ನಡೆದಾಡುವ ದೇವರು ಹಾರಕೂಡದ ಶ್ರೀ ಚನ್ನವೀರ ಶಿವಾಚಾರ್ಯರು
ನಡೆದಾಡುವ ದೇವರು ಹಾರಕೂಡದ ಶ್ರೀ ಚನ್ನವೀರ ಶಿವಾಚಾರ್ಯರು
ಸರಳ ಜೀವನ, ಉನ್ನತ ವಿಚಾರ, ಶುದ್ಧ ಕಾರ್ಯದ ಶ್ರೀ ಸುಭಾಶ್ಚಂದ್ರ ಕಶೆಟ್ಟಿಯವರು ನಮ್ಮ ನಡುವಿನ ಬಹುಮುಖ ವ್ಯಕ್ತಿತ್ವದ ಹಿರಿಯ ಜೀವಿಗಳಾಗಿದ್ದಾರೆ. ಆಪರಿಮಿತವಾದ ಜೀವನೋತ್ಸಾಹ, ಆತ್ಮವಿಶ್ವಾಸ ಅಪಾರ ಮೈಗೂಡಿಸಿಕೊಂಡಿರುವ ಕಶೆಟ್ಟಿಯವರು ಸಮಾಜದ ವಿವಿಧ ಆಯಾಮಗಳಲ್ಲಿ ಮೌಲಿಕ ಕಾರ್ಯಗೈದು ಹೆಸರು ಮಾಡಿದವರು.
ಪ್ರಸ್ತುತ ಇವರು "ನಡೆದಾಡುವ ದೇವರು"ಎಂಬ ಶೀರ್ಷಿಕೆಯಡಿಯಲ್ಲಿ ಡಾ. ಚೆನ್ನವೀರ ಶಿವಾಚಾರ್ಯರ ಜೀವನ ಚರಿತ್ರೆಯನ್ನು ರಚಿಸಿದ್ದು. ಈ ಕೃತಿ ಪರಮ ಪೂಜ್ಯ ಷಟಸ್ಥಲಬ್ರಹ್ಮ ಡಾ.ಶ್ರೀ ಚೆನ್ನವೀರ ಶಿವಾಚಾರ್ಯರ ಪರಂಪರೆಯನ್ನು ದಾಖಲಿಸುವ ಕೃತಿಯನ್ನು ತುಂಬಾ ಶ್ರಮವಹಿಸಿ ರಚಿಸಿದ್ದು ಕಂಡು ಬರುತ್ತದೆ, ಇದಕ್ಕೆ ಹಲವಾರು ಗ್ರಂಥ, ಆಕರಗಳನ್ನಾಗಿ ಪಡೆದುಕೊಂಡಿದ್ದಾರೆ. ಹಲವರು ಬರೆದ ಲೇಖನ,ಕವನಗಳು ಅಲ್ಲದೆ ಶರಣರ ಹಲವಾರು ವಚನಗಳನ್ನು ಉಲ್ಲೇಖಿಸಿಕೊಂಡು ಆಯಾ ಸಂದರ್ಭಕ್ಕೆ ತಕ್ಕಂತೆ ಬಳಸಿಕೊಂಡು ರಚನೆ ಮಾಡಿದ್ದು ಕುತೂಹಲವನ್ನುಂಟು ಮಾಡುತ್ತದೆ. ಇದೊಂದು ಪರಿಪೂರ್ಣವಾದ ದಾಖಲೆ ನೀಡುವ ಕೃತಿಯಾಗಿ ಹೊರಬಂದಿದೆ.
ಶ್ರೀ ಸುಭಾಷ್ಟಂದ್ರ ಕಶೆಟ್ಟಿ ಅವರು ಈ ಕೃತಿಯನ್ನು 12 ಭಾಗಗಳಲ್ಲಿ ರಚನೆಗೊಂಡಿದೆ. ಮಠ, ಮಂದಿರ, ಚರ್ಚ್, ಮಸೀದಿಗಳ ಪೂರ್ವ ಇತಿಹಾಸ ಎಂಬ ಮೊದಲ ಭಾಗದಲ್ಲಿ ಧಾರ್ಮಿಕ ಕೇಂದ್ರಗಳು ಆಧ್ಯಾತ್ಮಿಕ ಕೇಂದ್ರಗಳಾಗಿ ನಮಗೆ ಹೇಗೆ ತಮ್ಮ ವಿಸ್ತಾರತೆ ಹೊಂದಿವೆ. ಮನಕುಲದ ಉದ್ದಾರಕ್ಕೆ ಅವತರಿಸಿದ ಈ ಕೇಂದ್ರಗಳ ಧರ್ಮ, ಆಧ್ಯಾತ್ಮದ ಮೂಲಕ ಮನುಷ್ಯನು ನೆಮ್ಮದಿಗಾಗಿ ಮನುಕುಲದ ಒಳಿತಿಗಾಗಿ ಹುಟ್ಟಿಕೊಂಡು ಬಂದು ಚಾರಿತ್ರಿಕ ಹಿನ್ನೆಲೆಯ ದಾಖಲೆಗಳನ್ನು ನೀಡುತ್ತಾರೆ. ಹಾರಕೂಡ ಹಿರೇಮಠದ ಪೂರ್ವ ಪೀಠಾಧಿಪತಿಗಳ ಸಂಕ್ಷಿಪ್ತ ಇತಿಹಾಸ ಎಂಬ ಎರಡನೇ ಭಾಗ ಅತ್ಯಂತ ಮಹತ್ವಾದ್ದಾಗಿದೆ. ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಾರಕೂಡ ಹಿರೇಮಠವು ಶತಮಾನಗಳ ಇತಿಹಾಸ ಪರಂಪರೆ ಹೊಂದಿದೆ. ಹಿರೇಮಠ ಮೊದಲು ಒಂದು ಸಣ್ಣ ಮಠವಾಗಿತ್ತು. ಇಲ್ಲಿ ಆಗಿ ಹೋದ ಏಳು ಪೀಠಾಧಿಪತಿಗಳು ಯಾರು, ಅವರು ಯಾವ ಕಾಲದಲ್ಲಿ ಬಂದು ಹೋದರು, ಅವರ ಕೆಲಸ ಕಾರ್ಯಗಳ ಸಮಗ್ರ ನೋಟವನ್ನು ಕಟ್ಟಿಕೊಟ್ಟಿದ್ದಾರೆ,ಶ್ರೀ ಸಂಗನಬಸವ ಸ್ವಾಮಿಗಳಿಂದ ಪ್ರಾರಂಭವಾದ ಈ ಮಠದ ಪೂರ್ವ ಇತಿಹಾಸವು ಮೊದಲ ಮೂರು ಜನ ಪೀಠಾಧಿಪತಿಗಳ ಸಮಾಧಿಗಳು ಬೇರೆ ಬೇರೆ ಕಡೆ ಆದರೆ ಇನ್ನುಳಿದ ಜನರ ಸಮಾಧಿಗಳು ಹಾರಕೂಡದಲ್ಲಿ ಆಗಿರುವುದನ್ನು ನಿಶ್ಚಿತವಾಗಿ ಹೇಳುತ್ತಾರೆ.
ಕಲೆ,ಸಾಹಿತ್ಯ,ಸಂಸ್ಕೃತಿ, ಸಾಂಸ್ಕೃತಿಕ ಮಹತ್ವ ಅರಿತ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು ತಮ್ಮ ಗುರುಗಳು ಲಿಂಗೈಕ್ಯ ಶ್ರೀ ಗುರುಲಿಂಗ ಶಿವಾಚಾರ್ಯರ ಸ್ಮರಣೆಗಾಗಿ ವಿಜಯದಶಮಿ ಹಿಂದಿನ ದಿವಸವೇ ಪ್ರತಿ ವರ್ಷ ಅನುಭಾವ ಪ್ರಚಾರೋಪನ್ಯಾಸ ಮಾಲೆ, ಪ್ರಶಸ್ತಿ ಪ್ರದಾನ,ಪುಸ್ತಕ ಬಿಡುಗಡೆ, ಕಾರ್ಯಕ್ರಮ ಹಮ್ಮಿಕೊಂಡು ಬಂದಿದ್ದಾರೆ. ಧರ್ಮ ಆಧ್ಯಾತ್ಮಿಕಕ್ಕೆ ಹೆಚ್ಚು ಹೊತ್ತು ನೀಡಿದ್ದಾರೆ. ಅವರ ಜೀವನ,ಬಾಲ್ಯ,ವಿದ್ಯಾ ಸಂಪಾದನೆ,ಪಟ್ಟಾಧಿಕಾರ ಎಲ್ಲವನ್ನು ಕಶೆಟ್ಟಿ ಅವರು ಬರವಣಿಗೆಯಲ್ಲಿ ಚಿತ್ರಿಸಿದ್ದಾರೆ.
ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2024ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ 244 ಪುಟಗಳಿದ್ದು 250 ಬೆಲೆ ನಿಗದಿಪಡಿಸಲಾಗಿದೆ.
ಡಾ. ಶರಣಬಸಪ್ಪ ವಡ್ಡನಕೇರಿ