ಕನ್ನಡ ಕಟ್ಟುವ ಕಾರ್ಯಕ್ಕೆ ಹುಯಿಲಗೋಳ ನಾರಯಣರಾಯರ ಕೊಡುಗೆ ಅವಿಸ್ಮರಣೀಯ
ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್.ನಿರಗುಡಿ ಅಭಿಮತ |
ಬಸವೇಶ್ವರ ಸಮಾಜ ಸೇವಾ ಬಳಗದಿಂದ ಹುಯಿಲಗೋಳ ನಾರಾಯಣರಾಯರ 140ನೇ ಜನ್ಮ ದಿನಾಚರಣೆ
ಕನ್ನಡ ಕಟ್ಟುವ ಕಾರ್ಯಕ್ಕೆ ಹುಯಿಲಗೋಳ ನಾರಯಣರಾಯರ ಕೊಡುಗೆ ಅವಿಸ್ಮರಣೀಯ
ಕಲಬುರಗಿ: ನಮ್ಮ ಕನ್ನಡ ನಾಡಿಗೆ ತನ್ನದೇ ಆದ ಭವ್ಯವಾದ ಇತಿಹಾಸ, ಪರಪಂರೆ ಇದೆ. ನಾನಾ ಭಾಗಗಳಾಗಿ ಹರಿದು ಹಂಚಿ ಹೋಗಿದ್ದ ನಾಡನ್ನು, ಅಖಂಡವಾಗಿ ಏಕೀಕರಣಗೊಳಿಸಲು ನಿರಂತರವಾಗಿ ಶ್ರಮಿಸಿದ ಹುಯಿಲಗೋಳ ನಾರಾಯಣರಾಯರ ಕೊಡುಗೆ ತುಂಬಾ ಅವಿಸ್ಮರಣೀಯವಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್.ನಿರಗುಡಿ ಅಭಿಮತಪಟ್ಟರು.
ನಗರದ ಹೊಸ ಜೇವರ್ಗಿ ರಸ್ತೆಯ ‘ಗೆಟ್ಸ್ ವಿಜ್ಞಾನ ಮತ್ತು ವಾಣಿಜ್ಯ ಡಿಗ್ರಿ ಕಾಲೇಜ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ಹುಯಿಲಗೋಳ ನಾರಾಯಣರಾಯರ 140ನೇ ಜನ್ಮ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡಿದರು.
ಉಪನ್ಯಾಸಕ ಹಾಗೂ ಲೇಖಕ ಎಚ್.ಬಿ.ಪಾಟೀಲ ಮಾತನಾಡಿ, ಅಪ್ಪಟ ದೇಶ ಪ್ರೇಮಿ, ಕನ್ನಡಾಭಿಮಾನಿ, ಮಾನವತವಾದಿ, ಸರಳ ಜೀವಿಯಾಗಿದ್ದ ನಾರಾಯಣರಾಯರು, ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂಬ ಅರ್ಥಗರ್ಭಿತ ನಾಡಗೀತೆಯನ್ನು ರಚಿಸಿ, ಕನ್ನಡಿಗರಲ್ಲಿ ಸ್ವಾಭಿಮಾನವನ್ನು ಜಾಗೃತಗೊಳಿಸಿದ್ದ ಮೇರು ಸಾಹಿತಿ. ಕಾವ್ಯ, ಗದ್ಯ, ನಾಟಕ ಸೇರಿದಂತೆ ಅನೇಕ ಪ್ರಕಾರದ ಸಾಹಿತ್ಯ ಕೃಷಿಯನ್ನು ಮಾಡುವ ಮೂಲಕ ಕನ್ನಡ ಸಾಹಿತ್ಯ, ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಆಲೇಜಿನ ಪ್ರಾಂಶುಪಾಲ ಡಾ.ಎಚ್.ಬಿ.ಕಂಟೆಗೋಳ, ಉಪನ್ಯಾಸಕರಾದ ಶಿವಲಿಂಗಪ್ಪ ತಳವಾರ, ಅಶ್ವಿನಿ ಪಾಟೀಲ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.