ಅಂಬೇಡ್ಕರ್ ಜಯಂತಿ ಆಚರಣೆಗೆ ಚಿಂಚೋಳಿ ಸಜ್ಜು – ಕವಿಗೋಷ್ಠಿ, ಶಿಬಿರ, ಕಣ್ಣಿನ ತಪಾಸಣೆ
ಪಟ್ಟಣದಲ್ಲಿ ಏ. 29 ರಂದು ಅರ್ಥಪೂರ್ಣವಾಗಿ ಡಾ. ಬಿ. ಆರ್. ಅಂಬೇಡ್ಕರ್ ರವರ 134ನೇ ಜಯಂತ್ಯೋತ್ಸ ಕಾರ್ಯಕ್ರಮ ಜರುಗಲಿದೆ : ಜಯಂತ್ಯೋತ್ಸವ ಸಮಿತಿ
ಕವಿಗೋಷ್ಠಿ|ವಿಚಾರ ಸಂಕೀರ್ಣ| ರಕ್ತದಾನ ಶಿಬಿರ| ಕಣ್ಣಿನ ತಪಾಸಣೆ| ಆರೋಗ್ಯ ತಪಾಸಣೆ ನಡೆಯಲಿದೆ
ಚಿಂಚೋಳಿ : ವಿಶ್ವಜ್ಞಾನಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ರವರ 134ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು “ಮಹಾನಾಯಕನ ಮಹಾಯಾನ” ಎಂಬ ಶೀರ್ಷಿಕೆಯಡಿ ಏ.29 ರಂದು ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿರುವ ಪೋಸ್ಟರ್ ಜಯಂತ್ಯೋತ್ಸವ ಸಮಿತಿ ಬಿಡುಗಡೆಗೊಳಿಸಿತ್ತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬಾಬಾ ಸಾಹೇಬರ್ 134ನೇ ಜಯಂತ್ಯೋತ್ಸವವನ್ನು ಅದ್ಧೂಿರಿಯಾಗಿ ಮತ್ತು ಅರ್ಥಪೂರ್ಣವಾಗಿ ಜರುಗಿಸಲು ಸಮಿತಿ ನಿರ್ಣಯಕೈಗೊಂಡಿದೆ. ಅದರಂತೆ ಜಯಂತ್ಯೋತ್ಸವದ ಅಂಗವಾಗಿ ಏ.28 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಬೀದರನ ಡಾ. ಸಾಲನ್ಸ್ ಕಣ್ಣಿನ ಆಸ್ಪತ್ರೆಅವರಿಂದ ಕಣ್ಣಿನ ತಪಸಾಣೆ ಹಾಗೂ ಕವಿಗೋಷ್ಠಿ ಮತ್ತು ವಿಚಾರ ಸಂಕೀರ್ಣ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಏ 29 ರಂದು ಪಟ್ಟಣದ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ಭವನದವರೆಗೆ ಬೃಹತ್ ಮೇರವಣಿಗೆ ಮತ್ತು ಬೆಂಗಳೂರು ಭೂಮಿತಾಯಿ ಬಳಗ ವತಿಯಿಂದ ಭೀಮ ಗೀತೆಗಳು ಜರುಗಲಿದ್ದು, ಏ 25 ರೊಳಗಾಗಿ ಗೋಷ್ಠಿಗೆ ಹೆಸರು ನೋಂದಾಯಿಸಿಕೊಳ್ಳಲು ತಿಳಿಸಲಾಗಿದೆ. ಈ ಬಹಿರಂಗ ಸಭೆಗೆ ಉದ್ಘಾಟಕರಾಗಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರೀಯಾಂಕ ಖರ್ಗೆ ಆಗಮಿಸಲಿದ್ದಾರೆ. ಅಣದೂರ ಬುದ್ಧವಿಹಾರದ ಭಂತೆ ಜ್ಞಾನ ಸಾಗರ ಅವರು ಸಾನಿಧ್ಯ ವಹಿಸಿಕೊಳ್ಳಲಿದ್ದು, ಮಹಾರಾಷ್ಟ್ರದ ಪುಣೆಯಿಂದ ಕು.ದಿವ್ಯಾ ಶಿಂಧೆ ಅವರಿಂದ ದಿಕ್ಸೂಚಿ ಭಾಷಣ, ವಿಠ್ಠಲ್ ವಗ್ಗನ್ ಅವರಿಂದ ಉಪನ್ಯಾಸ, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಪುಸ್ತಕ ಬಿಡುಗಡೆ ಮಾಡಲಿದ್ದು, ಬೀದರ ಸಂಸದ ಸಾಗರ ಖಂಡ್ರೇಯವರು ಜ್ಯೋತಿ ಬೆಳಗಲಿದ್ದಾರೆ. ಶಾಸಕ ಡಾ. ಅವಿನಾಶ ಜಾಧವ ಅವರು ಭಾವಚಿತ್ರಕ್ಕೆ ಪೂಜೆ ನೇರವೆರಿಸಲಿದ್ದಾರೆ ಎಂದು ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಹೋಡೆಬೀರನಳ್ಳಿ, ಗೌತಮ್ ಬೊಮ್ಮನಳ್ಳಿ, ವೈಜಿನಾಥ ಮೀತ್ರ ಹಾಗೂ ಮಾರುತಿ ಗಂಜಗಿರಿ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಹೇಶ.ಕೆ, ರಾಜಶೇಖರ ಹೊಸಮನಿ, ಅಂಬರೀಶ ರಾಯಕೋಡ, ಚೇತನ ನಿರಾಳ್ಕರ್ ಅವರು ಉಪಸ್ಥಿತರಿದರು.