ಗೀತಾ ನಾಗಭೂಷಣ
ವಾಚಿಕೆ-10
ಗೀತಾ ನಾಗಭೂಷಣ
ಕಲ್ಯಾಣ ಕರ್ನಾಟಕದ ಸೃಜನಶೀಲ ಸಾಹಿತಿಗಳು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಸಾಹಿತಿಗಳ ಕೃತಿಗಳು ಕನ್ನಡ ಓದುಗರಿಗೆ ಉಪಲಬ್ಧವಿರುವುದಿಲ್ಲ. ಈ ಲೇಖಕರು ರಚಿಸಿದ ಎಲ್ಲಾ ಸಾಹಿತ್ಯದ ಮೊತ್ತ ಸಾವಿರಾರು ಪುಟಗಳಷ್ಟಾಗುತ್ತದೆ. ಅಷ್ಟನ್ನೂ ಮುದ್ರಿಸುವುದು ಕಷ್ಟಕರ. ಈ ದಿಸೆಯಲ್ಲಿ ನಮ್ಮ ಪ್ರಕಾಶನದಿಂದ ಸಾಹಿತಿಗಳ ವಾಚಿಕೆಗಳನ್ನು ಹೊರತಂದು, ಅವರ ಸಾಹಿತ್ಯದ ಸ್ವಾದವನ್ನು ಕನ್ನಡಿಗರಿಗೆ ಉಣಬಡಿಸಿ ಕನ್ನಡಿಗರ ಹೃನ್ಮನಗಳನ್ನು ಅರಳಿಸುವಂತಾಗಬೇಕೆನ್ನುವುದು ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಸದಿಚ್ಛೆಯಾಗಿದೆ. ಸುವರ್ಣ ಕರ್ನಾಟಕ ನಾಮಕರಣ ಸಂಭ್ರಮಾಚರಣೆ ಸಂದರ್ಭದಲ್ಲಿ, ಕನ್ನಡ ಸಾಹಿತ್ಯದಲ್ಲಿ ಅಹರ್ನಿಶಿ ಸೇವೆಗೈದ ಹಲವು ಹಿರಿಯ ಮತ್ತು ಕಿರಿಯ ಸಾಹಿತಿಗಳ ವಾಚಿಕೆಗಳನ್ನು ಹೊರತಂದು ಕನ್ನಡ ಓದುಗರ ಮಡಿಲಿಗೆ ಅರ್ಪಿಸುವ ಸದಿಚ್ಚೆಯಾಗಿದೆ.
ಈ ಸದಿಚ್ಛೆ ನೆರವೇರುವಲ್ಲಿ ಡಾ. ಚಿ. ಸಿ. ನಿಂಗಣ್ಣ ಅವರು ನಾಡೋಜ ಗೀತಾ ನಾಗಭೂಷಣ ರವರ ಕುರಿತ ಸಮಗ್ರ ಸಾಹಿತ್ಯ ವಾಚಿಕೆ ರೂಪದಲ್ಲಿ ಸಂಪಾದಿಸಿದ್ದಾರೆ. ಗೀತಾ ನಾಗಭೂಷಣರವರಿಂದ ರಚಿತವಾದ ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ. ಇವರ ಶ್ರೇಷ್ಠ ಕಾದಂಬರಿ ಕೃತಿಗಳಿಗೆ ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿಗಳ ಪ್ರಶಸ್ತಿ ಕೂಡಾ ಲಭಿಸಿವೆ. ಅವರ ಒಟ್ಟು ಸಾಹಿತ್ಯದ ಸತ್ವವನ್ನು ಕನ್ನಡ ಓದುಗರಿಗೆ ಈ ವಾಚಿಕೆ ಉಣಬಡಿಸುತ್ತದೆ.
ಕಲ್ಯಾಣ ಕರ್ನಾಟಕ ಸೃಜನಶೀಲ ಸಾಹಿತಿಗಳಾದ ಗೀತಾ ನಾಭೂಷಣರು ಖ್ಯಾತ ಬಂಡಾಯ ಸಾಹಿತಿ, ಕಾದಂಬರಿಗಾರ್ತಿಯೆಂದು ಪ್ರಸಿದ್ಧರಾದವರು. ಇವರು ೨೫- ೩-೧೯೪೨ ರಲ್ಲಿ ಕಲಬುರಗಿ ಜಿಲ್ಲೆಯ ಸಾವಳಗಿ ಗ್ರಾಮದ ಶಾಂತಪ್ಪ ಮತ್ತು ಶರಣಮ್ಮ ದಂಪತಿಗಳ ಹಿರಿಯ ಮಗಳಾಗಿ ಜನಿಸಿದರು. ಈ ದಂಪತಿಗಳು ಹಿಂದುಳಿದ ವರ್ಗ ಗಂಗಾಮತ ಜನಾಂಗಕ್ಕೆ ಸೇರಿದವರು. ಸಮಾಜದಲ್ಲಿ ಜಾತಿ ವ್ಯವಸ್ಥೆ, ಮೇಲು-ಕೀಳು, ಶ್ರೀಮಂತ-ಬಡತನ ಅಸಮಾನತೆಯ ಕಾಲದಲ್ಲಿ ಕಡುಬಡತನ ಕುಟುಂಬದಲ್ಲಿ, ಅದರಲ್ಲೂ ಅನಕ್ಷರಸ್ಥ, ಅಜ್ಞಾನ, ಕುಟುಂಬದಿಂದ ಬಂದಿದ್ದರಿಂದ ಗೀತಾ ಅವರು ಅಪಮಾನ- ಸಂಕಟ, ನೋವುಗಳನ್ನು ಕಣ್ಣಾರೆ ಕಂಡು ಅನುಭವಿಸಿ ತಮ್ಮ ಒಡಲೊಳಗೆ ಬೆಂಕಿಯನ್ನಿಟ್ಟುಕೊಂಡು ಬದುಕಿದವರು. ಗೀತಾ ಅವರು ಬಡತನ ಮತ್ತು ಹಿಂದುಳಿದ ಜಾತಿಯಿಂದ ಬಂದ ಇವರ ಬಾಲ್ಯದ ಪರಿಸರ ಉತ್ತಮವಾಗಿರಲಿಲ್ಲ. ಕಿತ್ತು ತಿನ್ನುವ ಬಡತನವೊಂದಾದರೆ, ಇನ್ನೊಂದೆಡೆ ಸುತ್ತ ಮುತ್ತಲಿನ ಜನರ, ಕೆಳಮಂದಿಯ ಜೋಪಡಪಟ್ಟಿ, ಗುಡಿಸಲುಗಳು, ಕೂಲಿನಾಲಿ ಮಾಡಿಕೊಂಡು ಬದುಕು ಕಟ್ಟಿಕೊಂಡು ಬದುಕುವ ದಾರುಣ ಚಿತ್ರಣದ ಮಧ್ಯದಲ್ಲಿ ಬಾಲ್ಯದ ಜೀವನ ಕಳೆದ ಇವರ ಮೂಲ ಹೆಸರು ಶಾಂತಾ ಸಾವಳಗಿ. ನಂತರದಲ್ಲಿ ಮದುವೆಯಾದ ಮೇಲೆ ಗೀತಾ ನಾಗಭೂಷಣ ಎಂಬ ಹೆಸರು ಪ್ರಖ್ಯಾತವಾಯಿತು.
ಕಾದಂಬರಿ ಸಾಹಿತ್ಯ
ತಾವರೆಯ ಹೂವ (೧೯೬೮), ಮಾಪುರ ತಾಯಿ ಮಕ್ಕಳು (೧೯೬೮), ಮಹಾಮನೆ (೧೯೭೦), ಹಸಿಮಾಂಸ ಮತ್ತು ಹದ್ದುಗಳು (೧೯೭೮), ನೀಲಗಂಗಾ (೧೯೮೬) ಬದಲಾಗುವ ಬಣ್ಣಗಳು (೧೯೮೬), ನಿನ್ನ ತೋಳುಗಳಲ್ಲಿ (೧೯೮೭), ನಿನ್ನೊಲವು ನನಗಿರಲಿ (೧೯೮೭) ಸವತಿ ಗಂಧ (೧೯೮೮), ಆಘಾತ (೧೯೮೦), ಆವಾಂತರ (೧೯೮೨), ಮರಳಿ ಮನೆ, ಚಂದನದ ಚಿಗುರು, ಪ್ರೀತಿಸಿದ್ದು ನಿನ್ನನ್ನೇ, ಜೀವನಚಕ್ರ, ನನ್ನ ನಿನ್ನ ನಡುವೆ (೧೯೯೨), ಚೈತ್ರದ ಹಾಡು (೧೯೯೩). ಏರಿಳಿತಗಳು (೧೯೯೫), ಆಸರೆಗಳು (೧೯೯೬), ದಂಗೆ (೧೯೯೭), ನನ್ನ ಒಲವು ನಿನ್ನ ಚೆಲುವು (೧೯೯೭), ಅಭಿಮಾನ, ದುಮ್ಮಸು (೧೯೯೪), ಸಪ್ತ ವರ್ಣದ ಸ್ವಪ್ನ(೧೯೯೩), ಬದುಕು (೨೦೦೧), ಕಾಗೆ ಮುಟ್ಟಿತು (೨೦೦೨), ಗುಳೆ (೨೦೧೯)
ಕಥಾ ಸಾಹಿತ
ಜ್ವಲಂತ ಕಥಾ ಸಂಕಲನ (೧೯೮೯), ಅವ್ವ ಮತ್ತು ಇತರ ಕಥೆಗಳು (೧೯೯೩), ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವ (ಸಮಗ್ರ ಕಥೆಗಳು-೨೦೧೨)
ಸಂಶೋಧನೆ
ದುರಗ ಮುರಗಿಯರ ಸಂಸ್ಕೃತಿ (೧೯೯೩), ಸಂಪಾದನೆ-ಖೇಮಣ್ಣ (೧೯೯೮) ಹಾಗೂ ಐದನೈದಕ್ಕೂ ಹೆಚ್ಚು ಬಾನುಲಿ ನಾಟಕಗಳು, ಕಲಬುರಗಿ ಆಕಾಶವಾಣಿ ಮತ್ತು ಧಾರವಾಡ ಆಕಾಶವಾಣಿಯಿಂದ ಬಿತ್ತರಗೊಂಡಿವೆ. ಸರಿಸುಮಾರು ಐವತ್ತು ವರ್ಷಗಳಿಂದ ನಿರಂತರವಾಗಿ ಕಥೆ-ಕಾದಂಬರಿಗಳನ್ನು ರಚಿಸಿ ನಾಡಿನ ಶ್ರೇಷ್ಠ ಕಾದಂಬರಿಗಾರ್ತಿ ಎಂಬ ಹೆಸರು ಪಡೆದ ಇವರು, ಕಲ್ಯಾಣ ಕರ್ನಾಟಕದ ಸೃಜನಶೀಲ ಮಹಿಳಾ ಸಾಹಿತಿಯಾಗಿ, ಬಂಡಾಯ ಸಾಹಿತಿಯಾಗಿ ಮಹತ್ವದ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯಕ್ಕೆ ತನ್ನದೆಯಾದ ಅಳಿಲು ಸೇವೆಯನ್ನು ಮಾಡಿದ್ದಾರೆ. ಇವರ ಸಾಹಿತ್ಯಕ ಸೇವೆಯನ್ನು ಗುರುತಿಸಿ ಸರ್ಕಾರ ಮತ್ತು ಸಂಘ-ಸಂಸ್ಥೆಗಳಿಂದ ಹತ್ತಾರು ಪ್ರಶಸ್ತಿಗಳು, ಗೌರವ ಸನ್ಮಾನಗಳು ಲಭಿಸಿವೆ.
ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2023 ರಲ್ಲಿ ಹೊರಬಂದ ಈ ವಾಚಿಕೆಯ ಕೃತಿಯು 200 ಪುಟಗಳನ್ನು ಹೊಂದಿದ್ದು 200 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.