ನಾಗಂಬಿಕ ಬಿಎಡ್ ಕಾಲೇಜಿನಲ್ಲಿ ರಾಂಕ್ ಪಡೆದ ವಿದ್ಯಾರ್ಥಿನಿಗೆ ಸನ್ಮಾನ, ನೂತನ ವಿದ್ಯಾರ್ಥಿಗಳಿಗೆ ಸ್ವಾಗತ
ನಾಗಂಬಿಕ ಬಿಎಡ್ ಕಾಲೇಜಿನಲ್ಲಿ ರಾಂಕ್ ಪಡೆದ ವಿದ್ಯಾರ್ಥಿನಿಗೆ ಸನ್ಮಾನ, ನೂತನ ವಿದ್ಯಾರ್ಥಿಗಳಿಗೆ ಸ್ವಾಗತ
ನಗರದ ನಾಗಂಬಿಕ ಬಿಎಡ್ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯಕ್ಕೆ 6ನೇ ರಾಂಕ್ ಪಡೆದ ವಿದ್ಯಾರ್ಥಿನಿ ಮಂದಾರ, ತಂದೆ ಅಂಬಣ್ಣ ತಳವಾರ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಸಹ ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಬಿಎಡ್ ಕಾಲೇಜಿನ ಶ್ರೀ ಶಿವರಾಜಪ್ಪ ವಾಲಿ ವಹಿಸಿದ್ದರು. ಅತಿಥಿಗಳಾಗಿ ಉಪನ್ಯಾಸಕರಾದ ಶ್ರೀ ರಾಜಪ್ಪ ಭದ್ರಶೆಟ್ಟಿ ಭಾಗವಹಿಸಿದ್ದು, ನವ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ದಯಾನಂದ ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅಧ್ಯಕ್ಷೀಯ ಭಾಷಣದಲ್ಲಿ ಶಿವರಾಜಪ್ಪ ವಾಲಿ ಅವರು ಮಾತನಾಡಿ, ವಿದ್ಯಾರ್ಥಿಗಳು ಗುರುಗಳು ನೀಡುವ ಮಾರ್ಗದರ್ಶನದಲ್ಲಿ ನಡೆದುಕೊಂಡರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಗುರುಗಳನ್ನು ಭಯದಿಂದಲ್ಲ, ಭರವಸೆಯಿಂದ ನೋಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಉಪನ್ಯಾಸಕರಾದ ರಾಜಪ್ಪ ಭದ್ರಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಎಲ್ಲಾ ಚಿಂತೆಗಳನ್ನು ಮರೆತು ತಮ್ಮ ಗುರಿಯ ಕಡೆಗೆ ಮುನ್ನುಗ್ಗಬೇಕು. ಶ್ರಮ ಮತ್ತು ಆತ್ಮವಿಶ್ವಾಸದಿಂದ ಯಶಸ್ಸು ಸಾಧಿಸಬಹುದು ಎಂದು ತಿಳಿಸಿದರು.
ಉದ್ಘಾಟಕರಾದ ದಯಾನಂದ ಪಾಟೀಲ್ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಓದುವ ಆಸಕ್ತಿ ಅತ್ಯಂತ ಮುಖ್ಯ. ಉತ್ತಮ ಗುರುಗಳ ಮಾರ್ಗದರ್ಶನದಿಂದ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳುವುದು ವಿದ್ಯಾರ್ಥಿಗಳ ಕರ್ತವ್ಯ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ದೇಶದ ಭವಿಷ್ಯ ರೂಪಿಸುವ ಶಿಕ್ಷಕರಾಗಬೇಕು. ವಿಶೇಷವಾಗಿ ರೈತರ ಮಕ್ಕಳು ಶಿಕ್ಷಕರಾಗಿ ಸಮಾಜದಲ್ಲಿ ವಿದ್ಯೆ ಮತ್ತು ಧರ್ಮದ ಮಾರ್ಗದಲ್ಲಿ ಮಕ್ಕಳನ್ನು ನಡೆಸುವ ಕೆಲಸ ಮಾಡಬೇಕು ಎಂದು ಹೇಳಿದರು. ಈ ಕಾಲೇಜನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಕಾಲೇಜಿಗೂ ಹಾಗೂ ಕ್ಷೇತ್ರಕ್ಕೂ ಉತ್ತಮ ಹೆಸರು ತರುವಂತೆ ಶುಭ ಹಾರೈಸಿದರು.
ಪ್ರಾಧ್ಯಾಪಕರಾದ ಡಾ. ಅರವಿಂದ್ ಕುಮಾರ್ ಬಿರಾದರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದ ಅತಿಥಿಗಳಿಗೆ ಅಭಿನಂದನೆ ಸಲ್ಲಿಸಿದರು. ನಮ್ಮ ಕಾಲೇಜಿನ ಶಿಕ್ಷಕರು ಉತ್ತಮ ಸೇವೆ ಸಲ್ಲಿಸುತ್ತಿದ್ದು, ಬಸವ ಕಾಯಕ ಪ್ರಶಸ್ತಿ ಸೇರಿದಂತೆ ವಿವಿಧ ಸಂಘಟನೆಗಳಿಂದ ಗೌರವಗಳಿಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಿಕ್ಷಕರಾದ ರೇಣುಕ ಪುರಾಣಿ, ಶ್ವೇತಾ ಸಾಲಿಮಠ ಹಾಗೂ ರಾಜೇಶ್ವರಿ ಚೌವ್ಹಾಣ ಅವರಿಗೆ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಜೊತೆಗೆ ದ್ವಿತೀಯ ವರ್ಷದ ವಿದ್ಯಾರ್ಥಿಗಳು ನೂತನ ವಿದ್ಯಾರ್ಥಿಗಳಿಗೆ ಹೂವು ನೀಡುವ ಮೂಲಕ ಆತ್ಮೀಯವಾಗಿ ಸ್ವಾಗತ ಕೋರಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ವಿಜಯಕುಮಾರ್ ಮಡಿವಾಳ, ಸಂತೋಷ್ ರಾಥೋಡ್, ಸುಲ್ತಾನ ಮಾನಂದ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
