ಭಕ್ತಿ ಭಾವದ ಪುಣ್ಯ ಕ್ಷೇತ್ರ ಇಟಗಿ
ಭಕ್ತಿ ಭಾವದ ಪುಣ್ಯ ಕ್ಷೇತ್ರ ಇಟಗಿ
ಕಲ್ಯಾಣ ಕಹಳೆ ಗದಗ : ಕನ್ನಡ ನಾಡು ಅನೇಕ ಮಹಾನ್ ಪುರುಷರು,ಅನುಭಾವಿಗಳು, ವಿರಾಗಿಗಳು,ಯೋಗಿಗಳು, ಸಂತ ಮಹಾಂತರು,ಶರಣ ಶರಣೆಯರು, ಜನಿಸಿದ್ದಾರೆ. ಅವರೆಲ್ಲರೂ ಲೌಕಿಕ ಜೀವನ ತೊರೆದು ಅಲೌಕಿಕ ಜೀವನದ ಹಿಂದೆ ಬೆನ್ನು ಹತ್ತಿ ಹೋಗಿದ್ದಾರೆ.ಐಹಿಕ ಜೀವನದ ಪ್ರಲೋಭನೆಯಿಂದ ಬಳಲಿ ಬೇಸತ್ತು,ದೈವತ್ವದ ಕಡೆ ಅಭಿಮುಖ ಮಾಡಿ ಸಾಮಾನ್ಯ ಸಾಮಾನ್ಯನಾಗಿ ಜನರ ಮನದಲ್ಲಿ ಇಂದಿಗೂ ಜೀವಂತವಾಗಿದ್ದಾರೆ.
ಅಂತಹ ವ್ಯಕ್ತಿತ್ವದ ಶರಣೆ ಒಬ್ಬರು ದೇವರಾದವರೆಂದರೆ, ಇಂದಿನ ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ಇಟಗಿ ಎಂಬ ಪುಣ್ಯಕ್ಷೇತ್ರ ಭಕ್ತರ ಮನದಲ್ಲಿ ಭಕ್ತಿಭಾವವನ್ನು ಮೂಡಿಸುವ ಒಂದು ಪುಟ್ಟ ಗ್ರಾಮವಾಗಿದೆ.ಇಂತಹ ಒಂದು ಪುಣ್ಯ ಸ್ಥಳ ಮಹಾಶಿವಶರಣ ಹಾಲಕೆರೆಯ ಮಹಾಶಿವಯೋಗಿ ಅನ್ನದಾನೇಶ್ವರ(ಗಡ್ಡದ ಅಜ್ಜನವ)ರು ನಡೆದಾಡಿದ ಪುಣ್ಯ ಭೂಮಿಯಾಗಿದೆ.ಇಂತಹ ಶಿವಯೋಗಿಗಳ ಕೃಪೆ ಪಡೆದ ಮತ್ತು ಬನಶಂಕರಿ ಅಮ್ಮನವರ ಕೃಪೆಯಿಂದ ಶರಣೆ ಭೀಮಂಬಿಕಾ ಅಮ್ಮನವರು ಹನುಮಾಂಬಿಕೆಯ ಪುಣ್ಯ ಗರ್ಭದಲ್ಲಿ ಜನಿಸಿದರು.ಬಾಲ್ಯದಿಂದಲೇ ಧಾರ್ಮಿಕ ಸಂಸ್ಕಾರ ಪಡೆದ ಭೀಮಮ್ಮ ನಿಷ್ಟೆಯಿಂದ ತಾನು ನಂಬಿದ ಧರ್ಮನ ಪೂಜೆ ಮಾಡಿ ಪ್ರಖ್ಯಾತಿಯನ್ನು ಪಡೆದಳು. ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭವಾದ ಈ ಮಠ ಗಾಂಧೀ ಅಜ್ಜನವರ ಚರಕ ಸಂಹಿತೆ ಮಹಾ ಶಿವಶರಣೆ ಭೀಮಾಂಬಿಕಾ ತಾಯಿಯ ಮಂತ್ರ ಆಗಿತ್ತು ಎಂಬುದನ್ನು ನಾವು ಇಲ್ಲಿ ಕಾಣಬಹುದು.ಈಗಿನ ಹಾಗೇ ಪ್ರತಿಯೊಂದು ರೋಗಕ್ಕೂ ದವಾಖಾನೆಗೆ ಹೋಗುವ ಪದ್ಧತಿಯಂತೆ ಅಮ್ಮನವರ ಹತ್ತಿರ ಅನೇಕ ರೋಗ ರುಜಿನಗಳಿಗೆ ಧರ್ಮ ನ ಕೃಪೆಯಿಂದ ಸಂಜೀವಿನಿ ಚಿಕಿತ್ಸೆ ನೀಡುವ ಮೂಲಕ ಭಕ್ತರನ್ನು ಪಾರು ಮಾಡಿದ್ದಾಳೆ.ನಮ್ಮ ಹೊಲದಲ್ಲಿ ಬದುಗಳಲ್ಲಿ ಸಾಮಾನ್ಯವಾಗಿ ಸಿಗುವ ಚಿತ್ತಮೂಲ ಗಡ್ಡೆ ಈ ಪುಣ್ಯ ಕ್ಷೇತ್ರದ ದಿವ್ಯ ಔಷಧವಾಗಿದೆ.ನಾಡಿನ ಮೂಲೆ ಮೂಲೆಯಿಂದ ಬೇರೆ ಬೇರೆ ರಾಜ್ಯಗಳಿಂದ ಲಕ್ಷೋಪ ಲಕ್ಷ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸಿ ತಮ್ಮ ಮನದ ಬೇಡಿಕೆಗಳನ್ನು ಈಡೇರಿಸುವಂತೆ ಬೇಡಿಕೊಳ್ಳುತ್ತಾರೆ.ಹರಕೆಯ ಕಾಯಿಯನ್ನು ಕಟ್ಟುವ ಮೂಲಕ ಮಕ್ಕಳಿಲ್ಲದವರಿಗೆ ಮಕ್ಕಳ ಭಾಗ್ಯ ,ಉದ್ಯೋಗ, ಹಣದ ತೊಂದರೆ,ಆಸ್ತಿ ವ್ಯಾಜ್ಯ,ಬೆಳೆದ ಬೆಳೆ ಉತ್ತಮವಾಗಿ ಬರಲು,ಹೀಗೆ ಅನೇಕಾನೇಕ ತೊಂದರೆ ತಾಪತ್ರಯಗಳು ಬಾರದಂತೆ ಕಾಪಾಡಲು ಬೇಡಿಕೊಳ್ಳುತ್ತಾರೆ.ನಂಬಿದವರ ಮನದಾಗ ಇರತಿನಿ ಕರ ಕಟ್ಟುವ ಗೂಟದಾಗ ಇರತಿನಿ ಎಂದು ಹೇಳಿದ ಅಮ್ಮನವರ ವಾಣಿ ನಂಬಿ ಬಂದ ಭಕ್ತರ ಪಾಲಿಗೆ ನಿಜವಾಗಿದೆ.ಈ ಮಠಕ್ಕೆ ಯಾವುದೇ ಧರ್ಮ, ಜಾತಿ, ಶ್ರೀಮಂತ ,ಬಡವ ಮೇಲು ಕೀಳು ಎಂಬ ಬೇಧ ಭಾವ ಕಾಣುವುದಿಲ್ಲ. ಇಲ್ಲಿ ಬರುವ ಭಕ್ತರು ಶ್ರೀಮಂತರೇ ಇರಲಿ ಬಡವರೇ ಇರಲಿ ಸಂಗಟಿ ಪ್ರಸಾದ ತೆಗೆದುಕೊಳ್ಳಲೇಬೇಕು.ಬೇರೆ ಯಾವುದೇ ಭಕ್ಷ್ಯ ಬೊಜ್ಯ ಇಲ್ಲಿ ಸಿಗುವುದಿಲ್ಲ.ಪ್ರತಿದಿನ ಯಾವುದೇ ಸಮಯದಲ್ಲಿ ಬಂದರೂ ಈ ಪ್ರಸಾದ ವಿತರಣೆ ನಿರಂತರವಾಗಿ ನಡೆಯುತ್ತದೆ.ಸಂಗಟಿ ಉಂಡು ಸಂಕಟ ಕಳೆಯಿರಿ ಎಂದು ಹೇಳಿದ ಅಮ್ಮನವರು ಈ ನೆಲದ ಧರ್ಮ ಪರಂಪರೆ ತಿಳಿಸಿದ್ದಾರೆ.ಈಗಲೂ ಈ ಮನೆತನದ ಐದನೇ ತಲೆಮಾರಿನ ಧರ್ಮರು ಮಠದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ.ಮೂರು ವರ್ಷಕ್ಕೋಮ್ಮೆ ನಡೆಯುವ ಸಿಡಿ ಜೋಗತಿ ಕಾರ್ಯಕ್ರಮ ಭಕ್ತರ ಕಣ್ಮನ ಸೆಳೆಯುತ್ತದೆ ಈ ವರ್ಷ ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ರಥ ನಿರ್ಮಾಣವಾಗಿದೆ.ನಾಡಿನ ಮಠಾಧೀಶರು ಜನಪ್ರತಿನಿಧಿಗಳು ಧರ್ಮರ ಜಾತ್ರೆಗೆ ಆಗಮಿಸಿ ಪುನೀತರಾಗುತ್ತಾರೆ.
✍️ ಶ್ರೀ ವಿಶ್ವನಾಥ ಅಂ ಆದಿ ಜಕ್ಕಲಿ
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ, ಕಲ್ಯಾಣ ಕಹಳೆ ಗದಗ
