POCSO/ ಫೋಕ್ಸೋ ಕಾಯಿದೆ

POCSO/ ಫೋಕ್ಸೋ ಕಾಯಿದೆ
ಇತ್ತೀಚಿನ ದಿನಗಳಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳ, ಕೆಲವು ಮಠಾಧೀಶರ, ಕೆಲವು ಕಾವಿಧಾರಿಗಳ , ಕೆಲವು ರಾಜಕೀಯ ಮುಖಂಡರ, ವಿದ್ಯೆ ಕಲಿಸುವ ಗುರುಗಳ ಮೇಲೆ ಫೋಕ್ಸೋ ಕಾಯ್ದೆ ಅಡಿಯಲ್ಲಿ ಬಂಧನಕ್ಕೆ ಒಳಗಾದ ವಿಷಯವನ್ನು ನಾವು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಬಡ ಮಕ್ಕಳಿಗೆ ವಸತಿ ಶಾಲೆಯನ್ನು ಒದಗಿಸಿ ಉಚಿತ ಶಿಕ್ಷಣ ಹಾಗೂ ಉಚಿತ ಆಹಾರವನ್ನು ನೀಡುವ ಕೆಲವು ಮಠಗಳಲ್ಲಿ , ವಿದ್ಯಾ ಸಂಸ್ಥೆಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ತುಂಬಾ ವಿಷಾಧನೀಯ ಸಂಗತಿ. ಬೇಲಿಯೇ ಎದ್ದು ಹೊಲ ಮೇಯುವ ಈ ಘಟನೆಗಳ ನೋಡಿದರೆ ನಮ್ಮ ದೇಶ ಎತ್ತ ಸಾಗುತ್ತಿದೆ ಎನ್ನುವ ಚಿಂತೆ ಕಾಡದೆ ಬಿಡುವುದಿಲ್ಲ. ಹೆಣ್ಣಿನ ಬಡತನ, ಅಸಹಾಯಕತೆ, ಪರಾವಲಂಬನೆಯನ್ನು ದುರುಪಯೋಗಪಡಿಸಿಕೊಂಡು ಇಂತಹ ಹೀನ ಕೃತ್ಯವನ್ನು ಮಾಡುವುದು ಎಷ್ಟು ಸರಿ? ಮೊನ್ನೆ ತಾನೆ ಬೀದರಿನಲ್ಲಿ ನಡೆದ ಘಟನೆಯು ಮನಸ್ಸನ್ನು ಘಾಸಿಪಡಿಸಿದೆ. 9ನೇ ತರಗತಿಯ ಬಾಲಕಿಯನ್ನು ಅದೇ ಶಾಲೆಯ ಗಣಿತ ಶಿಕ್ಷಕ ಲೈಂಗಿಕವಾಗಿ ಮಗುವನ್ನು ದುರುಪಯೋಗಪಡಿಸಿಕೊಂಡು ಅವಳಿಗೆ ಮತ್ತು ಅವಳ ಕುಟುಂಬಕ್ಕೆ ಜೀವದ ಭಯವನ್ನು ಹಾಕಿರುವುದು ಎಷ್ಟು ಸರಿ? ಶಿಕ್ಷಕರನ್ನು ಪೂಜ್ಯರೆಂದು ದೇವರ ಸಮಾನರೆಂದು ಪೂಜಿಸುವ ಭಾರತೀಯರು, ಅದೇ ಸಮಯದಲ್ಲಿ ಇಂತಹ ಕಾಮುಕ ಶಿಕ್ಷಕರು, ಶಿಕ್ಷಕರ ಹುದ್ದೆಗೆ ಕಳಂಕರು. ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಕೂಡ ಭಯಪಡುವಂತಹ ಪರಿಸ್ಥಿತಿ ಉಂಟಾಗಿದೆ. ಮೊನ್ನೆ ತಾನೆ ತನ್ನ ಸ್ವಂತ ಅಣ್ಣನಿಂದಲೇ ತಾಯಿಯಾಗಿ, 15 ವರ್ಷಕ್ಕೆ, ಏಳು ತಿಂಗಳ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ 9ನೇ ತರಗತಿಯ ಹೆಣ್ಣು ಮಗುವಿನ ಘಟನೆಯನ್ನ ಮರೆಯಲಾಗದು. ನಾವು ಎತ್ತ ಸಾಗುತ್ತಿದ್ದೇವೆ, ಅಣ್ಣ ತಂಗಿಯ ಪವಿತ್ರ ಸಂಬಂಧ ಎಲ್ಲಿ ಹೋಗುತ್ತಿದೆ ಎಂದು ಭಯವಾಗುತ್ತಿದೆ. ಮಕ್ಕಳ ಬ್ಯಾಗಿನಲ್ಲಿ ತಿಂಡಿ ತಿನಿಸುಗಳು ಇರುವುದು ಬಿಟ್ಟು, ಕಾಡಂಗಳು ತಮ್ಮ ಸ್ಥಾನವನ್ನು ಶಾಲೆ ಬ್ಯಾಗಿನ ಮೂಲೆಯನ್ನು ಅಲಂಕರಿಸಿಕೊಂಡಿವೆ. ಹೀಗಾದರೆ ನಮ್ಮ ಮಕ್ಕಳ ಭವಿಷ್ಯ ಹೇಗೆ?? ಹಾಗಾಗಿ ಪೋಕ್ಸೋ ಕಾಯ್ದೆಯ ಬಗ್ಗೆ ಎಲ್ಲಾ ಮಕ್ಕಳಿಗೂ ತಿಳಿವಳಿಕೆ ನೀಡುವ ಉದ್ದೇಶದಿಂದ ಈ ಲೇಖನವನ್ನು ಬರೆದಿರುವೆ. ಇದು ಮಕ್ಕಳ ಜಾಗೃತಿಗಾಗಿ ಮಕ್ಕಳ ಹಿತಾದೃಷ್ಟಿಯಿಂದ ಒಳ್ಳೆಯದು. ಹಾಗಾದರೆ ಫೋಕ್ಸೋ ಕಾಯ್ದೆ ಎಂದರೇನು ನೋಡೋಣ.
POCSO ಕಾಯಿದೆ ಎಂದರೇನು?
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ ಎಂದು ಸಾಮಾನ್ಯ ಭಾಷೆಯಲ್ಲಿ ಹೇಳಬಹುದು. ಈ ಕಾಯ್ದೆಯಿಂದ ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸಲು ಸಹಾಯವಾಗುತ್ತದೆ.
ಈ ಕಾಯ್ದೆಯನ್ನು (ಕಾನೂನು) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 2012 ರ POCSO ಕಾಯಿದೆ -2012 ರ ಹೆಸರಿನಲ್ಲಿ ಮಾಡಿದೆ .ಈ ಕಾನೂನಿನ ಮೂಲಕ, ಅಪ್ರಾಪ್ತ ಮಕ್ಕಳ ವಿರುದ್ಧ ಲೈಂಗಿಕ ಕಿರುಕುಳ, ಲೈಂಗಿಕ ದೌರ್ಜನ್ಯ ಮತ್ತು ಅಶ್ಲೀಲತೆ ಮತ್ತು ಕಿರುಕುಳದಂತಹ ಲೈಂಗಿಕ ಅಪರಾಧಗಳ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಈ ಕಾನೂನಿನ ಅಡಿಯಲ್ಲಿ ವಿವಿಧ ಅಪರಾಧಗಳಿಗೆ ವಿಭಿನ್ನ ಶಿಕ್ಷೆಗಳನ್ನು ನಿಗದಿಪಡಿಸಲಾಗಿದೆ. ಈ ಕಾಯಿದೆಯು ಇಡೀ ಭಾರತಕ್ಕೆ ಅನ್ವಯಿಸುತ್ತದೆ, POCSO ಕಾಯ್ದೆಯಡಿಯಲ್ಲಿನ ಎಲ್ಲಾ ಅಪರಾಧಗಳನ್ನು ವಿಶೇಷ ನ್ಯಾಯಾಲಯವು ಮಗುವಿನ ಪೋಷಕರು ಅಥವಾ ಮಗು ನಂಬುವ ವ್ಯಕ್ತಿಗಳ ಸಮ್ಮುಖದಲ್ಲಿ ಕ್ಯಾಮೆರಾದ ಮುಂದೆ ವಿಚಾರಣೆ ನಡೆಸುತ್ತದೆ. ಸಮಯಕ್ಕೆ ತಕ್ಕಂತೆ ಅಪರಾಧಗಳಿಗೆ ತಕ್ಕಂತೆ ಈ ಕಾಯ್ದೆಯಲ್ಲಿಯೂ ಕೂಡ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
ಈಗ ಕಾನೂನಿನ ಬದಲಾವಣೆಯ ನಂತರ, 12 ವರ್ಷದೊಳಗಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗುವ ಯಾವುದೇ ವ್ಯಕ್ತಿಗೆ ಮರಣದಂಡನೆ ವಿಧಿಸುವ ಅವಕಾಶವನ್ನು ಮಾಡಲಾಗಿದೆ . POCSO ಕಾಯಿದೆಯ ಹಿಂದಿನ ನಿಬಂಧನೆಗಳ ಕುರಿತು ಮಾತನಾಡುತ್ತಾ , ಇದರ ಪ್ರಕಾರ, ಅಪರಾಧಿಗಳಿಗೆ ಗರಿಷ್ಠ ಶಿಕ್ಷೆ ಜೀವಾವಧಿ ಶಿಕ್ಷೆ ಮತ್ತು ಕನಿಷ್ಠ ಶಿಕ್ಷೆ 7 ವರ್ಷ ಜೈಲು. ತಿದ್ದುಪಡಿ ಮಾಡಿದ ಕಾನೂನಿನ ವ್ಯಾಪ್ತಿಯಲ್ಲಿ ಹುಡುಗಿಯರು ಮತ್ತು ಹುಡುಗರಿಬ್ಬರೂ ಸೇರಿದ್ದಾರೆ. ಲೈಂಗಿಕ ಕಿರುಕುಳದಿಂದ ಹುಡುಗರು ಮತ್ತು ಹುಡುಗಿಯರನ್ನು ರಕ್ಷಿಸಲು ಮಕ್ಕಳ ಲೈಂಗಿಕ ಅಪರಾಧಗಳ ಸಂರಕ್ಷಣಾ ಕಾಯ್ದೆ (ಪೋಕ್ಸೊ) 2012 ಗೆ ತಿದ್ದುಪಡಿಗಳನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳ ಹಿತದೃಷ್ಟಿಯಿಂದ ಮಾಧ್ಯಮದವರಿಗೂ ಹಾಗೂ ವೈದ್ಯಕೀಯ ಕ್ಷೇತ್ರಕ್ಕೂ ಕೂಡ ಸರಕಾರವು ಕೆಲವು ನಿರ್ಬಂಧನಗಳನ್ನ ನಿಯಮಗಳನ್ನು ತಂದಿದೆ. ಅವುಗಳಲ್ಲಿ ಪ್ರಮುಖವಾದವುಗಳು ಹೀಗಿವೆ.
1)ಯಾವುದೇ ವ್ಯಕ್ತಿಯು ಯಾವುದೇ ರೀತಿಯ ಮಾಧ್ಯಮ ಅಥವಾ ಸ್ಟುಡಿಯೋಗಳು ಅಥವಾ ಛಾಯಾಗ್ರಹಣ ಸೌಲಭ್ಯಗಳಿಂದ ಸಂಪೂರ್ಣ ಮತ್ತು ದೃಢೀಕೃತ ಮಾಹಿತಿಯಿಲ್ಲದೆ ಯಾವುದೇ ಮಗುವಿಗೆ ಸಂಬಂಧಿಸಿದಂತೆ ಯಾವುದೇ ಮಗುವಿನ ಬಗ್ಗೆ ಯಾವುದೇ ವರದಿ ಅಥವಾ ಕಾಮೆಂಟ್ ಮಾಡಬಾರದು ಅದು ಅವರ ಖ್ಯಾತಿಗೆ ಹಾನಿಯುಂಟುಮಾಡಬಾರದು ಅಥವಾ ಅವರ ಗೌಪ್ಯತೆಯನ್ನು ಬಹಿರಂಗಪಡಿಸಬಾರದು.
2) ಯಾವುದೇ ಮಾಧ್ಯಮದಿಂದ ಯಾವುದೇ ವರದಿ ಇಲ್ಲವೇ ಮಗುವಿನ ಹೆಸರು, ವಿಳಾಸ, ಭಾವಚಿತ್ರ, ಕುಟುಂಬದ ವಿವರಗಳು, ಶಾಲೆ, ನೆರೆಹೊರೆಯವರು ಅಥವಾ ಯಾವುದೇ ಇತರ ವಿವರಗಳನ್ನು ಒಳಗೊಂಡಂತೆ ಮಗುವಿನ ಗುರುತನ್ನು ಬಹಿರಂಗಪಡಿಸುವಂತಿಲ್ಲ .
3) ಲಿಖಿತವಾಗಿ ದಾಖಲಿಸಬೇಕಾದ ಕಾರಣಗಳಿಗಾಗಿ, ವಿಶೇಷ ನ್ಯಾಯಾಲಯದ ಅನುಮತಿಯನ್ನು ಪಡೆದ ನಂತರ ದಾಖಲೆಯನ್ನು ಮಾಡಬಹುದು.
4) POCSO ಕಾಯಿದೆಯಡಿ ವೈದ್ಯಕೀಯ ಪರೀಕ್ಷೆ
ವರದಿಯನ್ನು ದಾಖಲಿಸಿದ ನಂತರ, ಸಂತ್ರಸ್ತೆಯ ಪ್ರಕರಣವನ್ನು 24 ಗಂಟೆಗಳ ಒಳಗೆ ಮಕ್ಕಳ ಕಲ್ಯಾಣ ಸಮಿತಿಗೆ ತರುವುದು ಪೊಲೀಸರ ಜವಾಬ್ದಾರಿಯಾಗಿದೆ , ಇದರಿಂದ ಸಂತ್ರಸ್ತರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
5) ಈ ವೈದ್ಯಕೀಯ ಪರೀಕ್ಷೆಯನ್ನು ಮಗುವಿನ ಪೋಷಕರು ಅಥವಾ ಮಗುವಿಗೆ ವಿಶ್ವಾಸವಿರುವ ಯಾವುದೇ ವ್ಯಕ್ತಿಯ ಸಮ್ಮುಖದಲ್ಲಿ ಮಾಡಲಾಗುವುದು ಮತ್ತು ಸಂತ್ರಸ್ತೆ ಹುಡುಗಿಯಾಗಿದ್ದರೆ, ಆಕೆಯ ವೈದ್ಯಕೀಯ ಪರೀಕ್ಷೆಯನ್ನು ಮಹಿಳಾ ವೈದ್ಯರಿಂದ ಮಾಡಿಸಬೇಕು.
6) ದೌರ್ಜನ್ಯಕ್ಕೆ ಒಳಗಾದ ಮಗುವಿಗೆ ಪರೀಕ್ಷೆ ಮಾಡಿಸುವ ವೇಳೆ ಯಾವುದೇ ರೀತಿಯ ಮಾನಸಿಕ ಹಾಗೂ ಶಾರೀರಿಕ ಹಿಂಸೆಯನ್ನು ನೀಡುವಂತಿಲ್ಲ. ಇತ್ಯಾದಿ.
ಪೋಕ್ಸೋ ಕಾಯಿದೆಯ ಪ್ರಮುಖ ಲಕ್ಷಣಗಳು:-
1) ಕಾಯಿದೆಯ ಪ್ರಕಾರ ಮಕ್ಕಳು ಎಂದರೆ18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳು ಎಂದು ವ್ಯಾಖ್ಯಾನಿಸುತ್ತದೆ.
ಈ ಕಾಯಿದೆಯ ಪ್ರಕಾರ ಅಪರಾಧಿಗಳು ಪುರುಷರು, ಮಹಿಳೆಯರು ಅಥವಾ ತೃತೀಯಲಿಂಗಿಗಳಾಗಿರಬಹುದು.
ಇದು ಲೈಂಗಿಕ ಒಪ್ಪಿಗೆಯ ವಯಸ್ಸನ್ನು 16 ವರ್ಷದಿಂದ 18 ವರ್ಷಕ್ಕೆ ಏರಿಸುತ್ತದೆ, ಅಪ್ರಾಪ್ತ ವಯಸ್ಕರೊಂದಿಗಿನ ಎಲ್ಲಾ ಲೈಂಗಿಕ ಚಟುವಟಿಕೆಯನ್ನು ಅಪರಾಧ ಮಾಡುತ್ತದೆ.
2)ಲೈಂಗಿಕ ಕಿರುಕುಳವು ದೈಹಿಕ ಸಂಪರ್ಕವನ್ನು ಒಳಗೊಂಡಿರಬಹುದು ಅಥವಾ ಇಲ್ಲದಿರಬಹುದು ಎಂದು ಕಾಯಿದೆ ಹೇಳುತ್ತದೆ.
3) ವಿಶೇಷ ನ್ಯಾಯಾಲಯವು ಮಗುವಿನ ಹೇಳಿಕೆ ಮತ್ತು ಮಗುವಿನ ಹೇಳಿಕೆಯನ್ನು ದಾಖಲಿಸುವಾಗ
ಪರೀಕ್ಷಾ ಪೂರ್ವ ಹಂತ ಮತ್ತು ಪರೀಕ್ಷಾ ಹಂತದಲ್ಲಿ ಭಾಷಾಂತರಕಾರರು, ವ್ಯಾಖ್ಯಾನಕಾರರು, ವಿಶೇಷ ಶಿಕ್ಷಕರು, ತಜ್ಞರು, ಬೆಂಬಲಿಗರು ಮತ್ತು ಎನ್‌ಜಿಒಗಳ ರೂಪದಲ್ಲಿ ಮಕ್ಕಳಿಗೆ ಇತರ ವಿಶೇಷ ಸಹಾಯವನ್ನು ಒದಗಿಸಬೇಕು.
3)ಮಕ್ಕಳು ತಮ್ಮ ಆಯ್ಕೆಯ ವಕೀಲರು ಅಥವಾ ಉಚಿತ ಕಾನೂನು ನೆರವು ಮೂಲಕ ಕಾನೂನು ಪ್ರಾತಿನಿಧ್ಯಕ್ಕೆ ಅರ್ಹರಾಗಿರುತ್ತಾರೆ.
4)ಕಾಯಿದೆಯು ಪುನರ್ವಸತಿ ಕ್ರಮಗಳನ್ನು ಒಳಗೊಂಡಿದೆ, ಉದಾಹರಣೆಗೆ ಮಗುವಿಗೆ ಪರಿಹಾರ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಭಾಗವಹಿಸುವಿಕೆ.
ಹಾಗಾಗಿ ಪೋಕ್ಸೋ ಕಾಯ್ದೆ ತುಂಬಾ ಮಹತ್ವದ ಕಾಯಿದೆ ಹಾಗೂ ಅಪರಾಧಿ ಒಮ್ಮೆ ಈ ಕಾಯಿದೆ ಅಡಿಯಲ್ಲಿ ಸಿಕ್ಕಿಹಾಕಿಕೊಂಡರೆ ಅದರಿಂದ ಹೊರಬರುವುದು ಅಷ್ಟೊಂದು ಸುಲಭವಲ್ಲ. ಹಾಗಾಗಿ ಜನರು ಯಾವುದೇ ಅಪರಾಧವನ್ನು ಮಾಡುವ ಮುನ್ನ ನೂರು ಬಾರಿ ಯೋಚನೆ ಮಾಡಬೇಕು. *ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಸಿಗದು* ಹಾಗಾಗಿ ಸಮಾಜದಲ್ಲಿ ಮಾನ ಮರ್ಯಾದೆಯಿಂದ ಬದುಕುವುದನ್ನು ಕಲಿಯೋಣ. ಅಪರಾಧವನ್ನು ವಿರೋಧಿಸುವುದನ್ನು ಕಲಿಯೋಣ. ಅಪರಾಧಿಗಳಿಗೆ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಪ್ರಯತ್ನಿಸೋಣ. ಹೌದಲ್ಲವೇ?
ಡಾ. ಶ್ರೇಯಾ ಯಶಪಾಲ ಮಹೀಂದ್ರಕರ್. ಬೀದರ.