ಹುತಾತ್ಮ ಸೊಲ್ಲಾಪುರದ ಧನಶೆಟ್ಟಿ ಮಲ್ಲಪ್ಪನವರು

ಹುತಾತ್ಮ ಸೊಲ್ಲಾಪುರದ ಧನಶೆಟ್ಟಿ ಮಲ್ಲಪ್ಪನವರು
ಕಂಡ ಭಕ್ತರಿಗೆ ಕೈಮುಗಿವಾತನೇ ಭಕ್ತ, ಮೃದು ವಚನವೇ ಸಕಲ ಜಪಂಗಳಯ್ಯಾ, ಮೃದು ವಚನವೇ ಸಕಲ ತಪಂಗಳಯ್ಯಾ, ಸದುವಿನಯವೇ ಸದಾಶಿವನೊಲುಮೆಯಯ್ಯ ಎನ್ನುವ ಶರಣರ ವಿಚಾರಗಳನ್ನು ಮೈಗೂಡಿಸಿಕೊಂಡ ಹಿರಿಯರಾದ ಅಪ್ಪಾರಾವ ಅಕ್ಕೋಣೆ ಅವರಿಗೆ ಅವರೇ ಸಾಟಿ. ಅಪರೂಪದಲ್ಲಿ ಅಪರೂಪದ ವ್ಯಕ್ತಿತ್ವ ಇವರದು. ನಿಷ್ಠಾವಂತ ಆಡಳಿತ ಅಧಿಕಾರಿಯಾಗಿ, ಒಳ್ಳೆಯ ಮಾರ್ಗದರ್ಶಕರಾಗಿ, ಸಾಮಾಜಿಕ ಹಿತಚಿಂತಕರಾಗಿ, ಅಷ್ಟೇ ಅಲ್ಲದೆ ಒಳ್ಳೆಯ ಸಂಘಟಕರಾಗಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಕೊಂಡು ಬಂದಿರುವುದರಿಂದಲೇ ಎಲ್ಲರ ಪ್ರೀತಿ ಹಾಗೂ ಮೆಚ್ಚುಗೆಗೆ ಪಾತ್ರರಾಗಿದ್ದುದಲ್ಲದೆ ಹುಟ್ಟಿದ ಊರಿಗೆ ಕೀರ್ತಿ ತಂದು, ನಮ್ಮಂತಹ ಅನೇಕ ಬರಹಗಾರರಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಬರೆಯಲು ಹಚ್ಚಿದವರು. ಅವರು ಬರೆದಿದ್ದಕ್ಕಿಂತ ಬರೆಸಿದ್ದೆ ಹೆಚ್ಚು.
ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ತಿಯವಾಗಿ ಭಾಗವಹಿಸಿ ಅವುಗಳಿಗೆ ಉತ್ತಮ ಕಾಯಕಲ್ಪ ಒದಗಿಸಿ ಆಗೊಮ್ಮೆ-ಈಗೊಮ್ಮೆ ತಮ್ಮನ್ನು ತಾವು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರ ಪ್ರತಿಫಲವೇ "ಸೊಲ್ಲಾಪುರದ ಧನಶೆಟ್ಟಿ ಮಲ್ಲಪ್ಪ" ಎನ್ನುವ ಕೃತಿ. ಕೃತಿಯಲ್ಲಿ ಶಿವಯೋಗಿ ಸಿದ್ದರಾಮನ ಪರಮಭಕ್ತರಾದ ಸ್ವತಂತ್ರ ಸೇನಾನಿ ಧನಶೆಟ್ಟಿ ಮಲ್ಲಪ್ಪನವರು ಭಾರತದ ಸ್ವಾತಂತ್ರ್ಯ ಆಂದೋಲನದಲ್ಲಿ ಭಗತಸಿಂಗ್ ಸಾದೃಶ್ಯ ಪಾತ್ರವಹಿಸಿದರು. ಸಮಯ ಭಕ್ತಿ - ರಾಷ್ಟ್ರಭಕ್ತಿಗಳ ಸಮನ್ವಯಕ್ಕೆ ಪರಮಾದರ್ಶವಾದ ಶ್ರೀಯುತರು ಸೊಲ್ಲಾಪುರ ಪ್ರದೇಶದಲ್ಲಿ ಕೈಗೆತ್ತಿಕೊಂಡ ಹೋರಾಟ ಭಾರತ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದ ಮಾಹಿತಿಯನ್ನು ಶ್ರೀ ಅಪ್ಪಾರಾವ ಅಕ್ಕೋಣೆ ಸರಳವಾದ ಭಾಷೆಯಲ್ಲಿ, ಇಂದಿನ ಪೀಳಿಗೆಗೆ ಪುಸ್ತಕರೂಪದಲ್ಲಿ ನೀಡಿದ್ದು ಶ್ಲಾಘನೀಯ. ಅವರ ಅಪಾರವಾದ ಅನುಭವದ ಹಿನ್ನೆಲೆಯಲ್ಲಿ ಇನ್ನಷ್ಟು ಪುಸ್ತಕಗಳು ಹೊರಬರಲಿ ಎಂದು ಆಶಿಸುತ್ತೇನೆ.
ಕಮಲಾಪುರ ತಾಲೂಕಿನ ಡೊoಗರಗಾoವನ ಮಾತೋಶ್ರೀ ವಡ್ಡನಕೇರಿ ಪ್ರತಿಷ್ಠಾನದಿಂದ 2002ರಲ್ಲಿ ಪ್ರಕಟವಾದ ಈ ಕೃತಿಯಲ್ಲಿ 72 ಪುಟಗಳಿದ್ದು 80 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.
ಡಾ. ಶರಣಬಸಪ್ಪ ವಡ್ಡನಕೇರಿ