ರೈತ ವಿರೋಧಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರ ಹೋರಾಟ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂದಡೆ ಬೃಹತ್ ಪ್ರತಿಭಟನೆ
ರೈತ ವಿರೋಧಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರ ಹೋರಾಟ
ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂದಡೆ ಬೃಹತ್ ಪ್ರತಿಭಟನೆ
ಕಲಬುರಗಿ: ರಾಜ್ಯದ ವಿವಿಧ ಭಾಗಗಳಲ್ಲಿ ಸಂಭವಿಸಿರುವ ನೆರೆ–ಬರ–ಪ್ರವಾಹ ಮುಂತಾದ ಪ್ರಕೃತಿ ವಿಕೋಪಗಳಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು, ಹಾಲು ಉತ್ಪಾದಕರು ಹಾಗೂ ಕೃಷಿ ಕಾರ್ಮಿಕರ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಲು ಆಗ್ರಹಿಸಿ, ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಬಿಜೆಪಿ ಮುಖಂಡರು ಮತ್ತು ರೈತರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಸರ್ಕಾರ ಘೋಷಿಸಿರುವ ಪರಿಹಾರಧನವನ್ನು ಇನ್ನೂ ಬಿಡುಗಡೆ ಮಾಡದಿರುವುದನ್ನು ಖಂಡಿಸಿ, ಸಂಕಷ್ಟದಲ್ಲಿರುವ ರೈತರ ಖಾತೆಗಳಿಗೆ ಪರಿಹಾರ ಮೊತ್ತವನ್ನು ತ್ವರಿತವಾಗಿ ಜಮಾ ಮಾಡಲು ಒತ್ತಾಯಿಸಿದರು.
ಹಾಲು ಉತ್ಪಾದಕರ ವಿಷಯವನ್ನು ಉಲ್ಲೇಖಿಸಿದ ಅವರು, ಪ್ರತಿ ಲೀಟರ್‌ಗೆ 5 ರೂ. ಪ್ರೋತ್ಸಾಹಧನದ 620 ಕೋಟಿ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದರು. ಜೊತೆಗೆ, ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಹಾಲಿನ ಪ್ರೋತ್ಸಾಹಧನವನ್ನು 5ರಿಂದ 7 ರೂಪಾಯಿಗೆ ಹೆಚ್ಚಿಸುವಂತೆ ಆಗ್ರಹಿಸಿದರು.
ಕಬ್ಬು ಬೆಳೆಗಾರರ ಕುರಿತು ಮಾತನಾಡಿದ ನಾಯಕರು, ಪ್ರತಿ ಟನ್‌ಗೆ ನಿಗದಿಪಡಿಸಿದ ರೂ. 3300 ದರವನ್ನು ಅಭಿನಂದಿಸಿದರೂ, ಅದನ್ನು ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳಲ್ಲಿ ಸಮಾನವಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. “ಒಂದು ಜಿಲ್ಲೆಯಲ್ಲಿ ಕಡಿಮೆ, ಮತ್ತೊಂದು ಜಿಲ್ಲೆಯಲ್ಲಿ ಹೆಚ್ಚು ದರ ನೀಡುವ ಅನ್ಯಾಯ ತಪ್ಪಿಸಬೇಕು,” ಎಂದು ಅವರು ಹೇಳಿದರು.
ಹಿಂದಿನ ಸರ್ಕಾರ ನೀಡುತ್ತಿದ್ದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ರೈತರಿಗೆ ವರ್ಷಕ್ಕೆ ಹೆಚ್ಚುವರಿ 4,000 ರೂ. ನೆರವನ್ನು ಈ ಸರ್ಕಾರ ಪುನಃ ಜಾರಿಗೆ ತರಬೇಕೆಂದು ಆಗ್ರಹಿಸಲಾಯಿತು.
ಇದೇ ರೀತಿ, ರೈತ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಅಡಿ ನೀಡುತ್ತಿದ್ದ 10,000 ರೂ. ನೆರವು ಹಾಗೂ ಡೀಸಲ್ ಸಹಾಯಧನವಾಗಿ ಕೊಡುತ್ತಿದ್ದ 2,300 ರೂ.ಗಳ ನೀಡಿಕೆಯನ್ನು ನಿಲ್ಲಿಸಿರುವುದು ರೈತರ ಮೇಲೆ ಹೊಸ ಭಾರವಾಗಿದ್ದು, ತಕ್ಷಣ ಪುನಃ ಪ್ರಾರಂಭಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
2024–25ರ ಬೆಳೆ ಹಾನಿಯ ಪರಿಹಾರ ನೀಡಬೇಕು , ಎಲ್ಲಾ ಬೇಡಿಕೆಗಳನ್ನು ಈಡೇರಿಸದ ಪಕ್ಷದಲ್ಲಿ ರಾಜ್ಯದ ಪ್ರತಿಯೊಂದು ಗ್ರಾಮದಲ್ಲಿಯೂ ವ್ಯಾಪಕ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರಸ್ತುತ ಕಟಾವು ಮತ್ತು ರಾಶಿ ಹಂತದಲ್ಲಿರುವ ಕಾರಣ, ಜಿಲ್ಲೆಯಲ್ಲಿ ಬೇಕಾದಷ್ಟು ಖರೀದಿ (ಕೂಗು) ಕೇಂದ್ರಗಳನ್ನು ತಕ್ಷಣ ಆರಂಭಿಸಬೇಕು, ರೈತರ ಧಾನ್ಯ ಸಂಗ್ರಹಣೆಗೆ ಸರ್ಕಾರ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಲಾಯಿತು.
ಈ ಪ್ರತಿಭಟನೆಯಲ್ಲಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ, ಶಾಸಕ ಬಸವರಾಜ ಮತ್ತಿಮೂಡ, ಮಾಜಿ ಸಚಿವ ಬಾಬುರಾವ್ ಚವ್ಹಾಣ, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಅಶೋಕ ಬಗಲಿ, ನಗರ ಜಿಲ್ಲೆ ಅಧ್ಯಕ್ಷ ಚಂದು ಪಾಟೀಲ, ಮಾಜಿ ಸಂಸದ ಉಮೇಶ್ ಜಾಧವ್, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಡಾ. ಸುಧಾ ಹಾಳಕಾಯಿ, ಡಾ. ಆನಂದ ಸಿದ್ದಾಮಣಿ, ಮಾಜಿ ಜಿ.ಪಂ.ಅ.ನಿತೀನ ಗುತ್ತೇದಾರ,ರೇವಣಸಿದ್ದ ಸಂಕಲಿ, ಬಸವರಾಜ ಪಾಟೀಲ ಕುಕನೂರ, ಮಲ್ಲಣ ಕೋಳಕೂರ,ಬಾಬು ಪಾಟೀಲ ಮುತ್ತಕೋಡ, ರವಿ ಯಾತನೂರ,ಸಿದ್ರಾಮ ಕುಸಾಳೆ ಶಹಾಬಾದ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಹಾಗೂ ರೈತರು ಭಾಗವಹಿಸಿದರು.
ವರದಿ: ಹಣಮಂತ ದಂಡಗುಲ್ಕರ್
