ಸುಗಯ್ಯ ಹಿರೇಮಠ್
ವಾಚಿಕೆ-14 ಸುಗಯ್ಯ ಹಿರೇಮಠ
ಕಲ್ಯಾಣ ಕರ್ನಾಟಕದ ಸೃಜನಶೀಲ ಸಾಹಿತಿಗಳು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಸಾಹಿತಿಗಳ ಕೃತಿಗಳು ಕನ್ನಡ ಓದುಗರಿಗೆ ಉಪಲಬ್ಧವಿರುವುದಿಲ್ಲ. ಈ ಲೇಖಕರು ರಚಿಸಿದ ಎಲ್ಲಾ ಸಾಹಿತ್ಯದ ಮೊತ್ತ ಸಾವಿರಾರು ಪುಟಗಳಷ್ಟಾಗುತ್ತದೆ. ಅಷ್ಟನ್ನೂ ಮುದ್ರಿಸುವುದು ಕಷ್ಟಕರ. ಈ ದಿಸೆಯಲ್ಲಿ ನಮ್ಮ ಪ್ರಕಾಶನದಿಂದ ಸಾಹಿತಿಗಳ ವಾಚಿಕೆಗಳನ್ನು ಹೊರತಂದು, ಅವರ ಸಾಹಿತ್ಯದ ಸ್ವಾದವನ್ನು ಕನ್ನಡಿಗರಿಗೆ ಉಣಬಡಿಸಿ ಕನ್ನಡಿಗರ ಹೃನ್ಮನಗಳನ್ನು ಅರಳಿಸುವಂತಾಗಬೇಕೆನ್ನುವುದು ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಸದಿಚ್ಛೆಯಾಗಿದೆ. ಸುವರ್ಣ ಕರ್ನಾಟಕ ನಾಮಕರಣ ಸಂಭ್ರಮಾಚರಣೆ ಸಂದರ್ಭದಲ್ಲಿ, ಕನ್ನಡ ಸಾಹಿತ್ಯದಲ್ಲಿ ಅಹರ್ನಿಶಿ ಸೇವೆಗೈದ ಹಲವು ಹಿರಿಯ ಮತ್ತು ಕಿರಿಯ ಸಾಹಿತಿಗಳ ವಾಚಿಕೆಗಳನ್ನು ಹೊರತಂದು ಕನ್ನಡ ಓದುಗರ ಮಡಿಲಿಗೆ ಅರ್ಪಿಸುವ ಸದಿಚ್ಚೆಯಾಗಿದೆ.
ಈ ಸದಿಚ್ಛೆ ನೆರವೇರುವಲ್ಲಿ ಡಾ. ಜಯದೇವಿ ಗಯಾಕವಾಡ ಅವರು ಪ್ರೊ. ಸೂಗಯ್ಯ ಹಿರೇಮಠ ಕುರಿತ ಸಮಗ್ರ ಸಾಹಿತ್ಯ
ವಾಚಿಕೆ ರೂಪದಲ್ಲಿ ಸಂಪಾದಿಸಿದ್ದಾರೆ. ಪ್ರೊ. ಸೂಗಯ್ಯ ಹಿರೇಮಠರವರಿಂದ ರಚಿತವಾದ ಸಾಹಿತ್ಯ ಈ
ವಾಚಿಕೆಯಲ್ಲಿ ಅಡಕವಾಗಿದೆ. ಅವರ ಕೃತಿಗಳಿಗೆ ಹಲವು ಪ್ರಶಸ್ತಿ ಕೂಡಾ ಲಭಿಸಿದೆ. ಸಗರನಾಡು ಪರಿಸರದಲ್ಲಿ ಕನ್ನಡ ಕಟ್ಟುವುದರ ಜೊತೆಗೆ ಕಾವ್ಯ, ಕಥೆ, ಪ್ರಬಂಧ, ಮಕ್ಕಳ ಸಾಹಿತ್ಯದ ಜೊತೆ ಜಾನಪದ ಸಾಹಿತ್ಯದಲ್ಲಿ ಹಲವು ಕೃತಿ ರಚಿಸಿದವರು. ಅವರ ಒಟ್ಟು ಸಾಹಿತ್ಯದ ಸಾರಸ್ವತ ಸತ್ವವನ್ನು ಕನ್ನಡ ಓದುಗರಿಗೆ ಈ ವಾಚಿಕೆ ಉಣಬಡಿಸುತ್ತದೆ.
ಸೂಗಯ್ಯ ಹಿರೇಮಠ ಅವರು ಈ ನಾಡು ಕಂಡ ಅಪರೂಪದ ಲೇಖಕರು. ಕಲ್ಯಾಣ ಕರ್ನಾಟಕದ ಬಹು ಮುಖ ವ್ಯಕ್ತಿತ್ವದ ಅಸಾಧರಣ ಶಕ್ತಿ. ಸೃಜನಶೀಲ ಸಾಹಿತ್ಯ ಮತ್ತು ಹೋರಾಟಗಳಲ್ಲಿ ತಮ್ಮದೇ ಛಾಪು ಮೂಡಿಸಿದ ವರ್ಣನಾತೀತ ಸಾಹಿತಿ. ಅವರು ಇವತ್ತಿನ ಯಾದಗಿರಿ ಜಿಲ್ಲೆಯ ಶಹಪೂರ ತಾಲೂಕಿನ ಸಿಂಗನಹಳ್ಳಿಯವರು. ಸಗರ ನಾಡೆಂದು ಪ್ರಸಿದ್ಧವಾದ ಜಂಗಮ ಮನೆತನದ ಸಂಪ್ರದಾಯಸ್ಥರ, ಸುಸಂಸ್ಕೃತ, ಕಲೆ, ಸಾಹಿತ್ಯ ಕೇಂದ್ರದ ಮನೆತನದಲ್ಲಿ ಹುಟ್ಟಿದವರು. ಇಲ್ಲಿಯ ಶರಣಯ್ಯ ಮತ್ತು ಶಾಂತಮ್ಮರ ಮಗನಾಗಿ ೦೯-೦೫-೧೯೫೦ರಂದು ಜನಿಸಿದರು. ಬಾಲ್ಯದಿಂದಲೇ ವೈಚಾರಿಕತೆ ಮೂಡಿಸಿಕೊಂಡ ಅಪರೂಪದ ಜೀವಿ.
ಸಿಂಗನಹಳ್ಳಿ, ಗೋಗಿ, ಶಹಪೂರ, ಕಲಬುರಗಿಯ ಶ್ರೀ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಿಂದ ಬಿ.ಎ.ಪದವಿ ಪಡೆದ ಅವರು ಮುಂದೆ ಎಂ.ಎ.ಕನ್ನಡ ಮತ್ತು ಜಾನಪದ ವಿಷಯ ಆಯ್ದುಕೊಂಡು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಗುಲಬರ್ಗಾದಿಂದ ೧೯೭೫ರಲ್ಲಿ ಪದವಿ ಪಡೆದರು. ಆಗ ಡಾ. ಬಿ.ಬಿ. ಹೆಂಡಿ, ಡಾ. ಎಂ. ಜಿ. ಬಿರಾದಾರ, ಡಾ. ಕೃಷ್ಣಮೂರ್ತಿ ಕಿತ್ತೂರ, ಡಾ.
ಎಂ.ಎಸ್. ಲರೈ, ಡಾ. ಬಿ. ವಿ. ಮಲ್ಲಾಪೂರ, ಡಾ. ಶಶಿಕಲಾ ಮೊಳ್ಳಿ, ಡಾ. ಸಂಗಮೇಶ ಸವದತ್ತಿಮಠ ಪ್ರಾಧ್ಯಾಪಕರಾಗಿದ್ದರು.
೧೯೭೬ರಿಂದ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ ಕನ್ನಡ ವಿಭಾಗದಿಂದ ನಡೆದ ಉತ್ತರ ಕರ್ನಾಟಕದ ಏಳು ಜಿಲ್ಲೆಯ ಯು.ಜಿ.ಸಿ ಯೋಜನೆಯ ಜನಪದ ಸಾಹಿತ್ಯ ಸಂಗ್ರಹದಲ್ಲಿ ಸಹಾಯಕ ಸಂಶೋಧಕರಾಗಿ ೧೯೮೦ರವರೆಗೆ ನಾಲ್ಕು ವರ್ಷ ಕಾರ್ಯನಿರ್ವಹಿಸಿದರು. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಯುಜಿಸಿ ಯೋಜನೆಯ ಜನಪದ ವೈದ್ಯಕೋಶದ ಗುಲಬರ್ಗಾ ಜಿಲ್ಲೆಯ
ಸಂಗ್ರಹಕಾರರಾಗಿಯೂ ಮಹತ್ತ್ವದ ಕೆಲಸ ಮಾಡಿದವರು.
ಜೀವನ ಚರಿತ್ರೆ
ನಮ್ಮ ಶರಣರು, ಸಂತರು, ಮಹಾತ್ಮರು, ಸಾಧಕರು ಮಾಡಿದ ಜೀವನ, ಬರಹ, ಬದುಕಿನ ಮೌಲ್ಯಗಳು ಜನಮಾನಸದಲ್ಲಿ ನೆಲೆ ನಿಲ್ಲುವಂತಹ ಚರಿತ್ರೆಗಳು ಮಾಡುತ್ತವೆ. ಉರಿಲಿಂಗಪೆದ್ದಿ, ಕಿನ್ನರಿ ಬ್ರಹ್ಮಯ್ಯ, ಎಡೆಯೂರು ಸಿದ್ಧಲಿಂಗೇಶ್ವರ, ಹೇಮರೆಡ್ಡಿ ಮಲ್ಲಮ್ಮ, ತಿಂಥಣಿ ಮೋನಪ್ಪಯ್ಯ, ಗುರುನಾನಕ, ಇಂಥದೊಂದು ಚರಿತ್ರೆ ಕಟ್ಟುವಾಗ ಸಂಪೂರ್ಣ ಮಾಹಿತಿ, ಅಧ್ಯಯನ, ಸಂಗ್ರಹದಿಂದ ವೈಶಿಷ್ಟ್ಯ ಪೂರ್ಣವಾಗಿ ದಾಖಲಿಸಿದ್ದಾರೆ.
ಆಧುನಿಕ ವಚನ
ಹನ್ನೆರಡನೆಯ ಶತಮಾನದ ಶರಣರು ವಚನ ಸಾಹಿತ್ಯವನ್ನು ರಚಿಸಿದವರು. ಅವರ ಮುಂದುವರಿಕೆಯಾಗಿ ಆಧುನಿಕ ವಚನಗಳು ರಚನೆಯನ್ನು ಕವಿಗಳು ಬರೆದು ಶರಣರ ಪರಂಪರೆಯನ್ನು ಮುಂದುವರೆಸಿಕೊಂಡು ಬಂದರು. ರಾಯಚೂರು ಜಿಲ್ಲೆಯ ದೇವದುರ್ಗದ ಆದಿಮಾತೆಪ್ಪ ಮೊಟ್ಟಮೊದಲ ವಚನಕಾರ. ಹರ್ಡೇಕರ ಮಂಜಪ್ಪ, ರಂಗಣ್ಣ, ಸಿದ್ದಯ್ಯ ಪುರಾಣಿಕರಂಥವರು ಅಲ್ಲದೇ ಇಂದು ಎಂಟನೂರಕ್ಕು ಹೆಚ್ಚು ವಚನಕಾರರು ಬರೆಯುತ್ತಿದ್ದಾರೆ. ಆ ಸಾಲಿನಲ್ಲಿ ಸೂಗಯ್ಯನವರು ಒಬ್ಬರು. ಸುವರ್ಣ ಮಹೋತ್ಸವದ ಸೂಗೂರೇಶ್ವರ ಎಂಬ ಅಂಕಿತದಲ್ಲಿ ೩೦೭ ವಚನಗಳು ಸೂಗೂರೇಶ್ವರ ವಚನಗಳು ಎಂಬ ಸಂಕಲನ ಪ್ರಕಟಿಸಿದ್ದಾರೆ. ಅವರ ವಚನದಲ್ಲಿ ಜ್ಞಾನ, ವಿಜ್ಞಾನ, ವೈಚಾರಿಕತೆ, ಮಾನವೀಯತೆಯನ್ನು ಎತ್ತಿ ತೋರಿಸುವ ವಚನಗಳು. ಕೊರಾನಾಗಿಂತ ಮುಂಚೆಯೇ 'ಸುಲಿಗೆ ಮಾಡುವ ಡಾಕ್ಟರ್/ಬಹುದೊಡ್ಡ ಹಣದ ರೋಗಿ ನೋಡಾ' ಎಂದು ಬರೆದವರು. ಬಾಡಿಗೆ ಎಲ್ಲಾ ದೊರೆತರೂ ಸಹ ಇಂದು ಬಾಡಿಗೆ ತಂದೆ, ತಾಯಿ, ಮಕ್ಕಳು ದೊರೆಯುವುದು ಕಂಡ ದಂಗಾದ ಬಗ್ಗೆ ಚಿಂತನೆ ಇದೆ. ರೈತರು, ಅಸ್ಪೃಶ್ಯತೆ, ಈ ವಾಸ್ತವತೆಗೆ ಹತ್ತಿರವಿರುವ ವಚನ ಬರೆದು ಗಮನ ಸೆಳೆದವರು.
ಜಾನಪದ ಸಾಹಿತ್ಯ
ಜಾನಪದ ಸಾಹಿತ್ಯ ಸಂಗ್ರಹ, ಸಂಪಾದನೆ, ಪ್ರಕಟಣೆ,ಸಂಶೋಧನೆ, ವಿಮರ್ಶೆಯನ್ನು ಹಂತ ಹಂತವಾಗಿ ಮಾಡಿದ ಅಪೂರ್ವ ಜಾನಪದ ವಿದ್ವಾಂಸರಲ್ಲಿ ಸೂಗಯ್ಯನವರು ಒಬ್ಬರು. ಪ್ರಾರಂಭದಲ್ಲಿ ಉತ್ತರ ಕರ್ನಾಟಕ ಜಾನಪದ ಯೋಜನೆಯ ಸಹಾಯಕ ಸಂಶೋಧಕರಾಗಿ ಹಳ್ಳಿ ಹಳ್ಳಿಗಳಲ್ಲಿ ತಿರುಗಿ ಸಂಗ್ರಹ ಮಾಡಿದವರು. ಅದೇ ಜ್ಞಾನ ಅವರನ್ನು ಬಹು ಅಪರೂಪದ ಕಾರ್ಯ ಮಾಡಲು ಸಾಧ್ಯವಾಯಿತು. ಮೈಲಾರಲಿಂಗನ ಸಾಹಿತ್ಯ ಮತ್ತು ಸಂಪ್ರದಾಯ, ಸಣ್ಣಾಟಗಳ ವಸ್ತು ಮತ್ತು ತಂತ್ರ,ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು ಹಾಗೂ ಬಯಲಾಟದ ಸಾರಥಿ ಕುರಿತು ನಾಲ್ಕು ಬಾರಿ ಸಂಶೋಧನೆ ಮಾಡಲು ನೋಂದಣಿ ಮಾಡಿದರು. ಅವರು ಮಾಡಿರುವರು,
ಇವರು ಮಾಡಿರುವರು ಎಂದು ಸಂಶೋಧನೆ ಮಾಡಲು ಬದಲಾವಣೆಗೊಂಡು ಇವರ ಮನಸ್ಸಿಗೆ ನೋವಾಗಿ, ಪಿಎಚ್.ಡಿ ಮಾಡುವುದನ್ನೇ ಬಿಟ್ಟು ತಾವೇ ಸಂಶೋಧನಾ ಪುಸ್ತಕ ಪ್ರಕಟಿಸಲು ಮುಂದಾದರು.
ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು, ಜನಪದ ವೈದ್ಯ ಪದ್ಧತಿ, ದೇವದೇವ ವನ, ಜನಪದ ಒಗಟಿನ ಕಥೆಗಳು,ಜಾನಪದ ಸಂಸ್ಕೃತಿ, ಮನೆಮದ್ದು, ಜನಪದ ಸಾಹಿತ್ಯದಲ್ಲಿ ಶೃಂಗಾರ ಗೀತೆಗಳು, ಜಾನಪದ ಸಂವಹನ, ಮುಂತಾದ ಜಾನಪದಕ್ಕೆ ಸಂಬಂಧಿಸಿದಂತೆ ಕೃತಿ ಪ್ರಕಟಿಸಿ ಜಾನಪದ ತಜ್ಞರಾದವರು.
ವಚನ ಸಾಹಿತ್ಯ, ವಿಮರ್ಶೆ, ಸಂಶೋಧನೆ, ಶಿಶುಪ್ರಾಸಗಳು, ಪ್ರಬಂಧಗಳು, ಚಿಂತನ,ಚರಿತ್ರೆ, ಸಂಪಾದನೆ, ಸೃಜನಶೀಲ ಸಾಹಿತಿಯಾಗಿ ಕಾವ್ಯ, ವಚನ, ನಾಟಕ, ಕಥೆಗಳನ್ನು ಬರೆದೆ ಸಾಹಿತಿಯಾದವರು.
ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2023 ರಲ್ಲಿ ಹೊರಬಂದ ಈ ವಾಚಿಕೆಯ ಕೃತಿಯು 196 ಪುಟಗಳನ್ನು ಹೊಂದಿದ್ದು 195 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.