ಖಾಸಗಿ ಬಸ್ಸಿನ ಕಥೆ - ಪ್ರಯಾಣಿಕರ ವ್ಯಥೆ

ಖಾಸಗಿ ಬಸ್ಸಿನ ಕಥೆ - ಪ್ರಯಾಣಿಕರ ವ್ಯಥೆ
(ನಿಮ್ಮ ಜೀವ - ನಿಮ್ಮ ಜೀವನಕ್ಕೆ ನೀವೇ ಜವಾಬ್ದಾರರು)
ಪ್ರಯಾಣವೆಂದರೆ ಅದು ಸುಖಕರವಾಗಿರಬೇಕು, ಸಂತಸವಾಗಿರಬೇಕು ಇಲ್ಲವಾದರೆ ಪ್ರಾಣ ಹೋದಂತಹ ಅನುಭವ ಆಗುತ್ತದೆ. ಕರ್ನಾಟಕ ಸರ್ಕಾರ ಇತ್ತೀಚಿಗೆ ರಾಜ್ಯದ ಎಲ್ಲಾ ಮಹಿಳೆಯರಿಗೆ ರಾಜ್ಯದೊಳಗೆ ಸರ್ಕಾರಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸುವ ಭಾಗ್ಯವನ್ನು ನೀಡಿದ ಮೇಲೆ, ಯಾರು ಯಾರಿಗೆ ಏನೇನು ಅನುಭವಗಳು ಆಗಿದ್ದಾವೋ ನೀವೇ ನೆನಪು ಮಾಡಿಕೊಂಡು ನಕ್ಕುಬಿಡಿ. ಇಕ್ಕಟ್ಟಿನಲ್ಲಿ ಪೇಚಿಗೆ ಸಿಲುಕಿ ಯಾತನೆ ಅನುಭವಿಸಿದವರು ಆ ಕ್ಷಣಗಳನ್ನು ಮರೆತುಬಿಡಿ.
ಇನ್ನೂ ಮಹಿಳೆಯರ ಆಧಾರ ಕಾರ್ಡಿನ ಉಚಿತ ಪ್ರಯಾಣ ಬಂದ ಮೇಲೆ
ಖಾಸಗಿ ಬಸ್ಸುಗಳ ಸಂಕಟದ ಕಥೆ ಅಲ್ಲಲ್ಲ ಕಾದಂಬರಿಯಷ್ಟು ಬರೆಯಬಹುದು, ಇರಲಿ ಮತ್ತೊಮ್ಮೆ ಆ ಕುರಿತು ಮಾತನಾಡೋಣ. ಈ ಖಾಸಗಿ ಬಸ್ಸುಗಳು ಸಮಯಕ್ಕೆ ಸರಿಯಾಗಿ ನಗರ ನಿಲ್ದಾಣಗಳಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊರಟು ಒಂದೆರಡು ಕಿಲೋಮೀಟರ್ ಬಂದು ಸುಮಾರು 50 ಜನ ಪ್ರಯಾಣಿಕರಿಬೇಕಾದ ಬಸ್ಸಿನಲ್ಲಿ ಕೇವಲ 8-10 ಜನರಿದ್ದಾಗ ನಾವು ಹೋಗಲ್ಲ ಹಿಂದೆ ಬರುವ ಬಸ್ಸಿಗೆ ಹೋಗಿ ಎಂದು ಹೇಳುತ್ತಾರೆ. ಇಂತಹ ಅನುಭವ ನನಗೂ ಒಂದು ವರ್ಷದಲ್ಲಿ ಕನಿಷ್ಟ ನಾಲ್ಕೈದು ಸಲ ಆಗಿರುತ್ತದೆ.
ಇಷ್ಟಕ್ಕೆ ಸೀಮಿತವಾಗಿರದೆ ಸದರಿ ಬಸ್ಸಿನ ಚಾಲಕ ಹಾಗೂ ನಿರ್ವಾಹಕರು (ಕೆಲವರನ್ನು ಹೊರತುಪಡಿಸಿ) ಕುಡಿದ ಮತ್ತಿನಲ್ಲಿ ಬಸ್ಸನ್ನು ಓಡಿಸುತ್ತಿರುವುದು, ಬಸ್ಸಿನಲ್ಲಿ ಅಶ್ಲೀಲವಾದ ಹಾಗೂ ಕರ್ಕಶವಾಗಿ ಶಬ್ದದಿಂದ ಕೂಡಿದ ದ್ವನಿವರ್ಧಕವನ್ನು (ಟೇಪ್ ರೆಕಾರ್ಡರ್ ) ಹಾಕಿಕೊಂಡು ನಿರ್ಲಕ್ಷತೆಯಿಂದ ಓಡಿಸುತ್ತಿರುತ್ತಾರೆ. ದ್ವನಿ ವರ್ಧಕ ಶಬ್ದವನ್ನು ಕಡಿಮೆ ಮಾಡಿ ನಿಧಾನವಾಗಿ ಬಸ್ಸನ್ನು ಓಡಿಸುವಂತೆ ಜನರು ಹತ್ತಾರು ಬಾರಿ ಮನವಿ ಮಾಡಿದರು ಯಾರ ಮಾತನ್ನು ಕೇಳದೇ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಅವಾಚ್ಯ ಶಬ್ದಗಳಿಂದ ಬೈಯುವುದು, ನಾವೇನು ನಿಮ್ಮನ್ನು ನಮ್ಮ ಬಸ್ಸು ಹತ್ತಲು ಹೇಳಿದ್ದೇವ!!? ಬೇಕಾದ್ರೆ ಇಳಿದು ಹೋಗ್ರಿ ಇಲ್ಲ ಕಾರು ತಗೊಂಡು ಬರಬೇಕು ಹೀಗೆ ಗೊಣಗುತ್ತಾರೆ.
ಇನ್ನೂ ಮಹಾ ನಗರಿಗಳ ಖಾಸಗಿ ಬಸ್ಸುಗಳ ಕಥೆಯೋ ಹಬ್ಬ ಹರಿದಿನ ಬಂತೆಂದರೆ ಸ್ವರ್ಗ ಸುಖ. ದೂರದ ಊರುಗಳಿಗೆ ಹೋಗುವಂತಹ ಮಧ್ಯಮ ವರ್ಗದ ಪ್ರಯಾಣಿಕರಿಗೆ ಇರುವ ನಿಗದಿತ ಧರಕ್ಕಿಂತ ಶೇಕಡಾ 100% ಹೆಚ್ಚು ಕೊಟ್ಟರೆ ಮಾತ್ರ ಸೀಟು ಕೊಡುತ್ತೇವೆ ಎಂದು ಮುಲಾಜಿಲ್ಲದೆ ಹೇಳೇಬಿಡುತ್ತಾರೆ.
ಇಂತಹ ಸಂದರ್ಭದಲ್ಲಿ ಮುಂದೇನು ಮಾಡುವುದು ತಿಳಿಯದೇ ಅದೆಷ್ಟೋ ಜನ ಲಾರಿ ಟ್ರಕಗಳಲ್ಲಿ ಪ್ರಯಾಣಿಸಿ ಬಂದು ಅನಾಹುತ ಸಂಭವಿಸಿ ಪ್ರಾಣ ತ್ಯಾಗ ಮಾಡಿದವರು ಅದೆಷ್ಟೋ ಜನರಿದ್ದಾರೆ.
ಈ ರೀತಿಯ ಖಾಸಗಿ ಬಸ್ಸುಗಳ ಗುಂಡಾ ವರ್ತನೆಯಿಂದ ನಿತ್ಯವು ನೂರಾರು ಪ್ರಯಾಣಿಕರು ಬೇಸತ್ತು ಹೋಗಿದ್ದಾರೆ.
ಅಲ್ಲದೇ ನಿರ್ಲಕ್ಷತನದಿಂದ ಬಸ್ಸು ಓಡಿಸುವುದರಿಂದ ಅದೆಷ್ಟೋ ಬಡ ಕುಟುಂಬದವರ ಜೀವದ ಜೊತೆ ಆಟ ಆಡುತ್ತಿದ್ದಾರೆ.
ಬಸ್ಸಿನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಒಂದೇ ಮನಸ್ಥಿತಿಯವರು, ಒಂದೇ ತರಹದ ಸಮಸ್ಯೆಗಳನ್ನು ಹೊತ್ತುಕೊಂಡು ಹೋಗುತ್ತಾರೋ!?? ಮಕ್ಕಳು, ಹೆಣ್ಣುಮಕ್ಕಳು, ವೃದ್ಧರು, ಶಾಲಾ ವಿದ್ಯಾರ್ಥಿಗಳು ಖಾಯಿಲೆಗೆ ಬಿದ್ದವರು, ಚಿಕ್ಕ ಪುಟ್ಟ ವ್ಯಾಪಾರ ಮಾಡುವವರು ಓಡಾಡುವುದು ಸಾಮಾನ್ಯ.
ಆದರೆ ಖಾಸಗಿ ಬಸ್ಸಿನ ಚಾಲಕ ನಿರ್ವಾಹಕರ ಪ್ರಕಾರ ಮೋಜು ಮಸ್ತಿಗೆ ಹೋಗುತ್ತರೆಂದು ತಿಳಿದು ಅವರಿಚ್ಚೆಯ ಹಾಡುಗಳನ್ನು ಹಾಕಿಕೊಂಡು ಬಸ್ಸಲ್ಲಿ ಕುಳಿತುಕೊಳ್ಳಲಾಗದಷ್ಟು ಸೌಂಡ್ ಇಟ್ಟು ಕಿರಿ ಕಿರಿ ಮಾಡುವುದನ್ನು ಅನುಭವಿಸುವ ಪ್ರಯಾಣಿಕರಿಗೆ ಮಾತ್ರ ತಿಳಿಯುತ್ತದೆ.
ಇನ್ನೂ ಕೆಲವು ಬಸ್ಸುಗಳಲ್ಲಿ ಕುರಿ, ಮೇಕೆ ಇನ್ನಿತರ ಸಾಮಗ್ರಿಗಳನ್ನು ಬಸ್ಸಿನ ಒಳಗೆ ಹಾಕಿಕೊಂಡು, ಬಸ್ಸಿನ ಕೆಪ್ಯಾಸಿಟಿಗಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗುವುದು ಕಾಮನ್ ಎನ್ನುವಂತೆ ಕಾಣುತ್ತದೆ. ಬೆರಳೆಣಿಕೆಯಷ್ಟು ಬಸ್ಸುಗಳು ಆಕಾರಕ್ಕಾಗಿ ಬಸ್ಸುಗಳಾಗಿರುತ್ತವೆ ಒಳಗೆ ಕೂತರೆ ಮೇಲೆ ಕೆಳಗೆ ಎಲ್ಲವೂ ಕಾಣುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಏನಾದರೂ ಅನಾಹುತಗಳು ಸಂಭವಿಸಿದರೆ (ಯಾವತ್ತೂ ಅನಾಹುತಗಳು ನಡೆಯಬಾರದು) ನಿಗಧಿಗಿಂತ ಹೆಚ್ಚಿಗೆ ಇರುವ ಪ್ರಯಾಣಿಕರ ವಿಮೆ ಪಾವತಿಯಾಗಲಿ ಅನಾಹುತದಿಂದ ಆಗುವ ಪ್ರಾಣ ಹಾನಿಗಳಿಗೆ ಹೊಣೆ ಯಾರು!?
ಒಮ್ಮೊಮ್ಮೆ ಅನ್ನಿಸುತ್ತದೆ. ಇವೆಲ್ಲಾ ನಮ್ಮ ದೇಶದಲ್ಲಿ ಮಾತ್ರ ನೋಡಬಹುದೇನೋ ಎಂದು ಭಾಸವಾಗುತ್ತದೆ.
ಈ ವಿಚಾರವಾಗಿ ಸಂಬಂಧಪಟ್ಟ ಇಲಾಖೆಗಳು ಖಾಸಗಿ ಬಸ್ಸು ಓಡಿಸುವಾಗ ಅನುಸರಿಸಬೇಕಾದ ನೀತಿ ನಿಯಮಗಳು, ಷರತ್ತುಗಳನ್ನು ನೀಡಿದ್ದರು ಇವರುಗಳಿಗೆ ಯಾಕಿಷ್ಟು ಬೇಜವಾಬ್ದಾರಿ!? ಹೇಳುವವರು ಕೇಳುವವರು ಯಾರು!!?
ಖಾಸಗಿ ಬಸ್ಸು ಮಾಲೀಕರು ತುಂಬಾ ಜವಾಬ್ದಾರಿಯಿಂದ ಬಸ್ಸನ್ನು ಓಡಿಸಿ ಪ್ರಯಾಣಿಕರುಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಹೇಳುತ್ತಾರೆ ಆದರೆ ಕೇಳುವಷ್ಟು ವ್ಯವದಾನ ಯಾವ ಖಾಸಗಿ ಬಸ್ಸಿನ ಸಿಬ್ಬಂದಿಗೆ ಇದೆ ಹೇಳಿ!
ಹಾಗಾಗಿ ಸಂಬಂದಿಸಿದ ಅಧಿಕಾರಿಗಳು ಇಡೀ ರಾಜ್ಯದ ತುಂಬೆಲ್ಲಾ ಖಾಸಗಿ ಬಸ್ಸು ಮಾಲೀಕರು ಹಾಗೂ ಚಾಲಕರನ್ನು ಆರು ತಿಂಗಳಿಗೊಮ್ಮೆಯೋ ಅಥವಾ ವರ್ಷಕ್ಕೊಮ್ಮೆಯೋ ಒಂದೆಡೆ ಸೇರಿಸಿ ಸರಿಯಾದ ಮಾರ್ಗದರ್ಶನ ನೀಡಿ,
ಜನಸಾಮಾನ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ನೆಮ್ಮದಿಯ ಹಾಗೂ ಸುಖಕರ ಪ್ರಯಾಣಕ್ಕಾಗಿ ಸೂಕ್ತ
ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಹಾಗೂ ಅಗತ್ಯತೆ ಖಂಡಿತಾ ಇದೆ. ಇಲ್ಲವಾದರೆ ನಿತ್ಯ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುವ ನೂರಾರು ಪ್ರಯಾಣಿಕರ ಗೋಳು ಕೇಳುವವರು ಯಾರು!!?
ಎನ್ನುವುದೇ ಇಲ್ಲಿ ಯಕ್ಷ ಪ್ರಶ್ನೆಯಾಗಿ ಉಳಿಯುತ್ತದೆ.
ಮುಗಿಸುವ ಮುನ್ನ : ಬಹು ಮುಖ್ಯವಾಗಿ ಪ್ರಯಾಣ ಮಾಡುವ ನಾವುಗಳು ಸಹ ಖಾಸಗಿ ಬಸ್ಸಿನ ಸಿಬ್ಬಂದಿ ಜೊತೆಗೆ ಸೌಜನ್ಯದಿಂದ ವರ್ತಿಸುವುದು, ಸರಿಯಾದ ಚಿಲ್ಲರೆ ಕೊಟ್ಟು ಸಹಕರಿಸುವುದು, ಕೆಲವರು ಗೊತ್ತಿದ್ದೋ ಗೊತ್ತಿಲ್ಲದೆಯೋ ತಮ್ಮ ಮೊಬೈಲಗಳಲ್ಲಿ ರಿಲ್ಸ್ ನೋಡುವುದು, ಫೇಸಬುಕ್ ನಂತಹ ಸಾಮಾಜಿಕ ಜಾಲತಾಣಗಳನ್ನು ಹೆಚ್ಚಿನ ಸೌಂಡ್ ಹಾಕಿಕೊಂಡು ಕೇಳುವುದು, ಕೇಕೆ ಹಾಕಿ ನಗುವುದು, ಅಥವಾ ಏರು ದ್ವನಿಯಲ್ಲಿ ಪೋನಿನಲ್ಲಿ ಮಾತಾಡುವುದು, ಇಲ್ಲವೇ ಸಹ ಪ್ರಯಾಣಿಕರ ಜೊತೆ ಗಟ್ಟಿಯಾಗಿ ಮಾತನಾಡುವುದು, ಕಂಡ ಕಂಡಲ್ಲಿ ಬಸ್ಸು ನಿಲ್ಲಿಸುವಂತೆ ಕೇಳುವುದು ಹೀಗೆ ಅನೇಕ ವಿಚಾರಗಳಲ್ಲಿ ನಾವು ಬದಲಾಗಬೇಕು ಈ ಮೂಲಕ ಎಲ್ಲಾರ ಪ್ರಯಾಣವು ಸುಖಕರವಾಗಿ ನಡೆಯುವಂತೆ ನೋಡಿಕೊಳ್ಳಬೇಕು.
*ನಮ್ಮ ನಿಮ್ಮ ಪ್ರಯಾಣ ಸುಖಕರವಾಗಿರಲಿ*.
ಡಾ.ಉಮೇಶ್ ಬಾಬು ಮಠದ್ (ಉಬಾಮ) ಕನಕ ಯುವ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗೂ ಸಾಮಾಜಿಕ ಚಿಂತಕರು
ದಾವಣಗೆರೆ 9606363449