ಮೂಡನಂಬಿಕೆ ತ್ಯಜಿಸಿ ಬದುಕಲು ಮಹಿಳೆಯರಿಗೆ ಡಾ.ಜಯದೇವಿ ಗಾಯಕವಾಡ ಕರೆ

ಮೂಡನಂಬಿಕೆ ತ್ಯಜಿಸಿ ಬದುಕಲು ಮಹಿಳೆಯರಿಗೆ ಡಾ.ಜಯದೇವಿ ಗಾಯಕವಾಡ ಕರೆ

ಭೀಮ ಜ್ಞಾನ ಯಾನ ವಿಚಾರ ಸಂಕಿರಣ

 ಮೂಡನಂಬಿಕೆ ತ್ಯಜಿಸಿ ಬದುಕಲು ಮಹಿಳೆಯರಿಗೆ ಡಾ.ಜಯದೇವಿ ಗಾಯಕವಾಡ ಕರೆ

ಕಲಬುರಗಿ : ಯಾವುದೇ ಸಮಾಜ ಪ್ರಗತಿ ಸಾಧಿಸಬೇಕಾದರೆ ಮಹಿಳೆಯರ ಪಾಲ್ಗೊಳ್ಳುವಿಕೆ ಮುಖ್ಯ. ಅದಕ್ಕಾಗಿ ಅಂಧಶ್ರದ್ಧೆ ಮತ್ತು ಮೂಡನಂಬಿಕೆಗಳನ್ನು ತ್ಯಜಿಸಿ ಹೊಸ ಬದುಕು ಕಟ್ಟಿ ಕೊಳ್ಳಬೇಕು ಎಂದು ಸಾಹಿತಿ ಡಾ.ಜಯದೇವಿ ಗಾಯಕವಾಡ ಇಂದಿಲ್ಲಿ ಕರೆ ನೀಡಿದರು.

       ಸಮ ಸಮಾಜ ನಿರ್ಮಾಣಕ್ಕೆ ಮಹಿಳೆಯರ ಸಾಕ್ಷರತೆ ಅವಶ್ಯ. ಶಿಕ್ಷಣ ಕೊಡಿಸುವ ಮೂಲಕ ಮಹಿಳಾ ಸಬಲೀಕರಣ ಮಾಡಬೇಕಾಗಿದೆ. ಶೋಷಣೆ ಮತ್ತು ಅತ್ಯಾಚಾರ ಮುಕ್ತ ಸಮಾಜ ನಿರ್ಮಿಸಲು ಮೂಡನಂಬಿಕೆಗಳನ್ನು ಮೆಟ್ಟಿ ನಿಲ್ಲಬೇಕಾಗಿದೆ. ನಮ್ಮ ಸಂವಿಧಾನ ಕೊಟ್ಟಿರುವ ಹಕ್ಕುಗಳನ್ನು ಸದುಪಯೋಗ ಪಡಿಸಿಕೊಂಡು ಬುದ್ಧ, ಬಸವ ಮತ್ತು ಡಾ.ಅಂಬೇಡ್ಕರರ ತತ್ಪಾದರ್ಶಗಳಲ್ಲಿ ನಡೆಯಬೇಕಾಗಿದೆ. ಆಗಲೇ ಬಾಬಾ ಸಾಹೇಬರ ಪ್ರಬುದ್ಧ ಭಾರತದ ಕನಸು ನನಸಾಗಿಸಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.

ಲೇಖಕ ಜಗನ್ನಾಥ ತರನಳ್ಳಿ ಅವರು ಸಾಮಾಜಿಕ ಸಮಾನತೆಗೆ ಡಾ.ಅಂಬೇಡ್ಕರ ಕೊಡುಗೆ ಎಂಬ ವಿಷಯವಾಗಿ ಮಾತನಾಡಿ, ನಾವು ಕೇವಲ ರಾಜಕೀಯ ಸ್ವಾತಂತ್ರ ಪಡೆದರೆ ಸಾಲದು. ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಪ್ರತಿಪಾದಿಸಿದ ಅಂಬೇಡ್ಕರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಮತ್ತು ಮಹಿಳಾ ಸಬಲೀಕರಣಕ್ಕಾಗಿ ಸಂವಿಧಾನದಲ್ಲಿ ಕಲ್ಪಿಸಿದ ಹಕ್ಕುಗಳು ಸದುಪಯೋಗವಾಗಬೇಕು. ಮಹಿಳೆಯರಿಗೆ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.

ಚಿಂತಕ ಡಾ. ಸಂಜಯ ಮಾಕಲ್ ಅವರು ಸಂವಿಧಾನ ತತ್ವ ಶರಣ ತತ್ವ ವಿಷಯವಾಗಿ ಮಾತನಾಡಿದರು. ಸಂವಿಧಾನ ಓದಿದರೆ ಅಂಬೇಡ್ಕರ ಅರ್ಥವಾಗುತ್ತಾರೆ. ಜಾತಿ ಧರ್ಮಗಳಾಚೆ ಮಾನವ ಧರ್ಮ ನಿರ್ಮಿಸಬೇಕಾಗಿದೆ. ಶರಣರು, ಸಂತರು ಮತ್ತು ದಾರ್ಶನಿಕರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು. ಆ ಮೂಲಕ ವರ್ಗ ರಹಿತ ಜಾತಿ ರಹಿತ ಸಮಾಜ ಕಟ್ಟಲು ಸಾಧ್ಯ ಎಂದು ಪ್ರೊ. ಸಂಜಯ ಮಾಕಲ್ ಹೇಳಿದರು.

ಪತ್ರಕರ್ತ ಮಹೇಶ ಕುಲಕರ್ಣಿ ಕಾರ್ಯಕ್ರಮ ಉದ್ಧಾಟಿಸಿ ಮಾತನಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ಆಶಯ ನುಡಿಗಳನ್ನು ವ್ಯಕ್ತಪಡಿಸಿದರು.

ನಾಗಾಂಬಿಕಾ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಅರವಿಂದ ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಗೌರವ ಕಾರ್ಯದರ್ಶಿಗಳಾದ ಧರ್ಮಣ್ಣ ಎಚ್. ಧನ್ನಿ, ಶಿವರಾಜ ಅಂಡಗಿ, ಸಿದ್ದರಿಂಗ ಬಾಳಿ, ಶಕುಂತಲಾ ಪಾಟೀಲ, ರಾಜೇಂದ್ರ ಮಾಡಬೂಳ, ಜೀವಣಗಿ, ದಿನೇಶ ಮದಕರಿ ಹಾಗೂ ಮತ್ತಿತರರು ಭಾಗವಹಿಸಿದರು.

ಕಲಾವಿದರಾದ ಎಂ ಎನ್. ಸುಗಂಧಿ, ಬಾಬುರಾವ ಪಾಟೀಲ ಅವರು ಅಂಬೇಡ್ಕರ ಕುರಿತು ಕ್ರಾಂತಿಗೀತೆಗಳನ್ನು ಹಾಡಿದರು.

ವರದಿ ಡಾ. ಅವಿನಾಶ S ದೇವನೂರ ಆಳಂದ