ದಾಸ ವಿಜಯ ಸಮ್ಮಿಲನದಿಂದ ಶ್ರೀ ವಿಜಯದಾಸರ ಆರಾಧನಾ ಮಹೋತ್ಸವ

ದಾಸ ವಿಜಯ ಸಮ್ಮಿಲನದಿಂದ ಶ್ರೀ ವಿಜಯದಾಸರ ಆರಾಧನಾ ಮಹೋತ್ಸವ

ದಾಸ ವಿಜಯ ಸಮ್ಮಿಲನದಿಂದ ಶ್ರೀ ವಿಜಯದಾಸರ ಆರಾಧನಾ ಮಹೋತ್ಸವ

ಲಗ್ಗೆರೆ: ದಾಸ ವಿಜಯ ಸಮ್ಮಿಲನ ಮುಖಪುಟದ ಸಮೂಹದ ವತಿಯಿಂದ ಲಗ್ಗೆರೆಯ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಮಠ, ಶ್ರೀ ಸತ್ಯಬೋಧ ತೀರ್ಥರು ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಸನ್ನಿಧಾನದಲ್ಲಿ ಶ್ರೀ ವಿಜಯದಾಸರ ಆರಾಧನಾ ಮಹೋತ್ಸವವನ್ನು ಭಕ್ತಿಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಖ್ಯಾತ ಹರಿದಾಸ ವಿದ್ವಾಂಸರಾದ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರು ಶ್ರೀ ವಿಜಯದಾಸರ ಜೀವನ, ಕೀರ್ತನೆಗಳು, ಸುಳಾದಿಗಳು, ಅವರ ರಚನೆಗಳಲ್ಲಿ ವ್ಯಕ್ತವಾಗಿರುವ ಆಧ್ಯಾತ್ಮಿಕ ತತ್ತ್ವಗಳು ಹಾಗೂ ಅವರಿಂದ ಪೋಷಣೆ ಪಡೆದ ಅನೇಕ ದಾಸರ ಸಾಧನೆಯ ಕುರಿತಂತೆ ಸುದೀರ್ಘ ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾದ ಟಿಟಿಡಿ ಹಿಂದೂಧರ್ಮ ಪ್ರಚಾರ ಪರಿಷತ್‌ನ ಆಯೋಜಕರಾದ ಡಾ. ಪಿ. ಭುಜಂಗರಾವ್ ಮಾತನಾಡಿ, “ಸನಾತನ ಧರ್ಮ ಉಳಿದು ಶ್ರೀಮಂತವಾಗಿ ಬೆಳೆಯಬೇಕಾದರೆ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ಮುಂದಿನ ಪೀಳಿಗೆಗೆ ನಾವು ನೀಡಬಹುದಾದ ಅತ್ಯಮೂಲ್ಯ ಕೊಡುಗೆ ಇದೇ,” ಎಂದು ಹೇಳಿದರು.

ಡಾ. ರಾಜಲಕ್ಷ್ಮೀ ಪಾರ್ಥಸಾರಥಿಯವರು ಸಂಘಟನೆಯ ಶಕ್ತಿ ಮತ್ತು ಅದರ ಸಮಾಜಮುಖಿ ಪಾತ್ರವನ್ನು ವಿವರಿಸಿದರು. ಹಯವದನ ವಿದ್ಯಾಲಯದ ಕೀರ್ತನಾ ಪ್ರವೀಣೆಯಾದ ವೇದವತಿ ರವಿಚಂದ್ರರವರು ದಾಸ ಪರಂಪರೆ, ಯತಿಗಳು ಮತ್ತು ಇಂದಿನ ಮುಖಪುಟದ ಸಮೂಹಗಳ ನಿಷ್ಠೆಯ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶ್ರೀಮಠದ ಕಾರ್ಯದರ್ಶಿ ಶ್ರೀ ಶ್ಯಾಮಸುಂದರ್, ಹಯವದನ ವಿದ್ಯಾಲಯದ ಸಂಸ್ಥಾಪಕ ಶ್ರೀ ಗೋಪಾಲಕೃಷ್ಣ ವರ್ಣ, ಮತ್ತು ದಾಸ ವಿಜಯ ಸಮ್ಮಿಲನದ ಸಂಸ್ಥಾಪಕ ಶ್ರೀ ಸುಬ್ರಹ್ಮಣ್ಯ ಆಚಾರ್ಯ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದಾಸ ವಿಜಯ ಸಮ್ಮಿಲನದ ಸದಸ್ಯರಿಂದ ವಿಜಯದಾಸರ ಕೀರ್ತನೆಗಳ ಗಾಯನ ನಡೆಯಿತು. ಕುಮಾರಿ ಹೆಚ್.ಎಸ್. ಶ್ರೀ ಗೌರಿ ಆಚಾರ್ಯ ಮತ್ತು ಕುಮಾರಿ ಹೆಚ್.ಎಸ್. ಶ್ರೀನಿಧಿ ಆಚಾರ್ಯ ಗಾಯನವನ್ನು ನಡೆಸಿಕೊಟ್ಟರೆ, ರಾಧಾ ಕೇಶವ್ ಹೆಬ್ಬಾರ್ ನಿರೂಪಣೆ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಕೊನೆಯಲ್ಲಿ ದಾಸ ವಿಜಯ ಸಮ್ಮಿಲನದ ಅಡ್ಮಿನ್ ಪದ್ಮಾ ಎಸ್. ಆಚಾರ್ಯ ವಂದನಾರ್ಪಣೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಭಜನೆ ಹಾಡುಗಳ ಪುಸ್ತಕಕ್ಕೆ ಸಹಕರಿಸಿದವರಿಗೆ ಗೌರವ ಸಮರ್ಪಿಸಲಾಯಿತು. ಅಲ್ಲದೆ, ಮುಖಪುಟದ ಮತ್ತೊಂದು ಸಮೂಹವಾದ ದಾಸನಮನ ಆಯೋಜಿಸಿದ್ದ ದೀಪಾವಳಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.