ಪ್ರಭು ಖಾನಾಪುರೆ

ವಾಚಿಕೆ-16
ಪ್ರಭು ಖಾನಾಪುರೆ
ಕಲ್ಯಾಣ ಕರ್ನಾಟಕದ ಸೃಜನಶೀಲ ಸಾಹಿತಿಗಳು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಸಾಹಿತಿಗಳ ಕೃತಿಗಳು ಕನ್ನಡ ಓದುಗರಿಗೆ ಉಪಲಬ್ಧವಿರುವುದಿಲ್ಲ. ಈ ಲೇಖಕರು ರಚಿಸಿದ ಎಲ್ಲಾ ಸಾಹಿತ್ಯದ ಮೊತ್ತ ಸಾವಿರಾರು ಪುಟಗಳಷ್ಟಾಗುತ್ತದೆ. ಅಷ್ಟನ್ನೂ ಮುದ್ರಿಸುವುದು ಕಷ್ಟಕರ. ಈ ದಿಸೆಯಲ್ಲಿ ನಮ್ಮ ಪ್ರಕಾಶನದಿಂದ ಸಾಹಿತಿಗಳ ವಾಚಿಕೆಗಳನ್ನು ಹೊರತಂದು, ಅವರ ಸಾಹಿತ್ಯದ ಸ್ವಾದವನ್ನು ಕನ್ನಡಿಗರಿಗೆ ಉಣಬಡಿಸಿ ಕನ್ನಡಿಗರ ಹೃನ್ಮನಗಳನ್ನು ಅರಳಿಸುವಂತಾಗಬೇಕೆನ್ನುವುದು ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಸದಿಚ್ಛೆಯಾಗಿದೆ. ಸುವರ್ಣ ಕರ್ನಾಟಕ ನಾಮಕರಣ ಸಂಭ್ರಮಾಚರಣೆ ಸಂದರ್ಭದಲ್ಲಿ, ಕನ್ನಡ ಸಾಹಿತ್ಯದಲ್ಲಿ ಅಹರ್ನಿಶಿ ಸೇವೆಗೈದ ಹಲವು ಹಿರಿಯ ಮತ್ತು ಕಿರಿಯ ಸಾಹಿತಿಗಳ ವಾಚಿಕೆಗಳನ್ನು ಹೊರತಂದು ಕನ್ನಡ ಓದುಗರ ಮಡಿಲಿಗೆ ಅರ್ಪಿಸುವ ಸದಿಚ್ಚೆಯಾಗಿದೆ.
ಈ ಸದಿಚ್ಛೆ ನೆರವೇರುವಲ್ಲಿ ಡಾ. ಶೀಲದೇವಿ ಎಸ್. ಬಿರಾದಾರ ಅವರು ಪ್ರಭು ಖಾನಾಪುರೆಯವರ ಕುರಿತ ಸಮಗ್ರ ಸಾಹಿತ್ಯ ವಾಚಿಕೆ ರೂಪದಲ್ಲಿ ಸಂಪಾದಿಸಿದ್ದಾರೆ. ಪ್ರಭುಖಾನಾಪುರೆ ಯವರಿಂದ ರಚಿತವಾದ ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ. ಅವರ ಕೃತಿಗಳಿಗೆ ಹಲವು ಪ್ರಶಸ್ತಿ ಕೂಡಾ ಲಭಿಸಿದೆ. ಅವರ ಒಟ್ಟು ಸಾಹಿತ್ಯದ ಸತ್ವವನ್ನು ಕನ್ನಡ ಓದುಗರಿಗೆ ಈ ವಾಚಿಕೆ ಉಣಬಡಿಸುತ್ತದೆ.
ಕನ್ನಡದ ಬಂಡಾಯ ಸಾಹಿತಿ ಎಂದೇ ಗುರುತಿಸಿಕೊಂಡಿರುವ ಡಾ. ಪ್ರಭು ಖಾನಾಪುರೆ ಅವರು ಕವಿ, ಕಥೆಗಾರ, ಆಧುನಿಕ ವಚನಕಾರರು, ಸಂಶೋಧಕ, ಗಜಲ್ ಬರಹಗಾರ, ಸಂಪಾದಕ, ನಾಟಕಕಾರ, ಪ್ರಗತಿಪರ ಚಿಂತಕರಾಗಿ, ಹೋರಾಟಗಾರ ರಾಗಿ ಮತ್ತು ಸಂಘಟನಾ ಚತುರರಾಗಿ ಜನರ ಮನಸ್ಸಲ್ಲಿ ನೆಲೆ ನಿಂತಿದ್ದಾರೆ.
ಖಾನಾಪುರೆಯವರು ಸಮಾಜದಲ್ಲಿನ ಘರ್ಷಣೆ, ಹೋರಾಟ, ಪರಿವರ್ತನೆ, ದೌರ್ಜನ್ಯ ಅತ್ಯಾಚಾರ, ಅನ್ಯಾಯ, ಶೋಷಣೆ ದಬ್ಬಾಳಿಕೆಗಳನ್ನು ಕಂಡು ಅನುಭವಿಸಿ ತಮ್ಮ ಸಾಹಿತ್ಯಾಭಿವ್ಯಕ್ತಿಯಲ್ಲಿ ವಿಷಯ ವಸ್ತುವಾಗಿಸಿದ್ದು, ಹೊಸಗನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿವಿಧ ನೆಲೆಗಳಲ್ಲಿ ಬಹುಮುಖಿ ಸಾಧನೆಗೈದಿದ್ದಾರೆ. ಡಾ. ಪ್ರಭು ಖಾನಾಪುರೆ ಅವರು ಗುಲಬರ್ಗಾ ಜಿಲ್ಲೆಯ ಆಳಂದ ತಾಲ್ಲೂಕಿನ ಸರಸಂಬಾ ಗ್ರಾಮದಲ್ಲಿ ದಿನಾಂಕ ೦೧-೦೬-೧೯೫೪ ರಂದು ತಂದೆ ಕಲ್ಯಾಣಿ ಖಾನಾಪುರೆ ತಾಯಿ ಭೀಮಾಬಾಯಿ ದಂಪತಿಗಳ ಮೊದಲನೆಯ ಮಗನಾಗಿ ಜನಿಸಿದರು. ಯಶ್ವಂತ, ಬಸವರಾಜ, ಪಂಡಿತ ಎಂಬ ಮೂವರು ಸಹೋದರರು, ಶ್ರೀಮತಿ ಶಾಂತಾಬಾಯಿ ಒಬ್ಬಳೆ ಸಹೋದರಿ. ತುಂಬಾ ಪ್ರೀತಿ ಸ್ನೇಹದಿಂದ ಇರುವಂತ ಅವಿಭಕ್ತ ಕುಟುಂಬ ಇವರದು. ಅವರ ತಂದೆಯವರು ಶ್ರಮಜೀವಿ, ಕಾಯಕಕ್ಕೆ ಮಹತ್ವ ಕೊಟ್ಟವರು. ಮಕ್ಕಳನ್ನೇ ಆಸ್ತಿ ಎಂದು ತನ್ನ ಮಕ್ಕಳಿಗೆ ಅಕ್ಷರದಿಂದ ವಂಚಿತರಾಗಬಾರದೆಂದು ಪ್ರತಿದಿನ ಕಟ್ಟಿಗೆ ಒಡೆಯುತ್ತಿದ್ದು ವ್ಯಾಪಾರ ಮಾಡಿ ಕಲಿಸಿದವರು. ಪ್ರಭು ಖಾನಾಪುರೆ ತಂದೆಯ ಜೊತೆಗೆ ತಾವು ಕೂಡಾ ಕಟ್ಟಿಗೆ ಒಡೆದು ವ್ಯಾಪಾರ ಮಾಡಿ ಓದುತ್ತಿದ್ದರು. ಅವರು ಅನೇಕ ಕಷ್ಟಗಳ ಮಧ್ಯದಲ್ಲೂ ಹೆದರದೆ ಅಂಜದೇ ಸ್ವತಃ ಕೂಲಿ ಮಾಡಿ ದುಡ್ಡಿನ ಸಮಸ್ಯೆ ನೀಗಿಸುತ್ತಿದ್ದರು. ಒಂದು ಹೊತ್ತಿನ ಊಟಕ್ಕೂ ಕಷ್ಟ ದಾಸೋಹದಲ್ಲಿಯೆ ಊಟ ಮಾಡಿ ವಿದ್ಯಾಭ್ಯಾಸ ಮಾಡುತ್ತಿದ್ದರಂತೆ, ಹೀಗಾಗಿ ಅವರು ಕನ್ನಡದಲ್ಲಿ ಬಂಡಾಯ ಚಳುವಳಿಯು ಕಾವೇರಿದ ಸಂದರ್ಭದಲ್ಲಿ ಬರವಣಿಗೆ ತೊಡಗಿದರು. ಬಡತನವನ್ನೇ ಬೆನ್ನಿಗೆ ಕಟ್ಟಿಕೊಂಡು ಕಲಿತವರು. ಇವರ ಪತ್ನಿ ಶ್ರೀಮತಿ ರೇಣುಕಾದೇವಿ ಹಿಂದಿ ನಿವೃತ್ತ ಉಪನ್ಯಾಸಕಿ, ಸ್ಫೂತಿ ಮಗಳು, ಶರಣು ಮಗ, ತುಂಬು ಸಂತೃಪ್ತಿ ಕುಟುಂಬವಾಗಿದೆ.
ಆಧುನಿಕ ಕನ್ನಡ ಸಾಹಿತ್ಯದಲ್ಲಿ ದಲಿತ ಬಂಡಾಯ ಸಾಹಿತ್ಯ ಸಾಮಾಜಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ, ಬಂಡಾಯದ ಧ್ವನಿಯೆತ್ತಿ ಪ್ರಗತಿಯ ಮಾರ್ಗದಿಂದ ಸಾಹಿತ್ಯ ಕೃತಿಗಳಲ್ಲಿ ಜಾತೀಯತೆ, ಮಹಿಳೆಯರ ಶೋಷಣೆ, ಬಂಡಾಯದ ದನಿ, ಜನಪರ ಜೀವಪರ ನಿಲುವುಗಳು, ದಲಿತರ ನೋವುಗಳು ಪ್ರಧಾನವಾದ ಅಂಶಗಳು ಒಡಮೂಡಿವೆ. ಸಾಹಿತ್ಯ ಕೃಷಿಯ ಜೊತೆಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿಯೂ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡ ಸೃಜನಶೀಲ ಪ್ರತಿಭೆ ಇವರದಾಗಿದೆ.
ಪ್ರಭು ಖಾನಾಪುರೆ ಅವರ ಇಡೀ ಸಾಹಿತ್ಯ ಚಿಂತನೆಗೆ ಆಯ್ದುಕೊಂಡರೆ ಸಾಮಾಜಿಕ,
ಆರ್ಥಿಕವಾಗಿ ವ್ಯವಸ್ಥೆಯಲ್ಲಿ ಅತ್ಯಂತ ಕೆಳಸ್ತರದವ, ಮೌಡ್ಯತೆ, ಬಡತನ, ದಾರಿದ್ರತೆ ಕುರಿತು, ನೊಂದವರ, ಶೋಷಿತರ ಧ್ವನಿಯಾಗಿ, ಸ್ತ್ರೀಪರ ಚಿಂತನೆ ಈ ಎಲ್ಲಾ ಜನಸಾಮಾನ್ಯರ ಪರವಾಗಿ ಧ್ವನಿ ಎತ್ತಿ ತಮ್ಮ ಬದ್ದತೆಯಲ್ಲಿ ಮೆರೆದಿದ್ದು ವಿಶೇಷವೆನ್ನಬಹುದು. ಇಂದಿಗೂ ಪ್ರತಿಭಟನೆ ಮಾಡುತ್ತಲೇ ಕಾವ್ಯ, ಕಥೆ, ನಾಟಕ ಸಾಹಿತ್ಯ, ಗಜಲ್‌ಗಳು, ಆಧುನಿಕ ವಚನಗಳು ಬರೆದು ಪ್ರಕಟಿಸಿದ್ದಾರೆ. ನೈಜತೆಯ ನೆಲೆಯಿಂದ ಕಟ್ಟಿಕೊಟ್ಟವರಲ್ಲಿ ಬಂಡಾಯದ ಹುಲಿ ಖಾನಾಪುರೆಯವರು ಒಬ್ಬರು. ಅವರು ತಮ್ಮ ಸಾಹಿತ್ಯದ ಸೃಜನಶೀಲತೆಯಲ್ಲಿ ಕಾವ್ಯ, ದ್ವಿಪದಿ, ಗಜಲ್, ಆಧುನಿಕ ವಚನಗಳನ್ನು ರಚಿಸಿದವರು ಕಥೆಗಳನ್ನು ಬರೆದಿದ್ದು, ನಾಟಕವನ್ನು ರಚಿಸಿದ್ದಾರೆ. ಅನೇಕ ಸಂಪಾದನೆ, ಲೇಖನಗಳು ಸಂಕಲನವು ಪ್ರಕಟವಾಗಿವೆ. ಅವರ ಎಲ್ಲಾ ಸೃಜನಶೀಲ ಸಾಹಿತ್ಯದಲ್ಲಿ ವೈಚಾರಿಕತೆ, ಪ್ರಗತಿಪರ ಚಿಂತನೆಯ ಆಲೋಚನೆಗಳು ಅಡಗಿವೆ. ಮೌಡ್ಯತೆ, ಸಂಪ್ರದಾಯ, ಮೂಢನಂಬಿಕೆ, ಅಂಧಶ್ರದ್ದೆ, ಅನಕ್ಷರತೆ ಕುರಿತು, ದಮನಿತ, ಶೋಷಿತ ಸಮುದಾಯಗಳ ಬಗ್ಗೆ ಅನುಕಂಪ, ವಿಚಾರಶೀಲತೆ, ಅವರ ಬರಹದಲ್ಲಿ ಕಾಣುತ್ತೇವೆ. ಅವರ ಸಂಘರ್ಷಮಯ ಜೀವನವನ್ನು ಕುರಿತು ಮಾನವೀಯತೆ, ಅನುಕಂಪ, ಕೆಂಡಮಂಡಲದಂತೆ ಅವರ ನುಡಿಗಳಿವೆ. ಹೀಗಾಗಿ ಅವರ ಒಟ್ಟು ಸಾಹಿತ್ಯದ ಬರಹವೇ ಮನುಷ್ಯತ್ವಕ್ಕೆ ದುಡಿಯುತ್ತಿದೆ, ಮಿಡಿಯುತ್ತಿದೆ. ಇದೇ ಅವರ ಬರಹದ ಲಕ್ಷಣವಾಗಿದೆ.
ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2023 ರಲ್ಲಿ ಹೊರಬಂದ ಈ ವಾಚಿಕೆಯ ಕೃತಿಯು 208 ಪುಟಗಳನ್ನು ಹೊಂದಿದ್ದು 210 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.