ಚಿಕ್ಕ ಬಿರಾಳದಲ್ಲಿ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಜಾತ್ರಾಮಹೋತ್ಸವ
ಇಂದು ಸಂಜೆ ಭವ್ಯ ರಥೋತ್ಸವ
ಚಿಕ್ಕ ಬಿರಾಳದಲ್ಲಿ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಜಾತ್ರಾಮಹೋತ್ಸವ
ಪವಾಡ ಪುರುಷ, ಲೀಲಾಮೂರ್ತಿ ಸದ್ಗುರು ನಾಲವಾರದ ಶ್ರೀ ಕೋರಿಸಿದ್ಧೇಶ್ವರ ಶಿವಯೋಗಿಗಳ ಜಾತ್ರಾಮಹೋತ್ಸವವು ಜೇವರ್ಗಿ ತಾಲ್ಲೂಕಿನ ಚಿಕ್ಕಬಿರಾಳದ ಶಾಖಾಮಠದಲ್ಲಿ ಇಂದು ಅತ್ಯಂತ ವೈಭವದಿಂದ ನಡೆಯಲಿದೆ.
ನಾಲವಾರ ಸಂಸ್ಥಾನ ಹಾಗೂ ಚಿಕ್ಕ ಬಿರಾಳ ಶ್ರೀ ಕೋರಿಸಿದ್ಧೇಶ್ವರ ಶಾಖಾಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಪಾವನ ಸಾನಿಧ್ಯದಲ್ಲಿ ಇಂದು ಸಂಜೆ 6 ಗಂಟೆಗೆ ಭವ್ಯ ರಥೋತ್ಸವ ಕಾರ್ಯಕ್ರಮ ನಡೆಯಲಿದೆ.
ರಥೋತ್ಸವಕ್ಕೂ ಮುಂಚೆ ವಿಶೇಷ ಮದ್ದು ಸುಡುವ ಕಾರ್ಯಕ್ರಮ ಹಾಗೂ ಪೂಜ್ಯ ಶ್ರೀಗಳ ಭವ್ಯ ಮೆರವಣಿಗೆ ಅದ್ಧೂರಿಯಾಗಿ ನಡೆಯಲಿದೆ.
ರಥೋತ್ಸವದ ನಂತರ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜಾತ್ರಾ ಧರ್ಮಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಪವಾಡಪುರುಷರಾದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಶಿವಯೋಗಿಗಳು ಲೋಕಸಂಚಾರಗೈಯುತ್ತಾ ನಾಡಿನ ವಿವಿಧ ಭಾಗಗಳಲ್ಲಿ ಸಂಚರಿಸಿ, ಹಲವಾರು ಪವಾಡಗಳ ಮೂಲಕ ಜನಮನವನ್ನು ಉದ್ಧರಿಸಿದ ಮಹಾತ್ಮರಾಗಿದ್ದು,ಚಿಕ್ಕ ಬಿರಾಳದಲ್ಲಿ ಹಲವು ಪವಾಡಗಳನ್ನು ಗೈದು ಗ್ರಾಮಸ್ಥರಿಗೆ ಸಂಕಷ್ಟದಿಂದ ಪಾರು ಮಾಡಿದ್ದರು.
ಅವರು ಕೆಲಕಾಲ ತಂಗಿ,ತಪಗೈದ ಚಿಕ್ಕಬಿರಾಳ ಗ್ರಾಮದಲ್ಲಿ ಶಾಖಾಮಠವಿದ್ದು,ಪ್ರತಿವರ್ಷ ಅದ್ಧೂರಿಯಾಗಿ ಜಾತ್ರಾ ಮಹೋತ್ಸವ ಅಂಗವಾಗಿ ಕಳೆದು 11 ದಿನಗಳಿಂದ ಪಂ ಶ್ರೀ ಜಗದೀಶ್ವರ ಶಾಸ್ತ್ರಿಗಳು ಸನ್ನತಿ ಅವರ ಮುಖವಾಣಿಯಿಂದ ಕಲಬುರಗಿಯ ದಾಸೋಹ ಮೂರ್ತಿ ಶ್ರೀ ಶರಣಬಸವೇಶ್ವರ ಪುರಾಣ ಪ್ರವಚನ ಸಂಭ್ರಮದಿಂದ ನಡೆದುಕೊಂಡು ಬರುತ್ತಿದೆ
ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ಹರ-ಗುರು- ಚರಮೂರ್ತಿಗಳು, ರಾಜಕೀಯ ಧುರೀಣರು,ಕವಿ-ಕಲಾವಿದರು ಭಾಗವಹಿಸಲಿದ್ದಾರೆ.
ಜಾತ್ರಾಮಹೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ತಿಳಿಸಿದ್ದಾರೆ.
