ಜಂಬಣ್ಣ ಅಮರಚಿಂತ

ಜಂಬಣ್ಣ ಅಮರಚಿಂತ

ವಾಚಿಕೆ-9

ಜಂಬಣ್ಣ ಅಮರಚಿಂತ

ಕಲ್ಯಾಣ ಕರ್ನಾಟಕದ ಸೃಜನಶೀಲ ಸಾಹಿತಿಗಳು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಸಾಹಿತಿಗಳ ಕೃತಿಗಳು ಕನ್ನಡ ಓದುಗರಿಗೆ ಉಪಲಬ್ಧವಿರುವುದಿಲ್ಲ. ಈ ಲೇಖಕರು ರಚಿಸಿದ ಎಲ್ಲಾ ಸಾಹಿತ್ಯದ ಮೊತ್ತ ಸಾವಿರ ಪುಟಗಳಷ್ಟಾಗುತ್ತದೆ. ಅಷ್ಟನ್ನೂ ಮುದ್ರಿಸುವುದು ಕಷ್ಟಕರ. ಈ ದಿಸೆಯಲ್ಲಿ ನಮ್ಮ ಪ್ರಕಾಶನದಿಂದ ಸಾಹಿತಿಗಳ ವಾಚಿಕೆಗಳನ್ನು ಹೊರತಂದು, ಅವರ ಸಾಹಿತ್ಯದ ಸ್ವಾದವನ್ನು ಕನ್ನಡಿಗರಿಗೆ ಉಣಬಡಿಸಿ ಕನ್ನಡಿಗರ ಹೃನ್ಮನಗಳನ್ನು ಅರಳಿಸುವಂತಾಗಬೇಕೆನ್ನುವುದು ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಸದಿಚ್ಛೆಯಾಗಿದೆ. ಸುವರ್ಣ ಕರ್ನಾಟಕ ನಾಮಕರಣ ಸಂಭ್ರಮಾಚರಣೆ ಸಂದರ್ಭದಲ್ಲಿ, ಕನ್ನಡ ಸಾಹಿತ್ಯದಲ್ಲಿ ಅಹರ್ನಿಶಿ ಸೇವೆಗೈದ ಹಲವು ಹಿರಿಯ ಮತ್ತು ಕಿರಿಯ ಸಾಹಿತಿಗಳ ವಾಚಿಕೆಗಳನ್ನು ಹೊರತಂದು ಕನ್ನಡ ಓದುಗರ ಮಡಿಲಿಗೆ ಅರ್ಪಿಸುವ ಸದಿಚ್ಚೆಯಾಗಿದೆ.

ಈ ಸದಿಚ್ಛೆ ನೆರವೇರುವಲ್ಲಿ ಡಾ. ಪೀರಪ್ಪ ಬಿ. ಸಜ್ಜನ ಅವರು ಜಂಬಣ್ಣ ಅಮರಚಿಂತ ಕುರಿತ ಸಮಗ್ರ ಸಾಹಿತ್ಯ ವಾಚಿಕೆ

ರೂಪದಲ್ಲಿ ಸಂಪಾದಿಸಿದ್ದಾರೆ. ಜಂಬಣ್ಣ ಅಮರಚಿಂತರವರಿಂದ ರಚಿತವಾದ ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ. ಅವರ ಕೃತಿಗಳಿಗೆ ಹಲವು ಪ್ರಶಸ್ತಿ ಕೂಡಾ ಲಭಿಸಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕನ್ನಡ ಕಟ್ಟುವುದರ ಜೊತೆಗೆ ಕಾವ್ಯ, ಗಜಲ್, ರುಬಾಯಿ, ಕಾದಂಬರಿ, ಜೀವನ

ಚರಿತ್ರೆ ಸಾಹಿತ್ಯದ ಹಲವು ಕೃತಿ ರಚಿಸಿದವರು. ಅವರ ಒಟ್ಟು ಸಾಹಿತ್ಯದ ಸಾರಸ್ವತ ಸತ್ವವನ್ನು ಕನ್ನಡ ಓದುಗರಿಗೆ ಈ ವಾಚಿಕೆ ಉಣಬಡಿಸುತ್ತದೆ.

"ನೀವೆಲ್ಲಿಯವರೊ ನಾವಲ್ಲಿಯವರೇ ನಡೆದ ದಾರಿ ಒಂದೆ, ಒಂದೆ ತವರೂರು'' "ಮೆದುವಾಗಬೇಕು ಕವಿ ಮೃದುವಾಗಬೇಕು ಮಾಗಿದಂತೆ ಕವಿ ಹೃದಯ ಸುಧೆಯಾಗಬೇಕು" ಎನ್ನುವಂತಹ ಕಾವ್ಯದ ಸಾಲುಗಳನ್ನು ಕಟ್ಟಿಕೊಟ್ಟಿರತಕ್ಕಂತ ನಿಜವಾದ ಸತ್ವ ಹಿತವಾದ ಜಂಬವಿಲ್ಲದ ಜಂಬಣ್ಣ ಅಮರಚಿಂತ ಅವರ ಕಾವ್ಯವೇ ಅಮರಚಿಂತನವಾಗಿವೆ. ಇವರು ಮೂಲತಃ ಆಂಧ್ರಪ್ರದೇಶಕ್ಕೆ ಸೇರಿರತಕ್ಕಂತವರು. ಮೆಹಬೂಬ್ ನಗರ್ ಜಿಲ್ಲೆಯ ಗದ್ವಾಲ್ ತಾಲೂಕಿನ ಅಮರಚಿಂತ ಗ್ರಾಮದಿಂದ ರಾಯಚೂರಿಗೆ ಬಂದು ನೆಲೆಸಿದರು. ಉಪ್ಪೇರ ಲಕ್ಷ್ಮಣ್ಣ ಮತ್ತು ಕುರುಮವ್ವರ ಮಗನಾಗಿ ರಾಯಚೂರಿನಲ್ಲಿ ೦೭-೦೪- ೧೯೪೫ರಲ್ಲಿ ಜನಿಸಿದರು. ಜಂಬಣ್ಣ ಅಮರಚಿಂತ ಅವರು ಈ ನಾಡ ಬಹು ಮುಖ್ಯ ಕವಿಗಳಾಗಿ ನಮಗೆ ಕಂಡುಬರುತ್ತಾರೆ.

ಅಮರಚಿಂತರು ನಗರದ ಅನೇಕ ಕಡೆಗೆ ಶಿಕ್ಷಣವನ್ನ ಪಡೆದು, ನಂತರ ಹಮದರ್ದ ಪ್ರೌಢ ಶಾಲೆಯಲ್ಲಿ ೧೦ನೇ ತರಗತಿಯನ್ನು ಪಾಸಾದವರು. ನಂತರ ಅಲ್ಲಿಂದ ಪಿ.ಯು.ಸಿ ಪಾಸಾದವರು. ಎಲ್.ವಿ.ಡಿ. ಕಾಲೇಜಿನಿಂದ ಬಿ.ಎ. ಪದವಿ, ಕೊಲ್ಲಾಪುರ ವಿಶ್ವವಿದ್ಯಾಲಯದಿಂದ ಎಂ.ಎ.ಕನ್ನಡ ಪದವಿ ಪಡೆದವರು.

ಆರೋಗ್ಯ ಇಲಾಖೆಯಲ್ಲಿ ವೃತ್ತಿ ಜೀವನ ಪ್ರಾರಂಭಿಸಿ ಕಳೆದ ಮೂರುವರೆ ದಶಕಗಳವರೆಗೆ ಜಿಲ್ಲೆಯ ಹಲವು ತಾಲೂಕಿನಲ್ಲಿ ಸೇವೆ ಸಲ್ಲಿ ಕಛೇರಿ ಮುಖ್ಯಸ್ಥರಾಗಿ ವೃತ್ತಿಯನ್ನು ಪೂರೈಸಿ ನಿವೃತ್ತರಾದವರು.

ಇವರಿಗೆ ಶಾಂತರಸರು ವಿದ್ಯಾ ಗುರುಗಳಾಗಿದ್ದರು. ನಂತರದಲ್ಲಿ ಶಾಂತರಸರು, ಚಂದ್ರಕಾಂತ ಕುಸನೂರ, ಕಿಷನ್ ರಾವ್, ಕೆ.ಮುದ್ದಣ್ಣ, ಜಯತೀರ್ಥ ರಾಜಪುರೋಹಿತ. ರಾಜಶೇಖರ ನೀರಮಾನ್ವಿ ಅವರು ಹಿರಿಯರಾಗಿ ಮಾರ್ಗದರ್ಶನ ಮಾಡುತ್ತಿದ್ದರು. ಅದೇ ಹೊತ್ತಿಗೆ ಡಾ. ಚೆನ್ನಣ್ಣ ವಾಲೀಕಾರ ಅವರು ರಾಯಚೂರಿಗೆ ಬಂದರು. ಆಗ ಅಮರಚಿಂತರು, ಬೋಳಬಂಡೆಪ್ಪನವರು ಸೇರಿ ಹಿಂದಿ, ತೆಲುಗು, ಇಂಗ್ಲಿಷ್,ಕನ್ನಡ ಸಾಹಿತ್ಯದ ಅಧ್ಯಯನ ಪ್ರಾರಂಭಿಸಿದವರು. ಹಿಂದಿ ಮುಕ್ತಿಬೋಧೆ, ಆಗ್ನಿಯ, ತೆಲುಗಿನ ಶ್ರೀ ಶ್ರೀ, ಚೆರಬಂಡರಾಜು, ವರವರರಾವ್, ದಿಗಂಬರ, ವಿಪ್ಲವ, ವಿರಸಂ, ಚಿಲಿ ದೇಶದ ಪಾಲ್ಲೋ, ನೆರೂಡ, ಮಹಾರಾಷ್ಟ್ರದ ಪ್ಯಾಂಥರ್ ಪ್ರಭಾವ ಬೀರಿದವು. ಇವರನ್ನೆಲ್ಲ ಓದಿದ ಮೇಲೆ ಕಲೆಗಾಗಿ ಕಲೆ ಅಲ್ಲ: ಜೀವನಕ್ಕಾಗಿ ಕಲೆ ಎಂಬ ವಿಚಾರಧಾರೆ. ಅರಿತುಕೊಂಡವರು. ಆಗಾಗಲೇ ಕವಿಗೋಷ್ಠಿಗಳನ್ನು ಏರ್ಪಡಿಸುತ್ತಿದ್ದರು. ನವ್ಯ ಕಾವ್ಯದ ಪ್ರಭಾವದಿಂದ ಸಾಹಿತ್ಯವನ್ನು ರಚಿಸುವಂತಹ ಸಂದರ್ಭದಲ್ಲಿ ಇವರೆಲ್ಲರ ಪ್ರಭಾವಕ್ಕೆ ಒಳಗಾಗಿ ಅವರ ಜೊತೆಗೆ ಕೂಡಿ ಕಥೆಗಳನ್ನು, ಕಾವ್ಯಗಳನ್ನು ಓದ ತೊಡಗಿದರು. ಪ್ರಗತಿಪರ ಸಾಹಿತ್ಯದತ್ತ ತೊಡಗಿದರು. ರಾಯಚೂರು ಜಿಲ್ಲೆಯ ಪ್ರಥಮ ಡಿಎಸ್‌ಎಸ್ ಸಂಚಾಲಕರಾಗಿ ಕೆಲಸವನ್ನು ನಿರ್ವಹಿಸಿದರು. ಆ ಸಂದರ್ಭದಲ್ಲಿ ಬೋಳಬಂಡೆಪ್ಪ, ಕರಿಯಪ್ಪ ಮಾಸ್ಟರ್, ಬಾಬು ಭಂಡಾರಿಗಲ್, ಅಮರಚಿಂತರು ಅನೇಕರು ಹಳ್ಳಿಗಳಿಗೆ ತೆರಳಿ ತಮ್ಮದೇ ಆಗಿರುವ ವಿಚಾರಗಳನ್ನು ಅಭಿವ್ಯಕ್ತಿಪಡಿಸುವಂತಹ ಕೆಲಸವನ್ನು ಮಾಡಿದರು. ದೌರ್ಜನ್ಯಗಳನ್ನು ಪ್ರತಿಭಟಿಸಿದರು. ಆರೋಲಿ ಜಾತ್ರೆಯ ಬೆತ್ತಲ ಸೇವೆ, ಮೆದಕಿನಾಳದ ಭೂ ಹೋರಾಟ, ಜಾಲಿಬೆಂಚಿ ರೈತರಿಗೆ ನಿವೇಶನ ಕೊಡಿಸುವಲ್ಲಿ ಇವರ ಪಾತ್ರವಿದೆ. ತೆಲಗು ಹಾಡು ತರ್ಜುಮೆ ಮಾಡಿ ಕನ್ನಡದಲ್ಲಿ ಹಾಡಿ ಹೂಗಳನ್ನು ಕೊಟ್ಟು ಹೋರಾಟ ಮಾಡಿದವರು. ಇಂತಹ ಚಂಡಮಾರುತಕ್ಕೆ ಸಿಲುಕಿ ತಮ್ಮ ಮೂಲ ನೆಲೆಗಳನ್ನು ಕಳೆದುಕೊಂಡು ಬೀದಿ ಪಾಲಾಗಿ ಸಂಕಷ್ಟಕ್ಕೆ ಒಳಗಾಗಿರತಕ್ಕಂತಹ ಜನರಿಗೆ ಅನೇಕ ಸಮಾನ ಮನಸ್ಕರರ ಮನೆಗೆ ತೆರಳಿ ಹಣವನ್ನು ಸಂಗ್ರಹಿಸಿ ಕೊಟ್ಟ ಮಾನವೀಯತೆ ಕವಿ ನಮ್ಮ ಜಂಬಣ್ಣ ಅಮರಚಿಂತವರು. ಇವರು ರಾಯಚೂರು ಸ್ವಚ್ಛಗೊಳಿಸುವ ಹೋರಾಟ ಸಂಘದ ಸಲಹೆಗಾರರಾದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಕಾರ್ಯವನ್ನು ನಿರ್ವಹಿಸಿದ್ದಾರೆ. ಅಲ್ಲದೆ ಇವರ ಕವಿತೆಗಳು, ಕಾವ್ಯ, ಗಜಲ್, ಕಾದಂಬರಿ ಕಲಬುರಗಿ, ಮೈಸೂರು, ಉಸ್ಮಾನಿಯಾ ವಿಶ್ವವಿದ್ಯಾಲಯಗಳಲ್ಲಿ ಪಠ್ಯಗಳಾಗಿವೆ. ಪಿಯುಸಿ ದ್ವಿತೀಯ ಮತ್ತು ಪ್ರಾಥಮಿಕ ೫ನೇ ತರಗತಿ, ಪ್ರೌಢ ಶಿಕ್ಷಣ ೯ನೇ ತರಗತಿ ಪಠ್ಯಪುಸ್ತಕದಲ್ಲಿ ಇವರ ಕವಿತೆಗಳು, ಗಜಲ್, ಪಠ್ಯದಲ್ಲಿವೆ. ಬೂಟುಗಾಲಿನ ಸದ್ದು ಎನ್ನುವ ಕಾದಂಬರಿ ನಾಟಕ ರೂಪಾಂತರಗೊಂಡು ಪ್ರದರ್ಶನವ ಕೂಡ ಆಗಿದೆ.

೨೦೦೯ರಲ್ಲಿ ಚೆನ್ನೈ ನಡೆದ ಬಹುಭಾಷೆ ಕವಿಗೋಷ್ಠಿಯಲ್ಲಿ ಕವಿತೆ ವಾಚನವನ್ನು ಮಾಡಿದ್ದಾರೆ. ಭದ್ರಾವತಿಯ ಕೃಷ್ಣಪ್ಪನವರು ದಲಿತ ಲೇಖಕರ ಬಳಗವನ್ನು ಹುಟ್ಟು ಹಾಕಿ ೧೯೭೯ರಲ್ಲಿ ಪ್ರಾರಂಭವಾದ ದಲಿತ ಜಾಗೃತಿಯಲ್ಲಿ ಇವರ ಪಾಲನ್ನು ಪಡೆದುಕೊಂಡಿದ್ದಾರೆ. ಅದೇ ರೀತಿಯಾಗಿ ಧರ್ಮಸ್ಥಳದಲ್ಲಿ ೧೯೭೯ರಲ್ಲಿ ನಡೆಯುವ ೫೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ನವ್ಯ ಕವಿ ಗೋಪಾಲಕೃಷ್ಣ ಅಡಿಗರು ಆಯ್ಕೆಗೊಂಡ ಸಂದರ್ಭದಲ್ಲಿ ಡಾ. ಚೆನ್ನಣ್ಣ ವಾಲೀಕಾರ,ಜಂಬಣ್ಣ ಅಮರಚಿಂತ, ಬೋಳಬಂಡೆಪ್ಪ ಇತರರು ಸೇರಿಕೊಂಡು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಗೋಷ್ಠಿಯನ್ನು ಇಡಬೇಕೆಂದು ಪತ್ರವನ್ನು ಬರೆದರು. ಇದು ಪ್ರಜಾವಾಣಿ ವಾಚಕರ ವಾಣಿಯಲ್ಲಿಯೂ ಕೂಡ ಪ್ರಕಟವಾಯಿತು. ಇದನ್ನು ಅಂದಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹಂಪನಾ ಅವರು ಕನ್ನಡ ಸಾಹಿತ್ಯದಲ್ಲಿ ಇರುವುದು ಒಂದೇ ಸಾಹಿತ್ಯ ಇದರಲ್ಲಿ ದಲಿತ, ಬಲಿತ, ಕಲಿತ ಇಲ್ಲ. ಎನ್ನುವಂತ ಪ್ರಾಸಬದ್ಧವಾಗಿ ಹಗುರವಾದ ಮಾತು ಕೇಳಿದಾಗ ಇದನ್ನು ಕಂಡು ಇಡೀ ಕನ್ನಡದ ಪ್ರಗತಿಪರ ಲೇಖಕರೆಲ್ಲರೂ ಸೇರಿಕೊಂಡು ಪ್ರತಿಭಟನೆಯನ್ನು ಮಾಡುವುದರ ಮೂಲಕವಾಗಿ ಸ್ವಾಭಿಮಾನಿಗಳಾಗಿರುವ ಡಿ. ಆರ್. ನಾಗರಾಜ, ದೇವನೂರು ಮಹಾದೇವ್. ಸಿದ್ದಲಿಂಗಯ್ಯ, ಬರಗೂರ ರಾಮಚಂದ್ರಪ್ಪ ಮುಂತಾದವರು ಸೇರಿಕೊಂಡು, ಬಂಡಾಯ ಸಾಹಿತ್ಯ ಸಂಘಟನೆ ಸಂಘಟನೆಯನ್ನು ಬೆಂಗಳೂರಿನಲ್ಲಿ ಆಂಧ್ರದ ಹೆಸರಾಂತ ಕವಿಗಳಾಗಿರುವ ಶ್ರೀ ಶ್ರೀ ಅವರ ಮೂಲಕ ಉದ್ಘಾಟನೆಯನ್ನು ಮಾಡಿಸಿದರು. ಅಲ್ಲಿಂದ ಬಂಡಾಯ ಸಾಹಿತ್ಯ ಸಂಘಟನೆ ಪ್ರಾರಂಭವಾಗಿ 'ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣ ಮಿತ್ರ' ಎಂಬ ಧೈಯ ವಾಕ್ಯವಾಗಿಸಿಕೊಂಡಿತು. ನಾವೆಲ್ಲರೂ ಕೂಡ ನೋಡಿದ್ದೇವೆ. ಇಂಥ ಒಂದು ಚಳವಳಿಗೆ ಕಾರಣರಾಗಿರತಕ್ಕಂತವರು ಅಮರಚಿಂತವರು. ಇಡೀ ಕನ್ನಡ ಸಾಹಿತ್ಯಕ್ಕೆ ಅಪೂರ್ವವಾಗಿರತಕ್ಕಂತಹ ಕಾವ್ಯವನ್ನು ಕೊಟ್ಟಿರುವ ಸರಳ ಸಜ್ಜನಿಕೆ ಕವಿ.

ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2023 ರಲ್ಲಿ ಹೊರಬಂದ ಈ ವಾಚಿಕೆಯ ಕೃತಿಯು 192 ಪುಟಗಳನ್ನು ಹೊಂದಿದ್ದು 190 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.