ಮಹಾಮನೆ- ಆಶಯ ಪ್ರಧಾನ ನಾಟಕವೇ ಹೊರತು ವ್ಯಕ್ತಿ ಪ್ರಧಾನ ನಾಟಕವಲ್ಲ : ಅಪ್ಪಗೆರೆ ಸೋಮಶೇಖರ ಅಭಿಮತ

ಮಹಾಮನೆ- ಆಶಯ ಪ್ರಧಾನ ನಾಟಕವೇ ಹೊರತು ವ್ಯಕ್ತಿ ಪ್ರಧಾನ ನಾಟಕವಲ್ಲ : ಅಪ್ಪಗೆರೆ ಸೋಮಶೇಖರ ಅಭಿಮತ

ಮಹಾಮನೆ- ಆಶಯ ಪ್ರಧಾನ ನಾಟಕವೇ ಹೊರತು ವ್ಯಕ್ತಿ ಪ್ರಧಾನ ನಾಟಕವಲ್ಲ ಅಪ್ಪಗೆರೆ ಸೋಮಶೇಖರ ಅಭಿಮತ.

ಕಲಬುರಗಿ: ಕಲ್ಯಾಣದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ, ಅಲ್ಲಿ ಶರಣರು ಮಂಡಿಸಿದ ಚಿಂತನೆಗಳು ಮತ್ತು ವಚನ ಸಾಹಿತ್ಯದ ಒಟ್ಟು ಮೌಲ್ಯಗಳನ್ನು ಆಧಾರವಾಗಿಸಿಕೊಂಡು ರೂಪುಗೊಂಡ ಎಸ್. ಜಿ. ಸಿದ್ಧರಾಮಯ್ಯನವರ ಮಹಾಮನೆ ನಾಟಕವು ಅರ್ಥಪೂರ್ಣ ಸಂದೇಶಗಳನ್ನು ಹೊತ್ತು ತರುತ್ತದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಅಪ್ಪಗೆರೆ ಸೋಮಶೇಖರ ಅವರು ಅಭಿಪ್ರಾಯಪಟ್ಟರು. ಇದೊಂದು ವ್ಯಕ್ತಿ ಪ್ರಧಾನ ನಾಟಕವಾಗದೆ, ಆಶಯ ಮತ್ತು ವಿಚಾರ ಪ್ರಧಾನ ನಾಟಕವಾಗಿದೆ‌ ಎಂದರು.

ಕಲಬುರಗಿ ರಂಗಾಯಣದಲ್ಲಿ ಎಸ್ ಜಿ ಸಿದ್ಧರಾಮಯ್ಯನವರ 'ಮಹಾಮನೆ ನಾಟಕ' ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು. 

ನಾಟಕದ ಆರಂಭವೇ “ಮಾತಾಡು, ಮಾತಾಡು ಲಿಂಗವೇ” ಎಂಬ ಮಹದೇಶ್ವರನ ಸಿಸುಮಕ್ಕಳಾದ ನೀಲಗಾರರ ಪದಗಳಿಂದ ಸಾಗುತ್ತದೆ. ಇದು ಕಟ್ಟುಪಾಡುಗಳಿಂದ ಮುಕ್ತವಾದ ಬಸವಾದಿ ಶರಣರ ತತ್ವವನ್ನು ಪ್ರತಿಬಿಂಬಿಸುತ್ತದೆ. ಗುಡಿಗಳಿಗೆ ಹೋಗಲಾರದ, ದೇವರನ್ನು ಮುಟ್ಟಲಾರದ ಗುಡ್ಡರು ಜಾತಿ ವ್ಯವಸ್ಥೆಯ ವಿರುದ್ಧ ಎತ್ತಿದ ತಾತ್ವಿಕ ಪ್ರಶ್ನೆಗಳನ್ನು ಎತ್ತಿ ಹಿಡಿಯುವ ಮೂಲಕ, ಬಹುತ್ವದ ಸಮಸಮಾಜದ ವೈವಿಧ್ಯತೆಗಳನ್ನು ನಾಟಕವು ಧೈರ್ಯವಾಗಿ ತೆರೆದಿಟ್ಟಿದೆ. ಬಹುತ್ವ ಭಾರತ ತನ್ನ ಮಾತನ್ನು ಕಳೆದುಕೊಂಡ ಹೊತ್ತಲ್ಲಿ ಎಸ್.ಜಿ. ಎಸ್. ಅವರ ಈ ನಾಟಕ ಮಾತಾಡು ಮಾತಾಡು ಎಂದು ಜನಸಮುದಾಯವನ್ನು ಬಡಿದೆಬ್ಬಿಸುವ ಕೆಲಸವನ್ನು ಮಾಡುತ್ತಿದೆ. ಆ ಮೂಲಕ ನಾಟಕಕಾರರು ನಮ್ಮೆಲ್ಲರನ್ನು ಕಲ್ಯಾಣಕ್ಕೆ ಕೊಂಡೊಯ್ಯುವ ಹಾಗೂ ಕಲ್ಯಾಣ ಕ್ರಾಂತಿಯ ಆಶಯವನ್ನು ವರ್ತಮಾನಗೊಳಿಸುವ ಕೆಲಸ ಮಾಡಿದ್ದಾರೆ‌. ಈ ಪ್ರಮೇಯ ವರ್ತಮಾನದ ಜಾತಿ ಸಂಕೀರ್ಣತೆಯನ್ನು ಒಡೆಯುವ ಕೆಲಸ ಮಾಡುತ್ತದೆ. ವಚನ ಚಳುವಳಿಯ ಹಿಂದಣ ಚರಿತ್ರೆಯ ನೆರಳಿನಲ್ಲಿ ಇಂದು ಭಾರತ ಮತ್ತೆ ಮಾತಾಡಬೇಕಾದ ಅವಶ್ಯಕತೆಯಿದೆ ಎಂಬ ಸಂದೇಶವನ್ನು ನಾಟಕ ಸಾರುತ್ತದೆ ಎಂದರು. “ಗುರುವಿಲ್ಲದ ಅರಿವು, ಅರಿವೇ?” ಎಂಬ ಪ್ರಶ್ನೆಗೆ “ಅರಿವೇ ಗುರು” ಎಂಬ ಉತ್ತರವನ್ನು ನಾಟಕ ನೀಡುತ್ತದೆ. ಅರ್ಥವಿಲ್ಲದ ಮಾತು ಅರಿವಾಗದು ಎಂಬ ತತ್ವದ ಮೂಲಕ, ವಚನವೆಂದರೆ ಪ್ರಮಾಣ ಮಾಡಿ ಹೇಳುವ ಸತ್ಯದ ಮಾತು ಎಂದು ಸ್ಪಷ್ಟಪಡಿಸಲಾಗಿದೆ. ಸಾಮಾನ್ಯ ಮನುಷ್ಯ ಲಿಂಗ ಕಟ್ಟಿಕೊಳ್ಳಲು ಇರುವ ನಿಯಮಗಳ ಹಿಂದೆ ಜಾತ್ಯಾತೀತತೆ, ಸರ್ವರಲ್ಲೂ ದಯೆ, ಗರ್ವರಹಿತ ಜೀವನ, ಗುಡಿ ಗುಂಡಾರ ಬಿಟ್ಟು ಇಷ್ಟಲಿಂಗ ಕಟ್ಟಿಕೊಳ್ಳಲು ಮುಕ್ತ ಎಂಬ ಮೌಲ್ಯಗಳಿರುವುದನ್ನು ನಾಟಕ ಮನಗಾಣಿಸುತ್ತದೆ ಎಂದರು. ಒಟ್ಟಾರೆ *ಮಹಾಮನೆ* ನಾಟಕವು ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಶರಣರು ಕೂಡಿ ಸಂವಾದದ ಮೂಲಕ ಕಟ್ಟಿಕೊಂಡ ವಚನ ಸಾಹಿತ್ಯ, ಜಾತ್ಯಾತೀತ ಚಿಂತನೆ, ಪುಣ್ಯಸ್ತ್ರೀಯರಿಗೆ ನೀಡಿದ ಗೌರವಗಳೊಂದಿಗೆ ಇಂದಿನ ಸಮಾಜದ ಮನುಷ್ಯನ ವಿಚಾರಗಳು ಹಾಗೂ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಾತ್ಮಕ ಮೌಲ್ಯಗಳನ್ನು ಸಮಗ್ರವಾಗಿ ಒಳಗೊಂಡಿದೆ ಎಂದು ಅಭಿಪ್ರಾಯಪಟ್ಟರು.

ಬಹುಭಾಷಾ ಅನುವಾದಕರಾದ ಬೋಡೆ ರಿಯಾಜ್ ಅಹ್ಮದ್ ಅವರು ಮಾತನಾಡುತ್ತಾ, ನನ್ನಿಡಿ ಬದುಕು ಲಿಂಗಾಯತ ಮತ್ತು ದಲಿತ ಚಿಂತನೆಯೊಂದಿಗೆ ಬೆಸೆದುಕೊಂಡಿದೆ. ಆದರೆ ವರ್ತಮಾನದ ಲಿಂಗಾಯತ ಸಮಾಜ ಶರಣ ಚಿಂತನೆಗೆ ವಿರುದ್ದವಾದ ದಿಕ್ಕಿನಲ್ಲಿ ವರ್ತಿಸುತ್ತಿರುವ ರೀತಿ ನನಗೆ ವೈಯಕ್ತಿಕವಾಗಿ ಬಹಳ ಆಘಾತವನ್ನುಂಟುಮಾಡಿದೆ ಎಂದರು. ಅವರಿಗಿರುವ ಹಿಂದಣ ಚರಿತ್ರೆಯ ಅರಿವು ಅವರ ಮುಂದಣ ಬದುಕನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ. ಬಸವಣ್ಣನವರನ್ನು ನಾವು ಜಗಜ್ಯೋತಿ ಎಂದು ಕರೆದರೂ, ಅವರನ್ನು ನಾವಿನ್ನೂ ಕರ್ನಾಟಕ ಆಂಧ್ರ ಮತ್ತು ಮಹಾರಾಷ್ಟ್ರದ ಆಚೆಗೆ ಕೊಂಡೊಯ್ಯುವಲ್ಲಿ ಸೋತಿದ್ದೇವೆ ಎಂದರು.

ಗೌರವ ಉಪಸ್ಥಿತರಾಗಿ ಆಗಮಿಸಿದ್ದ ಮಹಾಮನೆ ನಾಟಕ ರಚನಾಕಾರರಾದ ಪ್ರೊ. ಎಸ್. ಜಿ. ಸಿದ್ದರಾಮಯ್ಯ ನವರು ಸಂವಾದಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ ನಮಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆಯೇ ಹೊರತು, ಸಾಂಸ್ಕೃತಿಕ ಸ್ವಾತಂತ್ರ್ಯ ಸಿಕ್ಕಿಲ್ಲವೆಂದು, ವರ್ತಮಾನದ ಪ್ರತಿಯೊಂದು ಸಮುದಾಯಗಳು ಬ್ರಾಹ್ಮಣ್ಯದ ಸೊಕ್ಕನ್ನು ತಮ್ಮ ಹೆಗಲಿಗೆ ಹಾಕಿಕೊಂಡಂತೆ ಬದುಕುತ್ತಿವೆ ಎಂದು ಹೇಳಿದರು.

ವೇದಿಕೆ ಮೇಲೆ ಬಸವರಾಜ ಕೊನೇಕ, ಮನೋಜಕುಮಾರ ಗುದ್ದಿ, ಬೋಡೆ ರಿಯಾಜ್ ಅಹ್ಮದ್, ರಂಗಾಯಣದ ನಿರ್ದೇಶಕಿ ಸುಜಾತ ಜಂಗಮಶೆಟ್ಟಿ ಇತರರಿದ್ದರು. ಸಂವಾದಕರಾಗಿ ಡಾ.ಎಂ.ಬಿ. ಕಟ್ಟಿ, ಡಾ‌.ಸಂಗನಗೌಡ ಹಿರೇಗೌಡ, ಡಾ.ಚಿದಾನಂದ ಚಿಕ್ಕಮಠ, ಶರಣಗೌಡ ಪಾಟೀಲ ಪಾಳಾ, ಪ್ರೊ. ಶಿವಗಂಗಾ ರುಮ್ಮಾ, ಡಾ. ಬಸವರಾಜ ಭಾಗಾ, ಪ್ರೊ. ಚಂದ್ರಶೇಖರ ಬಿರಾದಾರ, ಚಿ.ಸಿ.ಲಿಂಗಣ್ಣ, ಬಸವರಾಜ ಹೂಗಾರ, ಸದಾನಂದ ಪೆರ್ಲ ಮುಂತಾದವರು ಆಗಮಿಸಿದ್ದರು..

ಮಿಸಲಾತಿಗಳಿಗೆ ಮೇಲ್ವರ್ಗದವರು  ತೊಡಕು ಮಾಡುತ್ತಿರುವುದು ದುಃಖಕರ. ಬಸವಣ್ಣನವರ ವಿಚಾರಗಳು ಕೇವಲ ಭಾಷಣಗಳಿಗೆ ಸೀಮಿತವಾಗದೆ, ನಿಜ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ನಿಜವಾದ ಪರಿವರ್ತನೆ ಸಾಧ್ಯ”

ಪತ್ರಕರ್ತ ಮನೋಜಕುಮಾರ ಗುದ್ದಿ 

-ಸುಜಾತ ಜಂಗಮಶೇಟ್ಟಿ, ನಿರ್ದೇಶಕಿ ಕಲಬುರಗಿ ರಂಗಾಯಣ