ಬುರಾಕುಮಿನ್ ಜಪಾನಿನ ಅಸ್ಪೃಶ್ಯರು

ಬುರಾಕುಮಿನ್ ಜಪಾನಿನ ಅಸ್ಪೃಶ್ಯರು

ಬುರಾಕುಮಿನ್

ಜಪಾನಿನ ಅಸ್ಪೃಶ್ಯರು

ಪುಸ್ತಕ ಓದು ನಮ್ಮ ವೈಚಾರಿಕ ಬೆಳವಣಿಗೆಗೆ ಹಲವು ಒಳನೋಟಗಳನ್ನು ಒದಗಿಸಬಲ್ಲದು. ಬರವಣಿಗೆಯೊಂದು ಜನಸಾಮಾನ್ಯರ ಒಳತುಡಿತಗಳಿಗೆ ಸ್ಪಂದಿಸಿದಾಗಲೇ ಸಾಹಿತ್ಯವೆನಿಸಿಕೊಳ್ಳುತ್ತದೆ. ಅಂಬೇಡ್ಕರ್ ಅವರ ಓದಿನ ಪಾಂಡಿತ್ಯ ಕರುಣೆಯ ಸ್ಪರ್ಶ ಪಡೆದಿದ್ದರಿಂದಲೇ ಅದು ನೋವುಂಡವರ ಕಣ್ಣೀರು ಒರೆಸುವ ಸಾಧನವಾಯಿತು. ನಮ್ಮ ಕರ್ನಾಟಕದ ಸಾಹಿತಿ ಡಾ. ಸಿದ್ದಲಿಂಗಯ್ಯ ಸಾಕಷ್ಟು ಓದಿ ಬರೆದವರು. ಮಾರ್ಕ್ಸ್ ಚಿಂತನೆಗಳಿಗೆ ಒಳಗಾಗಿ ವರ್ಗ ಹೋರಾಟದ ದಾರಿ ತುಳಿದವರಾದರೂ ಅವರು ದಲಿತ ಕವಿ ಎಂದೇ ಗುರುತಿಸಿಕೊಳ್ಳಲು ಕಾರಣಗಳಿವೆ. ಖುದ್ದು ಜಾತಿ ತಾರತಮ್ಯಕ್ಕೆ ಒಳಗಾಗಿ ವ್ಯವಸ್ಥೆಯನ್ನು ಪ್ರತಿಭಟಿಸಿ ಬರೆದ ಅವರ ಕಾವ್ಯ ಬೇಸತ್ತ ಜನಗಳೆದೆಯಲ್ಲಿ ಬೆಂಕಿ ಹೊತ್ತಿಸಿದೆ. ಸಮಾಜ ಸುಧಾರಕರು, ಭಕ್ತಿ ಪಂಥ, ವಚನಕಾರರು ದಾಸರಿತ್ಯಾದಿಯಾಗಿ ಹಿಂದೂ ಸಮಾಜದ ತಾರತಮ್ಯ ನೀತಿಯನ್ನು ತಮ್ಮದೇ ಧಾಟಿಯಲ್ಲಿ ವಿರೋಧಿಸಿದ್ದನ್ನು ಸಿದ್ದಲಿಂಗಯ್ಯ ಚನ್ನಾಗಿ ಅರಿತಿದ್ದಾರೆ. ಅವರ ಆಳವಾದ ಅಧ್ಯಯನ ಮತ್ತು ಸರಳ ಬರವಣಿಗೆ ಓದುಗರನ್ನು ಆಕರ್ಷಿಸುತ್ತದೆ. 'ಹೊಲೆಮಾದಿಗರ ಹಾಡು' ಮತ್ತು 'ಊರು ಕೇರಿ' ನಂತರ ನನಗೆ ಇಷ್ಟವಾದ ಅವರ ಕೃತಿ 'ಉರಿಕಂಡಾಯ'.

ಈ ಪುಸ್ತಕದ 'ದಲಿತ ಸಾಹಿತ್ಯ' ಎನ್ನುವ ಲೇಖನದಲ್ಲಿ ಜಾಗತಿಕ ಮಟ್ಟದಲ್ಲಿ ಸಾಮಾಜಿಕ ನೋವುಂಡ ಜನಾಂಗಗಳ ಕೆಲವು ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಆಫ್ರಿಕಾದ ಕಪ್ಪು ಜನ ಮತ್ತು ಅಮೆರಿಕದ ನಿಗ್ರೊಗಳ ಬಗ್ಗೆ ಗೊತ್ತು. ಅವರು ಹೇಳಿದ ಜಪಾನಿನ ' ಬುರಾಕುಮಿನ್' ಜನಾಂಗದ ಬಗ್ಗೆ ತಿಳಿಯಲು ನನಗೆ ಕುತೂಹಲ ಮೂಡಿತು. ಸಮಯಪ್ರಜ್ಞೆ ಮತ್ತು ಮುಂದುವರಿದ ತಾಂತ್ರಿಕ ಕೌಶಲ್ಯದಿಂದಾಗಿ ಜಪಾನ್ ಜಗತ್ತಿನ ಗಮನ ಸೆಳೆದ ಸಣ್ಣ ದೇಶ. ಇಂಥ ಅಭಿವೃದ್ಧಿ ಹೊಂದಿದ ದೇಶದಲ್ಲೂ ಅಸ್ಪೃಶ್ಯತೆ ಜಾರಿಯಲ್ಲಿದೆ ಎನ್ನುವುದೇ ವಿಪರ್ಯಾಸ. ಕರ್ನಾಟಕದ ಹೊಲೆಮಾದಿಗರ ಮತ್ತು ಜಪಾನಿನ ಬುರಾಕುಮಿನ್ ಗಳ ಸಾಮಾಜಿಕ ಸಮಸ್ಯೆಗಳಲ್ಲಿ ಹೆಚ್ಚು ವ್ಯತ್ಯಾಸ ಇಲ್ಲ ಎನ್ನುವುದು ಆಮೇಲೆ ಗೊತ್ತಾಯಿತು.

ನಾಲಕ್ಕು ವರ್ಣಗಳಾಗಿ ವಿಭಜನೆಗೊಂಡಿದ್ದ ಭಾರತೀಯ ಹಿಂದೂ ಸಮಾಜ ಸಾವಿರಾರು ಜಾತಿಗಳಾಗಿ ಸೀಳಿಹೋದದ್ದು ತಿಳಿದದ್ದೇ. ಹುಟ್ಟಿನ ಕಾರಣಕ್ಕೆ ಒಂದು ವೃತ್ತಿ ಮತ್ತು ವೃತ್ತಿ ಮೂಲವೇ ಜಾತಿಯಾಗಿ ಭಾರತೀಯ ಸಮಾಜ ಚಿದ್ರವಾಗಿದೆ. ಇದೆಲ್ಲ ಆಗಿಹೋದದ್ದು ಕೇವಲ ಒಂದು ಸಮುದಾಯದ ಶ್ರೇಷ್ಠತೆ ಉಳಿಸಿಕೊಳ್ಳಲು ಎನ್ನುವುದು ದುರಂತ. ತಮ್ಮ ವೃತ್ತಿ ಕಾರಣದಿಂದಾಯೇ ಜಪಾನಿನ ಬುರಾಕುಮಿನ್ ಗಳು ಅಸ್ಪೃಶ್ಯರಾಗಿ ಯಾತನೆ ಅನುಭವಿಸಿದ್ದಾರೆ. ಹೆಚ್ಚೂಕಡಿಮೆ ಹನ್ನೆರಡುವರೆ ಕೋಟಿ ಜನಸಂಖ್ಯೆ ಹೊಂದಿರುವ ಈ ದೇಶದಲ್ಲಿ ಸುಮಾರು ಮೂರು ಲಕ್ಷ ಜನ ಬುರಾಕುಮಿನ್ ಗಳಿದ್ದಾರೆ ಎನ್ನುವ ಅಂದಾಜಿದೆ. 

ಊರ ಜನ ಸತ್ತಾಗ ಶವ ಸಂಸ್ಕಾರಕ್ಕಾಗಿ ಕುಣಿ ತೋಡುವುದು, ಕಸಾಯಿಖಾನೆ ನಡೆಸುವುದು, ಚರ್ಮೋದ್ಯೋಗ, ಮರಣ ದಂಡನೆಗೊಳಗಾದ ಅಪರಾಧಿಗೆ ಗಲ್ಲಿಗೇರಿಸುವುದು ಈ ಜನಾಂಗಕ್ಕೆ ಪರಂಪರಾಗತವಾಗಿ ಬಂದ ವೃತ್ತಿ. ಜಪಾನಿಗರು ಇವೆಲ್ಲ ಕೀಳು ಕೆಲಸ ಎಂದು ನಂಬುತ್ತಾರೆ. ಬದುಕಲು ಇದನ್ನೇ ನಂಬಿರುವ ಬರಾಕುಗಳು ಇಲ್ಲಿ ಪಾಪಿಗಳು, ಕೀಳು ಜಾತಿಯವರು! 

ಇತರೆ ಜಪಾನಿಗರಿಗಿರುವ ನಾಗರಿಕ ಸವಲತ್ತುಗಳನ್ನು ಇವರಿಗೆ ನಿರಾಕರಿಸಲಾಗಿದೆ. ಊರಿಂದ ದೂರದಲ್ಲಿ ಇವರ ವಾಸ. ದೊಡ್ಡ ಜಾತಿಯವರು ಅನುಮತಿಸಿದರೆ ಮಾತ್ರ

ಊರೊಳಗೆ ಕಾಲಿಡಬೇಕು. ತಲೆಗೆ ರುಮಾಲು ಸುತ್ತಿಕೊಂಡು ಬಂದರೆ ಅದು ಧಿಮಾಕಿನ ಮಾತಾದೀತು! 

ಬುರಾಕು ಮಕ್ಕಳು ಅಕ್ಷರ ಕಲಿಯುವದೆಂದರೆ ಅಪರಾಧ ಮಾಡಿದಂತೆ. ಇತರೆ ಕೃಷಿ ಕಾರ್ಮಿಕರ ಜೊತೆ ಕೆಲಸ ಮಾಡುವಂತಿಲ್ಲ. ಜಮೀನು ಹೊಂದುವುದು ಕನಸಿನ ಮಾತು. ಜಮೀನಿಲ್ಲದ 'ಹಿನಿನ್' ಅಸ್ಪೃಶ್ಯರಿಗಿಂತಲೂ ಬುರಾಕುಗಳು ಕೀಳು ಜಾತಿಯವರು. ಹಿಂದೂ ಸಮಾಜದ ಪಂಚಮರು ಅಥವ ಅತಿಶೂದ್ರರಂತೆ. ಆದರೆ ಜಪಾನಿನ ಜನಸಂಖ್ಯೆಯ ಕೇವಲ ಶೇಕಡಾ ಐದರಷ್ಟಿರುವ ಶಿನೋಕೋಶೋ ಜಾತಿಯವರು ವಿದ್ಯ ಕಲಿಯುವ ಮತ್ತು ಪಂಡಿತರಾಗುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಸಮುರಾಯಿ ಗಳು ಅಲ್ಲಿನ ಕ್ಷತ್ರಿಯರು. ಬಹುಸಂಖ್ಯಾತರಾಗಿರುವ ಹ್ಯಾಕುಶೋ ಕುಲದವರಿಗೆ ಕೃಷಿ ಕಸುಬು ಮೀಸಲಾಗಿದೆ. ಕರಕುಶಲ ಕರ್ಮಿಗಳು ಮತ್ತು ವ್ಯಾಪಾರ ಮಾಡಿ ಬದುಕುವ ಎಲ್ಲ ಜಪಾನಿಯರು ಅಲ್ಲಿ ದೊಡ್ಡ ಜಾತಿಯವರೇ.

ಭಾರತೀಯ ಸಮಾಜದ ಜಾತಿ ವ್ಯವಸ್ಥೆಗೆ ಮನುಸ್ಮೃತಿಯೇ ಮೂಲ. ಇಲ್ಲಿನ ಸಾಮಾಜಿಕ ತಾರತಮ್ಯ ವ್ಯವಸ್ಥೆಗೆ ಸಾವಿರ ವರ್ಷಗಳ ಇತಿಹಾಸ ಇದೆ. ಆದರೆ ಜಪಾನಿನಲ್ಲಿ ವಿಕಾಸಗೊಂಡ ಅಸೃಶ್ಯತೆ ಇತ್ತೀಚಿನದು. ರಾಜವಂಶರ ಆಡಳಿತ ವಂಚಿತರೆಡೆಗೆ ವಾಲಿದ್ದೇ ಅಪರೂಪ. ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರಂತೆ ಜನಾನುರಾಗಿ ಅರಸರು ಇತಿಹಾಸದಲ್ಲಿ ದಾಖಲಾದದ್ದು ವಿರಳ. ಜಪಾನಿನ ಸಾಮ್ರಾಜ್ಯಶಾಹಿ ಚರಿತ್ರೆಯಲ್ಲಿ ಬುರಾಕುಗಳ ಬದುಕು ಬದಲಾಗಲೇ ಇಲ್ಲ. ಒಬ್ಬ ಬುರಾಕು ಇತರೆ ಜಾತಿಯವನಿಗೆ ಕೊಂದ ತಕ್ಷಣ ಗಲ್ಲಿಗೇರಬೇಕಾಗಿತ್ತು. ಅದೇ ಒಬ್ಬ ಜಪಾನಿ ಬುರಾಕು ಜನಾಂಗದವನಿಗೆ ಕೊಂದರೆ ಅಪರಾಧಿಯಲ್ಲ. ಏಳು ಜನ ಬುರಾಕುಗಳ ಕೊಂದರೆ ಮಾತ್ರ ಮೇಲು ಜಾತಿಯವನು ಶಿಕ್ಷೆಗೊಳಪಡುತ್ತಿದ್ದ. ಅಲ್ಲಿನ ಬ್ರಾಹ್ಮಣ್ಯ ವ್ಯವಸ್ಥೆಗೆ ಹಿಡಿದ ಕನ್ನಡಿ ಇದು. ಜಪಾನಿನ ಕೊನೆ ಅರಸ ಮೀಜಿ ಗೆ ಮಾತ್ರ ಬುರಾಕುಗಳ ಬಗ್ಗೆ ಕರುಣೆ ಬಂದಿತ್ತು. ಅವರ ಸಾಮಾಜಿಕ ಕೆಳಸ್ತರವನ್ನು ಅಳಿಸಿಹಾಕಲು 1871 ರಲ್ಲಿ ಮೀಜಿ ಘೋಷಣೆ ಮಾಡಿದ್ದ. ಅಲ್ಲಿನ ಜಾತಿವಾದಿಗಳು ಮಾತ್ರ ಕ್ಯಾರೆ ಅನ್ನಲಿಲ್ಲ.

ಎಂಭತ್ತರ ದಶಕದಲ್ಲಿ ಕರ್ನಾಟಕದಲ್ಲಿ ಜಾತಿ ದೌರ್ಜನ್ಯದ ವಿರುದ್ದ ಚಳವಳಿ ರೂಪಿಸಲು ದಲಿತ ಲೇಖಕರು, ಕಲಾವಿದರು ಮೈಸೂರಿನ ಸಿದ್ಧಾರ್ಥ ಹಾಸ್ಟೆಲಿನಲ್ಲಿ ಒಮ್ಮೆ ಸಭೆ ಸೇರಿದ್ದರು. ದೇವನೂರು ಮಹದೇವ, ಬಿ ಕೃಷ್ಣಪ್ಪ, ಕೆ. ನಾರಾಯಣ ಸ್ವಾಮಿ, ದೇವಯ್ಯ ಹರವೆ, ಗೋವಿಂದಯ್ಯ, ಹೆಚ್ ಗಣೇಶನ್, ಇಂದೂಧರ ಹೊನ್ನಾಪುರ, ಡಾ. ಸಿದ್ದಲಿಂಗಯ್ಯ ಚಳುವಳಿಯ ರೂಪಿಸುವ ಚರ್ಚೆ ಮಾಡಿದ್ದರು. ನಂತರ ಭದ್ರಾವತಿಯ ಸಭೆಯಲ್ಲಿ ಟಿಸಿಲೊಡೆದ ದಲೇಕ ಒಕ್ಕೂಟ ಚಿಕ್ಕಮಗಳೂರು ಸಮಾವೇಶದಲ್ಲಿ ದಲಿತ ಸಂಘರ್ಷ ಸಮಿತಿ ಯಾಗಿ ಜೀವ ಪಡೆದದ್ದನ್ನು ಸಿದ್ದಲಿಂಗಯ್ಯ ತಮ್ಮ ಉರಿಕಂಡಾಯ ದಲ್ಲಿ ನೆನಪಿಸಿಕೊಂಡಿದ್ದಾರೆ. ಮುಂದೆ ದಸಂಸ ಹುಟ್ಟು ಹಾಕಿದ ಜಾತಿ ದೌರ್ಜನ್ಯದ ವಿರುದ್ಧದ ಹೋರಾಟ, ಚಳುವಳಿ ಈಗ ಕರ್ನಾಟಕ ಇತಿಹಾಸದಲ್ಲಿ ಅಚ್ಚಾಗಿದೆ.

ಜಪಾನಿನ ಕೆಲವು ಬುದ್ಧಿಜೀವಿ ಬುರಾಕುಗಳು ಈ ರೀತಿಯ ಸಭೆ ಸೇರಿ 1922 ರಲ್ಲಿ ನ್ಯಾಶನಲ್ ಲೆವೆಲರ್ಸ್ ಅಸೋಸಿಯೇಷನ್ ಹೆಸರಿನಲ್ಲಿ ಸಂಘಟಿಸಿದರು. ಅಸಂಘಟಿತ ಪೀಡಿತರು ಒಂದಾಗಿ 1946 ರಲ್ಲಿ ನ್ಯಾಶನಲ್ ಕಮೀಟಿ ಫಾರ್ ಬುರಾಕು ಲಿಬರೇಶನ್ ಸ್ಥಾಪನೆ ಆಯಿತು. ತಮ್ಮ ಹಕ್ಕು ಗಳಿಗಾಗಿ ಸರಕಾರಕ್ಕೆ ಒತ್ತಾಯ ಮಾಡುತ್ತ ತಲೆ ಎತ್ತಿ ನಿಲ್ಲತೊಡಗಿದರು. ಜಪಾನಿನ ಸುಮಾರು ಆರು ಸಾವಿರ ಬುರಾಕುಮಿನ್ ಪಂಗಡಗಳು ಒಂದಾಗಿ ತಮಗಾಗುತ್ತಿರುವ ಜಾತಿ ಶೋಷಣೆ ವಿರುದ್ಧ ಸರ್ಕಾರದ ಗಮನ ಸೆಳೆದರು. ಬುರಾಕು ಲಿಬರೇಶನ್ ಲೀಗ್ ಕಟ್ಟಿಕೊಂಡು ಬೀದಿಗಿಳಿದ ಈ ಜನ ಸ್ವಾಭಿಮಾನದಿಂದ ಬದುಕುವ ಪಣ ತೊಟ್ಟರು.

ಶೋಷಿತರೆಲ್ಲ ಒಗ್ಗಟ್ಟಾಗಿ ಹೋರಾಟ ರೂಪಿಸದಿದ್ದರೆ ಬದುಕು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿಗೆ ಎಲ್ಲ ಶೋಷಿತ ವರ್ಗಗಳ ಒಕ್ಕೂರಲ ದನಿಯಿತ್ತು. ಸಂಘಟನೆ ಬೀದಿಗಳಿದರೆ ವಿಧಾನ ಸೌಧದಲ್ಲಿನ ದೊರೆಗಳಿಗೆ ಬೆವರು ಬರುತ್ತಿತ್ತು!

ಕೇವಲ ಚರ್ಮೋದ್ಯೋಗವನ್ನೇ ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿದ್ದ ಜಪಾನಿನ ಕವಾತಗಳು, ಭಿಕ್ಷೆ ಬೇಡುವುದನ್ನೇ ಕಾಯಕ ಮಾಡಿಕೊಂಡಿದ್ದ ತೋಗುಕವ ಶೋಗುನ್ನಾಟೆ, ಭೂ ರಹಿತ ಕಾರ್ಮಿಕರಾಗಿದ್ದ ಹಿನಿನ್ ಗಳು, ಇತರೆ ಅಸೃಶ್ಯ ಜಾತಿಗಳಾದ ಹಾಕಿಬೆ, ಕುಚೊಮೆ ಬುರಾಕು ಗಳ ಸಂಘಟನೆಯ ತೆಕ್ಕೆಗೆ ಸೇರಿಕೊಂಡರು. ಹೊಂಶು ನಗರದಲ್ಲಿ ನಡೆದ ಇವರೆಲ್ಲರ ಸಂಘಟಿತ ಹೋರಾಟಕ್ಕೆ ಮಣಿದ ಜಪಾನ್ ಸರ್ಕಾರ 2016 ರಲ್ಲಿ ಅಸ್ಪೃಶ್ಯತೆ ಆಚರಣೆಯನ್ನು ಕಾನೂನು ಬದ್ಧವಾಗಿ ನಿಷೇಧಿಸಿತು.

ಜಪಾನಿನ ಬುರಾಕುಗಳು ಈಗ ಸಾಕಷ್ಟು ಬದಲಾಗಿದ್ದಾರೆ. ತೋರು ಹಶಿಮತೋ ಓಸಾಕ ನಗರದ ಮೇಯರ್ ಆಗಿದ್ದಾರೆ. ಬುರಾಕು ಲಿಬರೇಶನ್ ಲೀಗ್ ನ ಮುಖಂಡ ಜೀಚಿರೊ ದೊಡ್ಡ ಉದ್ಯಮಿ. ರೆಂತಾರೊ ಮಿಕುನಿ ಪ್ರಸಿದ್ದ ಸಿನೆಮಾ ಹೀರೋ. ಮರಾಬು ಮಿಯಾಝಕಿ ಬರೆದ ಪುಸ್ತಕಗಳಿಗೆ ಅಲ್ಲಿ ಬೇಡಿಕೆ ಇದೆ. ಕೆಂಜಿ ನಕಾಗಮಿ ಈಗ ಅಲ್ಲಿನ ಕವಿ ಮತ್ತು ವಿಮರ್ಶಕ. ಅವನ ಕವನ ಸಂಕಲನಗಳಿಗೆ ಅಲ್ಲಿ ಬೇಡಿಕೆ ಇದೆ.

ಹೊಡೆತದಿಂದ ಸುಧಾರಿಸಿಕೊಳ್ಳುವ ವಿಷಯದಲ್ಲಿ ಜಪಾನ್ ಯಾವತ್ತೂ ಮುಂದಿದೆ. ಹಲವು ಕಾನೂನು ತಿದ್ದುಪಡಿ ಮಾಡಿ ಜಪಾನ್ ಸರ್ಕಾರ ಅಲ್ಲಿನ ಅಸ್ಪೃಶ್ಯರಿಗೆ ಮುಖ್ಯ ವಾಹಿನಿಗೆ ತಂದಿದೆ. ಬುರಾಕು ಜಾತಿಯ ಪ್ರತಿಭಾವಂತರಿಗೆ ಅವಕಾಶ ನೀಡಿದೆ. ಆದಾಗ್ಯೂ ಕಾನೂನಿಗೆ ಹಲ್ಲುಗಳಿಲ್ಲ ಎನ್ನುವಂತೆ ಸಮಾಜದ ಆಲೋಚನೆ ಬದಲಾಗದಿದ್ದರೆ ಸಮಾನತೆ ಮರೀಚಿಕೆಯಾಗುತ್ತದೆ. ಜಾತಿ ಪದ್ಧತಿ ವಿಷಯದಲ್ಲಿ ಜಪಾನ್ ಪೂರ್ಣ ಬದಲಾಗದಿದ್ದರೂ ತೀವ್ರವಾಗಿ ಬದಲಾಗಿದೆ.

ಭಾರತ ಸಂವಿಧಾನ 1950 ರಲ್ಲೇ ಅಸೃಶ್ಯತೆ ಆಚರಣೆ ನಿಷೇಧಿಸಿದೆ. ರಾಷ್ಟ್ರಪತಿ ಕಾಲಿಟ್ಟ ದೇವರ ಗುಡಿ ಇಲ್ಲಿ ಮಲಿನವಾಗುತ್ತದೆ. ದಲಿತರಿಗೆ ಕ್ಷೌರ ಮಾಡಿದರೆ ಅಂಗಡಿ ಮುಚ್ಚಬೇಕಾಗುತ್ತದೆ. ಕುದುರೆ ಮೇಲೆ ಕೂತ ಕೆಳಜಾತಿಯವನ ಕಾಲು ಮುರಿದು ಹೋಗುತ್ತವೆ. ಜಾತಿಯ ವಿಷ ಮುಳ್ಳಿಗಳಿಂದ ಕೊಸರಿಕೊಂಡು ಬಾನೆತ್ತರ ಬೆಳೆದ ವ್ಯಕ್ತಿ ಈ ದೇಶದ ಸಮಗ್ರತೆ ಮತ್ತು ಐಕ್ಯತೆಗಾಗಿ ಬರೆದ ಸಂವಿಧಾನವೂ ಇಲ್ಲಿ ಜಾತಿವಾದಿಗಳಿಗೆ ಅರಗಲಾಗದ ತುತ್ತಾಗುತ್ತದೆ. ತುಳಿಸಿಕೊಳ್ಳುವ ಕೀಳು ಜಾತಿಗಳಿಗಾಗಿ ನಮ್ಮ ಜಮಾಜ ಹುಡುಕಾಡುತ್ತಲೇ ಇರುತ್ತದೆ.

ಜಪಾನಿನ ಬುರಾಕುಗಳಲ್ಲಿ ಒಬ್ಬ ಅಂಬೇಡ್ಕರ್ ಹುಟ್ಟಲಿಲ್ಲ. ಅಲ್ಲಿನ ಸಮಾಜಕ್ಕೆ ತುಳಿದು ಬದುಕುವುದು ತಪ್ಪು ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ನಮ್ಮ ಸಮಾಜ ಬೆಳೆಯುವ ಕೆಲಸಕ್ಕೆ ಸಮಯ ಮೀಸಲಿಟ್ಟಲ್ಲಿ ತಳಸಮುದಾಯಗಳ ತಲೆ ಭಾರ ಕಡಿಮೆ ಆಗಬಹುದು. ಮೇಲೇಳುವ ಶಕ್ತಿ ಎಲ್ಲರಲ್ಲೂ ಇರುತ್ತದೆ.

ಉರಿಕಂಡಾಯದ ಒಂದು ಲೇಖನ ನನಗೆ ಜಪಾನಿನ ಊರು ಕೇರಿ ಸುತ್ತಿಸಿತು. ಕರ್ನಾಟಕದ ದಲಿತ ಚಳವಳಿಯ ಹೆಜ್ಜೆಗುರುತು ನೆನಪಿಸಿತು. ಈಗಿಲ್ಲದ ಸಿದ್ದಲಿಂಗಯ್ಯ ನಮ್ಮೆಲ್ಲರನ್ನೂ ಚಿಂತಿಸಲು ಹಚ್ಚುವ ಮಾಂತ್ರಿಕ.

ಹಿಂದಿನ್ಕೇರಿ ಕಾಶೀನಾಥ್