ಗವಿಸಿದ್ದಪ್ಪ ಎಚ್. ಪಾಟೀಲ
ವಾಚಿಕೆ-21. ಗವಿಸಿದ್ದಪ್ಪ ಎಚ್. ಪಾಟೀಲ
ಕಲ್ಯಾಣ ಕರ್ನಾಟಕದ ಸೃಜನಶೀಲ ಸಾಹಿತಿಗಳು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಸಾಹಿತಿಗಳ ಕೃತಿಗಳು ಕನ್ನಡ ಓದುಗರಿಗೆ ಉಪಲಬ್ಧವಿರುವುದಿಲ್ಲ. ಈ ಲೇಖಕರು ರಚಿಸಿದ ಎಲ್ಲಾ ಸಾಹಿತ್ಯದ ಮೊತ್ತ ಸಾವಿರ ಪುಟಗಳಷ್ಟಾಗುತ್ತದೆ. ಅಷ್ಟನ್ನೂ ಮುದ್ರಿಸುವುದು ಕಷ್ಟಕರ. ಈ ದಿಸೆಯಲ್ಲಿ ನಮ್ಮ ಪ್ರಕಾಶನದಿಂದ ಸಾಹಿತಿಗಳ ವಾಚಿಕೆಗಳನ್ನು ಹೊರತಂದು, ಅವರ ಸಾಹಿತ್ಯದ ಸ್ವಾದವನ್ನು ಕನ್ನಡಿಗರಿಗೆ ಉಣಬಡಿಸಿ ಕನ್ನಡಿಗರ ಹೃನ್ಮನಗಳನ್ನು ಅರಳಿಸುವಂತಾಗಬೇಕೆನ್ನುವುದು ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಸದಿಚ್ಛೆಯಾಗಿದೆ. ಸುವರ್ಣ ಕರ್ನಾಟಕ ನಾಮಕರಣ ಸಂಭ್ರಮಾಚರಣೆ ಸಂದರ್ಭದಲ್ಲಿ, ಕನ್ನಡ ಸಾಹಿತ್ಯದಲ್ಲಿ ಅಹರ್ನಿಶಿ ಸೇವೆಗೈದ ಹಲವು ಹಿರಿಯ ಮತ್ತು ಕಿರಿಯ ಸಾಹಿತಿಗಳ ವಾಚಿಕೆಗಳನ್ನು ಹೊರತಂದು ಕನ್ನಡ ಓದುಗರ ಮಡಿಲಿಗೆ ಅರ್ಪಿಸುವ ಸದಿಚ್ಚೆಯಾಗಿದೆ.
ಈ ಸದಿಚ್ಛೆ ನೆರವೇರುವಲ್ಲಿ ಡಾ.ಸುನೀಲ ಜಾಬಾದಿ ಅವರು ಡಾ. ಗವಿಸಿದ್ದಪ್ಪ ಪಾಟೀಲ ಕುರಿತು ಸಮಗ್ರ ಸಾಹಿತ್ಯ ವಾಚಿಕೆ ರೂಪದಲ್ಲಿ ಸಂಪಾದಿಸಿದ್ದಾರೆ. ಡಾ. ಗವಿಸಿದ್ದಪ್ಪ ಪಾಟೀಲರವರಿಂದ ರಚಿತವಾದ ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ. ಅವರ ಕೃತಿಗಳಿಗೆ ಹಲವು ಪ್ರಶಸ್ತಿ ಕೂಡಾ ಲಭಿಸಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕನ್ನಡ ಕಟ್ಟುವುದರ ಜೊತೆಗೆ ಕಾವ್ಯ, ಕಥೆ, ಪ್ರಬಂಧ, ಮಕ್ಕಳ ಸಾಹಿತ್ಯದ ಜೊತೆ ಜಾನಪದ ಸಾಹಿತ್ಯದಲ್ಲಿ ಹಲವು ಕೃತಿ ರಚಿಸಿದವರು. ಅವರ ಒಟ್ಟು ಸಾಹಿತ್ಯದ ಸಾರಸ್ವತ ಸತ್ವವನ್ನು ಕನ್ನಡ ಓದುಗರಿಗೆ ಈ ವಾಚಿಕೆ ಉಣಬಡಿಸುತ್ತದೆ.
ಆಡು ಮುಟ್ಟದ ಸೊಪ್ಪಿಲ್ಲ ಸರ್ವಜ್ಞ ಮುಟ್ಟದ ವಿಷಯವಿಲ್ಲ ಎಂಬ ನಾಡ ನುಡಿಯಂತೆ ಡಾ. ಗವಿಸಿದ್ದಪ್ಪ ಹೆಚ್ ಪಾಟೀಲ ಅವರು ಕಾವ್ಯ, ಕಥೆ ವಿಮರ್ಶೆ ಜೀವನ ಚರಿತ್ರೆ, ಸಂಶೋಧನೆ, ಹೈದ್ರಾಬಾದ ಕರ್ನಾಟಕ ಸಾಹಿತ್ಯ, ಲೇಖನಗಳ ಸಂಕಲನ, ಅಭಿನಂದನ ಗ್ರಂಥ, ಸಂಸ್ಮರಣ ಗ್ರಂಥ, ಸಂಪಾದನೆ, ಪಠ್ಯ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿದವರು. ಸೃಜನಶೀಲ ಕಾವ್ಯ ಪ್ರಕಾರಗಳನ್ನು ಆಯ್ದುಕೊಂಡು ಹತ್ತು ಪ್ರಯೋಗ ಮಾಡಿಕೊಂಡು ಸಾಹಿತ್ಯ ಕೃಷಿಗೆ ಇಳಿದ್ದಿದ್ದಾರೆ. ಬಹುಮುಖ ಪ್ರತಿಭೆಯ ಇವರು ಸದಾ ಪಾದರಸದಂತೆ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ಪರಂಪರೆಯ ಪುರಾತನರ ತಲಸ್ಪರ್ಶಿಯಾಗಿ ಸಂಸ್ಕೃತಿ, ಇತಿಹಾಸ, ವಾಸ್ತವದ ಅರಿವು ಬದುಕಾಗಿಸಿಕೊಂಡು ಸೃಜನಾತ್ಮಕ ಕಾವ್ಯಗಳ ರಚನೆಯಿಂದ ಶ್ರೇಷ್ಠತ್ವವನ್ನು ಪಡೆದವರೆಂದು ಧ್ವನಿತವಾಗಿದೆ. ಇವರ ಕಾವ್ಯ ಕೃತಿಗಳು ಆತ್ಮದಾರರ ತತ್ವವನ್ನು ಬೋಧಿಸುವ ಸಂಪತ್ತಿಗೆ ದೊರೆತಿವೆ.
ಹೀಗೆ ಪ್ರಗ್ರತಿಯನ್ನು ಪಡೆದ ಇವರು ತಿರುಳನ್ನಡವೆಂದೇ ಪ್ರಸಿದ್ದಿ ಪಡೆದ ಕೊಪ್ಪಳ ಜಿಲ್ಲೆಯ ಬಿಸರಳ್ಳಿಯ ಗ್ರಾಮದ ಪೊಲೀಸ್ ಗೌಡರ ಮನೆತನಕ್ಕೆ ಸೇರಿದ ಹನಮಂತಗೌಡ ಪಾಟೀಲ ಹಾಗೂ ಶ್ರೀಮತಿ ಶಾರದಾ ಪಾಟೀಲ ಎಂಬ ದಂಪತಿಗಳಿಗೆ ಕೊನೆಯ ಮತ್ತು ಐದನೆಯ ಮಗನಾಗಿ ಜೂನ್, ೧೬, ೧೯೭೪ರಲ್ಲಿ ಜನಿಸಿದ್ದಾರೆ. ಇವರತಂದೆಯವರಾದ ಎಚ್.ಎಸ್ .ಪಾಟೀಲ ಅವರು ಕನ್ನಡ ನಾಡಿನ ಬಹುದೊಡ್ಡ ಓದುಗ.ಪುಸ್ತಕ ಪ್ರೇಮಿ, ಸಂಘಟಕ, ಚಳವಳಿಗಾರ ಮತ್ತು ಸಾಹಿತ್ಯ ಸಂಪನ್ನರಾಗಿದ್ದಾರೆ.
ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅವರು ಹೈದ್ರಾಬಾದ ಕರ್ನಾಟಕ ಸಾಂಸ್ಕೃತಿಕ ವಿಶ್ವಕೋಶ ಎಂದು ಕರೆದಿದ್ದಾರೆ. ಇಂತಹ ಸಾಂಸ್ಕೃತಿಕ ಹಿನ್ನೆಲೆ ಉಳ್ಳ ತಂದೆಯವರು ಡಾ. ಗವಿಸಿದ್ದಪ್ಪ ಹೆಚ್ ಪಾಟೀಲ ಅವರಿಗೆ ಮಾರ್ಗದರ್ಶಕರಾಗಿ ಮೊದಲ ಗುರುವಾಗಿ ಬೆನ್ನ ಹಿಂದಿನ ಬೆಳಕಾಗಿ ನಿಂತ ಇಂತಹ ಮಹಾಚೇತನ ಕ್ರಿಯಾಶೀಲ ವ್ಯಕ್ತಿಯ ಒಡನಾಟ ಮತ್ತು ಮಾರ್ಗದರ್ಶನದಲ್ಲಿ ಬೆಳೆದು ಸಾಹಿತ್ಯದ ಹಲವು ಮಜಲುಗಳನ್ನು ಅರಿತುಕೊಂಡು
ಹೊಸ ಹೊಸ ಮಾದರಿಯ ಸಾಹಿತ್ಯವನ್ನು ರಚಿಸಿದ್ದಾರೆ. ಹೀಗಾಗಿ ಡಾ. ಗವಿಸಿದ್ಧಪ್ಪ ಹೆಚ್. ಪಾಟೀಲರು ಸಾಹಿತ್ಯ ಸಾಧಕರಲ್ಲಿ ನಿಲ್ಲುವ ಅಪ್ರತಿಮ ವ್ಯಕ್ತಿತ್ವವುಳ್ಳ ಸೃಜನಾತ್ಮಕ ಸಾಹಿತಿ ಇವರಾಗಿದ್ದಾರೆ.
ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2023 ರಲ್ಲಿ ಹೊರಬಂದ ಈ ವಾಚಿಕೆಯ ಕೃತಿಯು 204 ಪುಟಗಳನ್ನು ಹೊಂದಿದ್ದು 200 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.