ಮಲ್ಲಿಕಾರ್ಜುನ್ ಕಡಕೋಳ

ಮಲ್ಲಿಕಾರ್ಜುನ್ ಕಡಕೋಳ

ವಾಚಿಕೆ-19

ಮಲ್ಲಿಕಾರ್ಜುನ ಕಡಕೋಳ

ಕಲ್ಯಾಣ ಕರ್ನಾಟಕದ ಸೃಜನಶೀಲ ಸಾಹಿತಿಗಳು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಸಾಹಿತಿಗಳ ಕೃತಿಗಳು ಕನ್ನಡ ಓದುಗರಿಗೆ ಉಪಲಬ್ಧವಿರುವುದಿಲ್ಲ. ಈ ಲೇಖಕರು ರಚಿಸಿದ ಎಲ್ಲಾ ಸಾಹಿತ್ಯದ ಮೊತ್ತ ಸಾವಿರಾರು ಪುಟಗಳಷ್ಟಾಗುತ್ತದೆ. ಅಷ್ಟನ್ನೂ ಮುದ್ರಿಸುವುದು ಕಷ್ಟಕರ. ಈ ದಿಸೆಯಲ್ಲಿ ನಮ್ಮ ಪ್ರಕಾಶನದಿಂದ ಸಾಹಿತಿಗಳ ವಾಚಿಕೆಗಳನ್ನು ಹೊರತಂದು, ಅವರ ಸಾಹಿತ್ಯದ ಸ್ವಾದವನ್ನು ಕನ್ನಡಿಗರಿಗೆ ಉಣಬಡಿಸಿ ಕನ್ನಡಿಗರ ಹೃನ್ಮನಗಳನ್ನು ಅರಳಿಸುವಂತಾಗಬೇಕೆನ್ನುವುದು ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಸದಿಚ್ಛೆಯಾಗಿದೆ. ಸುವರ್ಣ ಕರ್ನಾಟಕ ನಾಮಕರಣ ಸಂಭ್ರಮಾಚರಣೆ ಸಂದರ್ಭದಲ್ಲಿ, ಕನ್ನಡ ಸಾಹಿತ್ಯದಲ್ಲಿ ಅಹರ್ನಿಶಿ ಸೇವೆಗೈದ ಹಲವು ಹಿರಿಯ ಮತ್ತು ಕಿರಿಯ ಸಾಹಿತಿಗಳ ವಾಚಿಕೆಗಳನ್ನು ಹೊರತಂದು ಕನ್ನಡ ಓದುಗರ ಮಡಿಲಿಗೆ ಅರ್ಪಿಸುವ ಸದಿಚ್ಚೆಯಾಗಿದೆ.

ಈ ಸದಿಚ್ಛೆ ನೆರವೇರುವಲ್ಲಿ ಡಾ. ಶುಲಾಬಾಯಿ ಎಚ್. ಹಿತವಂತ ಅವರು ಮಲ್ಲಿಕಾರ್ಜುನ ಕಡಕೋಳ ಅವರ ಕುರಿತ ಸಮಗ್ರ ಸಾಹಿತ್ಯ ವಾಚಿಕೆ ರೂಪದಲ್ಲಿ ಸಂಪಾದಿಸಿದ್ದಾರೆ. ಮಲ್ಲಿಕಾರ್ಜುನ ಕಡಕೋಳ ಅವರಿಂದ ರಚಿತವಾದ ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ. ಅವರ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ. ಅವರ ಒಟ್ಟು ಸಾಹಿತ್ಯದ ಸತ್ವವನ್ನು ಕನ್ನಡ ಓದುಗರಿಗೆ ಈ ವಾಚಿಕೆ ಉಣಬಡಿಸುತ್ತದೆ.

ಅಕ್ಷರಸ್ಥರಾದ ನಾವು ನಮ್ಮ ಆತ್ಮಕಥನಗಳನ್ನು ನಮ್ಮ ಮೂಗಿನ ನೇರಕ್ಕೆ ಬರೆದುಕೊಳ್ಳುತ್ತೇವೆ. ಅಂತೆಯೇ ಬಹುತೇಕ ಅಕ್ಷರಸ್ಥರ ಆತ್ಮಕಥನಗಳು 'ಆತ್ಮರತಿ ಕಥನ'ಗಳೇ ಆಗಿರುತ್ತವೆ. ಆದರೆ ಅನಕ್ಷರಸ್ಥರಾದ ನಮ್ಮವರ ಆತ್ಮಕಥನಗಳನ್ನು ಯಥಾವತ್ತಾಗಿಯಾದರೂ ಯಾರು ಬರೆಯಬೇಕು? ನನ್ನ ಪಾಲಿಗೆ ನಿಜವಾದ ಭಾರತ ಮತ್ತು ಭಾರತೀಯರ ಕತೆಗಳೆಂದರೆ ನನ್ನ ಅಪ್ಪ ಅವ್ವಗಳಂಥ ಸಹಸ್ರಾರು ಮಂದಿ ಅನಕ್ಷರಸ್ಥರ ಬದುಕು ಮತ್ತು ಕಣ್ಣೀರಿನ ಕಥನಗಳು. ಅದನ್ನು ನಾನು ಮತ್ತು ನನ್ನಂಥವರು ಬರೆಯದೇ ಹೋದರೆ ಅದು ನಮ್ಮ ಅಪ್ಪ ಅವ್ವಂದಿರು ಬಾಳಿ ಬದುಕಿದ ಭಾರತದ ಕರುಳಿನ ಕಥೆ ಆದೀತು ಹೇಗೆ? ಹೌದು ನಮ್ಮ ನೆಲದ ಕತೆಗಳನ್ನು ನಾವೇ ಬರೆಯಬೇಕಿದೆ. ಅನ್ಯರು ಬರೆಯಲಾರರು. ಹಾಗೊಂದು ವೇಳೆ ಬೇರೆಯವರು ಬರೆದರೆ ಸುಳ್ಳುಗಳನ್ನೇ ಬರೆಯಬಲ್ಲರು. ನಾವು ಬದುಕಿರುವ ನೆಲದ ವಿವೇಕ ಮತ್ತು ಸೂಕ್ಷ್ಮತೆಗಳೆಂದರೆ ನನ್ನ ಅಪ್ಪ ಅವ್ವಂದಿರ ಬದುಕಿನ ಜೀವಸಂವೇದನೆಗಳು. ನಾನು, ನನ್ನಂಥವರ ಅಪ್ಪ ಅಮ್ಮಗಳ ಸಂತಸ ಮತ್ತು ಸಂಕಟಗಳ ಕುರಿತು ನಾವೇ ಬರೆಯಬೇಕು. ಎರಡನೆಯವರ ಎರವಲು ಬರವಣಿಗೆಗಳು ನಮ್ಮವು ಅಂತನಿಸಲಾರವು.

ಮೇಲಿನ ಈ ಅಭಿಮತಗಳು ಕಥೆಗಾರ ಮಲ್ಲಿಕಾರ್ಜುನ ಕಡಕೋಳ ಅವರ ಮಾತುಗಳು. ಪ್ರಸ್ತುತ ಈ ಮಾತುಗಳು ತಮ್ಮ "ಮುಟ್ಟು" ಕಥಾ ಸಂಕಲನದ ಓದಿಗೆ ಮುನ್ನ 'ಮುಟ್ಟು ಎಂದರೆ....' ಎಂದು ತಾವು ತೋಡಿಕೊಂಡ ಒಡಲಾಳದ ಅರಿಕೆಗಳು.

ಈ ಮಾತುಗಳು ಕೇವಲ ಕನ್ನಡದ ಕಥೆಗಾರರು ಮಾತ್ರವಲ್ಲದೇ ಗ್ರಾಮೀಣ ಭಾರತದ ಎಲ್ಲಾ ಕಥೆಗಾರರ ಅಂತರಂಗದ ಬೀಜ ಭಿತ್ತಿಗಳನ್ನು ಬಿಚ್ಚಿಡುತ್ತವೆ. ಅವು ಕೇವಲ ಅಕ್ಷರ ಮಾತುಗಳಲ್ಲ. ಅಂತಃಕರಣ ಮತ್ತು ತಾಯ್ತನದ ಜೀವಸಂವೇದನೆಗಳು, ಕಡಕೋಳ ಮಲ್ಲಿಕಾರ್ಜುನ ಅವರು. ಅವರ ಕುಟುಂಬದ ಮೊಟ್ಟಮೊದಲ ಅಕ್ಷರಸ್ಥರು. ಅವರ ಕುಟುಂಬದಲ್ಲಿ ಎಸ್.ಎಸ್. ಎಲ್.ಸಿ. ಪಾಸು ಮಾಡಿದ ಮೊದಲಿಗರು. ಆ ಮೂಲಕ ಅನಕ್ಷರಸ್ಥ ಅಪ್ಪ ಅವ್ವಂದಿರ ಬದುಕಿನ ಬವಣೆಗಳನ್ನು ಬಿಂಬಿಸಿದ್ದಾರೆ. ಅವರು ಬರೆದ ಕತೆಗಳು, ಅಂಕಣ ಬರಹಗಳು ಮತ್ತು ಇತರೆ ಎಲ್ಲ ಬರಹಗಳನ್ನು ಓದಿದಾಗ ಅವು ಅವರು ಬರೆದವುಗಳಲ್ಲ. ಅವರಿಂದ ಬರೆಸಿಕೊಂಡವುಗಳೆಂದು ಅನಿಸದಿರಲಾರದು. ಅವರೇ ಹೇಳಿರುವಂತೆ ಲೋಕಸಾಂಗತ್ಯದ ಅನುಭವದಿಂದ ಬರೆಸಿಕೊಂಡ ಬರಹಗಳು

ಅವು. ಕಡಕೋಳರು ಬರೆಯುವ ಕತೆಗಳು ಮಾತ್ರವಲ್ಲ, ಅಂಕಣ ಬರಹ ಮತ್ತು ಇತರೆ ಎಲ್ಲಾ ಪ್ರಕಾರದ ಬರಹಗಳು ಕಥನಕಲೆಯ ಚೇತೋಹಾರಿ ಚಿತ್ರಕ ಶಕ್ತಿಗಳಿಂದಲೇ ಕೂಡಿರುತ್ತವೆ. ಸಹಜವಾಗಿ ಅವು 'ಪದ್ಯಗಂಧಿ' ಬರಹಗಳೆಂದು ವಿಮರ್ಶಕರಿಂದ ತಾರೀಫು ಮಾಡಿಸಿ ಕೊಳ್ಳುತ್ತವೆ. ಕೆಲವಂತೂ ಬಾಲ್ಯದ ನೆನಪುಗಳಾಗಿರದೇ 'ನೆನಪಿನಾಳದ ಮರೆಯಬಾರದ ಬಾಲ್ಯವೆಂದು' ನೆನಪಿಸಿಕೊಳ್ಳುವಂತಿವೆ. ಹಳೆಯ ಹೈದರಾಬಾದ್ ಕರ್ನಾಟಕ ಸೇರಿದಂತೆ ಅವು ಕಲ್ಯಾಣ ಕರ್ನಾಟಕವೆಂಬ ಹೊಸ ಹೆಸರಿನ ಮೊಗಲಾಯಿ ನೆಲದ ಸಂಕಟಗಳು. ನೋವು, ನಲಿವು, ದರ್ದು, ಕನಸು, ಕನವರಿಕೆ, ಊಳಿಗಮಾನ್ಯ ವ್ಯವಸ್ಥೆ, ಹೆಣ್ಣಿನ ಮೇಲೆ ಜರುಗುವ ದೌರ್ಜನ್ಯ ಹೀಗೆ ನೆಲಬದುಕಿನ ಜೀವಂತಿಕೆಯನ್ನು ಸೆರೆಹಿಡಿದು ನಿಲ್ಲಿಸಿದ ನಿಜದ ನೆಲೆಗಳು.

ರಂಗಭೂಮಿ ಮತ್ತು ತತ್ವಪದಗಳ ಬಗ್ಗೆ ತುಂಬಾ ಕಾಳಜಿ ಮತ್ತು ಖಚಿತವಾಗಿ ಮಾತನಾಡಬಲ್ಲ ಬೆರಳೆಣಿಕೆಯ ಚಿಂತಕರಲ್ಲಿ ಮಲ್ಲಿಕಾರ್ಜುನ ಕಡಕೋಳ ಪ್ರಮುಖರು. ಅದನ್ನು ಅವರು ತಮ್ಮ ಅನೇಕ ಕೃತಿಗಳ ಮೂಲಕ ಸಾಬೀತು ಪಡಿಸಿದ್ದಾರೆ. ಪರಂಪರೆ ಮತ್ತು ಪ್ರಯೋಗಶೀಲತೆಯ ಅನುಸಂಧಾನದ ಮಾರ್ಗದಲ್ಲಿ ಚಿಂತಿಸುವ, ವೈಚಾರಿಕ ನೆಲೆಗಟ್ಟೋಂದನ್ನು ರೂಪಿಸಿಕೊಂಡಿರುವ ಕಾರಣದಿಂದ ಅವರಿಗೆ ಅದು ಸಾಧ್ಯವಾಗಿದೆ. ಅವರ ಹುಟ್ಟೂರಿನ ಕಡಕೋಳ ಮಡಿವಾಳಪ್ಪನ ನೆಲದ ಸತ್ವಗಳು ಅವರ ಸಾಹಿತ್ಯ ಚಿಂತನೆಯ ಗಟ್ಟಿ ಕಾಳುಗಳು. ಅವು ಹತ್ತಿಯೊಳಗಣ ಬಿತ್ತುವ ಬೀಜದ ಕಾಳುಗಳು. ತಮ್ಮ ಸಗರನಾಡು ಪ್ರಾಂತ್ಯದ ಕಂಪು ಸೂಸುವ ಕಲಾತ್ಮಕತೆ ಜತೆಯಲ್ಲಿ ಆದ್ರ್ರತೆ, ಆಪ್ತತೆ ತಾನೇ ತಾನಾಗಿ ಕಡಕೋಳರಿಗೆ ಪ್ರಾಪ್ತವಾಗಿದೆ. ಎಡಪಂಥೀಯ ಧೋರಣೆ ಇವರ ಒಟ್ಟು ಬರಹದಲ್ಲಿ ಸಾಂದ್ರೀಕರಿಸಿದೆ. ಆನುಷಂಗಿಕವಾಗಿ ಎಲ್ಲ ಪಂಥಗಳ ಮಿತಿಗಳನ್ನು ಮೀರಿದ್ದು ಸಹಿತ ಅಲ್ಲಗಳೆಯಲಾಗದು. ಅಂದರೆ ಎಡ ಬಲಗಳನ್ನುದಾಟಿದ 'ಮನುಷ್ಯಪ್ರಜ್ಞೆ' ಅವರ ಕೃತಿಗಳಲ್ಲಿ ಹರಿಗಡಿಯದೇ ಕಾಡಿದೆ. ಈ ಕಾಡುವಿಕೆ ಅವರ ಎಲ್ಲ ಪ್ರಕಾರದ ಬರಹಗಳಲ್ಲಿ ಢಾಳಾಗಿ ಕಾಣುತ್ತದೆ.

 ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2023 ರಲ್ಲಿ ಹೊರಬಂದ ಈ ವಾಚಿಕೆಯ ಕೃತಿಯು 200 ಪುಟಗಳನ್ನು ಹೊಂದಿದ್ದು 200 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.