ನನ್ನವನೊಲವು ಬದಲಾಗಬಾರದಿತ್ತು ಗಜಲ
ನನ್ನವನೊಲವು ಬದಲಾಗಬಾರದಿತ್ತು ಗಜಲ
ಚಂದ್ರನ ಪಥ ಬದಲಾದರೂ ಸರಿಯೆ
ನನ್ನವನೊಲವು ಬದಲಾಗಬಾರದಿತ್ತು ಗೆಳತಿ
ಸೂರ್ಯನ ಪ್ರಖರತೆ ಇಮ್ಮಡಿಯಾದರೂ ಸರಿಯೆ
ನೋಟವು ಬದಲಾಗಬಾರದಿತ್ತು ಗೆಳತಿ
ಚಟಪಡಿಸುತಿತ್ತು ಮನವು ಕ್ಷಣಕಾಲ ಕಾಣದೆ
ಮರೆತು ಹೋಯಿತೇಕೆ ಕಳವಳ
ಅನುಗಾಲ ಜೊತೆ ಇರಲು ಬಯಸುತಿದ್ದನಲ್ಲ
ಬಯಕೆಯು ಬದಲಾಗಬಾರದಿತ್ತು ಗೆಳತಿ
ಕಂಗಳು ಕಂಬನಿಯ ಮರೆವಂತೆ ಮಾಡಿ
ನೋವಿನೆರಳ ಅಳಿಸಿ ಹಾಕಿ
ಸುಖ ಸಂತಸದ ಅಲೆಯಲಿ ತೇಲಿಸಿದನಲ್ಲ
ಅವನಿರುವಿಕೆಯು ಬದಲಾಗಬಾರದಿತ್ತು ಗೆಳತಿ
ದಿನವಿಡಿ ಬಿಡದೆ ಕನವರಿಸುವ ಹೆಸರು
ನೆನಪಿನಂಗಳದಿ ದೂರ ಸರಿಯಿತಲ್ಲ
ಮನಃಪಟಲದಿ ಮೂಡಿದ ಬಿಂಬ ಮಸುಕಾಯಿತಲ್ಲ
ಪ್ರತಿಬಿಂಬವು ಬದಲಾಗಬಾರದಿತ್ತು ಗೆಳತಿ
ತಂಗಳ ತಿಂದರೂ ತಿಂಗಳಲಿ ತಣಿಯುತ
ತಂಪೆರಗುವ ಸವಿಮಾತನು ಮರೆತು
ಕಾಡಿಬೇಡಿ ಬೆರೆತ ರತುನಳ ಮನವನರಿತ
ಅವನಿಂಗಿತವು ಬದಲಾಗಬಾರದಿತ್ತು ಗೆಳತಿ
ಡಾ. ನಾಗರತ್ನ ಅಶೋಕ ಭಾವಿಕಟ್ಟಿ