ಕುಂ. ವೀರಭದ್ರಪ್ಪ
ವಾಚಿಕೆ-15. ಕುಂ. ವೀರಭದ್ರಪ್ಪ
ಕಲ್ಯಾಣ ಕರ್ನಾಟಕದ ಸೃಜನಶೀಲ ಸಾಹಿತಿಗಳು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಸಾಹಿತಿಗಳ ಕೃತಿಗಳು ಕನ್ನಡ ಓದುಗರಿಗೆ ಉಪಲಬ್ಧವಿರುವುದಿಲ್ಲ. ಈ ಲೇಖಕರು ರಚಿಸಿದ ಎಲ್ಲಾ ಸಾಹಿತ್ಯದ ಮೊತ್ತ ಸಾವಿರಾರು ಪುಟಗಳಷ್ಟಾಗುತ್ತದೆ. ಅಷ್ಟನ್ನೂ ಮುದ್ರಿಸುವುದು ಕಷ್ಟಕರ. ಈ ದಿಸೆಯಲ್ಲಿ ನಮ್ಮ ಪ್ರಕಾಶನದಿಂದ ಸಾಹಿತಿಗಳ ವಾಚಿಕೆಗಳನ್ನು ಹೊರತಂದು, ಅವರ ಸಾಹಿತ್ಯದ ಸ್ವಾದವನ್ನು ಕನ್ನಡಿಗರಿಗೆ ಉಣಬಡಿಸಿ ಕನ್ನಡಿಗರ ಹೃನ್ಮನಗಳನ್ನು ಅರಳಿಸುವಂತಾಗಬೇಕೆನ್ನುವುದು ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಸದಿಚ್ಛೆಯಾಗಿದೆ. ಸುವರ್ಣ ಕರ್ನಾಟಕ ನಾಮಕರಣ ಸಂಭ್ರಮಾಚರಣೆ ಸಂದರ್ಭದಲ್ಲಿ, ಕನ್ನಡ ಸಾಹಿತ್ಯದಲ್ಲಿ ಅಹರ್ನಿಶಿ ಸೇವೆಗೈದ ಹಲವು ಹಿರಿಯ ಮತ್ತು ಕಿರಿಯ ಸಾಹಿತಿಗಳ ವಾಚಿಕೆಗಳನ್ನು ಹೊರತಂದು ಕನ್ನಡ ಓದುಗರ ಮಡಿಲಿಗೆ ಅರ್ಪಿಸುವ ಸದಿಚ್ಚೆಯಾಗಿದೆ.
ಈ ಸದಿಚ್ಛೆ ನೆರವೇರುವಲ್ಲಿ ಡಾ. ನಂದೀಶ್ವರ ದಂಡೆ ಅವರು ಕುಂ. ವೀರಭದ್ರಪ್ಪ ಕುರಿತ ಸಮಗ್ರ ಸಾಹಿತ್ಯ ವಾಚಿಕೆ ರೂಪದಲ್ಲಿ ಸಂಪಾದಿಸಿದ್ದಾರೆ. ಕುಂ. ವೀರಭದ್ರಪ್ಪರವರಿಂದ ರಚಿತವಾದ ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ. ಅವರ ಕೃತಿಗಳಿಗೆ ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡಾ ಲಭಿಸಿದೆ,ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕನ್ನಡ ಕಟ್ಟುವುದರ ಜೊತೆಗೆ ಕಾವ್ಯ, ಕಥೆ, ಕಾದಂಬರಿ, ಅನುವಾದಕ್ಕೆ ಹಲವು ಕೃತಿ ರಚಿಸಿದವರು. ಅವರ ಒಟ್ಟು ಸಾಹಿತ್ಯದ ಸತ್ವವನ್ನು ಕನ್ನಡ ಓದುಗರಿಗೆ ಈ ವಾಚಿಕೆ ಉಣಬಡಿಸುತ್ತದೆ.
ಕನ್ನಡ ಸಾಹಿತ್ಯಲೋಕದಲ್ಲಿ ವಿಶಿಷ್ಟವಾದ ಕಥೆ, ಕಾದಂಬರಿಗಳ ಮೂಲಕ ಮನೆಮಾತಾದವರು ಕುಂ. ವೀರಭದ್ರಪ್ಪನವರು. ಇವರು ಕೇವಲ ಜನಪ್ರಿಯ ಲೇಖಕರಾಗಿ ಉಳಿಯದೆ ಸಂವೇದನಾಶೀಲ, ದಲಿತ ಬಂಡಾಯ ಮನೋವೃತ್ತಿಯ ಪ್ರಮುಖ ಬರಹಗಾರರಾಗಿ ಕನ್ನಡ ಸಾಹಿತ್ಯಲೋಕದ ಮುಂದೆ ಇದ್ದಾರೆ. ಅವರ ಕಥೆ, ಕಾದಂಬರಿಗಳು ಕನ್ನಡ ಸಾಹಿತ್ಯ ಜಗತ್ತನ್ನು ಬಹುಮಟ್ಟಿಗೆ ವಿಸ್ತರಿಸಿವೆ. ತಮ್ಮದೇ ಆದ ಒಳನೋಟಗಳು ಬದುಕಿನ ಸೂಕ್ಷ್ಮ ಚಿತ್ರಣಗಳು ಹಾಸುಹೊಕ್ಕಾಗಿದೆ. ಸಮಕಾಲೀನ ಸಮಾಜದಲ್ಲಿ ಜನರು ಬದುಕಿದ ರೀತಿ, ನೀತಿಗಳು, ನಾವು ಬದುಕುತ್ತಿರುವ ಪರಿಸರವೇ ಅವರ ಬರವಣಿಗೆಯ ಶಕ್ತಿಯಾಗಿದೆ. ಕಲ್ಪನೆಯು ವಾಸ್ತವದ ಬೆಸಿಗೆಯಾಗಿದೆ. ಮೂಲತಃ ಬಂಡಾಯ ಮನೋಭಾವದ ಲೇಖಕರಾಗಿದ್ದಾರೆ. ಅವರ ಸೃಷ್ಟಿ ಪ್ರತಿಭಟನಾತ್ಮಕ ಸಾಹಿತ್ಯವಾಗಿ ಸಹಜ ಬಂಡಾಯದ ಧ್ವನಿಯಾಗಿದೆ. ಎಪ್ಪತ್ತೊಂದು ವರ್ಷದ ಕುಂವೀ ಅವರು ಕಳೆದ ಐವತ್ತು ವರ್ಷಗಳಲ್ಲಿ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಬೆರಗನ್ನುಂಟು ಮಾಡಿದ್ದಾರೆ. ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅವರ ಮೌಲಿಕ ಬರಹಗಳು ಪುಸ್ತಕ ರೂಪದಲ್ಲಿ ಪ್ರಕಟಗೊಂಡಿವೆ. ಕಾವ್ಯ ಪ್ರಕಾರ ಪ್ರಾರಂಭದ ಹಂತದಲ್ಲಿ ರೂಢಿಯಾಗಿದ್ದರೂ ಅವರ ಕೈ ಹಿಡಿಯಲಿಲ್ಲ ಎಂದು ಹೇಳಬಹುದು. ಸಮರ್ಥ ಅಭಿವ್ಯಕ್ತಿಯ ಮಾಧ್ಯಮವಾಗಿ ಅವರು ಕಂಡುಕೊಂಡ ಪ್ರಕಾರವೇ ಸಣ್ಣಕಥೆ ಪ್ರಕಾರ. ತುಂಬ ಬಲಿಷ್ಠವಾದ ಅಭಿವ್ಯಕ್ತಿ ಕ್ರಮವನ್ನು ಒಳಗೊಂಡು ಅವರ ಕೈ ಹಿಡಿದುದಲ್ಲದೇ ಕನ್ನಡ ಕಥನ ಪ್ರಕಾರಕ್ಕೆ ಹೆಚ್ಚು ಶಕ್ತಿಯನ್ನು ಒದಗಿಸಿತು. ಭಿನ್ನದನಿಯ ರೂಪದಲ್ಲಿ ಓದುಗರನ್ನು ಆಕರ್ಷಿಸಿದಲ್ಲದೆ ವಿದ್ವಾಂಸರ ಕುತೂಹಲವನ್ನು ಕೆರಳಿಸಿದ್ದಂತೂ ಸುಳ್ಳಲ್ಲ. ಪ್ರಾಚೀನ ಕಾಲದಿಂದಲೂ ಕಥಾ ಪರಂಪರೆಯನ್ನು ಬೆಳೆಸಿದ ಬಳ್ಳಾರಿ, ವಿಜಯನಗರ ಪರಿಸರವು ವಡ್ಡಾರಾಧನೆಯ ಮೂಲಕ ಪ್ರಾಚೀನತೆಯನ್ನು ಉಳಿಸಿಕೊಂಡಿದೆ. ಕುಂವೀ ಅವರು ಆ ಕಥಾ ಪರಂಪರೆಯನ್ನು ಮುಂದುವರೆಸಿದವರಲ್ಲಿ ಪ್ರಮುಖರಾಗಿದ್ದಾರೆ. ಕಥಾ ಜಗತ್ತನ್ನು ವಿಸ್ತರಿಸಿದ ಕೀರ್ತಿ ಅವರ ಪಾಲಿಗಿದೆ. 'ಇನ್ನಾದರೂ ಸಾಯಬೇಕು', 'ಡೋಮ ಮತ್ತಿತರ ಕಥೆಗಳು', 'ಭಗವತಿ ಕಾಡು', 'ನಿಜಲಿಂಗ', 'ಕುಂವೀ ಕಥೆಗಳು', 'ಎಂಟರ್ ದಿ ಡ್ರಾಗನ್', 'ಮಣ್ಣೆ ಮೊದಲು', 'ನಿಗಿ ನಿಗಿ ಅಗಲು', 'ಅಪೂರ್ವ ಚಿಂತಾಮಣಿ ಕತೆ', ಸುಶೀಲೆ ಎಂಬ ನಾಯಿಯು, ವಾಗಿಲಿ ಎಂಬ ಗ್ರಾಮವೂಕರಿ ವೇಮಲ', 'ಭಳಾರೆ ವಿಚಿತ್ರಂ' ಕಥಾ ಸಂಕಲನಗಳು, ಕಾದಂಬರಿ ಪ್ರಕಾರವು ಅವರ ಇನ್ನೊಂದು ಶಶಕ್ತ ಅಭಿವ್ಯಕ್ತಿಯ ಮಾಧ್ಯಮವಾಗಿದೆ. ಅವರದೇ ಆದ ನಿರೂಪಣಾ ಶೈಲಿಯೂ ಭಿನ್ನ ಮತ್ತು ವಿಶಿಷ್ಟ ಪ್ರಯೋಗವಾಗಿದೆ. ೧೯೮೦ರಲ್ಲಿ ತಮ್ಮ ಮೊದಲ ಕಾದಂಬರಿ 'ಕಪ್ಪು'ವನ್ನು ಬರೆದರು. ಕಪ್ಪು ಕಾದಂಬರಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಂದುಕೊಟ್ಟಿತು. ವಸ್ತು, ಭಾಷೆ, ನಿರೂಪಣೆಯಿಂದ ಕಾದಂಬರಿಯು ಕಥನ ಜಗತ್ತಿಗೆ ಭಿನ್ನತೆಯ ಮಾದರಿಯನ್ನು ನೀಡಿತು. ವಿಮರ್ಶಕರ, ವಿದ್ವಾಂಸರ ಚರ್ಚೆಯ ವಿಷಯ ಮಾದರಿಗಳಲ್ಲಿ ಒಂದಾಯಿತು. 'ಬೇಲಿ ಮತ್ತು ಹೊಲ', 'ಆಸ್ತಿ', 'ಕೆಂಡದ ಮಳೆ', 'ಮನಮೆಚ್ಚಿದ ಹುಡುಗಿ', 'ಹನುಮ', 'ಪ್ರೇಮವೆಂಬ ಹೊನ್ನುಡಿ', 'ಪ್ರತಿಧ್ವಂದಿ', 'ಶಾಮಣ್ಣ', 'ಕೊಟ್ರ ಹೈಸ್ಕೂಲ್ಲೆ ಸೇರಿದ್ದು', 'ಯಾಪಿಲ್ಲು', 'ಅರಮನೆ', 'ಆರೋಹಣ', 'ಎಕೌಂಟರ್', 'ಎಲ್ಲೋ ಜೋಗಪ್ಪ ನಿನ್ನರಮನೆ', 'ಸುಪಾರಿ', 'ವಿಶ್ವ ಸುಂದರಿ', 'ಹೇಮರೆಡ್ಡಿ ಮಲ್ಲಮ್ಮನೂ', 'ಕತ್ತೆಗೆ ಒಂದು ಕಾಲ', 'ಭಜರಂಗಿ' ಮುಂತಾದವು ಬಹುಚರ್ಚಿತ ಕಾದಂಬರಿಗಳಾಗಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಒಳಗೊಂಡಂತೆ 'ಅರಮನೆ' ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಲ್ಲದೆ ಅನೇಕ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಮನಮೆಚ್ಚಿದ ಹುಡುಗಿ, ಕೆಂಡದ ಮಳೆ, ಕೊಟ್ರೇಶಿ ಕನಸು, ಬೇಲಿ ಮತ್ತು ಹೊಲ, ಭಗವತಿ ಕಾಡು, ಕೂರ್ಮಾವತಾರ, ಕತ್ತಲನು ತ್ರಿಶೂಲ ಹಿಡಿದ ಕಥೆ, ಕುಬುಸ ಚಲನಚಿತ್ರಗಳಾಗಿ ಜನಪ್ರಿಯತೆಯ ಜೊತೆಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ತಂದು ಕೊಟ್ಟಿವೆ.
ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2023 ರಲ್ಲಿ ಹೊರಬಂದ ಈ ವಾಚಿಕೆಯ ಕೃತಿಯು 200 ಪುಟಗಳನ್ನು ಹೊಂದಿದ್ದು 200 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.