ಢಕ್ಕೆಯ ಬೊಮ್ಮಣ್ಣ

ಢಕ್ಕೆಯ ಬೊಮ್ಮಣ್ಣ
ವಿಶ್ವತೋಮುಖ ಲಿಂಗವೆಂದರಿದಲ್ಲಿ ಪಂಚವಕ್ತ್ರವೆಂದು ನುಡಿಯಲಿಲ್ಲ.
ಪರಿಪೂರ್ಣವೆಂದರಿದಲ್ಲಿ
ಕಾಲವೇಳೆಯೆಂದು ಪ್ರಮಾಣಿಸಲಿಲ್ಲ.
ಜ್ಯೋತಿಯ ಬೆಂಬಳಿಯಲ್ಲಿ ಜ್ಯೋತಿ ಬರಲಾಗಿ ಅದೇತರ ತನುವೆಂದು ಲಕ್ಷಿಸಲಿಲ್ಲ,
ಕಾಲಾಂತಕ ಭೀಮೇಶ್ವರಲಿಂಗವನರಿದಲ್ಲಿ,
#ಢಕ್ಕೆಯ #ಬೊಮ್ಮಣ್ಣ
ವಚನ #ಅನುಸಂಧಾನ
ಜ್ಞಾನದ ಬೀಜವು ಮೊಳಕೆಯೊಡೆದಲ್ಲಿ ಅದನ್ನೇ ಅರಿವು ಎನ್ನಬಹುದೆನಿಸುತ್ತದೆ ಶರಣರ ಅರಿವು ಎನ್ನುವ ಪರಿಭಾಷೆಯನ್ನು ಗಮನಿಸಿ ತಿಳಿದಾಗ. ಯಾಕೆಂದರೆ ಶರಣರಿಗೆ ಹೊನ್ನು ಹೆಣ್ಣು ಮಣ್ಣು ಸಂಪತ್ತಲ್ಲಾ ಜ್ಞಾನರತ್ನ ಎನ್ನುವುದೇ ಸಂಪತ್ತು ಎನ್ನುವರು ಅಲ್ಲಮಪ್ರಭುಗಳು. ಹಾಗಾಗಿ ಅಪ್ಪ ಬಸವಾದಿ ಶರಣರು ವೈಚಾರಿಕ, ವಾಸ್ತವಿಕ ಮತ್ತು ವೈಜ್ಞಾನಿಕ ಮನೋಭಾವ ಹೊಂದಿರುವ ಕಾರಣ ಅವರ ಪರಿಕಲ್ಪನೆಯಲ್ಲಿ ಲೋಕಾದಿ ಲೋಕಂಗಳ ಸಮಸ್ತವನ್ನೂ ಒಳಗೊಂಡ ಕ್ರಿಯಾಶೀಲ ಮೂಲ ಚಿನ್ಮಯ ಚೈತನ್ಯವೇ ವಸ್ತು ಎಂಬ ಹೆಸರಿನಿಂದ ಕರೆಯಲ್ಪಟ್ಟಿದೆ. ಹೀಗೆ ವಿಶ್ವ ವಿಶಾಲವಾದಂತಹಾ ಪರಿಪ್ರೇಕ್ಷ್ಯದಲ್ಲಿ ಶರಣರ ಶಿವ/ಲಿಂಗವು ಗ್ರಹಿಕೆಗೆ ಬಂದಿರುವ ಕಾರಣದಿಂದ ಆಗಲೇ ರೂಢಿಯಲ್ಲಿ ಬಂದಿರುವ ಶಿವಲಿಂಗದ ಪರಿಕಲ್ಪನೆಯ ಮಿತಿಯ ನ್ನೂ ಮೀರಿ ಶರಣರ ತಾತ್ವಿಕ ಗ್ರಹಿಕೆ ವಿಸ್ತರಿಸಿದೆ. ಈ ಚಿಂತನೆಯ ಬೆಳಕಲ್ಲಿ ರೂಪಗೊಂಡಂತಿರುವ ಪ್ರಸ್ತುತ ಈ ಮೇಲಿನ ಢಕ್ಕೆಯ ಬೊಮ್ಮಣ್ಣ ಶರಣ ರಚಿಸಿದ ವಚನವನ್ನು ಅನುಸಂಧಾನ ಮಾಡುವ ಮೂಲಕ ಹೆಚ್ಚಿನ ವಿವರಗಳ ಪರಿಶೀಲನೆ ಮಾಡಿ ನೋಡೋಣ.
*#ವಿಶ್ವತೋಮುಖ ಲಿಂಗವೆಂದರಿದಲ್ಲಿ ಪಂಚವಕ್ತ್ರವೆಂದು #ನುಡಿಯಲಿಲ್ಲ.*
ಇಲ್ಲಿ ಮೊದಲನೆ ಸಾಲು ಶರಣರ ಪರಿಕಲ್ಪನೆಯ ಶಿವನನ್ನು ಕುರಿತಂತೆ ಇದೆ. ಅಂದರೆ ಶರಣರ ಶಿವ; ಅಗಮ್ಯ ಅಗೋಚರ ಅಪ್ರತಿಮ ಲಿಂಗವಾಗಿದ್ದು ಜಗದಗಲ ಮುಗಿಲಗಲ ಇರುತ್ತದೆ ಅಷ್ಟೇ ಅಲ್ಲದೆ ಅದು ಜಡ ಚೈತನ್ಯ ಹೀಗೆ ಎಲ್ಲದರಲ್ಲೂ ಸುಪ್ತವಾ ಗಿದ್ದು, ಸದಾ ಜಂಗಮ ಸ್ವರೂಪದಲ್ಲಿರುವಂತಹ ವಿಶ್ವತೋಮುಖ ಲಿಂಗವಾಗಿದೆ ಎಂದು ಅರಿಯ ಲಾಗಿದೆ. ಹಾಗಾಗಿ ಎರಡನೇ ಸಾಲಿನಲ್ಲಿರುವಂಥ ಶೈವರ ಶಿವನಿಗೆ ಪಂಚ ತತ್ವಗಳ ಮತ್ತು ದಿಕ್ಕುಗಳ ದ್ಯೋತಕವಾಗಿ ಐದು ಮುಖಗಳಾದ; ಅಘೋರ ಸದ್ಯೋಜಾತ ಈಶಾನ ತತ್ಪುರುಷ ವಾಮದೇವ
ಎನ್ನುವ ಪರಿಕಲ್ಪನೆ ಇರುತ್ತದೆ. ಆದರೆ ಶರಣತತ್ವ ಸಿದ್ಧಾಂತ ಪ್ರಕಾರ ಶಿವ ವಿಶ್ವತೋಮುಖಿಯಂದು ನಂಬಿರುವ ಕಾರಣಕ್ಕೆ ಶಿವ ಪಂಚಮುಖಿ ಎಂದು ನುಡಿಯಲಾರೆನೆಂದು ವಚನಕಾರರು ಹೇಳಿದ್ದಾರೆ
*#ಪರಿಪೂರ್ಣವೆಂದರಿದಲ್ಲಿ*
*ಕಾಲವೇಳೆಯೆಂದು #ಪ್ರಮಾಣಿಸಲಿಲ್ಲ.*
ಶರಣರ ಶಿವನು ಅಖಂಡ ಸ್ವರೂಪನಾಗಿರುವನು.
ಮತ್ತು ಆತನು ಪರಿಪೂರ್ಣನಾಗಿರುವನು ಎಂದು ಅರಿತು ಆಚರಿಸುತ್ತಿರುವುದರಿಂದ ಇನ್ನಿತರರಂತೆ ಗುಳಿಕ ಕಾಲ, ಯಮಗಂಡ ಕಾಲ, ಶುಭವೇಳೆ, ಅಶುಭ ವೇಳೆ ಎಂದು ವಿಭಾಗಿಸಿ ಅಪೂರ್ಣವನ್ನ ಪ್ರಮಾಣಿಸಲಿಲ್ಲ ಎಂದಿಲ್ಲಿ ಢಕ್ಕೆಯ ಬೊಮ್ಮಣ್ಣ ಶರಣರು ಹೇಳಿದ್ದಾರೆ.
*#ಜ್ಯೋತಿಯ ಬೆಂಬಳಿಯಲ್ಲಿ ಜ್ಯೋತಿ ಬರಲಾಗಿ ಅದೇತರ* *ತನುವೆಂದು ಲಕ್ಷಿಸಲಿಲ್ಲ,*
*ಕಾಲಾಂತಕ ಭೀಮೇಶ್ವರಲಿಂಗವನರಿದಲ್ಲಿ,*
ಆತ್ಮವು ಪರಮಾತ್ಮನ ಅಂಶವಾಗಿದೆ. ಪರಮಾತ್ಮ ಜ್ಯೋತಿ ಸ್ವರೂಪ ಆಗಿರುವ ಕಾರಣದಿಂದ ಆತ್ಮ ಕೂಡ ಜ್ಯೋತಿ ಸ್ವರೂಪವೇ ಆಗಿರುವುದರಿಂದ ಅದು ಸ್ಥೂಲ ಸೂಕ್ಷ್ಮ ಕಾರಣ ಈ ತನುತ್ರಯಗಳ ಲ್ಲಿ ಅದು ಯಾವ ತನು ಎಂಬುದನ್ನು ತಾನು ಲಕ್ಷ ವಹಿಸಲಿಲ್ಲ ಯಾಕೆಂದರೆ ತಾನು ಶರಣರ ತತ್ವಗಳ ಮೂಲಕ ಕಾಲಾಂತಕ ಭೀಮೇಶ್ವರ ಲಿಂಗವನ್ನು ಅರಿತ ಕಾರಣದಿಂದ ಎಂದು ಇಲ್ಲಿ ವಚನಕಾರರು ಸ್ಪಷ್ಟವಾಗಿ ಹೇಳಿದ್ದಾರೆ. ತನ್ಮೂಲಕ ಶೈವರ ಶಿವನ ಪರಿಮಿತಿಗಳನ್ನು ಪರೋಕ್ಷವಾಗಿ ನಿರಾಕರಿಸುವು ದರ ಜೊತೆಗೆ ಶರಣರ ಪರಿಕಲ್ಪನೆಯ ಅಖಂಡ ಅಗೋಚರ ಸರ್ವತೋಮುಖಿ ಜ್ಯೋತಿ ಸ್ವರೂಪ ಶಿವನ ಪರಿಕಲ್ಪನೆಯ ಬೆನ್ನತ್ತಿ ಬಂದಿರುವ ಆತ್ಮ ಜ್ಯೋತಿಯ ಒಡಲಾಗಿರುವ ಈ ಮಲಯುಕ್ತದ ದೇಹವನ್ನು ಅಷ್ಟು ಹಗುರವಾಗಿ ಕಾಣಲಾಗಿಲ್ಲಾ ಯಾಕೆಂದ್ರೆ ತಾವು ಕಾಲಾಂತಕ ಭೀಮೇಶ್ವರಲಿಂಗ ವನ್ನು ಅರಿತುಕೊಂಡ ಕಾರಣದಿಂದ ಎಂದು ಇಲ್ಲಿ ವಚನಕಾರ ಶರಣ ಢಕ್ಕೆಯ ಬೊಮ್ಮಣ್ಣ ಶರಣರ ಪರಿಕಲ್ಪನೆಯ ವಿಶ್ವರೂಪಿ ಶಿವನ ಸ್ವರೂಪವನ್ನು ಒಪ್ಪಿಕೊಂಡೂ ಅಂಥಾ ವಿಶ್ವ ರೂಪಿ ಶಿವನಿರುವ ಈ ದೇಹವನ್ನು ಉನ್ನತೀಕರಿಸಿ ತೋರಿಸಿದ್ದಾರೆ.
ಅಳಗುಂಡಿ ಅಂದಾನಯ್ಯ*