ಕಲ್ಯಾಣ ಕರ್ನಾಟಕದಲ್ಲಿ ಬರಗಾಲ ಘೋಷಣೆ ಮಾಡುವಂತೆ ಆಗ್ರಹ

ಕಲ್ಯಾಣ ಕರ್ನಾಟಕದಲ್ಲಿ ಬರಗಾಲ ಘೋಷಣೆ ಮಾಡುವಂತೆ ಆಗ್ರಹ
ಕಲಬುರಗಿ: ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ನೇತೃತ್ವದಲ್ಲಿ ಶನಿವಾರ ನಗರದಲ್ಲಿರುವ ಜಗತ್ ವೃತ್ತದಲ್ಲಿ ರೈತರು ಹಾಗೂ ಸಂಘಟನೆಗಳ ಪ್ರತಿನಿಧಿಗಳು ಭಾರಿ ಪ್ರತಿಭಟನೆ ನಡೆಸಿ, ಈ ಪ್ರದೇಶದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ಉಂಟಾಗಿದೆ ಎಂದು ಸರ್ಕಾರ ತಕ್ಷಣ ಘೋಷಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನಾಕಾರರು “ಬರಗಾಲ ಘೋಷಿಸು – ರೈತರನ್ನು ಉಳಿಸು” ಎಂಬ ಘೋಷಣೆಗಳನ್ನು ಕೂಗಿ ಸರ್ಕಾರದ ಗಮನ ಸೆಳೆದರು. ಅವರು ತಕ್ಷಣವೇ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF) ಯಿಂದ ನೆರವು ಬಿಡುಗಡೆ ಮಾಡಬೇಕೆಂದು, ಹಾನಿಗೊಳಗಾದ ರೈತರಿಗೆ ಬೆಳೆ ಪರಿಹಾರ, ಸಾಲಮನ್ನಾ ಹಾಗೂ ಬೀಜ-ರಸಗೊಬ್ಬರ ಸಬ್ಸಿಡಿ ನೀಡಬೇಕೆಂದು ಆಗ್ರಹಿಸಿದರು.
ನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ ಪಾಟೀಲ ಮಾತನಾಡಿ, “ಕಲ್ಯಾಣ ಕರ್ನಾಟಕದಲ್ಲಿ ಹಸಿರು ಕೃಷಿ ಬತ್ತಿಹೋಗಿದ್ದು, ಹಸಿವು-ನೀರಿನ ಬಿಕ್ಕಟ್ಟು ತೀವ್ರವಾಗಿದೆ. ಸರ್ಕಾರ ಕೇವಲ ವರದಿಗಳಲ್ಲಿ ಸೀಮಿತವಾಗದೆ, ನೆಲಮಟ್ಟದ ಪರಿಸ್ಥಿತಿಯನ್ನು ಗಮನಿಸಿ ತಕ್ಷಣವೇ ಪರಿಹಾರ ಒದಗಿಸಬೇಕು. ಬರಗಾಲ ಘೋಷಣೆ ಮಾತ್ರವಲ್ಲ, ರೈತರ ಬದುಕಿಗೆ ಹೊಸ ಶಕ್ತಿ ನೀಡುವಂತಹ ಸಬಲ ಯೋಜನೆಗಳು ಜಾರಿಗೆ ಬರಬೇಕು” ಎಂದರು.
ಈ ಸಂದರ್ಭದಲ್ಲಿ ಮಹೇಶ್ ಕಡೆಚುರ, ಮೌಲಾಮುಲ್ಲಾ, ಅಮೃತ ಸಿ. ಪಾಟೀಲ, ಜಗದೇವಿ ಹೆಗ್ಡೆ, ಶರಣಗೌಡ ಪಾಟೀಲ ಬಿಳಗುಂಪ, ನಾಗಪ್ಪ ರಾಯಚೂರ, ಶಿವು ವಿ., ರಾಜು ಜೈನ್, ಶಿವಲಿಂಗಪ್ಪ ಟಂಗಳಿ ಸೇರಿದಂತೆ ಹಲವರು ಭಾಗವಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ಸ್ಥಳೀಯ ಆಡಳಿತಕ್ಕೆ ಮನವಿ ಪತ್ರವನ್ನು ಸಲ್ಲಿಸಿದ್ದು, “ಒಂದೇ ವಾರದಲ್ಲಿ ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.