ಅಕ್ಕಮಹಾದೇವಿ

ಅಕ್ಕಮಹಾದೇವಿ

ಹೂವು ಕಂದಿದಲ್ಲಿ ಪರಿಮಳವನರಸುವರೆ ?

ಕಂದನಲ್ಲಿ ಕುಂದನರಸುವರೆ ?

ಎಲೆ ದೇವ, 

ಸ್ನೇಹವಿದ್ದ ಠಾವಿನೊಳು ದ್ರೋಹವಾದ 

ಬಳಿಕ ಮರಳಿ ಸದ್ಗುಣವನರಸುವರೆ ?

ಎಲೆ ದೇವ, 

ಬೆಂದ ಹುಣ್ಣಿಗೆ ಬೇಗೆಯನಿಕ್ಕುವರೆ ?

ಕೇಳಯ್ಯಾ, ಶ್ರೀಶೈಲ ಚೆನ್ನಮಲ್ಲಿಕಾರ್ಜುನಾ 

ಹೊಳೆಯಿಳಿದ ಬಳಿಕ ಅಂಬಿಗಂಗೇನುಂಟು ?

                     *ಅಕ್ಕಮಹಾದೇವಿ*

      *ವಚನ ಅನುಸಂಧಾನ*

ಅಕ್ಕಮಹಾದೇವಿ ತಾಯಿಯವರ ವಚನಗಳು; ಅವು ಅನುಭಾವದ ಅನೂಹ್ಯ ಸಂಪದಗಳು! ಅಲ್ಲಿ; ಅಕ್ಕನ ಹೆಪ್ಪಿಟ್ಟ ಲೌಕಿಕ ಜೀವನದ ಹಸಿ ಹಸಿಯಾದ ಅನುಭವವು; ಬೆಂದ ಬದುಕಿನೆದೆ ಅಗ್ಗಿಷ್ಟಿಕೆಯ ಕುಂಡದ ಕೆಂಡದಲ್ಲಿ ಕರಗಿ, ನೀರು ನೀರಾದಂಥ ಚಿನ್ನವು; ಅಕ್ಕಸಾಲಿಗನ ಕರಕುಶಲ ಪ್ರತಿಭೆಯ ಮೂಸೆಯಲ್ಲಿ ಅರಳಿ ಆಕೃತಿಗೊಂಡು ಚಂದದ ಆಭರಣ ಆಗುವಂತೆ, ಶರಣರ ಸಂಗದ ಹಾಗೂ ಇಷ್ಟಲಿಂಗ ಅನುಸಂಧಾನದ ಪರಿಪಕ್ವದ ಅನುಭಾವದ ಆ ಹಂತದಲ್ಲಿ ಅಕ್ಕನಲ್ಲಿನ ಅನನ್ಯ ಪ್ರತಿಭೆಯ ಸ್ಪರ್ಶದಿಂದಾಗಿ ಪ್ರತಿ ಪದ ಪದಗಳೂ ವಾಗರ್ಥದ ಉತ್ತುಂಗಕ್ಕೇರಿ ಅರಳಿ ಪರಿಮಳಿಸಿ ಅಪ್ರತಿಮವಾದ ಅನುಭೂತಿಯನ್ನು ನೀಡುತ್ತವೆ. ಹಾಗಾಗಿ ಅಕ್ಕಮಹಾದೇವಿ ತಾಯಿಯು ರಚಿಸಿದ ವಚನಗಳು ಅವರ ಸಮಕಾಲೀನ ಶರಣ್ರಿಂದಲೇ

ಗೌರವಿಸಿ ಆದರಿಸಲ್ಪಟ್ಟಿವೆ ಎನ್ನುವುದು ನಿಜಕ್ಕೂ ಅವರ ಘನತೆಯನ್ನು ಎತ್ತಿ ತೋರಿಸುತ್ತದೆ. ಇಲ್ಲಿ

ಪ್ರಸ್ತುತ ಈ ಮೇಲಿನ ಅಕ್ಕನ ವಚನದ ಪ್ರಸ್ತುತದ ಅನುಸಂಧಾನದ ವಿವೇಚನೆಯನ್ನು ಈ ಮೇಲಿನ ನನ್ನ ಅಭಿಪ್ರಾಯದ ನುಡಿಯಲ್ಲಿರುವ ಅರಿವಿನಾ ಎಚ್ಚರದ ಬೆಳಕಿನಲ್ಲಿ ಪರಿಭಾವಿಸಿಕೊಂಡೇ ನಾವು ಮುಂದಡಿ ಇಡಬೇಕಾಗುತ್ತದೆ. ಅಂತೆಯೇ, ಇಲ್ಲಿ ಅದನ್ನ ನಾವು ಪರಿಭಾವಿಸಿಕೊಂಡು ವಚನವನ್ನು ವಿವೇಚಿಸೋಣ.

*ಹೂವು ಕಂದಿದಲ್ಲಿ ಪರಿಮಳವನರಸುವರೆ ?*

*ಕಂದನಲ್ಲಿ ಕುಂದನರಸುವರೆ ?

ಎಂಥಹ ಸುಂದರ ಅರ್ಥಪೂರ್ಣ ಸಾಲುಗಳಿವು! ಇವುಗಳ ಭೌತಿಕ ಚೆಲುವಿನ ಆ ಮನಮೋಹಕತೆ ಉದ್ದೀಪಿಸುವ ಅಮೂರ್ತವಾದಂಥ ಗ್ರಹಿಕೆಯೇ ಹೃನ್ಮನಗಳಿಗೆ ಒಂದು ರೀತಿಯಾದ ಮುದವನ್ನು ಮತ್ತು ಹದವಾದ ಅನುಭೂತಿಯನ್ನ ನಿಜವಾಗ್ಲೂ ನೀಡುವಂಥಾದ್ದು. ಬಹುತೇಕ ಅಕ್ಕನ ವಚನದ ನುಡಿಗಳು ಒಳಗೊಂಡ ಮಿಂಚಿನ ಸಂಚಲನೆಯು ಆಕಾಶ ಪಾತಾಳವನ್ನೊಂದು ಮಾಡಿ ತೋರಿದಂತೆ ಭಾಸವಾಗುತ್ತದೆ!! ಅದರಂತೆ ಇಲ್ಲಿಯೂ ಕೂಡಾ ಈ ವಚನದ ನುಡಿಗಳ ಮೋಡಿಯ ಬೆರಗಂತೂ ನಿಜಕ್ಕೂ ರಸದೌತಣವಾಗಿದೆ!!!ಜೀವಂತಿಕೆಯನ್ನು ಕಳೆದುಕೊಂಡು ಬಾಡಿಹೋದಂಥಾ ಹೂವಿನಲ್ಲಿ ಪರಿಮಳವು ಖರೇನs ಗೈರು ಹಾಜರಿಯಾಗಿರುತ್ತ ದೆ. ಇದು ಪ್ರಕೃತಿ ಸಹಜವಾದ ಕ್ರಿಯೆಯೂ ಕೂಡ ಆಗಿರುತ್ತದೆ.

ಹಾಗಾಗಿ ಹೂವು ಕಂದು(ಬಾಡು)ವ ಮೋದಲೇ ಅದು ಮುಡಿಗೇರಬೇಕು ಇಲ್ಲವೇ ಸೀದಾ ಗುಡಿಗೆ ಸೇರಿ ಸಾರ್ಥಕ್ಯವನ್ನು ಹೊಂದಬೇಕು. ಅದರಂತೆ ಕಂದ(ಕೂಸು)ನಲ್ಲಿ ಕುಂದು ಅಂದರೆ ಇಲ್ಲಿ ಮುಗ್ದ ವಾದ ಮುದ್ದು ಮಗುವಿನಲ್ಲಿ ಕುಂದು/ದೋಷವ ನ್ನು ಹುಡುಕಲಾದೀತೇ!? ಎನ್ನು ಮೂಲಕ ಅಕ್ಕಾ ವಾಸ್ತವ ಕಟು ಸತ್ಯಗಳನ್ನು ರೂಪಕದ ಪರಿಭಾಷೆ ಯಲ್ಲಿ ಅತ್ಯಂತ ಚೆಂದವಾಗಿ ಮನಗಾಣಿಸುತ್ತಾರೆ. ಅಷ್ಟೇ ಅಲ್ಲದೇ ವಚನದ ಮುಂದಿನ ಸಾಲಿನಲ್ಲಿ ಬರುವ ಆಧ್ಯಾತ್ಮಿಕ ಸಾಧ್ಯತೆಗಳಿಗೆ ಇವುಗಳನ್ನೇ ಅಕ್ಕಾ ಏರಿ ಸಾಧಿಸಲು ಏಣಿಯನ್ನಾಗಿಸುತ್ತಾರೆ! 

*ಎಲೆ ದೇವ,*

*ಸ್ನೇಹವಿದ್ದ ಠಾವಿನೊಳು* *ದ್ರೋಹವಾದ*

*ಬಳಿಕ ಮರಳಿ* *ಸದ್ಗುಣವನರಸುವರೆ ?*

*ಎಲೆ ದೇವ,*

*ಬೆಂದ ಹುಣ್ಣಿಗೆ ಬೇಗೆಯನಿಕ್ಕುವರೆ ?*

ಇಲ್ಲಿ, ನಿರೀಕ್ಷಿತವಾದಂಥ ವಾಸ್ತವಿಕ ನೆಲೆಯಿಂದಾ

ಭಾವನಾತ್ಮಕ ನೆಲೆಗೆ ಏರುವ ವಚನವು ಲೌಕಿಕದ ಕಠೋರ ಅನುಭವ ಸತ್ಯಗಳನ್ನು ಕಟ್ಟಿ ಕೊಡುವ ಪರಿಯಂತೂ ನಿಜಕ್ಕೂ ಅತ್ಯಂತ ಪರಿಣಾಮಕಾರಿ ಯಾಗಿದೆ. ಇಲ್ಲಿ ವಚನಕಾರ್ತಿ ಅಕ್ಕಾ ತಮ್ಮ ಇಷ್ಟ ಲಿಂಗ ದೈವದ ಸನ್ನಿಧಿಯಲ್ಲಿ ಮೊರೆ ಇಡಿಡುತ್ತಲೇ ಎತ್ತುವ ಪ್ರಶ್ನೆಗಳು ಹೃನ್ಮನಗಳಿಗೆ ತಾಗುತ್ತವೆ. ಹಾಗೆಯೇ ಎಲ್ಲಿ ಅತ್ಯಂತ ಆತ್ಮೀಯವಾದ ಸ್ನೇಹ ಸಂಬಂಧವಿದ್ದಲ್ಲಿ ವಿಶ್ವಾಸ ದ್ರೋಹವಾದರೆ ಅಲ್ಲಿ ಮರಳಿ ಸದ್ಗುಣವನ್ನು ಹುಡುಕಲಾಗದು. ಸುಟ್ಟು ಹುಣ್ಣಾದ ಜಾಗದಲ್ಲಿ ಮತ್ತೆ ಅಲ್ಲಿ ಕೊಳ್ಳಿಯಿಂದ ತಿವಿಯಲಾದೀತೆ? ಎಂಬ ಪ್ರಶ್ನೆಯನ್ನು ಮಾಡುವ ಮೂಲಕ ಅಕ್ಕಾ ತಾ ಸ್ವತಃ ತುಳಿದು ಅನುಭವಿಸಿ ಬಂದಂತಹ ಆ ದಾರುಣವಾದ ಕಟು ವಾಸ್ತವದ ಆ ಕೆಂಡದ ಸುಡು ಹಾದಿಯ ರಣ ಗಾಯಗಳನ್ನು ನೆಕ್ಕುತ್ತಾ ನಿಂತಂಥಾ ಹುಲಿಯಂತೆ ಕಾಣುತ್ತಾರೆ!

*ಕೇಳಯ್ಯಾ, ಶ್ರೀಶೈಲ ಚೆನ್ನಮಲ್ಲಿಕಾರ್ಜುನಾ* 

*ಹೊಳೆಯಿಳಿದ ಬಳಿಕ ಅಂಬಿಗಂಗೇನುಂಟು ?

ಸಂಸಾರದ ಸರಹದ್ದನ್ನೊದ್ದು ಗಡಿಪಾರು ಮಾಡಿ ಬಂದ ಅಕ್ಕಾ, ಶರಣರ ಕಲ್ಯಾಣ ಮಾರ್ಗ ಹಿಡಿದು ಬರುವಾಗ ಆಕೆ ಎದುರಿಸಿ ಅನುಭವಿಸಿದಂಥ ಆ ಕಷ್ಟನಷ್ಟದ ಸಂಕಟ ನೋವುಗಳಂತು ಅಷ್ಟಿಷ್ಟಲ್ಲ. ಪ್ರಸ್ತುತ ಈ ಮೇಲಿನ ವಚನದಲ್ಲಿ ಅವುಗಳೆಲ್ಲವು ಒಟ್ಟಾಗೇ ವಚನ ಶಿಲ್ಪದ ಕಟ್ಟಡಕ್ಕೆ ತರಗಲ್ಲಾಗಿ ಬಿದ್ದಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಇಲ್ಲಿ ಶ್ರೀಶೈಲಚೆನ್ನಮಲ್ಲಿಕಾರ್ಜುನನಲ್ಲಿ ಮೊರೆಯಿಟ್ಪ ಅಕ್ಕಾ ತಮ್ಮ ಬದುಕಿನ ಕಷ್ಟಕಾಲದಲ್ಲಿ 'ನೀನು ಕೈ ಹಿಡಿದು ಪಾರು ಮಾಡಿದರೆ ಕೃತಜ್ಞತೆಗಳನ್ನ ಸಲ್ಲಿಸಿ "ಆಪದ್ಬಾಂಧವಾ" ಎಂದು ಹೇಳಬಹುದು' ಆದರೆ ಅದನ್ನೆಲ್ಲಾ ಬಿಟ್ಟು ಕಷ್ಟದ ಹೊಳೆ ಇಳಿದ ಮೇಲೆ ನೀನು ಅಂಬಿಗನಾಗಿ ಬಂದರೇನು ಉಪಯೋಗ' ಎಂದು ಸಕಾಲಕ್ಕೆ ಸಿಗದ ಸಹಾಯವನ್ನು ಅಕ್ಕಾ ಒಪ್ಪದೆ ಹೋಗುತ್ತಾರೆ.ವಚನದ ತಾತ್ಪರ್ಯವೆಂದ ರೆ; ಯಾರು ಸಂಸಾರದ ಸಂಕಷ್ಟಕ್ಕೆ ಸಿಕ್ಕಿ ಕೊಂಡು ನಲುಗಿ ಹೋಗಿರುವಾಗಲೇ ಬಂದು ಪಾರುಮಾಡಿ ಉದ್ಧರಿಸದಿದ್ದರೆ ಪ್ರಯೋಜನ ಏನು? ಎಂದೆಂಬ ಸಕಾಲಕ್ಕೆ ಸಿಗದ ಸಹಾಯ ಹಸ್ತದ ನಿಷ್ಪ್ರಯೋಜ ಕತೆಯನ್ನು ಇಲ್ಲಿ ಅಕ್ಕಾ ಅತ್ಯಂತ ಅರ್ಥಪೂರ್ಣ ವಾದ ನುಡಿಗಟ್ಟುಗಳಲ್ಲಿ ಪ್ರಸ್ತುತದ ಈ ಮೇಲಿನ ವಚನದಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿರುವರು. 

              ಅಳಗುಂಡಿ ಅಂದಾನಯ್ಯ