ಶಿಕ್ಷೆ -ಶಿಕ್ಷಣ

ಶಿಕ್ಷೆ -ಶಿಕ್ಷಣ

.ಶಿಕ್ಷೆ -ಶಿಕ್ಷಣ

 ಈಗ ಎಲ್ಲಾ ಪೋಷಕರಿಗೂ ಒಂದೇ ಕನಸು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕು ಹಾಗೂ ಮಕ್ಕಳ ಭವಿಷ್ಯವನ್ನು ಉಜ್ವಲದೆಡೆಗೆ ಕೊಂಡೊಯ್ಯಬೇಕೆಂಬುದು. ಪ್ರಸ್ತುತ ಸಮಾಜದಲ್ಲಿ ಬಾಲಕಾರ್ಮಿಕ ಪದ್ಧತಿ ಹಾಗೂ ಬಾಲ್ಯವಿವಾಹಗಳು ಕ್ರಮೇಣ ಕಡಿಮೆಯಾಗಿ ಪೋಷಕರು ಮಕ್ಕಳನ್ನು ವಿದ್ಯಾವಂತರನ್ನಾಗಿಸಲು ಹಪಹಪಿಸುತ್ತಿರುವುದು ಒಳ್ಳೆಯ ವಿಚಾರವೇ.ಜೊತೆಗೆ ಮಕ್ಕಳು ತಮ್ಮಿಷ್ಟದ ವಿಷಯವನ್ನು ಓದಲು,ಕಲಿಯಲು ಸರ್ಕಾರ ಹಲವಾರು ಯೋಜನೆಗಳನ್ನು ತಂದು ಮಕ್ಕಳಲ್ಲಿ ಕಲಿಕೆಯತ್ತ ಕುತೂಹಲವನ್ನು ಹೆಚ್ಚಿಸುತ್ತಿವೆ. ಇವುಗಳಿಂದ ಮಕ್ಕಳ ಕಲಿಕೆಗೆ ತುಂಬಾ ಉಪಯುಕ್ತವಾದರೂ ಕೆಲವೊಂದೆಡೆ ಮಕ್ಕಳು ಎಡವುತ್ತಿದ್ದಾರೆ ಎಂಬ ಸಂಗತಿ ಸುಳ್ಳಲ್ಲ.ಕಾರಣ ನಾವು ಮಕ್ಕಳ ಬೆಳವಣಿಗೆಯಲ್ಲಿ ಗಮನದಲ್ಲಿಡಬೇಕಾದ ಮುಖ್ಯ ಅಂಶಗಳನ್ನು ಮರೆತುಬಿಟ್ಟಿದ್ದೇವೆ.

   ಮಕ್ಕಳು ಗಿಡವಿದ್ದಂತೆ, ಗಿಡಗಳಿಗೆ ಸೇರಬೇಕಾದ ಪೋಷಕಾಂಶಗಳಲ್ಲಿ ಒಂದು ಪೋಷಕಾಂಶದ ಕೊರತೆಯಾದರು ಅದು ಫಲನೀಡುವ ಸಮಯದಲ್ಲಿ ನೇರ ಪರಿಣಾಮವನ್ನುಂಟು ಮಾಡುತ್ತದೆ.ಮಕ್ಕಳ ವಿಷಯದಲ್ಲೂ ಹಾಗೆಯೇ,ಮಕ್ಕಳಿಗೆ ಎಲ್ಲಾ ಬೇಡಿಕೆಗಳನ್ನು ಪೂರೈಸುವುದರ ಜೊತೆಗೆ ನಾವು ಒದಗಿಸಿದ ಸೌಕರ್ಯಗಳನ್ನು ಅವರು ಹೇಗೆ ಸದ್ಭಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಗಮನಿಸಬೇಕಾಗುತ್ತದೆ. ಅದು ಮನೆಯಲ್ಲಿ ,ಶಾಲಾ-ಕಾಲೇಜುಗಳಲ್ಲಿ ಅಥವಾ ಸಾರ್ವಜನಿಕವಾಗಿಯೇ ಆಗಿರಬಹುದು.

        ಮಕ್ಕಳನ್ನು ಶಾಲೆಗೆ ಸೇರಿಸಿದ ಮೇಲೆ ಮುಗಿಯಿತು, ಇನ್ನು ಏನೇ ಕಲಿಯಬೇಕೆಂದಿದ್ದರೂ ಶಾಲೆ ಇದೆಯಲ್ಲ ಎಂದು ಮಗುವಿನ ಸಂಪೂರ್ಣ ಕಲಿಕೆಯ ಹೊಣೆಯನ್ನು ಶಿಕ್ಷಕರ ಮೇಲೆ ಹಾಕಿ, ಮಕ್ಕಳನ್ನು ನಿರ್ಲಕ್ಷಿಸುವುದು ತಪ್ಪು. ಅದರಲ್ಲೂ ಮಗುವಿಗೆ ಶಿಕ್ಷಿಸದೆ,ಕೊಂಚವೂ ನೋಯಿಸದೆ ಎಲ್ಲವನ್ನು ಕಲಿಸಿ ಉತ್ತಿರ್ಣನನ್ನಾಗಿಸಬೇಕು ಹಾಗೂ ಒಳ್ಳೆಯ ವ್ಯಕ್ತಿಯನ್ನಾಗಿ ಮಾಡಬೇಕೆಂಬುದು ಎಷ್ಟರಮಟ್ಟಿಗೆ ಸರಿ? ಒಮ್ಮೆ ಯೋಚಿಸಿ ನೋಡಿ! ವಿದ್ಯಾರ್ಥಿಗಳು ಮಾಡುವ ತಪ್ಪುಗಳನ್ನು ತಿದ್ದದೆ ಕಲಿಯೆಂದರೆ ಅವರು ಹೇಗೆ ಕಲಿತಿಯಾರು?ಅವರ ತಪ್ಪುಗಳನ್ನು ಅವರಿಗೆ ಮನವರಿಕೆ ಮಾಡದ ವಿನಃ ಮಕ್ಕಳನ್ನು ಸರಿದಾರಿಗೆ ತರುವುದು ಕಷ್ಟ.

  ಹಿಂದೆ ಎಂದರೆ ಶತಮಾನಗಳಷ್ಟು ಅಲ್ಲ ಒಂದಷ್ಟು ವರ್ಷಗಳ ಹಿಂದಿನ ಶಿಕ್ಷಣ ಹೇಗಿತ್ತೆಂದರೆ, ಮೇಷ್ಟ್ರು ರೂಲ್ದೊಣ್ಣೆ ಹಿಡಿದು ಬಂದರೆಂದರೆ ಮಕ್ಕಳು ತುಟಿ ಎರಡು ಮಾಡದೆ ಕುಳಿತಿರುತ್ತಿದ್ದರು. ಮಕ್ಕಳು ಮಾಡಿದ ಸರಿ ಹಾಗೂ ತಪ್ಪಿಗನುಗುಣವಾಗಿ ಅವರಿಗೆ ಬಹುಮಾನ ಹಾಗೂ ಶಿಕ್ಷೆಗಳು ಲಭಿಸುತ್ತಿದ್ದವು. ವಿದ್ಯಾರ್ಥಿ ತಪ್ಪು ಮಾಡಿದ್ದೆ ಆಗಿದ್ದರೆ ಶಿಕ್ಷೆಯಿಂದ ಪಾರಾಗಲು ಮಾರ್ಗಗಳು ಸಿಗುತ್ತಿರಲಿಲ್ಲ. ಹಲವಾರು ದಂಡನೆಗಳ ನಡುವೆ ಅಂದಿನ ಬಾಲ್ಯದ ಕ್ಷಣಗಳು ಕಠಿಣ ಎನ್ನಿಸುತ್ತಿರಲಿಲ್ಲ,ಕಾರಣ ತಪ್ಪು ಮಾಡಿದವರಿಗೆ ಮಾತ್ರ ದಂಡನೆ ಸಿಗುತಿತ್ತು.ಉಳಿದವರು ತಪ್ಪು ಮಾಡಿದರೆ ಸಿಗಬಹುದಾದ ಶಿಕ್ಷೆಯಿಂದಲೇ ಎಚ್ಚೆತ್ತುಕೊಳ್ಳುತ್ತಿದ್ದರು. ಇದು ಒಂದು ಪ್ರಕಾರದ ಕಲಿಕೆ ಅಲ್ಲವೇ. ಇಂದಿನ ಮಕ್ಕಳು ಇಂತಹ ಶಿಕ್ಷೆಗಳ ರುಚಿ ನೋಡಿರುವುದಿಲ್ಲ ಕಾರಣ ಈ ದಿನಗಳಲ್ಲಿ ಮಕ್ಕಳು ಏನೇ ತಪ್ಪು ಮಾಡಿದರು ಬೈಯ್ಯುವಂತಿಲ್ಲ, ಹೊಡೆಯುವಂತಿಲ್ಲ,ಶಿಕ್ಷಿಸುವಂತಿಲ್ಲ.

     ನಿಜಾಂಶವೆಂದರೆ ಈಗಿನ ಮಕ್ಕಳಿಗೆ ಒಂದಿಷ್ಟು

ಬೈಯ್ಯದೆಯೂ ಕಲಿಸುವುದು ಕಷ್ಟಕರವಾದ ಸಂಗತಿ. ಏಕೆಂದರೆ ಈಗ ಮಕ್ಕಳು ಬೆಳೆಯುತ್ತಿರುವ ವಾತಾವರಣವು ಹಾಗೆಯೇ ಇದೆ.ಬ್ಯಾಗ್ಗಳಲ್ಲಿ ಪುಸ್ತಕಗಳ ಬದಲಿಗೆ ಸಿಗರೇಟ್, ಗಾಂಜಾ,ಕಾಂಡೋಮ್ಗಳಂತಹ ವಸ್ತುಗಳ ಸಂಖ್ಯೆ ಹೆಚ್ಚಾಗಿದೆ ಜೊತೆಗೆ ಕೈಯಲ್ಲಿ ಒಂದು ಫೋನು. ಗೇಮ್ಸ್, ಫೇಸ್ಬುಕ್ಗಳಂತಹ ಜಾಲತಾಣಗಳಲ್ಲಿ ಸದಾ ಕ್ರಿಯಾಶೀಲರಾಗಿರುವ ವಿದ್ಯಾರ್ಥಿಗಳು ಓದಿನಲ್ಲಿ ಹಿಂದುಳಿಯುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಗ್ರಂಥಾಲಯಗಳಲ್ಲಿ ವಿದ್ಯಾರ್ಥಿಗಳಿಲ್ಲದೆ,ಓದುಗರಿಲ್ಲದೆ ಪುಸ್ತಕಗಳ ಮೇಲೆ ಒಂದು ಗೇಣು ಧೂಳು ಕುಳಿತಿದ್ದರೆ, ಮಲಗಿದ್ದಲ್ಲಿ,ಕುಳಿತಲ್ಲಿ,ಊಟ ಮಾಡುವಾಗ ಕೊನೆಗೆ ಬಾತ್ರೂಮ್ನಲ್ಲೂ ಮೊಬೈಲ್ ಬಳಸುತ್ತಿರುವ ಮಕ್ಕಳು ಬೇರೆಡೆ ಆಕರ್ಷಿತರಾಗಿ ತಮ್ಮ ಜೀವನದ ಮೌಲ್ಯವನ್ನು, ಮಾನವೀಯ ಗುಣಗಳನ್ನು ಮೂಲೆಗುಂಪು ಮಾಡಿದ್ದಾರೆ. ಹೇಳುವ ಮಾತು ಕೇಳುವ ವ್ಯವದಾನವಿಲ್ಲದ ವಿದ್ಯಾರ್ಥಿಗಳಿಗೆ ಸಾಟಿ ಎಂಬಂತೆ ಕೆಲವು ಪೋಷಕರ ಬಲವು ಸಿಕ್ಕಂತಾಗಿದೆ.

       ಹಿಂದೆ ಶಿಕ್ಷಕರಿಗಾಗಿ ಮಕ್ಕಳು ಕಾಯುತ್ತಿದ್ದರು ಆದರೆ ಈಗಿನ ಪರಿಸ್ಥಿತಿಯಲ್ಲಿ ಶಿಕ್ಷಕರೇ ಮೊದಲು ತರಗತಿಗೆ ಹೋಗಿ ಮಕ್ಕಳಿಗಾಗಿ ಕಾಯುವ ಸ್ಥಿತಿ ಒದಗಿದೆ. ಕಾರಣ ತಾವು ಏನೇ ಮಾಡಿದರು ಶಿಕ್ಷಕರು ಶಿಕ್ಷಿಸುವುದಿಲ್ಲ ಎಂಬ ಮೊಂಡು ಧೈರ್ಯ ಒಂದೆಡೆಯಾದರೆ,ನಾವು ಏನೇ ಮಾಡಿದರು ಪೋಷಕರು ತಮ್ಮ ಪರವಾಗಿ ನಿಲ್ಲುವರು ಎಂಬ ಧೈರ್ಯ ಮತ್ತೊಂದೆಡೆ.ಮಕ್ಕಳನ್ನು ದಂಡಿಸದೆ ದಡಕ್ಕೆರಿಸಿ ಎಂದರೆ ಅದು ಸಾಧ್ಯವೇ,ಆದರೆ ಎಲ್ಲಾ ಹಂತಗಳಲ್ಲೂ ಉತ್ತಮ ಫಲಿತಾಂಶ ಕಂಡುಬರುವುದಿಲ್ಲ. ವಿದ್ಯಾರ್ಥಿಗಳಿಗೆ ತಾವು ಮಾಡುತ್ತಿರುವ ತಪ್ಪುಗಳ ಹೊಂಡವನ್ನು ಈಜಲು ತಿಳಿಯದಿದ್ದರೆ ದಡ ಸೇರುವುದು ಕಷ್ಟಕರವಾಗುತ್ತದೆ. ಅಲ್ಲದೆ ಪ್ರಸ್ತುತ ಮಕ್ಕಳ ಮನಸ್ಸನ್ನು ನಾವು ಮತ್ತಷ್ಟು ಗಟ್ಟಿಗೊಳಿಸಬೇಕಿದೆ, ಕೊಂಚ ಅವಮಾನ ಅಥವಾ ಸೋಲುಗಳನ್ನು ಸಹಿಸದೆ ಹಲವಾರು ಅವಾಂತರಗಳನ್ನು ಮಾಡಿಕೊಳ್ಳುತ್ತಿರುವ ಮೊಗ್ಗುಗಳ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಮಕ್ಕಳ ಕಲಿಕಾವಸ್ಥೆ ಹೇಗಿದೆ? ಎಂತಹ ಗುಣಗಳನ್ನು ಅವರು ಅಳವಡಿಸಿಕೊಳ್ಳುತ್ತಿದ್ದಾರೆ?ಎಂಬುದನ್ನು ಆಗಾಗ ತಿಳಿದು ಎಲ್ಲಾದಕ್ಕೂ ಶಿಕ್ಷಕರನ್ನು ನಿಂದಿಸುವ ಬದಲಾಗಿ, ಶಿಕ್ಷಕರಲ್ಲಿ ಮಕ್ಕಳ ಬೆಳವಣಿಗೆಯ ಕುರಿತಾಗಿ ತಿಳಿಯುವುದು ಪೋಷಕರ ಕರ್ತವ್ಯ. ಪ್ರತಿ ಮಗುವಿನ ಚಲನವಲನವನ್ನರಿತು ವಿದ್ಯಾರ್ಥಿಗಳಿಗೆ ಮಾನವೀಯ ಗುಣಗಳನ್ನು ಬೆಳೆಸುತ್ತಾ ಸನ್ಮಾರ್ಗದತ್ತ ಕೊಂಡೊಯ್ಯುವುದು ಶಿಕ್ಷಕರ ಕರ್ತವ್ಯ.ತಮ್ಮ-ತಮ್ಮ ಕರ್ತವ್ಯಗಳನ್ನು ಮರೆತರೆ ಯುವಪೀಳಿಗೆಯ ಜೊತೆ-ಜೊತೆಗೆ ದೇಶದ ಭವಿಷ್ಯ ಹಾಳಾಗುತ್ತದೆ ಎಂಬುದನ್ನು ಗಮನದಲ್ಲಿಡಬೇಕು.ಇಲ್ಲವಾದರೆ ಇದಕ್ಕೆಲ್ಲ ಕಾರಣಕರ್ತರು ನೀವೆಂದು ಒಬ್ಬರ ಮೇಲೊಬ್ಬರು ಬೆರಳು ಮಾಡುತ್ತಾ ಕಾಲಕಳೆಯುತ್ತಿರಬೇಕಾಗುತ್ತದೆ.

-ಸಹನ ಮುಕುಂದ,ಕೆ. ಆರ್. ಪೇಟೆ