ಲೆಕ್ಕವಿಲ್ಲದೆ ಗೆಜ್ಜೆ ಕುಣಿದಾಗ
ಲೆಕ್ಕವಿಲ್ಲದೆ ಗೆಜ್ಜೆ ಕುಣಿದಾಗ
ಜಾನಪದ ತ್ರಿಪದಿಗಳ ಧಾಟಿಯಲ್ಲಿ ಶ್ರೀಮತಿ ಪ್ರಮೀಳಾ ಜಾನಪ್ಪಗೌಡ ಚಿಂಚೋಳಿ ಅವರು ೪೭ ಶೀರ್ಷಿಕೆಗಳ ಅಡಿಯಲ್ಲಿ ಬರೆದಿರುವ ಸುಮಾರು ಒಂದು ಸಾವಿರದಷ್ಟು ತ್ರಿಪದಿಗಳು ಒಳಗೊಂಡಿರುವ ವಿಶಿಷ್ಟ ಸಂಕಲನ 'ಲೆಕ್ಕವಿಲ್ಲದ ಗೆಜ್ಜೆ ಕುಣಿದಾವ' ಪಾರಂಪರಿಕವಾದ ತ್ರಿಪದಿಗಳ ಧಾಟಿಯಲ್ಲಿ ನಿರರ್ಗಳವಾಗಿ ಹರಿದಿರುವ ಈ ತ್ರಿಪದಿಗಳಲ್ಲಿ ಪ್ರಮೀಳಾ ಅವರು ಈ ಬದುಕಿನ ಎಲ್ಲ ಆಗುಹೋಗುಗಳನ್ನು ಕುರಿತಂತೆ ತಮ್ಮದೇ ಆದ ವಿಚಾರ ಚಿಂತನೆಗಳನ್ನು ಪ್ರತಿಪಾದಿಸಿದ್ದಾರೆ. ಇಲ್ಲಿ ದೇವರು, ಧರ್ಮ, ಲಿಂಗ, ಋಣ, ಅನುಭವ ಕುಂಟುಬ, ಸಂಸಾರ ಬಂಧುಬಳಗಗಳನ್ನು ಕುರಿತ ತ್ರಿಪದಿಗಳಷ್ಟೇ ಅಲ್ಲ ಸಮಕಾಲೀನ ಸಂಗತಿಗಳಾದ ವರದಕ್ಷಿಣೆಯ ಪಿಡುಗು, ಹೆಣ್ಣು, ಭ್ರೂಣಹತ್ಯೆ, ಇಂದಿನ ಸಮಾಜದ ರೀತಿ, ನೀತಿಗಳು, ರೈತ, ಯೋಧ, ರಾಜಕಾರಣಿ, ಮಠಾಧಿಪತಿಗಳು ಹೆಣ್ಣುಮಕ್ಕಳ ಪ್ರಗತಿ; ವಿಜ್ಞಾನದ ಅವಿಷ್ಕಾರಗಳು- ಹೀಗೆ ಅಪಾರ ವಿಷಯ ವೈವಿಧ್ಯತೆ ಇದೆ.
ಜಾನಪದ ಗೀತೆಗಳ ಸಂಗ್ರಹಗಳಲ್ಲಿ ಅನುಸರಿಸಿರುವ ಪರಿವಿಡಿಯ ಕ್ರಮವನ್ನೇ ಈ ಸಂಕಲನದಲ್ಲಿಯೂ ಕಾಣಬಹುದು. ಸಾಂಪ್ರದಾಯಿಕ ಸಂಗ್ರಹಗಳ ಮೊದಲ -ಶೈನ ಭಾಗದಲ್ಲಿ ದೈವಸ್ತುತಿಪರವಾದ ಗೀತೆಗಳಿರುತ್ತವೆ. ಆದರೆ ಈ ಸಂಕಲನದ ವಿಶೇಷತೆ ಏನೆಂದರೆ ಕಾಣದ ದೇವರುಗಳ ಸ್ತುತಿಗೆ ಬದಲಾಗಿ ಆತ್ಮಜ್ಞಾನಿಗಳಾದ ಗುರು- ಹಿರಿಯರನ್ನು ಸ್ತುತಿಸಿರುವುದು.
ನೆರಳಿಗೆ ಮರಚಂದ | ಒನಕ ಹಸಿರು ಚಂದ ಬಳ್ಳಿಗೆ ಚಂದ ಮಿಡಿಕಾಯಿ ತಿಳಿಯವ್ವ ಮಡಲಿಗೆ ಚಂದ ಹಸುಗೂಸು.
ಇಲ್ಲಿ ಹಸುಗೂತು ಎಂಬ ಪದದ ಬಳಕೆಯನ್ನು ವಿಶೇಷವಾಗಿ ಗಮನಿಸಬೇಕು. - ಸಾಂಪ್ರದಾಯಿಕ ಜನಪದ ಗೀತೆಯಾಗಿದ್ದರೆ ಬಹುಶಃ ಮೂರನೇ ಸಾಲು ಮಗನಿದ್ದರೆ ಚಂದ ಮಡಲಿಗೆ ಎಂದು ಮುಗಿಯುತ್ತಿತ್ತೇನೋ. ಆದರೆ ಪ್ರಮೀಳಾ ಅವರು ಎಲ್ಲಿಯೂ ಇಂಥ ತಪ್ಪನ್ನು ಮಾಡಿಲ್ಲ. ಹಸುಗೂಸು ಎಂಬ ಪದ ಬಳಸುವ ಮೂಲಕ ಮಗು ಹೆಣ್ಣಾದರೂ ಚಂದ, ಗಂಡಾದರೂ ಚಂದ ಎಂಬ ಸತ್ಯವನ್ನು ಹೇಳಿದ್ದಾರೆ. ಅವರ ಇಂತಹ ಪ್ರಗತಿಪರ ವೈಚಾರಿಕ ಮಾನವೀಯ ನಿಲುವಿಗೆ ಈ ಸಂಕಲನದಲ್ಲಿ ಹೇರಳ ಉದಾಹರಣೆಗಳಿವೆ. ಹೆಜ್ಜೆ ಹೆಜ್ಜೆಗೂ ಜನಪದ ಗೀತೆಗಳನ್ನು ಅನುಸರಿಸಿದ್ದರೂ ಅದರ ಹೂರಣವು ಮಾತ್ರ, ಬೇರೆಯದೇ ಆಗಿದೆ. ರೂಢಿಗತವಾಗಿ ಬಂದ ಯಾವ ವಿಚಾರವನ್ನು ಕಣ್ಣುಮುಚ್ಚಿ ಅನುಸರಿಸದೆ ಅವುಗಳನ್ನೇ ತಮ್ಮ ಅನುಭವ ಚಿಂತನೆಗಳ ಒರೆಗೆ ಹಚ್ಚಿ ತನ್ನದೇ ಆದ ನಿಲುವು ತಳೆಯುವ ಒಂದು ಪ್ರಜ್ಞಾವಂತ ಮನಸ್ಸು ಇಲ್ಲಿದೆ. ಜನಪದ ಗೀತೆಗಳಂತೆಯೇ ಇಲ್ಲಿ ಅನೇಕ ಪುನರಾವರ್ತನೆಗಳಾಗಿವೆ. ಕಾವ್ಯವನ್ನು ಬರೆಯುವ ಉಮೇದಿಗಿಂತ ಸಮಾಜದೊಂದಿಗೆ ಬದುಕಿನ ವಿಚಾರಗಳನ್ನು ಹಂಚಿಕೊಳ್ಳುವ ದೃಷ್ಟಿಯೇ ಇಲ್ಲಿ ಪ್ರಧಾನವಾಗಿರುವುದರಿಂದ ಇಂತಹ ಅಂಶವನ್ನುಅವರು ಲೆಕ್ಕಿಸಲಾರರು. ಮೈತುಂಬ ಚಂದದ ಹೂವುಗಳು ಅರಳಿದ ಹಾಗಿರುವರೇ ದಟ್ಟವಾದ ಪೊದೆಯಿಂದ ಸಹೃದಯರು ತಮ್ಮ ಕೈಲಾದಷ್ಟು ಹೂವುಗಳನ್ನು ಆಯ್ದು ಆನಂದಿಸಬಹುದು .
ಲೇಖಕಿ -ಪ್ರಮೀಳಾ ಜಾನಪ್ಪಗೌಡ ಚಿಂಚೋಳಿ,
ಪ್ರಥಮ ಮುದ್ರಣ: 2010
ಉಪಯೋಗಿಸಿದ ಕಾಗದ: 70 ಜಿ.ಎಸ್.ಎಂ. ಮ್ಯಾಪ್ಲಿಥೋ
ಪುಟಗಳು: 132
ಬೆಲೆ: 70/-
ಪ್ರಕಾಶಕರು-ಪ್ರಮೀಳಾ ಜಾನಪ್ಪಗೌಡ ಚಿಂಚೋಳಿ,
'ಪ್ರಭು ನಿಲಯ', ಮಾತೋಶ್ರೀ ಗೋದುತಾಯಿ ನಗರ, ಕಲಬುರಗಿ 585 102,
-ಡಾ. ಕೆ. ಆರ್. ಸಂಧ್ಯಾರೆಡ್ಡಿ, ಬೆಂಗಳೂರು