ಜಾತಿಗಣತಿ ಅಂಕಿ ಅಂಶದಲ್ಲಿ ಅನ್ಯಾಯ: ಈಡಿಗ ಸಮುದಾಯದ ಪರವಾಗಿ ವೈಜ್ಞಾನಿಕ ಸಮೀಕ್ಷೆಗೆ ವೆಂಕಟೇಶ್ ಕಡೇಚೂರ್ ಆಗ್ರಹ"

ಜಾತಿಗಣತಿ ಅಂಕಿ ಅಂಶದಲ್ಲಿ ಅನ್ಯಾಯ: ಈಡಿಗ ಸಮುದಾಯದ ಪರವಾಗಿ ವೈಜ್ಞಾನಿಕ ಸಮೀಕ್ಷೆಗೆ ವೆಂಕಟೇಶ್ ಕಡೇಚೂರ್ ಆಗ್ರಹ"

ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕಡೇಚೂರ್ ಆಕ್ಷೇಪ  

ಜಾತಿಗಣತಿ ಅಂಕಿ ಅಂಶ ಈಡಿಗ ಸಮುದಾಯಕ್ಕೆ ಅನ್ಯಾಯ: ವೈಜ್ಞಾನಿಕ ಸಮೀಕ್ಷೆಗೆ ಒತ್ತಾಯ

ಕಲಬುರಗಿ: ರಾಜ್ಯ ಸರ್ಕಾರವು ಜಾತಿ ಗಣತಿ ಅಂಗೀಕರಿಸಲು ಸಿದ್ಧತೆ ನಡೆಸುತ್ತಿದ್ದು ಇದರಿಂದ ರಾಜ್ಯದ ಈಡಿಗ ಬಿಲ್ಲವ ನಾಮಧಾರಿ ಸೇರಿದಂತೆ 26 ಪಂಗಡಗಳಿಗೆ ಅಂಕಿ ಅಂಶದಲ್ಲಿ ಅನ್ಯಾಯ ಮಾಡಲಾಗಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೇಚೂರ್ ತೀವ್ರ ಅತೃಪ್ತಿ ವ್ಯಕ್ತಪಡಿಸಿ ಇದರ ವಿರುದ್ಧ ಇವರ ಹೋರಾಟಕ್ಕೆ ಹೆಜ್ಜೆ ಇಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. 

   ರಾಜ್ಯ ಸರಕಾರವು ಕಾಂತರಾಜು ವರದಿ ಮತ್ತು ಜಯಪ್ರಕಾಶ್ ಹೆಗಡೆ ನೇತೃತ್ವದ ಸಮಿತಿಯ ವರದಿಯಲ್ಲಿ ರಾಜ್ಯದಲ್ಲಿ ಈಡಿಗ, ಬಿಲ್ಲವ, ನಾಮಧಾರಿ ಸೇರಿದಂತೆ 26 ಪಂಗಡಗಳಲ್ಲಿ ಕೇವಲ 14 ಲಕ್ಷ ಜನಸಂಖ್ಯೆ ಇದೆ ಎಂದು ನಮೂದಿಸಿರುವುದು ಖಂಡನೀಯವಾಗಿದೆ. ರಾಜ್ಯದಲ್ಲಿ ಸುಮಾರು 50 ಲಕ್ಷದಷ್ಟು ಈ ಸಮುದಾಯದ ಜನರಿದ್ದು ಎರಡು ಆಯೋಗಗಳು ಸಮುದಾಯದ ಜನರ ಮನೆ ಮನೆಗೆ ಭೇಟಿ ನೀಡದೆ ಸಿದ್ಧಪಡಿಸಿದ ಈ ವರದಿ ಸುಳ್ಳಿನ ಕಂತೆಯಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

    ರಾಜ್ಯದಲ್ಲಿ ಅತ್ಯಧಿಕವಾಗಿ ಬಿಲ್ಲವ, ಈಡಿಗ, ನಾಮಧಾರಿ ನಾಯಕ ಸಮುದಾಯದ ಜನರಿರುವ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಉತ್ತರ ಕನ್ನಡ ಹಾಗೂ ಶಿವಮೊಗ್ಗ ಈ ಜಿಲ್ಲೆಗಳಲ್ಲಿ ಸುಮಾರು 30 ಲಕ್ಷದಷ್ಟು ಜನರಿದ್ದಾರೆ. ಉಳಿದಂತೆ ಇರುವ 28 ಜಿಲ್ಲೆಗಳಲ್ಲಿ ಕನಿಷ್ಠ 20ರಿಂದ 25 ಲಕ್ಷದಷ್ಟು ಸಮುದಾಯದ ಜನರಿದ್ದು ಸರಕಾರ ಪ್ರಕಟಿಸಿದ ಈ ಅಂಕಿ ಅಂಶ ತೀರಾ ಅವೈಜ್ಞಾನಿಕವಾಗಿದ್ದು ಕೂಡಲೇ ಸತ್ಯನಿಷ್ಠ ವೈಜ್ಞಾನಿಕ ವರದಿ ಸಿದ್ದಪಡಿಸಿ ಸಮುದಾಯಕ್ಕೆ ನ್ಯಾಯ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. 2011ರ ಜನಗಣತಿಯ ಪ್ರಕಾರ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿಲ್ಲವ ಸಮುದಾಯದ ಜನರು ಅಧಿಕವಿದ್ದು ಆ ಅಂಕಿ ಅಂಶಗಳನ್ನು ಕೂಡಾ ಜಾತಿಗಣತಿಗೆ ಪರಿಗಣಿಸದಿರುವುದು ಅವಿವೇಕತನದ ಪರಮಾವಧಿಯಾಗಿದೆ. ರಾಜ್ಯ ಸರ್ಕಾರವು ಜಾತಿಗಣತಿ ಮಾಡುವ ಹಕ್ಕು ಹೊಂದಿಲ್ಲವಾದರೂ ಇದೀಗ ಆಯೋಗದ ವರದಿಯನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವರದಿ ಎಂದು ಬಿಂಬಿಸಿ ಈಡಿಗ ಸಮುದಾಯದ ಮಿಕ್ಕುಳಿದ ಜನರನ್ನು ಸೌಲಭ್ಯಗಳಿಂದ ವಂಚಿತ ಮಾಡುವ ಹುನ್ನಾರ ಸಮುದಾಯಕ್ಕೆ ಮಾಡುವ ದ್ರೋಹವಾಗುತ್ತದೆ ಎಂದು ಖಾರವಾಗಿ ಟೀಕಿಸಿದ್ದಾರೆ.

   ಜಾತಿಗೆ ಗಣತಿ ಅಂಕಿ ಅಂಶಗಳ ಪುಸ್ತಕಗಳನ್ನು ಕ್ಯಾಬಿನೆಟ್ ನಲ್ಲಿ ಮಂಡಿಸಿ ಸಮುದಾಯವನ್ನು ಪ್ರತಿನಿಧಿಸುವ ಸಚಿವರಿಗೆ ಹಸ್ತಾಂತರಿಸಿದ್ದರೂ ಅಂದಂ ಸಂಬಧಪಟ್ಟ ಸಮುದಾಯದ ಸಚಿವರು ಈ ಸುಳ್ಳು ಅಂಕಿ ಅಂಶ ಮಾಹಿತಿ ಬಗ್ಗೆ ಚಕಾರವೆತ್ತದಿರುವುದು ಖಂಡನೀಯ. ಈ ಬಗ್ಗೆ ಸಮುದಾಯದ ಶಾಸಕರು, ಸ್ವಾಮೀಜಿಗಳು ಮತ್ತು ಸಮುದಾಯದ ನಾಯಕರು ಹಾಗೂ ಸಂಘಟನೆಗಳು ಕೂಡಲೇ ಜಾತಿಗಣತಿಯ ಅಂಕಿ ಅಂಶದ ಬಗ್ಗೆ ಆಕ್ಷೇಪವನ್ನು ಎತ್ತಿ ವೈಜ್ಞಾನಿಕ ಮರು ಸಮೀಕ್ಷೆಗೆ ಸರಕಾರವನ್ನು ಒತ್ತಾಯಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. 

     ಸರ್ಕಾರವು ಈ ಅಂಕಿ ಅಂಶವನ್ನು ತಿದ್ದುಪಡಿ ಮಾಡದೆ ಸಮುದಾಯಕ್ಕೆ ನ್ಯಾಯ ಒದಗಿಸದಿದ್ದರೆ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯು ಬೀದಿಗಿಳಿದು ಹೋರಾಟ ಮಾಡಲು ಶೀಘ್ರದಲ್ಲೇ ಸಭೆ ಸೇರಿ ನಿರ್ಧಾರ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.