ಎಲ್ಲಾ ದಿಗಿಲು

ಎಲ್ಲಾ ದಿಗಿಲು

ಎಲ್ಲಾ ದಿಗಿಲು

ಎತ್ತ ನೋಡಲತ್ತ ಚಿತ್ತ ಕದಡುವ ಚಿತ್ರಗಳು 

ಮತ್ತೆ ಮತ್ತೆ ನನ್ನ ಕದಡಿ ಕೆಣಕುತಿಹವು 

ಬತ್ತದಾಸೆಗಳು ಸುತ್ತಿ ಸುತ್ತಿ ಸುಳಿಯುತ 

ಹೊತ್ತು ಗೊತ್ತಿಲ್ಲದೆ ನನ್ನ ಮುತ್ತುತಿಹವು//

ಅರಿವಿನಂಗಳದ ಕದವ ಮುಚ್ಚಿ 

ಹಂಬಲಗಳ ಹರಿವು ತಾನೇ ಹೆಚ್ಚಿ 

ಚಿತ್ತ ಚಂಚಲಿಸಿ ಮತ್ತು ಬರಿಸಿ 

ಸುಸ್ತಾಗಿಸುತಿವೆ ನನ್ನ ಬಳಸಿ ಬಳಸಿ//

ಬುದ್ಧಿಗೆ ಮಂಕು ಕವಿದು 

ಜ್ಞಾನಕೆ ಆವರಿಸಿ ಪೊರೆ 

ಹರಿ ಹರಿದು ಅಶಾಂತಿಯ ತೊರೆ 

ಜ್ಞಾನದೊಲಯದ ಕದವು ಮುಚ್ಚಿದೆ//

ತೊಗಲಿನ ಚೀಲಕೆ ಬಯಕೆಯಾ ಭೂತ 

ಎಲುವಿನಂದರಕೆ ನಿಲ್ಲದ ತುಡಿತ 

ಗಲಿಬಿಲಿಗೊಳಿಸುವ ಗೀಳುಗಳ ಹಾವಳಿ 

ತಡೆದು ತಡೆದು ತಡವರಿಸಿದೆ ಭಾವ//

ಪ್ರಪಂಚದಾಟಕೆ ಬಲಿಯಾಗಿ 

ಬಲ್ಲವರ ಹರಕೆಯಾ ಕುರಿಯಾಗಿ 

ತೀರದಾ ದಾಹದಿ ಬಳಲಿ ಬಳಲಿ 

ನೊಂದಿರುವೆ ತಂದೆ ನಾ ನಿನ್ನ ಅಗಲಿ//

ಅಡಿಗಡಿಗೆ ಗಮಲಿನಾ ಅಮಲು

ತಡೆಯಿಡಿದು ಸತ್ಚಿಂತನೆಗಳ ಗೀಳು 

ಸಂಸಾರ ಶೃಂಖಿಲೆಗಳ ನಿಲ್ಲದ ಗೋಳು 

ಕಾಡುತಿವೆ ತಂದೆ ನೀನಿರದಿರೆ ಆಸೆಗೆ ಕಾವಲು//

ಡಾ ಅನ್ನಪೂರ್ಣ ಹಿರೇಮಠ