ರಾಜ್ಯಗಳ ಅಭಿವೃದ್ಧಿಗೆ ಸಮಪಾಲು ತೆರಿಗೆ ಹಂಚಿಕೆಗಾಗಿ ಕೇಂದ್ರದ ವಿರುದ್ಧ ಹೋರಾಟ ಅನಿವಾರ್ಯ: ಪ್ರಿಯಾಂಕ್ ಖರ್ಗೆ

ರಾಜ್ಯಗಳ ಅಭಿವೃದ್ಧಿಗೆ ಸಮಪಾಲು ತೆರಿಗೆ ಹಂಚಿಕೆಗಾಗಿ ಕೇಂದ್ರದ ವಿರುದ್ಧ ಹೋರಾಟ ಅನಿವಾರ್ಯ: ಪ್ರಿಯಾಂಕ್ ಖರ್ಗೆ

ಕಲಬುರ್ಗಿಯಲ್ಲಿ ಸುವರ್ಣ ಕರ್ನಾಟಕದ ವಿಜೃಂಭಣೆಯ ಕನ್ನಡ ರಾಜ್ಯೋತ್ಸವ

ರಾಜ್ಯಗಳ ಅಭಿವೃದ್ಧಿಗೆ ಸಮಪಾಲು ತೆರಿಗೆ ಹಂಚಿಕೆಗೆ ಹೋರಾಟ ಅನಿವಾರ್ಯ

ಕಲಬುರಗಿ: ಪ್ರತಿಯೊಂದು ರಾಜ್ಯಗಳ ಸರ್ವತೋಮುಖ ಅಭಿವೃದ್ಧಿಗೆ ಸಮಪಾಲು ತೆರಿಗೆ ಪಡೆಯಲು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.

 ಕಲಬುರಗಿಯ ಗಂಜ್ ಪ್ರದೇಶದ ನಗರೇಶ್ವರ ಶಾಲೆಯಲ್ಲಿ ಕಲಬುರಗಿ ಜಿಲ್ಲಾಡಳಿತದಿಂದ ಆಯೋಜಿಸಿದ 69ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ರಾಷ್ಟಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

೧೨ ನೇ ಶತಮಾನದಲ್ಲಿಯೇ ಸಮಾನತೆಯ ಕನಸನ್ನು ಹೊತ್ತು, ಸಾಮಾಜಿಕ ಕ್ರಾಂತಿ ಹಾಗೂ ವಚನ ಚಳುವಳಿ ನಡೆಸಿದ ಶರಣರ ನಾಡು ನಮ್ಮದು. 

ಭಕ್ತಿ ಚಳುವಳಿ, ಸ್ವಾತಂತ್ರ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿ, ಗೋಕಾಕ್ ಚಳುವಳಿ, ಅಪ್ಪಿಕೋ ಚಳುವಳಿ, ದಲಿತ ಚಳುವಳಿ, ವಿಶೇಷ ಸ್ಥಾನಮಾನಕ್ಕಾಗಿ ಸಂವಿಧಾನದ ಕಲಂ 371(ಜೆ) ತಿದ್ದುಪಡಿಗೆ ಚಳುವಳಿ ಸೇರಿದಂತೆ ಹತ್ತು ಹಲವಾರು ಚಳುವಳಿ ಕಂಡ ನಾವು ಇದೀಗ ನಮ್ಮ ನಾಡಿನ ಪ್ರಗತಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ತೆರಿಗೆಯ ಪಾಲು ಪಡೆಯಲು ಚಳುವಳಿ ಹಮ್ಮಿಕೊಳ್ಳಬೇಕಿದೆ ಎಂದು ನುಡಿದರು.

ಬಸವಣ್ಣನವರು ಹೇಳಿದಂತೆ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬಂತೆ ಕೇಂದ್ರ ಸರ್ಕಾರ ನಮ್ಮ ಪಾಲಿನ ತೆರಿಗೆ ನೀಡಬೇಕು. ಸಾರ್ವಜನಿಕರು, ಪ್ರಜ್ಞಾವಂತರು ಇದರ ಕುರಿತು ಧ್ವನಿ ಎತ್ತುವ ಅಗತ್ಯತೆ ಇದೆ ಎಂದರು.

ವೈಭವದ ಇತಿಹಾಸ ಹೊಂದಿರುವ ಕನ್ನಡ ನಾಡು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ನಾಡು. 

ಕಲೆ, ಸಾಹಿತ್ಯ, ಸಂಸ್ಕೃತಿ ,ನೆಲ ಜಲ ಭಾಷೆ, ಆಹಾರ ಪದ್ದತಿಯಿಂದ ಇಡೀ ವಿಶ್ವದ ಗಮನ ಸೆಳೆದ ಕರ್ನಾಟಕವು ದೇಶದ ಪ್ರಗತಿಗೆ ಅಭೂತಪೂರ್ವ ಕೊಡುಗೆ ನೀಡಿದೆ. 

ಜಿ.ಎಸ್.ಟಿ. ತೆರಿಗೆ ಸಂಗ್ರಹಣೆಯಲ್ಲಿ ರಾಷ್ಟ್ರದಲ್ಲಿ ದ್ವಿತೀಯ ನೇ ಸ್ಥಾನದಲ್ಲಿರುವ ಕರ್ನಾಟಕವು ಕೌಶಲ್ಯದ ಹೊಂದಿರುವ ರಾಜ್ಯವಾಗಿದೆ. ಎಫ್.ಡಿ.ಐ.ನಲ್ಲಿ ಶೇ. 32 ಹೂಡಿಕೆ ನಮ್ಮ ರಾಜ್ಯದಲ್ಲಿನ ಪ್ರಮುಖ ಬೆಳವಣಿಗೆ. ವಿಜ್ಞಾನ ಮತ್ತು ತಂತ್ರಜ್ಞಾನ,ರೇಷ್ಮೆ ರಫ್ತಿನಲ್ಲಿ ಬಹುಪಾಲು ನಮ್ಮದು ಎಂದು ಹೇಳಿದರು. 

ನವೋದ್ಯಮ ಸ್ಥಾಪನೆಯಲ್ಲಿ ನಾಲ್ಕನೇಯ ಸ್ಥಾನ ನಮ್ಮದು ಎಂದು ರಾಜ್ಯದ ಸಾಧನೆಗಳನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು.

ಹನ್ನೊಂದನೇ ಹಣಕಾಸು ಆಯೋಗದ ಪ್ರಕಾರ ರಾಜ್ಯದಿಂದ 100 ರೂ. ತೆರಿಗೆ ಕಟ್ಟಿದರೆ ಮರಳಿ ರಾಜ್ಯಕ್ಕೆ 21 ರೂ. 10 ಪೈಸೆ ಬರುತ್ತಿತ್ತು. ಇದೀಗ 15ನೇ ಹಣಕಾಸು ಆಯೋಗದ ಪ್ರಕಾರ 100 ರೂ. ತೆರಿಗೆ ಕಟ್ಟಿದರೆ ಮರಳಿ ರಾಜ್ಯಕ್ಕೆ ಬರುತ್ತಿರುವುದು ಕೇವಲ 15 ರೂ. 8 ಪೈಸೆ. ಅಂದರೆ ಸುಮಾರು ಶೇ.5.3 ತೆರಿಗೆ ಕಡಿಮೆಯಾಗಿದೆ. ವಾರ್ಷಿಕ ಸುಮಾರು 78,000 ಕೋಟಿ ರೂ. ತೆರಿಗೆ ಹಣ ರಾಜ್ಯಕ್ಕೆ ಬರುತ್ತಿಲ್ಲ.ರಿ

ಇಷ್ಟು ಮೊತ್ತದ ಬೃಹತ್ ಹಣ ನಾಡಿಗೆ ಬಂದಲ್ಲಿ ರಾಜ್ಯದಲ್ಲಿ ಮತ್ತಷ್ಟು ಮೂಲಸೌಕರ್ಯ ಕಲ್ಪಿಸಲು ಸಹಾಯವಾಗಲಿದ್ದು, ಇದರಿಂದ ಉದ್ಯೋಗ ಸೃಷ್ಟಿಗೆ ಮುನ್ನುಡಿಯನ್ನು ಬರೆಯಬಹುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಉತ್ತರ ಪ್ರದೇಶ ರಾಜ್ಯ ಕೇಂದ್ರ ಸರ್ಕಾರಕ್ಕೆ 100 ರೂ. ತೆರಿಗೆ ಕಟ್ಟಿದರೆ 333 ರೂ., ಮಧ್ಯಪ್ರದೇಶ 100 ರೂ. ಗಳಿಗೆ 297 ರೂ., ಬಿಹಾರ 100 ರೂ. ಗಳಿಗೆ 927ರೂ., ಓರಿಸ್ಸಾ 100 ರೂ. ಗಳಿಗೆ 187 ರೂ. ಮರಳಿ ಪಡೆಯುತ್ತಿದೆ. 

ಆದರೆ ಕರ್ನಾಟಕ ಮಾತ್ರ 100 ರೂ. ಗಳಿಗೆ ಕೇವಲ 12 ರೂ. ಪಡೆಯುತ್ತಿದೆ. ಇದು ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಘೋರ ಅನ್ಯಾಯ. ಇದರ ವಿರುದ್ಧ ಧ್ವನಿ ಎತ್ತಬೇಕಿದೆ. ನಾಡಿನ ಏಕೀಕರಣಕ್ಕೆ ದುಡಿದ ಮಹನೀಯರಿಗೆ ಗೌರವ ಸಲ್ಲಿಸಬೇಕಾದರೆ ನಾಡಿನ ಪ್ರಗತಿಗಾಗಿ ತೆರಿಗೆಯಿಂದಾದ ಅನ್ಯಾಯದ ವಿರುದ್ಧ ಚಳುವಳಿ ರೂಪಿಸಬೇಕಿದೆ.

ಇಂದು ಭಾರತ 3ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ರೂಪುಗೊಂಡಿದ್ದರೆ, ಅದರ ಹಿಂದೆ ಕನ್ನಡಿಗರ ಬೆವರು ಮತ್ತು ಶ್ರಮ ಅಧಿಕವಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

 ಕ್ಷೇತ್ರ ಪುನರ್ ವಿಂಗಡಣೆಯಿಂದ ಕರ್ನಾಟಕ ರಾಜ್ಯಕ್ಕೆ ಅನ್ಯಾಯ:

ದೇಶದಲ್ಲಿ ಇದೀಗ ಕ್ಷೇತ್ರ ಪುನರ್ ವಿಂಗಡಣೆಯ ಮಾತು ಜೋರಾ ಕೇಳಿಬರುತ್ತಿದೆ. ಪುನರ್ ವಿಂಗಡಣೆ ಜನಸಂಖ್ಯೆ ಆಧಾರದ ಮೇಲೆ ಮಾಡಲಾಗುತ್ತಿದೆ. ಈಗಿನ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆಯಾದರೆ ಪ್ರಸ್ತುತ ಇರುವ ಲೋಕಸಭಾ ಸದಸ್ಯರ ಸಂಖ್ಯೆ 543 ರಿಂದ 846ಕ್ಕೆ ತಲುಪಲಿದೆ. 

ಇದರಲ್ಲಿ ಉತ್ತರ ಭಾರತದಲ್ಲಿ 294 ಮತ್ತು ದಕ್ಷಿಣ ಭಾರತದಲ್ಲಿ ಕೇವಲ 23 ಸಂಖ್ಯೆ ಹೆಚ್ಚಲಿದೆ. ಇದರಿಂದ ನಾಡಿನ ಧ್ವನಿ ದಿಲ್ಲಿಗೆ ಮುಟ್ಟಿಸುವುದು ಕಷ್ಟ ಸಾಧ್ಯವಾಗಲಿದೆ.ಪುನರ್ ವಿಂಗಡಣೆ ಈ ಅನ್ಯಾಯ ತಪ್ಪಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಕ್ಷೇತ್ರಗಳ ಪುನರ್ ವಿಂಗಡಣೆಯಾದರೆ ದಕ್ಷಿಣ ಭಾರತದ ಆಂಧ್ರ ಪ್ರದೇಶ ರಾಜ್ಯ 25 ರಿಂದ 20ಕ್ಕೆ, ತಮಿಳನಾಡು 39 ರಿಂದ 30ಕ್ಕೆ, ಕರ್ನಾಟಕ 28 ರಿಂದ 24ಕ್ಕೆ, ತೆಲಂಗಾಣಾ 17 ರಿಂದ 15ಕ್ಕೆ ಸಂಸತ್ ಸದಸ್ಯರ ಸ್ಥಾನ ಕುಸಿಯಲಿದೆ. ಉತ್ತರ ಭಾರತದಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣ ಅಲ್ಲಿ ಸದಸ್ಯರ ಸಂಖ್ಯೆ ಸಹ ಹೆಚ್ಚಳವಾಗಲಿದೆ. 

ಪ್ರಗತಿಪರ ರಾಜ್ಯವನ್ನಾಗಿಸಲು ಜನಸಂಖ್ಯಾ ಸ್ಫೋಟದಿಂದ ಆಗುವ ಅವಾಂತರ ನಿಯಂತ್ರಿಸಿ ಅಭಿವೃದ್ಧಿಪರ ದಾಪುಗಾಲು ಇಡುತ್ತಿರುವ ನಮ್ಮ ರಾಜ್ಯಗಳಿಗೆ ಇದರಿಂದ ಅನ್ಯಾಯವಾಗಲಿದೆ ಎಂದು ಪ್ರಿಯಾಂಕ್ ಖರ್ಗೆ ಆತಂಕ ವ್ಯಕ್ತಪಡಿಸಿದರು . ಹಳ್ಳಿಯಿಂದ ದಿಲ್ಲಿ ವರೆಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದರು.

ಭುವನೇಶ್ವರಿ ಪ್ರತಿಮೆ ಸ್ಥಾಪನೆಗೆ ಸೂಚನೆ: ಸಚಿವ ಪ್ರಿಯಾಂಕ್ ಖರ್ಗೆ 

ಪ್ರತಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿಯ ಫ್ಲೆಕ್ಸ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಪರಿಪಾಠಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಮುಂದಿನ ಒಂದು ವರ್ಷದೊಳಗೆ ಶಾಸಕರ ಅಭಿಪ್ರಾಯ ಪಡೆದು ಕಲಬುರಗಿ ನಗರದ ಯಾವುದಾದರು ವೃತ್ತದಲ್ಲಿ ತಾಯಿ ಭುವನೇಶ್ವರಿಯ ಪ್ರತಿಮೆ ಸ್ಥಾಪನೆ ಮಾಡಬೇಕೆಂದು ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದಕ್ಕು ಮುನ್ನ ತಾಯಿ ಭುವನೇಶ್ವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.

ಸಾಧಕರಿಗೆ ಸನ್ಮಾನ:

ಸುಗಮ ಸಂಗೀತ ಕ್ಷೇತ್ರದಲ್ಲಿನ ಕೊಡುಗೆಗೆ ಬಸಯ್ಯ ಬಿ. ಗುತ್ತೇದಾರ, ಜಾನಪದ - ತತ್ವಪದದಲ್ಲಿನ ಸೇವೆಗೆ ಸೂರ್ಯಕಾಂತ ಪೂಜಾರಿ, ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗೆ ಸಾಹಿತಿ ಭೀಮಣ್ಣ ಬೋನಾಳ ಹಾಗೂ ಡೊಳ್ಳು ಕುಣಿತಕ್ಕೆ ಸಂಜು ಬರಗಾಲಿ ಅವರಿಗೆ ಜಿಲ್ಲಾಡಳಿತ ವತಿಯಿಂದ ಈ ವೇಳೆ ಗೌರವಿಸಲಾಯಿತು.

ಸ್ಥಬ್ದ ಚಿತ್ರಗಳ ಭವ್ಯ ಮೆರವಣಿಗೆ: ನಡೆಯಿತು 

ಆನಂತರ ನಗರೇಶ್ವರ ಶಾಲೆಯಿಂದ ಪ್ರಾರಂಭವಾದ ವಿವಿಧ ಇಲಾಖೆಯ ಪ್ರಗತಿ ಬಿಂಬಿಸುವ ಸ್ಥಬ್ದ ಚಿತ್ರಗಳ ಮೆರವಣಿಗೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಡೊಳ್ಳು ಬಾರಿಸುವ ಮುಖೇನ ಚಾಲನೆ ನೀಡಿದರು. ಮೆರವಣಿಗೆಯುದ್ದಕ್ಕೂ ಕಲಾ ತಂಡಗಳ ಅದ್ಭುತ ಕಲಾ ಪ್ರರ್ದಶನ ಕಂಡುಬಂತು. ನೂರಾರು ಸಂಖ್ಯೆಯಲ್ಲಿ ಶಾಲಾ ಮಕ್ಕಳು ಶಿಕ್ಷಕರು ಹಾಗೂ ನಾಗರಿಕರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ, ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಶಶೀಲ ನಮೋಶಿ, ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕಲಬುರಗಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಝರ್ ಆಲಂ ಖಾನ್,ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಅಪರ ಜಿಲ್ಲಾದಿಕಾರಿ ರಾಯಪ್ಪ ಹುಣಸಗಿ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ದೇವಿದಾಸ ಪಾಟೀಲ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಕನ್ನಡಪರ ಹೋರಾಟಗಾರರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು, ಶಾಲಾ ಮಕ್ಕಳು ಉಪಸ್ಥಿತರಿದ್ದರು.