ತಾತ (ನಾಟಕ)

ತಾತ (ನಾಟಕ)

ತಾತ (ನಾಟಕ) ರಾಜೇಂದ್ರ ಝಳಕಿ 

ಅವಿಭಕ್ತ ಕುಟುಂಬದ ಅಜ್ಜ/ತಾತ ಮಕ್ಕಳಿಗೆ ಕಥೆ ಹೇಳುವ ಮೂಲಕ ಮಕ್ಕಳಿಗೆ ನೈತಿಕ ಶಿಕ್ಷಣ ನೀಡಿ ಅವರನ್ನು ಉತ್ತಮ ನಾಗರಿಕರಾಗಿಸುವ ಪರಂಪರೆಯನ್ನು ರಾಜೇಂದ್ರ ಝಳಕಿಯವರು ನಾಟಕಕ್ಕೆ ಅಳವಡಿಸಿ ತುಂಬಾ ಸ್ವಾರಸ್ಯಕರವಾಗಿ ಹಾಗೂ ಹಲವು ವಿವಿಧ ಧರ್ಮದ ಮಕ್ಕಳ ಪಾತ್ರಗಳ ಮೂಲಕ ಸೌಹಾರ್ದಯುತ, ಸದೃಡ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿರುವುದು ಇವರ ಪ್ರಗತಿಪರ ಮನಸ್ಥಿತಿಗೆ ಉದಾಹರಣೆ ಆಗಿದೆ. ಮನಸುಗಳನ್ನು ಒಡೆದಾಳುವ ಪ್ರಸ್ತುತ ಭಾರತದಂತಹ ಸಂದರ್ಭದಲ್ಲಿ ಇವರ ಈ ಪ್ರಯತ್ನ ಅತ್ಯಂತ ಶ್ಲಾಘನೀಯ ಅಷ್ಟೇ ಸಾಂದರ್ಭಿಕವೂ ಆಗಿದೆ.

ಮಕ್ಕಳ ಮನಸ್ಸು ಬೆಣ್ಣೆಯಷ್ಟು ಮೃದು. ಶಾಲೆ ಓದುವ ಮಕ್ಕಳ ಮನಸ್ಸಿನಲ್ಲಿ ಶಿಕ್ಷಕರು ಹಾಗೂ ಪಾಲಕರು ಹಾಗೂ ಮನೆಯಲ್ಲಿ ಇರೋ ಅಜ್ಜ ಅಜ್ಜಿಯರು ಹರಿಶ್ಚಂದ್ರ, ಗಾಂಧಿ, ಅಂಬೇಡ್ಕರ್, ಬುದ್ಧ, ಬಸವರಂತಹ ಸಮಾಜ ಸುಧಾರಕರ ಜೀವನ ಮೌಲ್ಯಗಳನ್ನು ಕಥೆಯಾಗಿಸಿ ಹೇಳಿದರೆ ಆ ಮಕ್ಕಳ ಮನಸ್ಸಿಗೆ ನಾಟಿ ನಾಳೆಯ ನಾಗರಿಕರಾಗುವ ಮಕ್ಕಳು ಈಗಿನಿಂದಲೇ ದ್ವೇಷ, ಅಸೂಯೆ ಮರೆತು ಒಟ್ಟಾಗಿ ಆಟ ಪಾಠದಿ ಬೆರೆತು ಮುಂದೆಯೂ ಒಂದಾಗಿ ಬಾಳುವರು. ಬಾಳಲಿ ಎಂಬ ಆಶಯದ ಈ ಲೇಖಕ ಶ್ರೀ ರಾಜೇಂದ್ರ ಝಳಕಿಯವರು ತಮ್ಮ ಶಿಕ್ಷಕ ವೃತ್ತಿಯ ಕಾಳಜಿ ಹಾಗೂ ಕಾವ್ಯದ ಮನಸ್ಥಿತಿಯ ಮೂಲಕ ಈ ಸುಂದರ ಸರಳ ನಾಟಕ ರಚಿಸಿದ್ದಾರೆ. ಕೆಲವು ಸಂಭಾಷಣೆಗಳ ಮಧ್ಯ ಕವಿ ಮನಸು ಕಾವ್ಯವನ್ನು ಸಹ ಅಳವಡಿಸಿ ಹಾಡನ್ನು ಸಹ ರಂಗಕ್ಕೆ ತರಲು ಯತ್ನಿಸಿ ಪ್ರಯೋಗ ಮಾಡಿದ್ದು ಮೆಚ್ಚುವಂತಿದೆ. 

ಪ್ರಕಾಶನ- ಬಸವಚಂದ್ರದೇವ ಪ್ರಕಾಶನ ಝಳಕಿ, ಆಳಂದ, ಪ್ರಕಟಣೆ- ವರ್ಷ ೨೦೨೪, 

ಪುಟಗಳು- ೩೨,

 ಬೆಲೆ, -೬೦,

-ಡಾ. ಸಿದ್ದರಾಮ ಹೊನ್ನಲ್ (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ, ಶಹಾಪುರ.)