ಪೂಜ್ಯ ದೊಡ್ಡಪ್ಪ ಅಪ್ಪ ಅವರ ಚಾರಿತ್ರಿಕ ಶತಕ

ಪೂಜ್ಯ ದೊಡ್ಡಪ್ಪ ಅಪ್ಪ ಅವರ  ಚಾರಿತ್ರಿಕ ಶತಕ

ಪೂಜ್ಯ ದೊಡ್ಡಪ್ಪ ಅಪ್ಪ ಅವರ ಚಾರಿತ್ರಿಕ ಶತಕ

ಕಲ್ಯಾಣ ಕರ್ನಾಟಕದ ಹದಿನೆಂಟನೇ ಶತಕದಾಗಸದಲ್ಲಿ ಬಸವಾದಿ ಶರಣರ . ದಾಸೋಹ ಸಂಸ್ಕೃತಿಯ ಸಿದ್ಧಿಯ ನಂತರ ಮಗುದೊಮ್ಮೆ ಮಹಾದಾಸೋಹ ಸಂಸ್ಕೃತಿಯ ಬೆಳ್ಳಿ ಚುಕ್ಕಿಯೊಂದು ಮೂಡಿತು. ಅದನ್ನು ಕಂಡು ಆನಂದಿಸಿದ ಜಗದಕಣ್ಣುಗಳು   ಅದಕ್ಕೆ ಹೆಸರಿಟ್ಟು ಕರೆದುದು 'ಮಹಾದಾಸೋಹ ಶರಣ ಬಸವ'ಬಸವರೆಂದು ಮಹಾದಾಸೋಹಿ ಶರಣ ಬಸವರು ವ್ಯಕ್ತಿಯಾಗಿ ಜನಿಸಿ ದಾಸೋಹ ಭಕ್ತಿಯಾಗಿ ಬೆಳೆಯುತ್ತ ಮಹಾದಾಸೋಹ ಸಂಸ್ಕೃತಿಯ ಮಹಾಶಕ್ತಿಯಾಗಿ ನಿಂದವರು. ಅರಳಿಗುಂಡಿ ಪಥದಲ್ಲಿ ಮೂಡಿದ ಒಂದೊಂದು ಪಾದದ ಗುರುತಿನಲ್ಲಿ ಸಕಲ ಜೀವ ಸಂಕುಲವನ್ನೆಲ್ಲ ಉದ್ದರಿಸುವ ದೃಢವಾದ ಅಭೀಪ್ಸೆಯ ನಿರ್ಧಾರ ಮೂಡಿದಂತೆ ಗೋಚರವಾಗುತ್ತದೆ ಇಂತಹ ಪರಮ ತಪಸ್ಸಿನ ಸಾಧನೆಯೇ ಬಾಗಿಲನ್ನು ಲೋಕ ಕಲ್ಯಾಣಕ್ಕಾಗಿ ತೆರೆದು ಇರಿಸಿದರು, ಈ ಕಲ್ಯಾಣದ ಮಹಾಸಿದ್ಧಿಯೇ ಶರಣ ಬಸವೇಶ್ವರರು, ಬಸವ ಕಲ್ಯಾಣದ ದರ್ಶನಗೊಂಡು ಪರಮಾನಂದಗೊಂಡರು. ಪರಮಾತ್ಮ ಸ್ವರೂಪರಾಗಿ ಇಹದಲ್ಲಿ ಅಂದಿಗೂ ಇಂದಿಗೂ ಎಂದಿಗೂ ಉಳಿದುಕೊಂಡಿರಲಿ.

ಮಹಾದಾಸೋಹಿ ಶರಣ ಬಸವರ ಪರಂಪರೆಯನ್ನು ಅನುಭವ ಅನುಸರಿಸುತ್ತ ದೊಡ್ಡಪ್ಪ ನವರು ಪೀಠದ ಏಳನೆಯ ಪೀಠಾಧಿಪತಿಗಳಾಗಿ ಅಭಿನವ ಶರಣಬಸವರೆಂಬ ಅನ್ವರ್ಥನಾಮ ಧಾರಣಕ್ಕೆ ಆದರ್ಶರಾದರು.

ಪೂಜ್ಯ ದೊಡ್ಡಪ್ಪ ಅಪ್ಪಾ ಅವರು ವಾಗದ್ವೈತ ಸಾಧಕರಾಗಿರಲಿಲ್ಲ. ನುಡಿಯಲ್ಲಿ ಎಚ್ಚುತ್ತು ನಡೆಯಲ್ಲಿ ತಪ್ಪಿದೊಡೆ ಹಿಡದಿರ್ಪಲಿಂಗ ಘಟಸರ್ಪವಾಗಿ ಕಚ್ಚುವುದು ಎಂಬ ಅಪ್ಪಟ ಅವಧಾನಿಗಳಾಗಿದ್ದರು. ಅರ್ಪಣ ಜಂಗಮನಲಿ ಸಂಧಾನ, ಧ್ಯಾನ, ಮೌನಾದಿಗಳೇ ಅವರ ಜೀವನ ಚರ್ಯ್ಯಗಳಾಗಿದ್ದವು. ಶತ ಲಕ್ಷ ಕೋಟಿ ಭಕ್ತರೆಲ್ಲರೂ ಅಪ್ಪ ಅವರ ಇರುವನ್ನು ಅನುಲಕ್ಷಿಸಿಯೇ ಅವರ ಸಿದ್ಧಿಯ ಅರಿವನ್ನು ಹೃದ್ಬಳಗನ್ನಾಗಿಸಿಕೊಂಡರು. ಇಂದಿಗೂ ಆ ಬೆಳಗು ಅಸಂಖ್ಯಾತರ ಆತ್ಮ ಪ್ರಣತೆಯಲ್ಲಿ ತೇಜೋಜ್ವಲವಾಗಿ ಬೆಳಗಿ ಬೆಳಗುತ್ತಲಿದೆ. ಈ ಬೆಳಗಿನ ದರ್ಶನವೇ ಪ್ರಸ್ತುತ ಕಾವ್ಯವಾಗಿದೆ. ಇದರ ಕರ್ತೃಗಳು ಅಬಾಲವೃದ್ಧರೂ, ಪಂಡಿತ ಪಾಮರನ್ನು ಪರಿಶಿಷ್ಟ ಶಿಷ್ಟರಿಗೆಲ್ಲ ಆಹ್ಲಾದವನ್ನುಂಟು ಮಾಡುತ್ತಲಿರುವ ತೊಂಬತ್ತೊಂದರ ವಸಂತಗಳ ನಿತ್ಯ ತರುಣ ಎ.ಕೆ.ರಾಮೇಶ್ವರ ಅವರು,

ಮೂಲತಃ ಮಕ್ಕಳ ಸಾಹಿತಿಗಳಾಗಿ, ಕವಿಗಳಾಗಿ ರಾಮೇಶ್ವರವರು ಅಕ್ಷರ, ಶಬ್ದ ಲೋಕದೊಂದಿಗೆ ಸರಸವಾಡುತ್ತ ಬಂದವರು. ನಡುನಡುವೆ ತಮ್ಮ ಪರಮಿತಿಯನ್ನು ಮೀರುತ್ತ ಪ್ರೌಢ ಲೋಕದ ಮನೋವಿಲಾಸ ಮತ್ತು ವಿಕಾಸಕ್ಕಾಗಿಯೂ ಹಲವಾರುಕೃತಿಗಳನ್ನು ರಚಿಸಿ ಕೊಟ್ಟಿರುವ ಪ್ರತಿಭಾವಂತ ಕವಿಗಳು, ವಿನಯಶೀಲರು, ಸೌಜನ್ಯವಂತವರು ಸಾತ್ವಿಕರು ಎದುರಿನವರು 'ಶರಣು' ಎಂದರೆ 'ಶರಣುಶರಣಾರ್ಥಿ' ಎನ್ನುವ ಹೃದಯ ಸಂಪನ್ನರು ಇಂತಹ ಸದ್ಗುಣಗಳ ಕಾರಣದಿಂದಲೇ ರಾಮೇಶ್ವರ ಅವರು ಆದರ್ಶ ಶಿಕ್ಷಕರೆನಿಸಿದ್ದಾರೆ. ಸ್ನೇಹಮಯಿ ಜೀವಿಗಳಾಗಿದ್ದಾರೆ. ಶರಣ ಸತ್ವದ ಮನದವರಾಗಿದ್ದಾರೆ. ಇಂಥವರಿಂದಲೇ ಶರಣರ ಚರಿತ್ರೆಯು ಉಸಿರಾಟದಷ್ಟು ಸರಳವಾಗಿ ಬರೆಯುವುದಕ್ಕೆ ಸಾಧ್ಯವಾಗುತ್ತದೆ. ಈ ಹೇಳಿಕೆಗೆ ಪೂಜ್ಯ ದೊಡ್ಡಪ್ಪ ಅಪ್ಪ ಅವರ ಕಾವ್ಯವು ಉದ್ದಿಷ್ಟ ನಿದರ್ಶನವಾಗಿದೆ. ಎ.ಕೆ.ರಾಮೇಶ್ವರ ಅವರು ಹಲವಾರು ವರ್ಷಗಳ ಕಾಲ ಮಹಾದಾಸೋಹಿ ಶರಣ ಬಸವರ ಮಹಾದಾಸೋಹ ಮನೆಯ ಹತ್ತಿರದ ಪರಿಸರದಲ್ಲಿ ಬದುಕಿದವರು. ದಿನನಿತ್ಯವೂ ಸಹಜವಾಗಿ ಬೆಳಗು ಬೈಗಿನಲ್ಲಿ ಮಹಾದಾಸೋಹ ಶರಣ ಬಸವರ ಮತ್ತು ಪೂಜ್ಯ ದೊಡ್ಡಪ್ಪ ಅಪ್ಪ ಅವರ ದರ್ಶನ ಪಡೆದು ಕೊಂಡವರು. ಅದರಲ್ಲಿಯೂ ಪೂಜ್ಯ ದೊಡ್ಡಪ್ಪ ಅಪ್ಪ ಅವರೊಂದಿಗೆ ದಾಸೋಹದ ಪರಮ ಭಕ್ತರಾಗಿ ಭಕ್ತಿಯ ಸಂಪರ್ಕ ಹೊಂದಿದವರು ಅವರೊಡನೆ ಸಂಭಾಷಿಸಿದವರು ನೇರವಾಗಿ ಅವರ ಕೃಪೆಗೆ ಪಾತ್ರರಾದವರು. ರಾಮೇಶ್ವರ ಅವರ ಬದುಕಿನ ಈ ಬಹುಮುಖಿ ಮಾತುಗಳೆಲ್ಲ ಅವರನ್ನೂ ಕಾವ್ಯ ರಚನೆಗೆ ಭಕ್ತಿಯಿಂದ ತೊಡಗುವಂತೆ ಮಾಡಿವೆ.

ಪೂಜ್ಯ ದೊಡ್ಡಪ್ಪ ಅಪ್ಪ ಅವರ ಚಾರಿತ್ರ್ಯವು ಈ ಕಾವ್ಯದಲ್ಲಿ ದಳದಳನೆ ಅರಳಿಸಿದಂತಿದೆ. ದೊಡ್ಡಪ್ಪ ಅವರ ದೊಡ್ಡ ಬದುಕಿನ ಕಥನವು ಇದಾಗಿರುವುದರಿಂದ ಇದೊಂದು ದೊಡ್ಡ ಕಾವ್ಯವೇ ಸರಿ. ರಚನಾ ಸಾಂಗತ್ಯಕ್ಕೆ ಒಲಿದು ಬಂದಿರುವ ಚೌಪದಿಗಳು ಬೆಟ್ಟದಿಂದ ಕೆಳಕ್ಕೆ ಹರಿದು ಬರುವ ಸಲಿಲದಂತೆ ಸರಳ ಮತ್ತು ಸುಂದರವಾಗಿ ಪ್ರವಹಿಸಿವೆ. ಕೆಲವನ್ನು ನಿದರ್ಶನಕ್ಕಾಗಿ ಪರಿಭಾವಿಸಬಹುದಾಗಿದೆ.

ಭಾಷೆ ಕೊಟ್ಟಿರುವ ಪ್ರೀತಿಗಾಗಿಯೇ ಹುಟ್ಟಿ ಬಂದಿರೀ ಶರಣಪ್ಪ ಹೊಸಯುಗ ಮೂಡಣ ದೆಶೆಯಲ್ಲಿ ಉದಿಸಿದ ಅಭಿನವ ಶರಣರು ದೊಡ್ಡಪ್ಪ ॥

ತಾಯಿ-ತಂದೆಗಳ ದುಃಖವ ಮರೆಸುತ ಬೆಳೆದನು ಬಿದಿಗೆಯ ಚಂದಿರನು ಬಾಳ ಹೊತ್ತಿಗೆಯ ಹೊಸ ಪುಟ ತೆರೆಯಿಸಿಬೆಳಗುತ ಬಂದನು ಸುಂದರನು ||

ಮುಗ್ಧ ಮನಸಿನ ಸ್ನಿಗ್ಧ ಹೃದಯದ ಮಂಗಳ ಮೂರ್ತಿ ದೊಡ್ಡಣ್ಣ ಶರಣರು ರಚಿಸಿದ ವಚನಗಳೋದುತ ಅರಳಿಸುತ್ತಿದ್ದನು ಒಳಗಣ್ಣ 1

ಟೊಂಕ ಕಟ್ಟಿದರು ಶಿಕ್ಷಣ ನೀಡಲು ಶರಣರು ಸಂಸ್ಥೆಯ ಪರವಾಗಿ ಧರ್ಮ ಜಾಗರತಿಯ ಕಾರ್ಯ ಮಾಡಲು ಬಯಲಿಗೆ ಬಂದರು ಗುರುವಾಗಿ ॥

ವಿಶ್ವಕ್ಕೆ ಶಾಂತಿಯ ನೀಡಿದ ಶರಣರು ನೆಲೆಸಿದ ಕ್ಷೇತ್ರವು ಕಲಬುರ್ಗಿ ಅವರು ಹಚ್ಚಿರುವ ಶಾಂತದೀವಿಗೆ ಮಿನುಗುತಲಿರುವುದು ಜಗ ಬೆಳಗಿ ||

ಇಂಥ ಎಷ್ಟೋ ಚೌಪದಿಗಳು ಶರಣರ ಕಾವ್ಯಾರಾಮದಲ್ಲಿ ರಸಾಕಾಂಕ್ಷಿಗಳಾಗಿ ವಿಹರಿಸುವ ಕಾವ್ಯ ಪ್ರೇಮಿಗಳಿಗೆ ರಸಾನಂದವನ್ನುಂಟು ಮಾಡುತ್ತದೆ. ಎಂಬತ್ತೆಂಟು ಚೈತ್ರಗಳ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಪೂಜ್ಯ ದೊಡ್ಡಪ್ಪ ಅಪ್ಪ ಅವರ ಸಾರ್ಥಕ ಬದುಕಿನ ವಿವರಗಳನ್ನು ರಾಮೇಶ್ವರ ಅವರು ಮಂಜು ಹನಿ ಮುತ್ತಿನಲ್ಲಿ ಸೃಷ್ಟಿಯ ಸೌಂದರ್ಯವೆಲ್ಲವೂ ಬಿಂಬಿತಗೊಂಡಂತೆ 160 ಪದ್ಯಗಳಲ್ಲಿ ಅಡಕಗೊಳಿಸಿದ್ದಾರೆ.

ಸಂಕ್ಷಿಪ್ತವಾದರೂ ಪೂಜ್ಯರ ಚರಿತೆ ಸಮಗ್ರವಾಗಿ ಕಾವ್ಯ ಮುಖೇನ ದರ್ಶನಗೊಂಡಿದೆ. ಈ ಕಾವ್ಯ ಸೃಷ್ಟಿಯ ಹಿನ್ನೆಲೆಯಲ್ಲಿ ಸೃಷ್ಟಿಕರ್ತರ ಪ್ರತಿಭಾ ಸಂಪನ್ನತೆ, ಬಹು ಜ್ಞತೆ, ಸಂಗ್ರಹ ನಿಪುಣತೆ, ಹಿರಿಯ ಮನದ ಅನುಭವ ಶ್ರೀಮಂತಿಕೆ ಇವು ಯಥೇಷ್ಟವಾಗಿ ಕಾಣಬಹುದಾಗಿದೆ. ರಾಮೇಶ್ವರ ಅವರು ಆಕಾರದಲ್ಲಿ “ನಂದೀ ಕೋಲಿನ" ಎತ್ತರದವರು. ಇದು ಕೇವಲ ಬಹಿರ್ ವಲಯದ ಹೇಳಿಕೆಯಷ್ಟೇ ಅಲ್ಲ ಅಂತರಂಗದಲ್ಲೂ ಅವರು "ನಂದೀಕೋಲೆ" ಅದಕ್ಕೆ ಪ್ರಾಂಜಲ ಮನವಿದ್ದವರು ಯಾರಾದರೂ ಸರಿ ಶರಣೆನ್ನಲೇ ಬೇಕು.

ಲೇಖಕರು -ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ

ಪುಸ್ತಕ ವಿಮರ್ಶೆ. ಡಾ.ಎಸ್.ಎಂ.ಹಿರೇಮಠ,ಎಂ.ಎ.ಪಿಎಚ್‌ಡಿ.ಡಿಲಿಟ್,ಕನ್ನಡ ಪ್ರಾಧ್ಯಾಪಕರು (ವಿಶ್ರಾಂತ)ಗುಲಬರ್ಗಾ ವಿಶ್ವವಿದ್ಯಾಲಯ,

ಪ್ರತಿಗಳು:1000

ಪುಟಗಳು:86

ಪ್ರಥಮ ಮುದ್ರಣ:2024

ಬೆಲೆ:150

ಮುಖಪುಟ ವಿನ್ಯಾಸ:ಕರಣಯ್ಯ ಸ್ವಾಮಿ ಸಾಲಿಮಠ,

ಮುದ್ರಕರು : ಶ್ರೀ ಶರಣಬಸವೇಶ್ವರ ಮುದ್ರಣಾಲಯ ಶ

ರಣಬಸವ ವಿಶ್ವವಿದ್ಯಾಲಯ ಆವರಣ ಕಲಬುರ್ಗಿ