ಸಂಸ್ಕೃತಿ ಮರೆತರೆ ಬದುಕು ನಾಶ : ಡಾ. ಪೆರ್ಲ

ಸಂಸ್ಕೃತಿ ಮರೆತರೆ ಬದುಕು ನಾಶ : ಡಾ. ಪೆರ್ಲ

ಮಾಈ ಪ್ರಶಸ್ತಿ - 2025 ಪ್ರದಾನ:

ಸಂಸ್ಕೃತಿ ಮರೆತರೆ ಬದುಕು ನಾಶ : ಡಾ. ಪೆರ್ಲ

ಕಲಬುರಗಿ: ಭಾರತೀಯ ಸಂಸ್ಕೃತಿ ಸಂಸ್ಕಾರವನ್ನು ಮರೆತರೆ ಬದುಕು ನಾಶವಾಗುವುದು ಖಚಿತ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಹೇಳಿದರು.

  ಕಲಬುರಗಿಯ ಎವಿ ಮೀಡಿಯಾ ಸೊಲ್ಯೂಷನ್ಸ್ ಸೊಸೈಟಿ ವತಿಯಿಂದ ಕೆಎಚ್ ಬಿ ಗ್ರೀನ್ ಪಾರ್ಕ್ ಕ್ಷೇಮಾಭಿವೃದ್ಧಿ ಸಂಘ ಹಾಗೂ ಎಪಿ ಕ್ರಿಯೇಷನ್ ಕಲಬುರಗಿ ಇವರ ಸಹಯೋಗದಲ್ಲಿ ಫೆ. 9ರಂದು ನಡೆದ ಶಿಕ್ಷಕರಾಗಿದ್ದ ದಿವಂಗತ ಶ್ರೀ ಮಾರುತಿ ಬೊಗಲೆ ಯವರ ಐದನೇ ವರ್ಷದ ಸ್ಮರಣಾರ್ಥ "ಮಾಈ ಪ್ರಶಸ್ತಿ- 2025" ಪ್ರದಾನ ಸಮಾರಂಭದಲ್ಲಿ ಮಾತನಾಡಿ ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಸಂಪ್ರದಾಯ, ಪರಂಪರೆ, ಸಂಸ್ಕಾರವನ್ನು ಮರೆತರೆ ಆದರ್ಶ ಮಕ್ಕಳನ್ನು ಹೊಂದುವುದು ಕಷ್ಟ ಸಾಧ್ಯ. ಎಳೆಯ ಮಕ್ಕಳಲ್ಲಿ ಕೇವಲ ಅಂಕ ತೆಗೆಯುವ ಮಾರ್ಗವನ್ನು ಮಾತ್ರ ಹೇಳಿಕೊಡದೆ ಬದುಕು ಕಟ್ಟಿಕೊಳ್ಳುವ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕೂಡ ಹೇಳಿಕೊಡುವುದು ಇಂದಿನ ತುರ್ತು ಅಗತ್ಯವಾಗಿದೆ. ಪಾಶ್ಚತ್ಯ ಸಂಸ್ಕೃತಿ ಅಳವಡಿಸಿಕೊಂಡರೆ ಭಾರತೀಯ ಕುಟುಂಬ ವ್ಯವಸ್ಥೆಗೆ ಅಪಾಯವಿದ್ದು ವೃದ್ಧಾಶ್ರಮಗಳು ಹೆಚ್ಚಾಗುವ ಪರಿಸ್ಥಿತಿ ಎದುರಾಗುತ್ತದೆ ಮಾತ್ರವಲ್ಲ ಹಣ ಗಳಿಕೆಗಾಗಿ ಮಕ್ಕಳು ವಿದೇಶಕ್ಕೆ ಪಲಾಯನಗೊಂಡು ಹೆತ್ತವರು ಮನೆಯಲ್ಲಿ ಏಕಾಂಗಿತನದ ಬದುಕನ್ನು ಕಾಣುವ ದುಸ್ಥಿತಿ ಎದುರಾಗುತ್ತದೆ. ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವ ಗುರುತರ ಹೊಣೆಯನ್ನು ಹೆತ್ತವರು ಹೊರಬೇಕಾಗಿದೆ ಎಂದು ಹೇಳಿದರು. 

   ಮಾತಾಪಿತರನ್ನು ಗೌರವಿಸುವ ಮಕ್ಕಳಿಗೆ ಸಮಾಜವು ಕೂಡಾ ಗೌರವ ನೀಡುತ್ತದೆ. ಮಾರುತಿ ಬೊಗಲೆ ಯವರು ಹಾಕಿಕೊಟ್ಟ ಆದರ್ಶ ಸಮಾಜಕ್ಕೆ ಪ್ರೇರಣದಾಯಿ ಮತ್ತು ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಹೆಚ್ಚಾದರೆ ಗೌರವ ಸಿಗುತ್ತದೆ ಎಂದ ಮಾಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿದ ಬೀದರ ಗುರುದೇವ ಆಶ್ರಮ ಶ್ರೀ ಸಿದ್ಧಾರೂಢ ಮಠದ ಶ್ರೀ ಗಣೇಶಾನಂದ ಮಹಾಸ್ವಾಮಿಗಳು ನುಡಿದರು.

    ಶಿಕ್ಷಣ, ಸಾಹಿತ್ಯ, ಮಾಧ್ಯಮ ಕ್ಷೇತ್ರದಲ್ಲಿ ದುಡಿದ ಗಣ್ಯರಿಗೆ ಮಾರುತಿ ಬೊಗಲೆ ಅವರ ಹೆಸರಿನಲ್ಲಿ ನೀಡುತ್ತಿರುವ ಮಾಈ ಪ್ರಶಸ್ತಿ ಪ್ರಶಂಸನೀಯ ಕಾರ್ಯ. ಸಮಾಜದಲ್ಲಿ ಸಂಸ್ಕೃತಿಯನ್ನು ಬಿತ್ತುವ ಕೆಲಸ ಈ ಮೂಲಕ ನಡೆಯುತ್ತಿದೆ. ಸಂಸ್ಕಾರ ಕಲಿಸಿದ ತಂದೆ ತಾಯಿಯಿಂದ ಮಕ್ಕಳು ಸಂಸ್ಕೃತಿಯನ್ನು ಬೆಳೆಸಿಕೊಂಡು ಅದೇ ಕಾರ್ಯವನ್ನು

 ಸಮಾಜದಲ್ಲಿ ಬಿತ್ತುತ್ತಿರುವುದಕ್ಕೆ ಬೊಗಲೆ ಕುಟುಂಬ ಸಾಕ್ಷಿಯಾಗಿದೆ ಎಂದು ಅವರು ಶ್ಲಾಘಿಸಿದರು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ಸೋಮಶೇಖರ್ ಎಸ್ ರುಳಿ ಮಾತನಾಡಿ ಸಂಸ್ಕಾರ ಉಳಿದರೆ ಮಾತ್ರ ಆದರ್ಶ ಸಮಾಜ ಸೃಷ್ಟಿಯಾಗುತ್ತದೆ ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಕಲಿಸುವ ಅಗತ್ಯ ಈಗ ಹಿಂದಿಗಿಂತಲೂ ಹೆಚ್ಚಿನ ಅಗತ್ಯವಿದೆ. . ಮಕ್ಕಳಿಗೆ ಸದಭಿರುಚಿಯ ಮಾಧ್ಯಮಗಳ ಬಗ್ಗೆ ಹೆಚ್ಚಿನ ಒಲವು ಮೂಡಬೇಕು. ರೇಡಿಯೋ ಆಲಿಸುವಿಕೆಯಿಂದ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ರೇಡಿಯೋ ಕೇಳುವ ಸಂಸ್ಕೃತಿ ಹೆಚ್ಚಾಗಲಿ ಎಂದರು.

   ಮಾಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಮೂಲಕ ಮಾರುತಿ ಬೊಗಲೆ ಅವರ ಆದರ್ಶದ ಬದುಕನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನವನ್ನು ಅವರ ಮಕ್ಕಳು ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಇದು ನಿರಂತರವಾಗಿ ನಡೆಯಲಿ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಭವಾನಿಸಿಂಗ್ ಠಾಕೂರ್ ಹೇಳಿದರು. ಜೆಸ್ಕಾಂನ ಹುಮನಾಬಾದ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಶಂಕರ್ ಅಡಕಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಂದಗೂಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಶಿವರಾಜ್ ಬಾಗಡೆ ಯವರಿಗೆ ಶಿಕ್ಷಣ ಕ್ಷೇತ್ರದಲ್ಲಿ, ಶರಣಬಸವೇಶ್ವರ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸುಮಂಗಲಾ ಎನ್ ರೆಡ್ಡಿಯವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಯ ಛಾಯಾಗ್ರಾಹಕರಾದ ರಾಜು ಎಸ್ ಕೋಷ್ಠಿ ಅವರಿಗೆ ಮಾಧ್ಯಮ ಕ್ಷೇತ್ರದ ಸೇವೆಗಾಗಿ 2025 ನೇ ಸಾಲಿನ ಮಾಈ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತರಿಗೆ ನಗದು 2 ಸಾವಿರ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ಹಾಗೂ ಶಾಲು ನೀಡಿ ಗೌರವಿಸಲಾಯಿತು. 

ಶ್ರೀಮತಿ ಈರಮ್ಮ ಮಾರುತಿ ಬೊಗಲೆಯಾವರು 2025 ನೇ ಸಾಲಿನ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಕೆಎಚ್‌ಬಿ ಗ್ರೀನ್ ಪಾರ್ಕ್ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷರಾದ ಬಾಲಕೃಷ್ಣ ಕುಲಕರ್ಣಿ ಉಪಸ್ಥಿತರಿದ್ದರು. ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಸಂಜೀವ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರ್ ಜೆ ಮಂಜು ಹಿರೋಳಿ ಕಾರ್ಯಕ್ರಮ ನಿರೂಪಿಸಿದರು. ಎವಿ ಮೀಡಿಯಾ ಸೊಲ್ಯೂಷನ್ಸ್ ಸೊಸೈಟಿಯ ನಿರ್ದೇಶಕರಾದ ರಾಘವೇಂದ್ರ ಬೊಗಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಕುಮಾರ್ ಪಾಟೀಲ್ ಸ್ವಾಗತ ಗೀತೆಯನ್ನು ಹಾಡಿದರು. ಶಿಕ್ಷಕ ಶಿವಕಾಂತ್ ಚಿಮ್ಮ ಸ್ವಾಗತ ಕೋರಿದರು. ಇದೇ ಸಂದರ್ಭದಲ್ಲಿ ಶಿಕ್ಷಕರು ಸೇರಿದಂತೆ ಅನೇಕ ಸಾಧಕರಿಗೆ ಸನ್ಮಾನ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಡಾ. ಮಲ್ಲಿನಾಥ ಎಸ್. ತಳವಾರ್, ಸಶಸ್ತ್ರ ಪೊಲೀಸ್ ಪಡೆಯ ನಿವೃತ್ತ ಎಸ್ಐ ಪುಂಡಲೀಕ ನಾಯಕ್ , ರೂಪ ನಾಯಕ್ , ಶ್ರೀಶೈಲ ಮದಾನಿ, ಶಿವಕುಮಾರ್ ಆಜಾದ್ ಪುರ್, ದತ್ತಾತ್ರೆಯ ಪಾಟೀಲ್, ಜ್ಯೋತಿ ಸಾಗರ್, ಸಂತೋಷ ಬೋಡಾ, ಸಂಗಮೇಶ್ವರ ಸರಡಗಿ, ರಮೇಶ ಕೋರಿಶೆಟ್ಟಿ, ಪೂರ್ಣಿಮಾ ಬೊಗಲೆ, ಮೇಘವೇಂದ್ರ ಬೊಗಲೆ, ಜಗವೇಂದ್ರ ಬೊಗಲೆ, ತ್ಯಾಗವೇಂದ್ರ ಬೊಗಲೆ, ಗಂಗಾ, ಚಾಮುಂಡೇಶ್ವರಿ, ಕೆಹೆಚ್‌ಬಿ ಗ್ರೀನ್ ಪಾರ್ಕ್‌ನ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.