ಕಲ್ಯಾಣ ಕರ್ನಾಟಕದ ಸಮಕಾಲಿನ ದೃಶ್ಯಕಲಾ ಸಾಹಿತ್ಯ ಮತ್ತು ವಿಮರ್ಶೆ
ಕಲ್ಯಾಣ ಕರ್ನಾಟಕದ ಸಮಕಾಲಿನ ದೃಶ್ಯಕಲಾ ಸಾಹಿತ್ಯ ಮತ್ತು ವಿಮರ್ಶೆ
ಕಲ್ಯಾಣ ಕರ್ನಾಟಕ ಪ್ರದೇಶವು ಕನ್ನಡ ನಾಡಿನಲ್ಲಿ ಚಿತ್ರಕಲೆಯ ಬಹುಮುಖ್ಯ ಭೂಮಿಕೆಯಾಗಿ ಹೆಸರು ಗಳಿಸಿದೆ. ಇಂತಹ ನಾಡಿನ ಕಲೆಯ ಬೆಗೆಗೆ ಈ ಕೃತಿಯು ಮಾತನಾಡುತ್ತದೆ. ಚಿತ್ರಕಲೆಯ ಮಹತ್ವದಂತೆ ಕಲಾ ಸಾಹಿತ್ಯವು ಅಷ್ಟೇ ಪ್ರಮುಖ ಅಭಿವ್ಯಕ್ತಿಯಾಗಿ ಪಸರಿಸಿದೆ ಎಂಬ ಸಂಗತಿಯನ್ನು ಈ ಕೃತಿಯ ಮೂಲಕ ಅರಿಯುತ್ತೇವೆ. ಮೊದ ಮೊದಲಿಗೆ ಕಲಾವಿದರು ಲೇಖನಿ ಹಿಡಿದು ಸಾಹಿತ್ಯವನ್ನು ಸೃಷ್ಟಿಸಿರುವುದು ಕಂಡುಬರುತ್ತದೆ. ನಂತರ ಚಿತ್ರಕಲೆಯ ಬಗೆಗಿನ ಅಸಕ್ತಿಯುಳ್ಳ ಕನ್ನಡ ಸಾಹಿತಿಗಳು, ಚಿಂತಕರು, ಪತ್ರಕರ್ತರು, ಇತಿಹಾಸ ಪ್ರಜ್ಞೆಯುಳ್ಳ ಸಂಶೋಧಕರ ಬರಹಗಳಿಂದ ಕಲ್ಯಾಣ ಕರ್ನಾಟಕದ ದೃಶ್ಯಕಲಾ ಸಾಹಿತ್ಯ ಬೆಳವಣಿಗೆ ಕಂಡ ಹಂತಗಳನ್ನು ಅಧ್ಯಯನಾತ್ಮಕ ನೆಲೆಯಿಂದ ಕೃತಿ ಸಾಗುತ್ತದೆ.
ಸ್ವತಃ ಚಿತ್ರಕಲಾವಿದರೆ ಬರೆದ ಸಾಹಿತ್ಯದ ಸ್ವಾದ, ವಿಮರ್ಶಕರು, ಚಿಂತಕರು, ಸಾಹಿತಿಗಳು, ಪತ್ರಕರ್ತರು ಅಲ್ಲದೆ ಕಲೆಯಲ್ಲಿಯೇ ಉನ್ನತ ಸಂಶೋಧನೆ ಅಧ್ಯಯನ ಮಾಡಿದ ಬರಹಗಾರರ ಸಾಹಿತ್ಯಕ ಕೃತಿಗಳನ್ನು ಕ್ರಮಬದ್ಧವಾಗಿ ಕಟ್ಟಿಕೊಡಲಾಗಿದೆ.
ಕಲ್ಯಾಣ ನಾಡಿನ ಬಿದ್ರಿಕಲೆಯ ಕುರಿತಾಗಿ ಮೊದಲು ಬಂದ ಸಾಹಿತ್ಯವನ್ನು ವಿವೇಚಿಸುವುದರೊಂದಿಗೆ ಪ್ರಸ್ತುತ ಕಲಾ ಸಾಹಿತ್ಯದ ಚಿಂತನೆಯೊಂದಿಗೆ ಸುಮಾರು ನೂರಾ ಎಂಬತ್ನಾಲ್ಕು ಕೃತಿಗಳು ಪ್ರಕಟವಾದ ಮಾಹಿತಿಯನ್ನು ಗ್ರಹಿಸಬಹುದು. ಆ ಕೃತಿಗಳ ಸಮಗ್ರ ಮಾಹಿತಿಯನ್ನು ಟಿಪ್ಪಣಿಗಳನ್ನು ನೀಡುವುದರೊಂದಿಗೆ ಸಾಗಿದೆ.
ಅದ್ಬುತ ಕೃತಿ ನೀಡಿದ ಡಾ.ಬಸವರಾಜ ಎಸ್.ಕಲೆಗಾರ ಅವರು ಪ್ರಸ್ತುತ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ದೃಶ್ಯಕಲಾ ವಿಭಾಗದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಇಪ್ಪತ್ತಕ್ಕಿಂತ ಹೆಚ್ಚು ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ಈ ಸಾಹಸ ಸಾಧಕರಿಗೆ ಮಾತ್ರ ಸಾಧ್ಯವೆಂಬುದನ್ನು ತೋರಿಸಿದ್ದಾರೆ.
ಕಲ್ಯಾಣ ಕರ್ನಾಟಕ ದೃಶ್ಯಕಲೆಯ ತವರೂರು ಎಂಬಂತೆ ಕಂಡುಬರುತ್ತದೆ. ಆದರೆ ದೃಶ್ಯಕಲೆಯ ಚಿಂತನೆಗಳು ಬರಹ ರೂಪದಲ್ಲಿ ಇಷ್ಟೊಂದು ಪ್ರಗತಿ ಸಾಧಿಸಿದೆ ಎಂಬುದು ಈ ಕೃತಿಯ ಮೂಲಕ ಕಂಡುಕೊಳ್ಳಬಹುದು. ಕಲಾವಿದರು ಕಲಾಕೃತಿಗಳನ್ನು ರಚನೆಯಲ್ಲಿಯೇ ಪುನಃ ತೊಡಗಿಕೊಂಡಿರುತ್ತಾರೆ. ಆದರೆ ಆದಿಮ ದೃಶ್ಯ ಪರಂಪರೆಯಾಚೆಗಿನ ಆಧುನಿಕ ಮತ್ತು ಸಮಕಾಲೀನ ಸಂದರ್ಭದಲ್ಲಿ ಕಲಾವಿದ ಬರೆಹಕ್ಕೂ ತೊಡಗಿಸಿಕೊಂಡು ಬರೆಯುತ್ತ, ಬರೆಯುವ ಅನ್ಯ ಶಿಸ್ತಿನ ಲೇಖಕರಿಗೆ ಬರೆಯುವಂತೆ ಪ್ರೇರೇಪಿಸುವ, ಕಲಾಕೃತಿಯ ಅಂತರ್ಗತ ನೆಲೆಯನ್ನು ವಿವರಿಸಿ ಹೇಳುವ ಮೂಲಕ ದೃಶ್ಯಕಲಾ ಸಾಹಿತ್ಯದ ಹುಟ್ಟಿಗೆ ಕಾರಣರಾಗಿರುವುದು.
ಕೃತಿಯ ಪುಟಗಳನ್ನು ಬಿಚ್ಚಿ ನೋಡಿದಾಗ ಕಲ್ಯಾಣ ಕರ್ನಾಟಕದ ಸಮಕಾಲೀನ ದೃಶ್ಯಕಲಾ ಸಾಹಿತ್ಯ ಮತ್ತು ವಿಮರ್ಶೆಯ ಹಾದಿಯನ್ನು ಗಮನಿಸುತ್ತೇವೆ. ಮೊದಲಿಗೆ ಪುರಾತತ್ವಜ್ಞರು. ಇತಿಹಾಸಕಾರರು, ಸಂಶೋಧಕರು, ಚಿತ್ರಕಲಾವಿದರು. ಬೇರೆ ಬೇರೆ ಕನ್ನಡದ ಲೇಖಕರು, ಪತ್ರಕರ್ತರು, ಮುಂದುವರೆದಂತೆ ಕಲಾ ಲೇಖಕರು ಹೀಗೆ ಹಲವು ಬಗೆಯಲ್ಲಿ ಸೃಷ್ಟಿಯಾದ ಕಲಾ ಸಾಹಿತ್ಯದ ದಾರಿಯನ್ನು ಕಂಡುಕೊಳ್ಳುತ್ತೇವೆ.
ಆದಿಮ ದೃಶ್ಯ ಸಂವೇದನೆಯಿಂದ ಮೊದಲ್ಗೊಂಡು ಸಮಕಾಲೀನ ಹೊಳಹುಗಳ ನೆಲೆಯಲ್ಲಿ ದೃಶ್ಯಕಲಾ ಸಾಹಿತ್ಯ ಹುಟ್ಟಿಕೊಂಡು ಹಲವು ಬಗೆಯ ಅರ್ಥಗಳ ಸಂಗಮವಾಗಿ ನೂರಾ ಎಂಬತ್ತಾರು ಕೃತಿಗಳ ರೂಪ ಪಡೆಯುವಿಕೆಗೆ ಸಾಕ್ಷಿಯಾಗಿದೆ.
ಚಿತ್ರ ಶಿಲ್ಪಗಳು ರೂಪಿಸುವಿಕೆಯೇ ಕಲಾವಿದರ ಮೂಲ ಕಾರ್ಯವೆಂದು ವಾದಿಸುವ ಮನಸ್ಸುಗಳಿಗೆ ಕಲ್ಯಾಣ ನೆಲವು ದೃಶ್ಯಕಲೆಯ ಸಾಹಿತ್ಯ ದೃಷ್ಟಿಯಿಂದ ಮಹತ್ವದ ನೆಲವಿದು ಎಂಬುದನ್ನು ಈ ಕೃತಿ ಅಧ್ಯಯನಕಾರರಿಗೆ ಮನಮುಟ್ಟುವಂತಿದೆ.. ಮುಂದಿನ ಅಧ್ಯಯನಕ್ಕೆ ಆಕರ ಗ್ರಂಥವೆಂಬುದು ಮರೆಯದ ಸಂಗತಿ.
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾoವ್ ಗ್ರಾಮದ ಮತೊಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದಿಂದ 2022 ರಲ್ಲಿ ಪ್ರಕಟವಾದ ಈ ಕೃತಿಯಲ್ಲಿ 96 ಪುಟಗಳಿದ್ದು 120 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.
ಡಾ. ಶರಣಬಸಪ್ಪ ವಡ್ಡನಕೇರಿ