ಪಾತಾಳ ಗಂಗೆ
ಪಾತಾಳ ಗಂಗೆ
ಸಾಹಿತ್ಯ ಎನ್ನುವುದು ಜೀವನಾನುಭವಗಳ ಒಂದು ಮೊತ್ತ. ಕವಿಹೃದಯ ಸದಾಕಾಲ ತನ್ನ ಸುತ್ತಮುತ್ತಲೂ ನಡೆಯುವ ಘಟನಾವಳಿಗಳಿಗೆ ಸ್ಪಂದಿಸುತ್ತಿರುತ್ತದೆ. ಭಾವನೆಗಳಿಗೆ ಅಕ್ಷರ ರೂಪ ಕೊಡುವ, ವೈಯಕ್ತಿಕ ಆನಂದಾನುಭವಗಳನ್ನು ಸಮುಷ್ಟಿಪ್ರಜ್ಞೆಗೆ ತಲುಪಿಸುವ ತುಡಿತ ನಿರಂತರವಾಗಿ ನಡೆದಿರುತ್ತದೆ. ಶ್ರೀಮತಿ ಮಲ್ಲಮ್ಮ ಕಾಳಗಿ ಇವರ ಕವಿಮನಸ್ಸು ಜಾಗೃತವಾಗಿ ಸಣ್ಣ ಪುಟ್ಟ ಪ್ರಸಂಗಗಳಿಗೂ ಸ್ಪಂದಿಸಿ ಕಾವ್ಯರಚನೆಗೈದಿದ್ದು ಮೆಚ್ಚತಕ್ಕ ಸಂಗತಿಯಾಗಿದೆ. ಚೇತನ ಯೂತಫೋರಂ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು. ದಾಂಪತ್ಯ ಬದುಕಿನೊಂದಿಗೆ ಹೆಜ್ಜೆಹಾಕುತ್ತಾ ಬಾಳಸಂಗಾತಿ, ಇಬ್ಬರು ಮಕ್ಕಳೊಂದಿಗೆ ಕವನಗಳ ಸವಿ ಹಂಚುತ್ತಾ ಸಾಹಿತ್ಯಕ್ಷೇತ್ರಕ್ಕೆ ಕಾಲಿರಿಸಿದ್ದಾರೆ.
ಇದು ಇವರ ಪ್ರಥಮ ಕವನ ಸಂಕಲನವಾಗಿದೆ. ಅಲ್ಲಲ್ಲಿ ತಡವರಿ ಸುತ್ತಲೇ ಗಟ್ಟಿ ಹೆಜ್ಜೆಗಳನ್ನಿಡುವ ಪ್ರಯತ್ನ ಮಾಡಿದ್ದಾರೆ. ಇಲ್ಲಿಯ ಕವನಗಳು ವಿಷಯ ವೈವಿಧ್ಯತೆಯಿಂದ ಕೂಡಿವೆ. ಹೆಚ್ಚಿನ ಕವನಗಳು ಸಾಮಾಜಿಕ ಕಳಕಳಿ. ಪ್ರಗತಿಪರ ವಿಚಾರಧಾರ. ಮಾನವೀಯ ಮೌಲ್ಯಗಳಿಂದ ಕೂಡಿದ್ದು ಕಂಡುಬರುತ್ತದೆ. ತಮ್ಮ ಸುತ್ತಮುತ್ತಲು ಕಂಡುಬರುವ ಪ್ರಸಂಗಗಳಿಗೆ ಮಿಡಿದಿದ್ದು ನಾಡು-ನುಡಿ, ದೇಶ, ಗ್ರಾಮ, ಶಾಲೆ, ಸಾಮಾಜಿಕ ಸಮಸ್ಯೆ, ರಾಜಕೀಯ, ಧಾರ್ಮಿಕ, ವ್ಯಕ್ತಿತ್ವದರ್ಶನ, ಹೀಗೆ ಬಿಡಿ ಬಿಡಿ ಭಾವನೆಗಳನ್ನ ಕವಿತೆಯ ರೂಪದಲ್ಲಿ ಹಿಡಿದಿಟ್ಟಿದ್ದಾರೆ. ಯಾವ ಸಂಕೀರ್ಣತೆಯಿಲ್ಲದೆ ಸರಳವಾಗಿ ತಾವು ಕಂಡುದನ್ನು ಹೆಣೆಯಬಲ್ಲರೆಂಬುದು ಸಂತೋಷದ ವಿಷಯ. ಆದರೆ ಕೆಲವೆಡೆ ಪ್ರಾಸಗಳ ಹೊಂದಾಣಿಕೆಗೆ ಕಟ್ಟುಬಿದ್ದು ಅರ್ಥಕ್ಕೆ ಸ್ಪಷ್ಟತೆ ಸಿಗದೆ ಕಾವ್ಯ ಸೊರಗಿದ್ದು ಕಂಡುಬರುತ್ತದೆ. ಕವಿಯಾದವನಿಗೆ ಪ್ರಾಸ ಕಾಡುವದು ಸಹಜ. ಆದರೆ ಕಾವ್ಯಭಿತ್ತಗೆ. ರಸಾನುಭವಕ್ಕೆ ಕುಂದು ಬರದಂತೆ ಎಚ್ಚರ ವಹಿಸುವುದೂ ಅಷ್ಟೇ ಮುಖ್ಯ.
ಈ ಎಲ್ಲವುಗಳ ಮಧ್ಯೆಯೂ ಕವಯಿತ್ರಿ ಭಾವುಕಳಾಗಿ ಅನೇಕ ವಿಷಯಗಳಿಗೆ ಸ್ಪಂದಿಸಿದ್ದಾರೆ. ನಾವೆಲ್ಲರೂ ಒಂದು ಎಂಬ ಸಮಾನತೆಯ ತತ್ವವನ್ನು ಹೇಳುತ್ತಾ ಮಾನವೀಯತೆ ಎಲ್ಲಕ್ಕಿಂತಲೂ ಮುಖ್ಯ ಎನ್ನುತ್ತಾರೆ.
ಮಹಾಗಾoವದ ಬಸವಪ್ರಭು ಪ್ರಕಾಶನದಿಂದ 2023 ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ 80 ಪುಟಗಳಿದ್ದು 100 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.
ಡಾ. ಶರಣಬಸಪ್ಪ ವಡ್ಡನಕೇರಿ