ಪ್ರೊ.ಸೂಗಯ್ಯ ಹಿರೇಮಠ ಗೌರವ ಪ್ರಶಸ್ತಿಗೆ : ಪ್ರೊ ಶೋಭಾದೇವಿ ಚಕ್ಕಿ ಸೇಡಂ ಆಯ್ಕೆ
ಪ್ರೊ.ಸೂಗಯ್ಯ ಹಿರೇಮಠ ಗೌರವ ಪ್ರಶಸ್ತಿಗೆ : ಪ್ರೊ ಶೋಭಾದೇವಿ ಚಕ್ಕಿ ಸೇಡಂ ಆಯ್ಕೆ
ಕಲಬುರಗಿ : ಪ್ರೊ. ಸೂಗಯ್ಯ ಹಿರೇಮಠ ಸಾಹಿತ್ಯ ಹಾಗೂ ಸಾಂಸ್ಕೃತಿಕ ಟ್ರಸ್ಟ್ ಕಲಬುರಗಿ ಇವರು ಪ್ರೊ ಸೂಗಯ್ಯ ಹಿರೇಮಠ ಇವರ ಸ್ಮರಣಾರ್ಥ ಕೊಡಲ್ಪಡುವ 2024 ನೇ ಸಾಲಿನ ರಾಜ್ಯ ಮಟ್ಟದ ಗೌರವ ಪ್ರಶಸ್ತಿಗೆ ಕಲಬುರಗಿಯ ಜಿಲ್ಲೆ ಸೇಡಂ ತಾಲೂಕಿನ ಸಾಹಿತಿ ಪ್ರೊ.ಶೋಭಾದೇವಿ ಚಕ್ಕಿ ಆಯ್ಕೆಯಾಗಿದ್ದಾರೆ .
ಲೇಖಕಿ ಪ್ರೊ. ಶೋಭಾದೇವಿ ಚೆಕ್ಕಿ ಅವರ ತಂದೆ ಪ್ರೊ. ಬಸವಣ್ಣೆಪ್ಪ ಚೆಕ್ಕಿ, ತಾಯಿ ಪ್ರೊ. ಪಾರ್ವತಿ ಚೆಕ್ಕಿ.(ನಿವೃತ್ತ ದಂಪತಿ). ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿ (ಸಮಾಜಶಾಸ್ತ್ರ) ವರೆಗೂ ಕಲಬುರಗಿಯಲ್ಲೇ ಶಿಕ್ಷಣ. ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಎಂ.ಫಿಲ್ ಪದವಿ ಪೂರ್ಣಗೊಳಿಸಿದರು, ಸೇಡಂನ ನೃಪತುಂಗ ಪದವಿ ಮಹಾವಿದ್ಯಾಲಯದಲ್ಲಿ ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥೆಯಾಗಿ ೩೮ ವರ್ಷ ಸೇವೆ ಸಲ್ಲಿಸಿದ್ದಾರೆ.ಸೇಡಂ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಶಾಂಭವಿ ಮಹಿಳಾ ಸಂಘದ ಅಧ್ಯಕ್ಷರು, ತಾಲೂಕು ಜಾನಪದ ಪರಿಷತ್ತು ಸೇಡಂನ ಸಮ್ಮೇಳನದ ಅಧ್ಯಕ್ಷರು, ರೋವರ್‍ಸ್ ಮತ್ತು ರೇಂಜರ್‍ಸ್ ಲೀಡರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇವರು ಸಮಾಜಶಾಸ್ತ್ರ ಕುರಿತು ಬರೆದ ಕೃತಿಗಳು ಗುಲಬರ್ಗಾ ವಿಶ್ವವಿದ್ಯಾಲಯ, ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿ.ವಿ. ಹಾಗೂ ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗಾಗಿ ಪಠ್ಯ ಪುಸ್ತಕಗಳಾಗಿವೆ. ಜಾನಪದ ಸಾಹಿತ್ಯ,ಮಕ್ಕಳ ಸಾಹಿತ್ಯ,ಮಹಿಳಾ ಸಾಹಿತ್ಯ,ಚಿಂತನ ಸಾಹಿತ್ಯ ಕುರಿತಾಗಿ ೩೫ ಕ್ಕೂ ಮೇಲ್ಪಟ್ಟು ಕೃತೀಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕವನ್ನೂ ಶ್ರೀಮಂತಗೊಳಿಸಿದ್ದಾರೆ. ಇವರ ಸೇವೆಗೆ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
ಇವರ ಶಿಕ್ಷಣ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ಸದಾ ತೊಡಗಿಸಿಕೊಂಡಿರುವ ಇವರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಜ. 24 ರಂದು ಬೆಳಿಗ್ಗೆ 11 ಗಂಟೆಗೆ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹಿರೇಮಠ ಸಂಸ್ಥಾನ ಹಾರಕೂಡ ಮಠದಲ್ಲಿ ನಡೆಯಲಿದೆ.