ನರೇಗಲ್ಲ ಹಿರೇಮಠ ಜಾತ್ರಾ ಮಹೋತ್ಸವದಲ್ಲಿ ಶಾಸಕ ಜಿ.ಎಸ್. ಪಾಟೀಲರಿಂದ ಮಠಗಳ ಸಂಸ್ಕೃತಿ ಸ್ತೋತ್ರ
ನರೇಗಲ್ಲ ಹಿರೇಮಠ ಜಾತ್ರಾ ಮಹೋತ್ಸವದಲ್ಲಿ ಶಾಸಕ ಜಿ.ಎಸ್. ಪಾಟೀಲರಿಂದ ಮಠಗಳ ಸಂಸ್ಕೃತಿ ಸ್ತೋತ್ರ
ಗಜೇಂದ್ರಗಡ, ನರೇಗಲ್ಲ:ನರೇಗಲ್ಲ ಪಟ್ಟಣದ ಹಿರೇಮಠದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಭಾಗವಾಗಿ ಏರ್ಪಡಿಸಿದ್ದ ಶ್ರೀ ವೀರಭದ್ರೇಶ್ವರ ಪುರಾಣದ 7ನೇ ದಿನದ ಸಮಾರಂಭದಲ್ಲಿ ಭಾಗವಹಿಸಿದ ರೋಣ ಶಾಸಕರಾದ ಜಿ.ಎಸ್. ಪಾಟೀಲ ಅವರು ಮಠಗಳ ಸಂಸ್ಕೃತಿ, ಗುರುಪರಂಪರೆಯ ಮಾರ್ಗದರ್ಶನ ಹಾಗೂ ಭಕ್ತರ ಅಧ್ಯಾತ್ಮಿಕ ಜೀವನದಲ್ಲಿ ಮಠಾಧೀಶರ ದಾರಿ ತೋರಿಕೆಯ ಬಗ್ಗೆ ಪ್ರಶಂಸಿಸಿದರು.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, “ಮಠಮಾನ್ಯಗಳ ಸಂಸ್ಕೃತಿ ನಿನ್ನೆ-ಇಂದು ಹುಟ್ಟಿದುದಲ್ಲ; ಇದು ಪುರಾತನ ಕಾಲದಿಂದ ಸಾಗಿಬಂದ ಧಾರ್ಮಿಕ, ಆದ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಪವಿತ್ರ ಬಿರುಗನ್ನಡಿಯಾಗಿದೆ. ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶ್ರೀಗಳು 2002ರಿಂದ ಪೀಠಾಧ್ಯಕ್ಷರಾಗಿ ಸೇವೆ ಮಾಡುವಾಗಿನಿಂದ ಮಠದ ಜೀರ್ಣೋದ್ಧಾರ, ಅಭಿವೃದ್ಧಿ ಮತ್ತು ಗುರು ಪರಂಪರೆಯ ಕಾರ್ಯಗಳನ್ನು ಇಮ್ಮಡಿಗೊಳಿಸುವಲ್ಲಿ ಶ್ರಮಿಸಿದ್ದಾರೆ. ಶರಣ ಸಂಸ್ಕೃತಿಯ ಪ್ರಸಾರ ಹಾಗೂ ಭಕ್ತರ ಒಗ್ಗಟ್ಟು ಹೆಚ್ಚಿಸುವಲ್ಲಿ ಅವರ ಸೇವೆ ಶ್ಲಾಘನೀಯ,” ಎಂದು ಹೇಳಿದರು.
ಇಂತಹ ಪೂಜ್ಯರನ್ನು ಪಡೆದಿರುವ ನರೇಗಲ್ಲದ ಜನತೆ ಧನ್ಯರು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಷಯ ಪಾಟೀಲ ಅವರು, “ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯರು ಹತ್ತಾರು ವರ್ಷಗಳಿಂದ ಭಕ್ತರ ಸದಿಚ್ಛೆಯಂತೆ ಮಠಮಾನ್ಯಗಳಿಗೆ ಸಂಚರಿಸಿ ಪವಿತ್ರ ಗ್ರಂಥಗಳ ಸಾರವನ್ನು ತಿಳಿಸಿಬರುತ್ತಿದ್ದಾರೆ. ನರೇಗಲ್ಲದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಅವರು ಆರಂಭಿಸಿರುವ ಶಿಕ್ಷಣ ಸಂಸ್ಥೆ ನಿಜವಾದ ಅಕ್ಷರ ಕ್ರಾಂತಿಗೆ ದಾರಿ ಮಾಡಿದೆ,” ಎಂದರು.
ಮತ್ತಷ್ಟು ಅತಿಥಿಗಳಾಗಿ ಮೈಲಾರಪ್ಪ ಚಳ್ಳಮರದ, ಖಾದರ್ ಭಾಷಾ ಹೂಲಗೆರಿ ಮಾತನಾಡಿದರು. ಅಂಜುಮನ್ ಇಸ್ಲಾಂ ಸಮಿತಿ ಅಧ್ಯಕ್ಷ ಫಕ್ರುಸಾಬ್ ರೇವಡಿಗಾರ, ಅಲ್ಲಾಭಕ್ಷಿ ನಧಾಫ್, ಶೇಖಪ್ಪ ಜುಟ್ಲ ಉಪಸ್ಥಿತರಿದ್ದರು.
ನಿ.ಶಿಕ್ಷಕ ಎಂ.ಎಸ್. ಧಡೇಸೂರಮಠ ಸ್ವಾಗತಿಸಿದರು. ಮುತ್ತಣ್ಣ ಹಡಪದ ನಿರೂಪಣೆ ಮಾಡಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಯಿತು.
ನರೇಗಲ್ಲ ಹಿರೇಮಠದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಪುರಾಣ ಸಮಾರಂಭದಲ್ಲಿ ಶಾಸಕ ಜಿ.ಎಸ್. ಪಾಟೀಲರನ್ನು ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯರು ಸನ್ಮಾನಿಸಿದರು.
— ವರದಿ: ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ, ಕಲ್ಯಾಣ ಕಹಳೆ ಗದಗ
