ಸತ್ಯಕ್ಕ ಶರಣೆ

ಇನಿಯಂಗೆ ತವಕವಿಲ್ಲ; ಎನಗೆ ಸೈರಣೆಯಿಲ್ಲ.
ಮನದಿಚ್ಫೆಯನರಿವ ಸಖಿಯರಿಲ್ಲ, ಇನ್ನೇವೆನವ್ವಾ?
ಮನುಮಥ ವೈರಿಯ ಅನುಭಾವದಲ್ಲಿ
ರಿನ್ನ ಮನ ಸಿಲುಕಿ ಬಿಡದು, ಇನ್ನೇನ ಮಾಡುವೆನೆಲೆ ಕರುಣವಿಲ್ಲದ ತಾಯೆ?
ದಿನ ವೃಥ ಹೋಯಿತ್ತಾಗಿ ಯೌವ್ವನ ಬೀಸರವಾಗದ ಮುನ್ನ ಪಿನಾಕಿಯ
ನೆರಹವ್ವಾ ಶಂಭುಜಕ್ಕೇಶ್ವರನ ?
*ಸತ್ಯಕ್ಕ ಶರಣೆ* *ವಚನ ಅನುಸಂಧಾನ*
ಮಾತನಾಡುವ ಹಕ್ಕೇ ಇಲ್ಲದಿದ್ದ ಮಹಿಳೆಯ ದನಿ ಅಡಗಿಸಿದ್ದ ಶ್ರೇಣೀಕೃತ ವ್ಯವಸ್ಥೆಯ ಶೋಷಣೆಗೆ ರೋಸಿಹೋಗಿದ್ದ ಅಪ್ಪ ಬಸವಣ್ಣನವರು, ತಮ್ಮ ಚಿಂತನೆಯ ಕೇಂದ್ರದಲ್ಲಿ ಮಹಿಳೆಯನ್ನ ಇಂಬಿಟ್ಟ
ಕಾರಣದಿಂದ ಹನ್ನೆರಡನೆ ಶತಮಾನದ ಶರಣರ ಕ್ರಾಂತಿಯಲ್ಲಿ ಮಹಿಳೆಯರು ಮುಖ್ಯ ಪಾತ್ರವನ್ನು ವಹಿಸಿದ್ದರು ಎನ್ನುವುದು ಶರಣರ ಚರಿತ್ರೆಯಲ್ಲಿ ಎದ್ದು ಕಾಣುತ್ತದೆ. ಅಷ್ಟೇ ಅಲ್ಲದೆ ಅನೇಕ ವಚನ ಕಾರ್ತಿ ಶರಣೆಯರು ಅನುಭವ ಮಂಟಪದಲ್ಲಿ ತಮ್ಮ ಹೃದ್ಭಾವನೆಗಳನ್ನು ಅನುಭಾವದ ನೆಲೆಗೆ ಒಯ್ದು ಅದ್ಭುತವಾದ ವಚನಗಳನ್ನ ರಚಿಸಿದ್ದಾರೆ. ತಮ್ಮ ಧ್ವನಿಯನ್ನು ಅನನ್ಯವಾಗಿ ಪ್ರಸ್ತುತ ಪಡಿಸಿ ಅಪ್ಪ ಬಸವಣ್ಣನವರು ಕಂಡಿದ್ದ ಸರ್ವಸಮಾನತೆ ಯ ಕನಸನ್ನು ನನಸಾಗಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಹಿರೇಜಂಬೂರಿನ ಸತ್ಯಕ್ಕ ಅಪಾರ ಶಿವ ನಿಷ್ಠೆಯ
ಶರಣೆಯಾಗಿದ್ದಾರೆ. ಶರಣರ ಬೀದಿಯಲ್ಲಿನ ಕಸ ಗೂಡಿಸುವ ಕಾಯಕದ ಈ ಶರಣೆಯ ಇಪ್ಪತ್ತೇಳು ವಚನಗಳು ಲಭ್ಯವಾಗಿವೆ. ಪ್ರಸ್ತುತ ಈ ಮೇಲಿನ ವಚನ ಸತ್ಯಕ್ಕ ಶರಣೆಯ ಶರಣ ಸತಿ ಭಾವದ ಅನನ್ಯ ಅಭಿವ್ಯಕ್ತಿಯಾಗಿದೆ. ತನ್ಮೂಲಕ ಇಲ್ಲಿ ಸತ್ಯಕ್ಕನ ಘನವ್ಯಕ್ತಿತ್ವದ ಅನಾವರಣ ಆಗಿರುವ ಸಂಗತಿಗೆ ನಿಜಕ್ಕೂ ಹೆಮ್ಮೆಯನಿಸುತ್ತದೆ. ಪ್ರಸ್ತುತ ವಚನದ ಅನುಸಂಧಾನವನ್ನು ಇಲ್ಲಿ ಈಗ ಮಾಡಿ ಇನ್ನೂ ಹೆಚ್ಚಿನ ಒಳನೋಟ ಕಾಣಲು ಪ್ರಯತ್ನಿಸಿ ನೋಡೋಣ.
*ಇನಿಯಂಗೆ ತವಕವಿಲ್ಲ; ಎನಗೆ ಸೈರಣೆಯಿಲ್ಲ.*
*ಮನದಿಚ್ಫೆಯನರಿವ ಸಖಿಯರಿಲ್ಲ,* *ಇನ್ನೇವೆನವ್ವಾ?*
ಇಲ್ಲಿ ಶರಣ ಸತಿಭಾವದ ಪರಾಕಾಷ್ಠೆ ವಿಜೃಂಭಿಸಿ, ಒದುಗರನ್ನು ದಿಂಙ್ಮೂಢ ಗೊಳಿಸುತ್ತದೆ! ಬಾರದ ತನ್ನ ಇನಿಯನ ಆಗಮನದ ಉತ್ಕಟ ನಿರೀಕ್ಷೆಯ
ತವಕದಲ್ಲಿರುವ ತರುಣಿಯ ಸ್ವಗತದ ಸನ್ನಿವೇಶ
ಇಲ್ಲಿದೆ. ಆದರೆ ಆ ಇನಿಯನಿಗೇ ಇಲ್ಲಿ ಅಂತಹಾ ಉತ್ಕಟ ತವಕವಿಲ್ಲಾ! ಎನ್ನುವ ಆಕ್ಷೇಪಣೆಯನ್ನು ಮಾಡುವ ಶರಣಸತಿ, ತನಗೆ ಮಾತ್ರ ಸೈರಣೆ ಇಲ್ಲ ಎನ್ನುವುದರ ಜೊತೆಗೆ ತನ್ನ ಈ ಬೇಗುದಿಯನ್ನು ಹಂಚಕೊಂಡಾದರೂ ಹಗುರ ಆಗಲೂ ಅಂತಹ ಸಖಿಯರೂ ತನಗಿಲ್ಲವೆಂದು ತನ್ನ ಅಂಗ ತಾಯಿ ಯಲ್ಲಿ ಮೊರೆಯಿಡುವುದಷ್ಟೇ ಅಲ್ಲದೆ ಇನ್ನೇನು ಮಾಡಲಿ ತಾಳೆನವ್ವಾs ಎಂದೆನ್ನುವ ವಿರಹ ವೇದ ನೆಯ ತಳಮಳದ ಸಂದರ್ಭ ಇಲ್ಲಿ ಅನಾವರಣ ಗೊಂಡಿದೆ.
*ಮನುಮಥ ವೈರಿಯ ಅನುಭಾವದಲ್ಲಿ*
*ರಿನ್ನ ಮನ ಸಿಲುಕಿ ಬಿಡದು,* *ಇನ್ನೇನ ಮಾಡುವೆನೆಲೆ ಕರುಣವಿಲ್ಲದ ತಾಯೆ?*
ಇಲ್ಲಿ ಮನ್ಮಥ ವೈರಿಯಾದ ಶಿವನ ಅನುಭಾವದ ಲ್ಲಿ ನನ್ನ ವಿರಹದ ಉರಿಯಲ್ಲಿ ಬೇಯುವ ಮನ
ಸಿಲುಕದಾಗಿದೆ. ಹಾಗಾಗಿ ತಳಮಳವು ನನ್ನೊಳಗೆ ಥಕಥಕ ಕುಣಿಯುತ್ತಿದೆ ಇನ್ನೇನು ಮಾಡಲಿ ಎಲೆ ಕರುಣೆ ಇಲ್ಲದ ತಾಯಿಯೇ ಎಂದು ತನ್ನ ಶರಣ ಸತಿ ಭಾವದ ಅಳಲನ್ನು ಇಲ್ಲಿ ತೋಡಿಕೊಂಡು, ತನ್ನ ಮನವನ್ನ ಪೊರೆವಂಥಾ ತನುವೆಂಬ ತಾಯಿ ಗೂ ತಾಯಿಯಾಗಿರುವ ಪರಮ ನಿರಂಜನ ಶಕ್ತಿ ದೇವರಲ್ಲಿ ನಿವೇದನೆ ಮಾಡಿಕೊಂಡ ದೇಹಭಾವ ಮೀರಿದ ಮನೋಭಾವ ಇಲ್ಲಿ ಎದ್ದು ಕಾಣುತ್ತದೆ.
*ದಿನ ವೃಥ ಹೋಯಿತ್ತಾಗಿ ಯೌವ್ವನ ಬೀಸರವಾಗದ* *ಮುನ್ನ ಪಿನಾಕಿಯ*
*ನೆರಹವ್ವಾ* *ಶಂಭುಜಕ್ಕೇಶ್ವರನ ?
ಇಲ್ಲಿ ಶರಣಸತಿ; ಲಿಂಗಪತಿಯ ಸಮಾಗಮಕ್ಕಾಗಿ ಸಾಧನೆಯ ಮಾಡುತ್ತಲೇ ಕಾಯುತ್ತಲೇ ಇರುವ ಕಾಲಮಾನದಲ್ಲಿ ಯೌವನವು ಕಳೆದು ಹೋಗುತ್ತ ಲಿರುವ ಈ ಸಂದರ್ಭದಲ್ಲಿ; ಈ ತನ್ನ ತನು ಮನ ಭಾವದ ವೀಣೆಯ ಶೃತಿಗೊಳಿಸಿ ತನ್ನ ಇನಿಯನಾ ದ ಶಂಭುಜಕ್ಕೇಶ್ವರನಿಗೆ ನುಡಿಸಲು ಅಣಿಗೊಳಿಸ ಬೇಕೆಂದು ಕೋರಿಕೊಳ್ಳುವ ಶರಣ ಸತಿ ಭಾವದ ಸಮಯ ಪ್ರಜ್ಞೆ ಕೂಡಾ ಇಲ್ಲಿ ಪ್ರಜ್ವಲಿಸಿದೆ. ಅಂಗ ಭಾವದ ಕಾಮನೆಗಳು ಇವು ಎಂದು ಮೇಲ್ನೋಟ ಕ್ಕೆ ತೋರಿದರೂ ಶರಣರ ಪರಿಭಾಷೆಯ ಬೀಸು, ಅನುಭಾವಿಕ ನೆಲೆಯಲ್ಲಿ ನುಡಿಗೊಂಡ ನಾದವು
ಹೃನ್ಮನದಲ್ಲಿ ಧ್ವನಿಸುವ ಮೂಲಕ ಸತ್ಯಕ್ಕ ಶರಣೆ ತಲುಪಿದ ಅನುಭಾವಿಕ ನೆಲೆಯ ಜೊತೆಗೆ ಅವರ ಪ್ರತಿಭೆಯೂ ಥಳಥಳಿಸಿ ಹೆಮ್ಮೆ ಎನಿಸುತ್ತದೆ.
ಅಳಗುಂಡಿ ಅಂದಾನಯ್ಯ