣರಿಗೆ ಸಸ್ಯಗಳಿಗೂ ಜೀವವಿದೆ ಎನ್ನುವುದು ಅರಿವಿಗೆ ಬಂದ ಮೇಲೆಅವರು ತಮ್ಮ ದೈನಂದಿನ ಬದುಕಿ ನಲ್ಲಿಯೂ ಜೀವದಯೆಯ ಕಾರುಣ್ಯದ ಚಿಕಿತ್ಸಕ ಒಳನೋಟವನ್ನು ಬದುಕುತ್ತಿದ್ದರು. ಹಾಗಾಗಿಯೇ ಇಲ್ಲಿ ಹೂಗಳಿನ್ನೂ ತೊಟ್ಟಿನಲ್ಲಿರುವ ತನಕ ಅವು ದೇವರವು ಎಂದು ಪರಿಭಾವಿಸಿಕೊಂಡು ಅವೆಲ್ಲ ತೊಟ್ಟನ್ನು ಬಿಟ್ಟು ಕಳಚಿ ಬಿದ್ದ ಮೇಲೆಯೇ ಅವ್ರು ಅವನ್ನು ಎತ್ತಿ ತಂದು ಪೂಜಿಸುತ್ತಿದ್ದುದನ್ನು ತಮ್ಮ ಇಷ್ಟಲಿಂಗ ದೇವನ ಸನ್ನಿಧಿಯಲ್ಲಿ ಅರಿಕೆ ಮಾಡಿ ಕೊಂಡಿದ್ದಾರೆ. ಆಧುನಿಕ ಸಸ್ಯ ವಿಜ್ಞಾನ ಇತ್ತೀಚೆಗೆ ಸಸ್ಯಗಳಿಗೆ ಜೀವವಿದೆ ಎಂದು ಭಾರತೀಯರಾದ ಜಗದೀಶಚಂದ್ರ ಭೋಸ ವೈಜ್ಞಾನಿಕವಾಗಿ ಪ್ರೂಫ್ ಮಾಡಿ ನೋಬೆಲ್ ಬಹುಮಾನಗಳಿಸಿದ ಸಂಗತಿ ಕಣ್ಮುಂದೆ ಇರುವಾಗ, ಒಂಭೈನೂರು ವರ್ಷಗಳ ಹಿಂದೆಯೇ ದಸರಯ್ಯ ಶರಣರು ಪ್ರಸ್ತುತ ವಚನ ದ ಮೂಲಕ ತಮ್ಮ ವೈಜ್ಞಾನಿಕ ಮನೋಭಾವವ ಮೆರೆದಿದ್ದಾರೆ ಎನ್ನುವುದು ಶರಣರ ವೈಜ್ಞಾನಿಕತೆಗೆ ಪುರಾವೆ ದೊರೆತಂತಾಗಿದೆ.
ಅಳಗುಂಡಿ ಅಂದಾನಯ್ಯ