ಮಾಶಾಳದಲ್ಲಿ ಬೀಡುಬಿಟ್ಟ ಪೊಲೀಸ್ ಅಧಿಕಾರಿಗಳು
ಮಾಶಾಳದಲ್ಲಿ ಬೀಡುಬಿಟ್ಟ ಪೊಲೀಸ್ ಅಧಿಕಾರಿಗಳು
ಕಲಬುರಗಿ: ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ಬುಧವಾರ ರಾತ್ರಿ ಕೆಲವರು ಗ್ರಾಪಂ ಸ್ಥಳದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಹಿನ್ನಲೆ ಗುರುವಾರ ಬೆಳಗ್ಗೆ ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು.
ಸ್ವಾತಂತ್ರ್ಯ ದಿನಾಚರಣೆಯ ಸಂತಸದಲ್ಲಿರಬೇಕಾದ ಗ್ರಾಮಸ್ಥರು ಸರಕಾರಿ ಸ್ಥಳದಲ್ಲಿ ಅನುಮತಿಯಿಲ್ಲದೆ ಮೂರ್ತಿ ಪ್ರತಿಷ್ಠಾಪನೆ ಮಾಡಿರುವವರ ವಿರುದ್ಧ ಕ್ರಮಕೈಗೊಂಡು, ಮೂರ್ತಿಯನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು. ಇಲ್ಲದಿದ್ದರೆ ಎಲ್ಲಾ ಸಮುದಾಯದ ಮಹಾನ್ ಪುರುಷರ ಮೂರ್ತಿ ಪ್ರತಿಷ್ಠಾಪನೆಗೆ ಸ್ಥಳಾವಕಾಶ ನೀಡಬೇಕು ಎಂದು ಅನ್ಯ ಕೋಮಿನವರು ಮುಂದಾದಾಗ ಪೋಲಿಸರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.
ಬನ್ನಿ ಮುಡಿಯುವ ಪಾರಂಪರಿಕ ಸ್ಥಳ ಗ್ರಾಮದ ಬಸ್ ನಿಲ್ದಾಣ ಹತ್ತಿರವಿರುವ ಗಾಣದೇವತೆ ದೇವಸ್ಥಾನದ ಪಕ್ಕದ ಸ್ಥಳದಲ್ಲಿ ಅನಾದಿಕಾಲದಿಂದಲೂ ಮಹಾನವಮಿ ಹಬ್ಬದಲ್ಲಿ ಬನ್ನಿ ಮುಡಿದುಕೊಂಡು ಬಂದಿದ್ದೇವೆ. ಮೂರ್ತಿ ಪ್ರತಿಷ್ಠಾಪನೆಯಿಂದ ಅನಾನುಕೂಲವಾಗುವುದರ ಜತೆಗೆ ಐತಿಹಾಸಿಕ ಸ್ಥಳ ಆಕ್ರಮಿಸಿದಂತಾಗುತ್ತದೆ ಎಂದು ಸಾರ್ವಜನಿಕರು ಆಕ್ರೋಶವ್ಯಕ್ತಪಡಿಸಿದ್ದಾರೆ.
ಪೋಲಿಸರು ಹಾಗೂ ಗ್ರಾಪಂ ಸದಸ್ಯರ ಸಭೆ: ಮಾಶಾಳ ಗ್ರಾಪಂ ಸಭಾಂಗಣದಲ್ಲಿ ಸಿಪಿಐ ಚನ್ನಯ್ಯ ಹಿರೇಮಠ, ಪಿಡಿಒ ಚಂದ್ರಶೇಖರ ಕಂಬಾರ, ಪಿಎಸ್‌ಐ ಸೋಮಲಿಂಗ ಒಡೆಯರ್ ಹಾಗೂ ಗ್ರಾಪಂ ಸದಸ್ಯರು ಶಾಂತಿ ಸಭೆ ಕೈಗೊಂಡರು. ಗ್ರಾಮದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.