ತುಳು ಅಕಾಡೆಮಿ ನಾಟಕ ಸಾಹಿತ್ಯ ಪ್ರಶಸ್ತಿ ಗೋಪಾಲಕೃಷ್ಣ ಮುಡಿಗೆ

ತುಳು ಅಕಾಡೆಮಿ ನಾಟಕ ಸಾಹಿತ್ಯ ಪ್ರಶಸ್ತಿ ಗೋಪಾಲಕೃಷ್ಣ ಮುಡಿಗೆ

ನೆಕ್ಕಿದಪುಣಿ ತರವಾಡು ಮನೆಗೆ ಗೌರವ:

ತುಳು ಅಕಾಡೆಮಿ ನಾಟಕ ಸಾಹಿತ್ಯ ಪ್ರಶಸ್ತಿ ಗೋಪಾಲಕೃಷ್ಣ ಮುಡಿಗೆ

ಕಲಬುರಗಿ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2023 ನೇ ಸಾಲಿನ ನಾಟಕ ಸಾಹಿತ್ಯ ಪ್ರಶಸ್ತಿಯು ವಿಟ್ಲ ಸಮೀಪದ ಅಳಿಕೆ ನೆಕ್ಕಿದಪುಣಿ ಬಿಲ್ಲವರ ಪ್ರತಿಷ್ಠಿತ ಮನೆ, ಕಂರ್ಬೇರ ತರವಾಡಿನ ಮುಖ್ಯಸ್ಥರು, ತುಳು - ಕನ್ನಡ ಸಾಹಿತಿ ಗೋಪಾಲಕೃಷ್ಣ ಇವರ ಮುಡಿಗೇರಿರುವುದಕ್ಕೆ ತರವಾಡು ಕುಟುಂಬದ ಎಲ್ಲ ಸದಸ್ಯರು ಹರ್ಷಗೊಂಡಿದ್ದಾರೆ ಎಂದು ಆಕಾಶವಾಣಿಯ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಹೇಳಿದ್ದಾರೆ. 

    ಪ್ರಶಸ್ತಿ ಪುರಸ್ಕೃತರಾದ

ಗೋಪಾಲಕೃಷ್ಣ ಅವರು ಸುಮಾರು 250 ಕುಟುಂಬಗಳನ್ನು ಹೊಂದಿದ ಕರಂಬೇರ ತರವಾಡಿನ ಮುಖ್ಯಸ್ಥರಾಗಿ ತುಳು ನಾಡಿನ ಆರಾಧನಾ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುತ್ತಿರುವ ತೌಳವ ಸಂಸ್ಕೃತಿಯ ಪೋಷಕರಾಗಿ ಧಾರ್ಮಿಕ ಮುಂದಾಳುಗಳಾಗಿ ಹಾಗೂ ತುಳುವಿನಲ್ಲಿ ಸುಮಾರು 28ಕ್ಕೂ ಹೆಚ್ಚು ಕೃತಿಗಳನ್ನು ಹಾಗೂ 12ಕ್ಕೂ ಹೆಚ್ಚು ಕನ್ನಡ ಗದ್ಯಕೃತಿಗಳನ್ನು ಬರೆದು ಸಾಹಿತ್ಯ ಸರಸ್ವತಿಯ ಮಡಿಲಿಗೆ ಹಾಕಿದವರು.

  ತುಳು ಕೃತಿಗಳ ಸರದಾರ

ಲಚ್ಚುನ ಕೊರಗೆ, ಬ್ರಹ್ಮಶ್ರೀ ನಾರಾಯಣ ಗುರು, ಗುಟ್ಟುದ ಕರಿಯಮಣಿ,ಪವಿತ್ರ ಪಾಪಿ, ಕಲ್ಕುಡ ಕಲ್ಲುರ್ಟಿ, ಬಡ್ಡಿದ ಮಾಲಿಂಗೆ,ಬಲಿದಾನ,ನಾಟಕ ನಾರ್ಣಪ್ಪೆ, ಸಮಾಧಿ ಮುಂತಾದ 15 ತುಳು ಸಾಮಾಜಿಕ ನಾಟಕಗಳನ್ನು ಗೊಮ್ಮಟ ದೇವೆರ್ , ಬುದ್ಧಿವಂತನವ ಸಾನ ಮುಂತಾದ 9 ತುಳು ಐತಿಹಾಸಿಕ ಮತ್ತು ಪೌರಾಣಿಕ ನಾಟಕಗಳನ್ನು ಬರೆದು ತುಳು ಸಾಹಿತ್ಯ ಸರಸ್ವತಿಯ ಮಡಿಲಿಗೆ ಹಾಕಿದ್ದಾರೆ. ಕನ್ನಡದಲ್ಲಿ ಪವಿತ್ರ , ಅಂಕುರಾರ್ಪಣೆ ಭಾರ್ಗವ ಸೃಷ್ಟಿ ಮತ್ತು ಶೂನ್ಯಸಿಂಹಾಸನ ನಾಟಕಗಳನ್ನು ಬರೆದು ಖ್ಯಾತರಾದವರು. ಇವರ ಕನ್ನಡ ಗದ್ಯ ಕೃತಿಗಳಲ್ಲಿ ಜಗದ್ಗುರು ಶ್ರೀ ನಾರಾಯಣ ಗುರುದೇವ ದರ್ಶನಂ, ಯುಗಪುರುಷ ಶ್ರೀ ನಾರಾಯಣ ಗುರು ಆರ್ಯರು, ಬಿಲ್ಲವ ಸಂಸ್ಕೃತಿ, ಕೋಟಿ ಚೆನ್ನಯ ಜನ್ಮಭೂಮಿ ಪಡುಮಲೆ ಮುಂತಾದ ಕೃತಿಗಳನ್ನು ಬರೆದು ಜನಪ್ರಿಯ ರಾಗಿದ್ದಾರೆ.

ಸಂಶೋಧನಾ ದೃಷ್ಟಿಯ ಲೇಖಕ

 ಸಂಶೋಧನಾ ದೃಷ್ಟಿಯುಳ್ಳ ಒಬ್ಬ ಸೃಜನಶೀಲ ಲೇಖಕನಾಗಿ ಮೌನವಾಗಿ ಸಾಹಿತ್ಯ ಸೇವೆಯನ್ನು ಸಲ್ಲಿಸಿದ ಸಜ್ಜನ ಬರಹಗಾರರು. ರಾಜ್ಯ ಸರಕಾರಿ ಸೇವೆಯಲ್ಲಿದ್ದ ಇವರು ದಿವಂಗತ ವಸಂತ ವಿ ಸಾಲಿಯನ್ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಹಾಗೂ ದಿವಂಗತ ಮಾಜಿ ಸಚಿವರಾದ ಬಾಪುಗೌಡ ದರ್ಶನಾಪುರ ಅವರ ಆಪ್ತ ಕಾರ್ಯದರ್ಶಿಯಾಗಿ ಮತ್ತು ಬೆಳ್ತಂಗಡಿ ಶಾಸಕರಾದ ವಸಂತ ಬಂಗೇರರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸಿ ರಾಜ್ಯಾದ್ಯಂತ ಹೆಸರು ಪಡೆದಿದ್ದಾರೆ. ಸಂಶೋಧನೆ ಮತ್ತು ಅಧ್ಯಯನ ಇವರಿಗೆ ವಿಶೇಷ ಆಸಕ್ತಿಯಾಗಿದ್ದು ಅದು ಅವರ ಬರಹದ ಮೂಲ ಗುಣವಾಗಿದೆ. ಇದರಿಂದಾಗಿ ಅವರು ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಕೋಟಿ ಚೆನ್ನಯರ ಇತಿಹಾಸದ ಬಗ್ಗೆ ಸಂಶೋಧನಾತ್ಮಕವಾದ ಕೃತಿಗಳನ್ನು ನೀಡಿದ್ದಾರೆ.1969 ರಿಂದ ಕೃತಿ ರಚನೆ ಆರಂಭಿಸಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ನೆಕ್ಕಿದಪುಣಿ ಯಲ್ಲಿ ಜನಿಸಿದ ಇವರು ಮಂಗಳೂರು ಮತ್ತು ಬೆಂಗಳೂರಿನಲ್ಲಿ 38 ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿ ಬೆಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಆದರೆ ತನ್ನ ಸೃಜನಶೀಲ ಬರಹಕ್ಕೆ ವಿಶ್ರಾಂತಿಯನ್ನು ನೀಡಲಿಲ್ಲ. 78ರ ಹರೆಯದಲ್ಲೂ ಅಧ್ಯಯನ ಮತ್ತು ಸಂಶೋಧನೆಯನ್ನು ರೂಢಿಗತ ಮಾಡಿರುವ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಕಟ್ಟಾ ಶಿಷ್ಯನಾಗಿ ಜೀವನದಲ್ಲಿ ಮೈಗೂಡಿಸಿಕೊಂಡವರು. ಇವರ ಸಾಹಿತ್ಯ ಕೊಡುಗೆಗೆ ಇವರ ಪತ್ನಿ ಶ್ರೀಮತಿ ಮೀರಾ ಕೃಷ್ಣ ಅವರ ಸ್ಪೂರ್ತಿ ಹಾಗೂ ಇವರ ನಾಲ್ಕು ಜನ ಹೆಣ್ಣು ಮಕ್ಕಳ ಸಹಕಾರದಿಂದ ಗೋಪಾಲಕೃಷ್ಣ ಅವರ ವ್ಯಕ್ತಿತ್ವ ವಿಕಾಸಗೊಳ್ಳಲು ಕಾರಣವಾಯಿತು ಸದ್ಯ ಬೆಂಗಳೂರಿನ ಬಿಲ್ಲವ ಸಂಘದ ಗೌರವ ಅಧ್ಯಕ್ಷರಾಗಿ ಸಮಾಜಮುಖಿ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ . ನಯ ವಿನಯದ ನಡೆಯಲು ಹಕ್ಕಿಯನ್ನು ಜೀನಮಾನದಲ್ಲಿ ಅಳವಡಿಸಿಕೊಂಡು ಸಮಾಜದ್ರೋಹಿ ಕಾನೂನು ಉಲ್ಲಂಘನೆ ಮೋಸ ವಂಚನೆಗಳನ್ನು ಸದಾ ವಿರೋಧಿಸಿ ಪ್ರಾಮಾಣಿಕತನದ ಬದುಕು ನಡೆಸುತ್ತಿರುವವರು. 

*ಕೃತಿಗಳಿಗೆ ಪುರಸ್ಕಾರ*

1975 

ರಲ್ಲಿ ಇವರ "ಗೊಮ್ಮಟ ದೇವರು"ತುಳು ನಾಟಕ ಕೃತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ರತ್ನವರ್ಮ ಹೆಗ್ಗಡೆ ಸ್ಮಾರಕ ಪ್ರಥಮ ಬಹುಮಾನ ಹಾಗೂ 1976 ರಲ್ಲಿ "ಅಂಕುರಾರ್ಪಣೆ" ಕನ್ನಡ ನಾಟಕಕ್ಕೆ ಮಣಿಪಾಲ್ ಅಕಾಡೆಮಿಯಿಂದ "ಕೊಪ್ತಿಕಾರ್ ಪ್ರಶಸ್ತಿ" ಹಾಗೂ ಇತರ ಸಂಘ-ಸಂಸ್ಥೆಗಳಿಂದ ಇವರ ಸೃಜನಶೀಲ ಕೃತಿಗಳಿಗೆ ಅನೇಕ ಬಹುಮಾನಗಳು ಸಂದಿವೆ. 2006-2007ರಲ್ಲಿ ಇವರು ಬರೆದ "ಜಗದ್ಗುರು ಬ್ರಹ್ಮ ಶ್ರೀ ನಾರಾಯಣ ಗುರುದೇವ ದರ್ಶನಂ " ಎಂಬ ಮಹಾನ್ ಉದ್ಗ್ರಂಥವು ಕನ್ನಡ ಸಾಹಿತ್ಯ ಲೋಕದಲ್ಲಿ ಅತ್ಯಪೂರ್ವ ಕೃತಿಯಾಗಿ ಹೊರಹೊಮ್ಮಿದ್ದು ರಾಜ್ಯದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳನ್ನು ಸಾರ್ವತ್ರಿಕವಾಗಿ ಪ್ರಚಾರಗೊಳಿಸಿದೆ. ಕೋಟಿ ಚೆನ್ನಯರ ಜನ್ಮಭೂಮಿ ಪಡುಮಲೆಯ ಕುರಿತಾಗಿ ಆಳವಾದ ಸಂಶೋಧನಾತ್ಮಕ ಕೃತಿಗಳನ್ನು ನೀಡಿ ಐತಿಹಾಸಿಕ ಸತ್ಯವನ್ನು ತಿಳಿಸಿದ ಓರ್ವ ಸಂಶೋಧನಾ ಬರಹಗಾರನಾಗಿ ಗುರುತಿಸಿಕೊಂಡವರು.

*ತುಳು ಅಕಾಡೆಮಿಗೆ ಅಭಿನಂದನೆ*

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಮತ್ತು ಅಕಾಡೆಮಿ ಸದಸ್ಯರು ಯಾವುದೇ ಪ್ರಚಾರವನ್ನು ಬಯಸದೆ 

ಎಲೆಮರೆಯ ಕಾಯಿಯಂತೆ ತನ್ನ ಪಾಡಿಗೆ ತನ್ನ ಸಾಹಿತ್ಯ ಸೇವೆಯನ್ನು ನೀಡುತ್ತಿದ್ದ 50 ವರ್ಷಗಳಿಗೂ ಹೆಚ್ಚು ಕಾಲ ಸೃಜನಶೀಲ ಲೇಖಕರಾಗಿ ಕೃತಿಗಳನ್ನು ಬರೆದು ಬಿಡುಗಡೆ ಮಾಡಿದ ನೆಕ್ಕಿದಪುಣಿ ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ನಾಟಕ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಾಗಿ 2023ನೇ ಸಾಲಿನ ಪ್ರಶಸ್ತಿಯನ್ನು ನೀಡಿರುವುದು ಅವರ ನಿಷ್ಕಾಮ ಕರ್ಮಕ್ಕೆ ಸಂದ ಗೌರವವಾಗಿದೆ. ಸರಳ ಸಜ್ಜನಿಕೆಯ ನಿರಂತರ ಶೋಧನಾತ್ಮಕ ಮನಸ್ಸಿನ ಲೇಖಕನಿಗೆ ಅರ್ಹ ಪ್ರಶಸ್ತಿ ನೀಡಿ ಅಕಾಡೆಮಿಯು ತನ್ನ ಘನತೆಯನ್ನು ಹೆಚ್ಚಿಸಿಕೊಂಡಿದೆ ಎಂದು ಡಾ. ಸದಾನಂದ ಪೆರ್ಲ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.