ಅತ್ಯಾಚಾರಕ್ಕೆ ಕಠಿಣ ಕ್ರಮ ಯಾವಾಗ
ಸಾಂದರ್ಭಿಕ ಚಿತ್ರ
ಅತ್ಯಾಚಾರಕ್ಕೆ ಕಠಿಣ ಕ್ರಮ
ದೇಶದಲ್ಲಿ ನಡೆಯುವ ಅತ್ಯಾಚಾರಕ್ಕೆ ಕಡಿವಾಣ ಯಾವಾಗ.....
ಕೊಲ್ಕತ್ತಾ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ರಾಷ್ಟ್ರ ವ್ಯಾಪಿ ಸುದ್ದಿಯಾಗಿದೆ. ಇಂದು ಬಹುತೇಕ ಇಡೀ ದೇಶದ ಎಲ್ಲಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದಾರೆ.
ದೇಶದಲ್ಲಿ ಪ್ರತಿ ನಿಮಿಷಕ್ಕೋ ಗಂಟೆಗೋ ಒಂದೊಂದು ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ದೆಹಲಿಯ ನಿರ್ಭಯ ಪ್ರಕರಣ, ಹೈದರಾಬಾದಿನ ಪಶುವೈದ್ಯೆ ಪ್ರಕರಣ, ಉತ್ತರ ಪ್ರದೇಶದ ಹತ್ರಾಸ್, ಮತ್ತೊಂದಿಷ್ಟು ಬಿಟ್ಟರೆ ಈಗ ಕೊಲ್ಕತ್ತಾದ ಈ ನತದೃಷ್ಟ ವೈದ್ಯಕೀಯ ವಿದ್ಯಾರ್ಥಿನಿಯದು.
ಅವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು, ಗಲ್ಲಿಗೇರಿಸಬೇಕು ಮುಂತಾದ ಪದಗಳು, ಘೋಷಣೆಗಳು ಕೇಳಿಬರುತ್ತಿದೆ.ಆಡಳಿತಾತ್ಮಕವಾಗಿ ಒಂದಷ್ಟು ಕ್ರಾಂತಿಕಾರಕ ಬದಲಾವಣೆಗಳನ್ನು, ಮಾನಸಿಕ ವ್ಯಕ್ತಿತ್ವವನ್ನು ಇಡೀ ಸಮಾಜದಲ್ಲಿ ರೂಪಿಸದಿದ್ದರೆ ಈ ಅತ್ಯಾಚಾರ ತಡೆಯುವುದು ಬಹಳ ಕಷ್ಟ.
ಇದರ ನಡುವೆ ರಾಜಕೀಯ ತಿಕ್ಕಾಟಗಳು ಬೇರೆ ನಡೆಯುತ್ತದೆ. ಇದು ನಾಚಿಕೆಗೇಡು. ಏಕೆಂದರೆ ಅತ್ಯಾಚಾರ, ಕೊಲೆ ನಡೆದ ನಂತರ ಅದೊಂದು ಹೀನ ಹಿಂಸಾತ್ಮಕ ಕೃತ್ಯ. ಅದರಲ್ಲಿ ರಾಜಕೀಯ ಪಕ್ಷಗಳಿಗೆ ಏನು ಕೆಲಸ, ಸಂಘಟನೆಗಳಿಗೆ ಏನು ಕೆಲಸ. ಅದೇನಿದ್ದರೂ ಪೊಲೀಸರು, ಕಾನೂನು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ಕ್ರಮ ಕೈಗೊಳ್ಳಬೇಕಾದ ವಿಷಯ. ಅದನ್ನು ರಾಜಕೀಯಗೊಳಿಸಿ, ಮಾಧ್ಯಮಗಳಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಏನಿದೆ. ನೇರವಾಗಿ ಸಿಸಿಟಿವಿಯ ದೃಶ್ಯಾವಳಿಗಳಿವೆ. ಇನ್ನು ತಡ ಮಾಡುವುದು ಏಕೆ...?
ಪ್ರಜಾಪ್ರಭುತ್ವ ದೇಶದಲ್ಲಿ ಒಂದು ಅತ್ಯಾಚಾರ ಪ್ರಕರಣವನ್ನು ಭೇದಿಸಿ ಕಠಿಣ ಶಿಕ್ಷೆಗೆ ಒಳಪಡಿಸುವ ಪ್ರಕ್ರಿಯೆ ಸಹಜವಾಗದೆ ಅಸಹಜವಾದರೆ ಅದೊಂದು ವಿಕೃತ ಮನಸ್ಥಿತಿಯ ಆಳ್ವಿಕೆ ಎಂದೇ ಕರೆಯಬೇಕಾಗುತ್ತದೆ. ಅನಾಗರಿಕ ಸಮಾಜ ಎನ್ನಲೂ ಬಹುದು.
ನಿರ್ಭಯ ಎಂಬ ಜ್ಯೋತಿ ಸಿಂಗ್ ಭಾರತದ ರಾಜಧಾನಿ ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೆ ಒಳಗಾಗಿ 12 ವರ್ಷಗಳು ಉರುಳಿದವು. ಇಡೀ ದೇಶದ ಗಮನ ಸೆಳೆದ - ಅತ್ಯಾಚಾರದ ಬಗ್ಗೆ ಅತ್ಯಂತ ಆಕ್ರೋಶ ವ್ಯಕ್ತವಾದ ಘಟನೆಯಿದು. ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆ ನೀಡುವ ಹೊಸ ಕಠಿಣ ಕಾನೂನು ಸಹ ಜಾರಿ ಮಾಡಲಾಯಿತು.
ಆದರೂ ಇಡೀ ದೇಶದಲ್ಲಿ ಅತ್ಯಾಚಾರಗಳ ಸರಣಿ ಇನ್ನೂ ನಿಂತಿಲ್ಲ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಕಡಿಮೆಯಾಗಿಲ್ಲ.
ತನ್ನ ತಾಯಿ , ಅಕ್ಕ -ತಂಗಿ ಎಂಬ ಕೆಲವು ರಕ್ತ ಸಂಬಂಧದ ಹೆಣ್ಣುಗಳನ್ನು ಹೊರತುಪಡಿಸಿ ಪ್ರತಿ ಹೆಣ್ಣನ್ನು ನೋಡುವ ಮಾನಸಿಕ ಸ್ಥಿತಿ. ಬೇರಿ ಹೆಣ್ಣನ್ನು ನೋಡುವುದೇಕೆ ..?ಕಾನೂನಿನ ಭಯದಿಂದ ಮಾತ್ರ ಒಂದಷ್ಟು ನಾಗರಿಕ ವರ್ತನೆ ಇದೆಯೇ ಹೊರತು ಆಂತರ್ಯದಲ್ಲಿ ಅದು ಇರುವುದು ಅತ್ಯಂತ ಕಡಿಮೆ.
ಮೊದಲನೇ ವರ್ಗದಲ್ಲಿ ಶ್ರೀಮಂತ ರಾಜಕಾರಣಿಗಳು, ದೊಡ್ಡ ದೊಡ್ಡ ದಲ್ಲಾಳಿಗಳು, ಶಕ್ತಿವಂತ ಅಧಿಕಾರಿಗಳು, ಡೋಂಗಿ ಧಾರ್ಮಿಕ ಗುರುಗಳು, ದೊಡ್ಡ ಉದ್ಯಮಿಗಳು, ರೌಡಿಗಳು, ಮಾಫಿಯಾದವರು, ಸಿನಿಮಾ ನಟರು ( ಎಲ್ಲರೂ ಅಲ್ಲ ಕೆಲವರು ಮಾತ್ರ ) ಮುಂತಾದವರು ಅವರಿಗಿರುವ ಚಟಕ್ಕೆ ಅನುಸಾರವಾಗಿ ಹಣದಿಂದಲೋ, ಬಲದಿಂದಲೋ, ಬೆದರಿಕೆಯಿಂದಲೋ, ಆಮಿಷದಿಂದಲೋ ನಿರಂತರವಾಗಿ ಅತ್ಯಾಚಾರ ನಡೆಯುತ್ತಲೇ ಇವೆ.ಆಕೆ ಏನಾದರೂ ದೂರು ಕೊಟ್ಟರೆ ಮಾತ್ರ ಅದು ದಾಖಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಆ ಸಾಧ್ಯತೆ ಕಡಿಮೆ ಮತ್ತು ಆಕೆಗೆ ಯಾವ ಸುರಕ್ಷತೆಯೂ ಇರುವುದಿಲ್ಲ.ಇದೊಂದು ಬಲಾಢ್ಯರ ಕೂಟ.
ಹೆಣ್ಣು ಶ್ರೇಷ್ಠಳೂ ಅಲ್ಲ. ಕನಿಷ್ಠಳೂ ಅಲ್ಲ. ಭೋಗದ ವಸ್ತುವೂ ಅಲ್ಲ. ಆಕೆ ನಮ್ಮ ನಿಮ್ಮಂತೆ ಸೃಷ್ಟಿಯ ಸಹಜ ಜೀವಿ. ನಿಮ್ಮ ತಾಯಿ ತಂಗಿ ಅಕ್ಕ ಹೆಂಡತಿ ಪ್ರೇಯಸಿಯರು ಮಾತ್ರ ಹೆಣ್ಣುಗಳು ಉಳಿದವರು ನಿಮ್ಮ ಆಡು ಗೊಂಬೆಗಳು ಎಂಬ ಭಾವನೆ ಬಿಡಿ.
ತಿಳಿವಳಿಕೆ ನಡವಳಿಕೆಯಾಗಿ ಪರಿವರ್ತನೆ ಹೊಂದಿದರೆ ಸಮಾಜ ಖಂಡಿತವಾಗಿ ಉತ್ತಮ ನಾಗರಿಕ ಸಮಾಜವಾಗಿ ರೂಪಗೊಳ್ಳುತ್ತದೆ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068...