ಔರಾದ ಕಸಾಪ ಪದಾಧಿಕಾರಿಗಳ ಪದಗ್ರಹಣ

ಔರಾದ ಕಸಾಪ ಪದಾಧಿಕಾರಿಗಳ ಪದಗ್ರಹಣ

 ಔರಾದ ಕಸಾಪ ಪದಾಧಿಕಾರಿಗಳ ಪದಗ್ರಹಣ

ಔರಾದ(ಬಿ), ಕಮಲನಗರದಲ್ಲಿ ನೂತನ ಕನ್ನಡ ಭವನ: ಶಾಸಕ ಪ್ರಭು ಚವ್ಹಾಣ

ಔರಾದ(ಬಿ) ತಾಲ್ಲೂಕಿನಲ್ಲಿರುವ ಕನ್ನಡ ಭವನ ಚಿಕ್ಕದಾಗಿದ್ದು, ಕನ್ನಡ ಚಟುವಟಿಕೆಗಳನ್ನು ನಡೆಸಲು ಅನಾನುಕೂಲವಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಕಮಲನಗರದಲ್ಲಿಯೂ ಕನ್ನಡ ಭವನ ನಿರ್ಮಿಸಬೇಕೆಂಬ ಬೇಡಿಕೆಯಿದ್ದು, ನಿವೇಶನಗಳು ಸಿಕ್ಕಲ್ಲಿ ಹೊಸ ಕನ್ನಡ

ಭವನಗಳನ್ನು ನಿರ್ಮಿಸಲು ಸಿದ್ದ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದರು.

ಔರಾದ(ಬಿ) ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ಏ.8ರಂದು ಜರುಗಿದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಔರಾದ(ಬಿ) ತಾಲ್ಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಚಟುವಟಿಕೆಗಳ ಉದ್ಭಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾನು ಓದುವ ಸಂದರ್ಭದಲ್ಲಿ ಊರಲ್ಲಿ ಕನ್ನಡ ಶಾಲೆಗಳಿರಲಿಲ್ಲ. ಹಾಗಾಗಿ ಮರಾಠಿ ಮಾಧ್ಯಮದಲ್ಲಿ ಓದಬೇಕಾಯಿತು. ನನ್ನಂತೆ ಅನೇಕ ಜನ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವುದರಿಂದ ವಂಚಿತರಾಗಿದ್ದಾರೆ. ಇಂತಹ ಪರಿಸ್ಥಿತಿ ಮುಂದಿನ ಪೀಳಿಗೆಗೆ ಬರಬಾರದು ಎಂಬ ಕಾರಣಕ್ಕೆ ಶಾಸಕನಾದ ನಂತರ ಕ್ಷೇತ್ರದೆಲ್ಲೆಡೆ ಕನ್ನಡ ಶಾಲೆಗಳನ್ನು ತಂದಿದ್ದೇನೆ. ಇಂದು ನಮ್ಮ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾರೆ. ಔರಾದ(ಬಿ) ತಾಲ್ಲೂಕು ಕನ್ನಡಮವಾಗುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

ಕನ್ನಡ ನಮ್ಮ ಮಾತೃಭಾಷೆ, ಕನ್ನಡದ ರಕ್ಷಣೆಗೆ ಎಲ್ಲರೂ ಪಣ ತೊಡಬೇಕು. ನಮ್ಮ ನೆಲ, ಜಲ, ಭಾಷೆ ಸಂಸ್ಕೃತಿಯನ್ನು ಉಳಿಸಲು ಪ್ರಯತ್ನಿಸಬೇಕು. ಎಲ್ಲರೂ ಕನ್ನಡ ಮಾಧ್ಯಮದಲ್ಲಿ ಓದಬೇಕು ಮತ್ತು ಕನ್ನಡದಲ್ಲಿಯೇ ಮಾತನಾಡಬೇಕು ಎಂದರು.

ಕನ್ನಡದ ಅಭಿವೃದ್ಧಿಗೆ ಸಾಹಿತ್ಯ ಪರಿಷತ್ತು ಉತ್ತಮ ಕೆಲಸಗಳನ್ನು ಮಾಡುತ್ತಿದೆ. ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಅವರ ನೇತೃತ್ವದಲ್ಲಿ ಉತ್ತಮ ಕೆಲಸ ಕಾರ್ಯಗಳಾಗುತ್ತಿವೆ. ನಿಕಟಪೂರ್ವ ಅಧ್ಯಕ್ಷ ಡಾ.ಶಾಲಿವಾನ್ ಉದಗೀರೆ ಚನ್ನಾಗಿ ಕೆಲಸ ಮಾಡಿದ್ದಾರೆ. ನೂತನ ಅಧ್ಯಕ್ಷರು ನಿಟಕಪೂರ್ವ ಅಧ್ಯಕ್ಷರ ಸಹಕಾರ ಪಡೆದು ಗಡಿ ಭಾಗದಲ್ಲಿ ಕನ್ನಡ ಕಟ್ಟುವ ಕೆಲಸವನ್ನು ಶ್ರದ್ದೆಯಿಂದ ಮಾಡಬೇಕು. ನಿಮ್ಮೊಂದಿಗೆ ನಾನಿದ್ದೀನಿ. ಕನ್ನಡ ಕೆಲಸಗಳಿಗೆ ನನ್ನ ಸಹಕಾರ ಸದಾ ಇರುತ್ತದೆ. ನಿರಾತಂಕವಾಗಿ ಕನ್ನಡ ಕೆಲಸಗಳನ್ನು ಮಾಡಿ ಎಂದು ನೂತನ ಪದಾಧಿಕಾರಿಗಳಿಗೆ ತಿಳಿಸಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಗುರುಬಸವ ಪಟ್ಟದೇವರು ಮಾತನಾಡಿ, ಔರಾದ(ಬಿ) ತಾಲ್ಲೂಕಿನಲ್ಲಿ ಕನ್ನಡ ಬೆಳೆಯಲು ಶಾಸಕ ಪ್ರಭು ಚವ್ಹಾಣ ಅವರ ಪಾತ್ರ ಮಹತ್ವದ್ದಾಗಿದೆ. ಕನ್ನಡಕ್ಕಾಗಿ ಶ್ರಮಿಸಿದ್ದ ಪೂಜ್ಯ ಡಾ.ಚನ್ನಬಸವ ಪಟ್ಟದೇವರ ಹೆಸರನ್ನು ಜಿಲ್ಲಾ ರಂಗಮಂದಿರಕ್ಕೆ ಮರು ನಾಮಕರಣ ಮಾಡಿರುವುದು, ನೂತನ ಅನುಭವ ಮಂಟಪಕ್ಕೆ ಭೂಮಿ ಪೂಜೆ ನೆರವೇರಿಸಿರುವುದು ಸೇರಿದಂತೆ ಸಾಕಷ್ಟು ಮಹತ್ತರ ಕೆಲಸ ಕಾರ್ಯಗಳಾಗಿವೆ ಎಂದು ಸ್ಮರಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಮಾತನಾಡಿ, ಕನ್ನಡ ಬಗ್ಗೆ ವಿಶೇಷ ಒಲವು ಹೊಂದಿರುವ ಶಾಸಕ ಪ್ರಭು ಚವ್ಹಾಣ ಅವರು ಕನ್ನಡಕ್ಕಾಗಿ ಮಾಡಿರುವ ಕೆಲಸಗಳು ಸ್ಮರಣೀಯವಾಗಿವೆ. ಜಿಲ್ಲೆಯ ಮೊದಲ ಕನ್ನಡ ಭವನ ಔರಾದನಲ್ಲಿ ನಿರ್ಮಿಸಿದ್ದಾರೆ. ಜಿಲ್ಲಾ ಕನ್ನಡ ಭವನ ನಿರ್ಮಿಸಬೇಕೆಂಬುದು ಸುಮಾರು 50 ವರ್ಷಗಳ ಕನಸಾಗಿತ್ತು. ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಅನುದಾನ ಒದಗಿಸಿ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಕವಿ, ಸಾಹಿತಿಗಳನ್ನು ತಿರಸ್ಕಾರದಿಂದ ಕಾಣುವ ಸಂದರ್ಭದಲ್ಲಿ ಅವರ ಮನೆಗೆ ಹೋಗಿ ಗೌರವಿಸುವ ಅಪರೂಪದ ಶಾಸಕರಾಗಿದ್ದಾರೆ ಎಂದು ಹೇಳಿದರು.

ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ವಿಜಯಕುಮಾರ ಸೊನಾರೆ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಕ್ಕಾಗಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ಕನ್ನಡ ಉಳಿಯಬೇಕೆಂದರೆ ಪರಿಷತ್ತು ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಕನ್ನಡ ಶಾಲೆಗಳ ರಕ್ಷಣೆಗೆ ಮುಂದಾಗಬೇಕು ಎಂದರು.

ಆಶಯ ನುಡಿಗಳನ್ನಾಡಿದ ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಎಂ. ಅಮರವಾಡಿ, ಕನ್ನಡ ಅತ್ಯಂತ ಶ್ರೀಮಂತ ಭಾಷೆ. ಈ ಭಾಷೆಯ ಉಳಿವಿಗೆ ಎಲ್ಲರೂ ಶ್ರಮಿಸುವ ಅಗತ್ಯವಿದೆ. ಹಿಂದೆ ಕನ್ನಡಕ್ಕಾಗಿ ಕಸಾಪದಿಂದ ಸಾಕಷ್ಟು ಕೆಲಸಗಳಾಗಿವೆ. ಇನ್ನಷ್ಟು ಕೆಲಸಗಳಾಗಬೇಕಿದೆ. ಗಡಿ ಭಾಗವಾಗಿರುವ ಔರಾದ(ಬಿ)ನಲ್ಲಿ ಕನ್ನಡ ಕಟ್ಟುವ ಕೆಲಸವನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡುವೆ ಎಂದು ತಿಳಿಸಿದರು.

ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ಶಾಲಿವಾನ ಉದಗೀರೆ ನೂತನ ಅಧ್ಯಕ್ಷ ಬಿ.ಎಂ. ಅಮರವಾಡಿಗೆ ಧ್ವಜ ನೀಡುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಿದರು. ನಂತರ ಮಾತನಾಡಿ, ಎಲ್ಲರೂ ಜೊತೆಯಾಗಿ ಕನ್ನಡವನ್ನು ಕಟ್ಟುವ ಕೆಲಸ ಮಾಡೋಣ. ಈ ವರ್ಷ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ತಾಲ್ಲೂಕು ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಬೇಕೆಂದು ಶಾಸಕರನ್ನು ಒತ್ತಾಯಿಸಿದರು.

ಔರಾದ(ಬಿ) ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸರುಬಾಯಿ ಘೂಳೆ, ತಹಸೀಲ್ದಾರರಾದ ಮಹೇಶ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ ರಂಗೇಶ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ, ಕೋಶಾಧ್ಯಕ್ಷ ಶಿವಶಂಕರ ಟೋಕರೆ, ತಾಲ್ಲೂಕು ಕಸಾಪ ಗೌರವಾಧ್ಯಕ್ಷ ಡಾ.ವೈಜಿನಾಥ ಬುಟ್ಟೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಂಡರಿ ಆಡೆ, ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ಮುಕ್ತೆದಾರ, ಮೀಡಿಯಾ ಜರ್ನಲಿಸ್ಟ್ ಯುನಿಯನ್ ಅಧ್ಯಕ್ಷ ಸಂತೋಷ ಚ್ಯಾಂಡೇಶ್ವರೆ, ಚಿಂತಕ ಜಗನ್ನಾಥ ಮೂಲಗೆ, ಕಸಾಪ ಬೀದರ ಅಧ್ಯಕ್ಷ ಟಿ.ಎಂ.ಮಚ್ಚೆ, ಕಮಲನಗರ ಅಧ್ಯಕ್ಷ ಪ್ರಶಾಂತ ಮಠಪತಿ, ಬಾಬುರಾವ ದಾನಿ, ರಾಮಶೆಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ ಮುಂಗನಾಳ, ಶಿವರಾಜ ಅಲ್ಮಾಜೆ, ಶಿವಕುಮಾರ ಘಾಟೆ, ಜಯದೇವಿ ತೇಲಿ, ಅಂಬಿಕಾ ಕೋತಮಿರ್, ಓಂಪ್ರಕಾಶ ದಡ್ಡೆ, ಡಾ.ಮನ್ಮಥ ಡೋಳೆ, ಸೂರ್ಯಕಾಂತ ಸಿಂಗೆ, ವಿಶ್ವನಾಥ ಬಿರಾದಾರ, ಮಹಾನಂದಾ ಎಂಡೆ, ಎಸ್.ಕೆ ಅಖಿಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿ ಮಲ್ಲಿಕಾರ್ಜುನ ಟಂಕಸಾಲೆ ನಿರೂಪಿಸಿದರು. ಜಗನ್ನಾಥ ದೇಶಮುಖ ವಂದಿಸಿದರು. ಎಕಲಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿ ರಂಜಿಸಿದರು.