ತಪ್ಪು ಮಾಡಿಲ್ಲ ಅಧಿಕಾರ ತ್ಯಜಿಸುವುದಿಲ್ಲ : ಸಿ ಎಂ ಸಿದ್ದರಾಮಯ್ಯ

ತಪ್ಪು ಮಾಡಿಲ್ಲ ಅಧಿಕಾರ ತ್ಯಜಿಸುವುದಿಲ್ಲ : ಸಿ ಎಂ ಸಿದ್ದರಾಮಯ್ಯ
ಮೈಸೂರು: ೧೮ ನೇ ಆಗಸ್ಟ್
ನಾನು ಯಾವುದೇ ತಪ್ಪು ಮಾಡಿಲ್ಲ ಆದ್ದರಿಂದ ಅಧಿಕಾರ ತ್ಯಜಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಹೇಳಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ವಿರುದ್ಧ ಕಾನೂನು ಕ್ರಮ ಜರುಗಿಸಲು ಕರ್ನಾಟಕ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅನುಮತಿ ನೀಡಿದ ನಂತರ ಅವರಿಂದ ಈ ಪ್ರತಿಕ್ರಿಯೆ ಬಂದಿದೆ.
ವಿಶೇಷ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, “ರಾಜ್ಯಪಾಲರ ಮಂಜೂರಾತಿ ಸಂವಿಧಾನ ಬಾಹಿರವಾಗಿದ್ದು, ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ” ಎಂದು ಆರೋಪಿಸಿದರು.
ನನ್ನ ವಿರುದ್ಧ ಕಾನೂನು ಕ್ರಮ ಜರುಗಿಸುವ ರಾಜ್ಯಪಾಲರ ನಿರ್ಧಾರವನ್ನು ಸಂಪುಟ ಸಭೆಯು ‘ಅಸಂವಿಧಾನಿಕ’ ಎಂದ ಅವರು, ನಾವು ಅದನ್ನು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.
“ಯಾಕೆ ಮತ್ತು ಯಾವ ಕಾರಣಕ್ಕಾಗಿ ರಾಜೀನಾಮೆ ನೀಡಬೇಕು ಹೇಳಿ?… ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸಿದ ಕಾರಣಕ್ಕೆ ರಾಜ್ಯಪಾಲರೇ ರಾಜೀನಾಮೆ ನೀಡಬೇಕು” ಎಂದು ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೂಡ ರಾಜ್ಯಪಾಲರ ನಡೆ ಅಸಂವಿಧಾನಿಕ ಎಂದು ವಾಗ್ದಾಳಿ ನಡೆಸಿದರು.
ಸಚಿವ ಸಂಪುಟ ಹಾಗೂ ನಮ್ಮ ಪಕ್ಷ ಸಿಎಂ ಜತೆ ಗಟ್ಟಿಯಾಗಿ ನಿಂತಿದ್ದು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ತಳ್ಳಿಹಾಕಿದ್ದಾರೆ.
ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯ ಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯ ಅವರನ್ನು ವಿಚಾರಣೆಗೆ ಒಳಪಡಿಸಲು ಗೆಹ್ಲೋಟ್ ಏಕೆ ಅನುಮತಿ ನೀಡಿದರು ಎಂಬುದನ್ನು ನೋಡಬೇಕು ಎಂದು ಹೇಳಿದರು. ಆದರೆ,ಬಿಜೆಪಿ ಯಿಂದ ನೇಮಿಸಿದ ರಾಜ್ಯಪಾಲರು ಬಿಜೆಪಿಯೇತರ ಸರ್ಕಾರಗಳಿಗೆ ತೊಂದರೆ ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದಾದ್ಯಂತ ಪ್ರತಿಭಟನೆ
ಈ ಮಧ್ಯೆ, ರಾಜ್ಯಪಾಲರ ಕ್ರಮದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಿದ್ದರಾಮಯ್ಯ ಬೆಂಬಲಿಗರು ಬೆಂಗಳೂರು, ಮೈಸೂರು, ಕಲಬುರಗಿ ,ಮಂಡ್ಯ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಭಟನೆ ನಡೆಸಿದರು.
ಬೆಂಗಳೂರಿನಲ್ಲಿ ರಾಜ್ಯಪಾಲರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿದರು.
ರಾಜ್ಯಪಾಲ ಥಾವರ್ ಚಂದ ಗೆಹ್ಲೋಟ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಅವರ ಪ್ರತಿಕೃತಿಗಳನ್ನು ದಹಿಸಿದರು. ಮತ್ತು “ಗವರ್ನರ್ ಹಠಾವೋ, ಕರ್ನಾಟಕ ಬಚಾವೋ” ಎಂಬ ಫಲಕಗಳನ್ನು ಪ್ರದರ್ಶಿಸಿದರು.
ನಾಳೆ ಕಲಬುರಗಿ ನಗರದಲ್ಲಿ ಬೆಳಿಗ್ಗೆ 11 ಗಂಟೆಗೆ ಜಗತ್ತ ವೃತ್ತದಲ್ಲಿ ಪ್ರತಿಭಟನೆಯಲಿದ್ದು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಬೇಕೆಂದು ಜಗದೇವ ಗುತ್ತೇದಾರ ತಿಳಿಸಿದರು.