ದೇಶಾಂಶ ಹುಡುಗಿ
ವಾಚಿಕೆ-7. ದೇಶಾoಶ ಹುಡಗಿ
ಕಲ್ಯಾಣ ಕರ್ನಾಟಕದ ಸೃಜನಶೀಲ ಸಾಹಿತಿಗಳು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಸಾಹಿತಿಗಳ ಕೃತಿಗಳು ಕನ್ನಡ ಓದುಗರಿಗೆ ಉಪಲಬ್ಧವಿರುವುದಿಲ್ಲ. ಈ ಲೇಖಕರು ರಚಿಸಿದ ಎಲ್ಲಾ ಸಾಹಿತ್ಯದ ಮೊತ್ತ ಸಾವಿರ ಪುಟಗಳಷ್ಟಾಗುತ್ತದೆ. ಅಷ್ಟನ್ನೂ ಮುದ್ರಿಸುವುದು ಕಷ್ಟಕರ. ಈ ದಿಸೆಯಲ್ಲಿ ನಮ್ಮ ಪ್ರಕಾಶನದಿಂದ ಸಾಹಿತಿಗಳ ವಾಚಿಕೆಗಳನ್ನು ಹೊರತಂದು, ಅವರ ಸಾಹಿತ್ಯದ ಸ್ವಾದವನ್ನು ಕನ್ನಡಿಗರಿಗೆ ಉಣಬಡಿಸಿ ಕನ್ನಡಿಗರ ಹೃನ್ಮನಗಳನ್ನು ಅರಳಿಸುವಂತಾಗಬೇಕೆನ್ನುವುದು ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಸದಿಚ್ಛೆಯಾಗಿದೆ. ಸುವರ್ಣ ಕರ್ನಾಟಕ ನಾಮಕರಣ ಸಂಭ್ರಮಾಚರಣೆ ಸಂದರ್ಭದಲ್ಲಿ, ಕನ್ನಡ ಸಾಹಿತ್ಯದಲ್ಲಿ ಅಹರ್ನಿಶಿ ಸೇವೆಗೈದ ಹಲವು ಹಿರಿಯ ಮತ್ತು ಕಿರಿಯ ಸಾಹಿತಿಗಳ ವಾಚಿಕೆಗಳನ್ನು ಹೊರತಂದು ಕನ್ನಡ ಓದುಗರ ಮಡಿಲಿಗೆ ಅರ್ಪಿಸುವ ಸದಿಚ್ಚೆಯಾಗಿದೆ.
ಈ ಸದಿಚ್ಛೆ ನೆರವೇರವಲ್ಲಿ ಡಾ. ಭೀಮಾಶಂಕರ ಬಿರಾದಾರ ಅವರು ದೇಶಾoಶ ಹುಡಗಿ ಕುರಿತ ಸಮಗ್ರ ಸಾಹಿತ್ಯ ವಾಚಿಕೆ ರೂಪದಲ್ಲಿ ಸಂಪಾದಿಸಿದ್ದಾರೆ. ದೇಶಾಶ ಹುಡಗಿರವರಿಂದ ರಚಿತವಾದ ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ. ಅವರ ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡಾ ಲಭಿಸಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕನ್ನಡ ಕಟ್ಟುವುದರ ಜೊತೆಗೆ ಕಾವ್ಯ, ಕಥೆ, ಪ್ರಬಂಧ, ಬೀದರ ಕನ್ನಡ ಕೋಶ, ಜೀವನ ಚರಿತ್ರೆ ಸೇರಿದಂತೆ ಹಲವು ಕೃತಿ ರಚಿಸಿರುವರು. ಅವರ ಒಟ್ಟು ಸಾಹಿತ್ಯದ ಸಾರಸ್ವತ ಸತ್ವವನ್ನು ಕನ್ನಡ ಓದುಗರಿಗೆ ಈ ವಾಚಿಕೆ ಉಣಬಡಿಸುತ್ತದೆ.
'ದೇಶಾಂಶ ಹುಡಗಿ' ಎಂಬ ಕಾವ್ಯನಾಮದಿಂದ ಹಲವು ಕೃತಿಗಳು ಬರೆದಿರುವ ಶಾಂತಪ್ಪ ಶರಣಪ್ಪ ದೇವರಾಯ (೧೯೩೬-೨೦೨೦) ಅವರದು ಬಹುಮುಖಿ ಪ್ರತಿಭೆ. ಕಾವ್ಯ, ಕತೆ, ಪ್ರಬಂಧ, ನಾಟಕ, ವಚನ, ಜೀವನ ಚರಿತೆ, ಮಹಾಕಾವ್ಯ, ಹನಿಗವಿತೆ, ಸಂಪಾದನೆ, ಅನುವಾದ ಸಂಗ್ರಹ ಸೇರಿ ಹಲವು ಪ್ರಕಾರದ ಸಾಹಿತ್ಯ ಕೃಷಿ ಮಾಡಿದ್ದಾರೆ. ಪ್ರಾಥಮಿಕ ಶಾಲೆಯ ಮಾಸ್ತರರಾಗಿ, ಪ್ರೌಢ ಶಾಲೆಯ ಶಿಕ್ಷಕರಾಗಿ, ಸಾಕ್ಷರತಾ ಅಧಿಕಾರಿಯಾಗಿ ಜವಾಬ್ದಾರಿಯಿಂದ ತಮ್ಮ ವೃತ್ತಿಯನ್ನು ಮಾಡಿದ್ದರು. ಹಾಡುಗಾರಿಕೆ, ನಟನೆ, ನಾಟಕ ನಿರ್ದೇಶನ, ಬರಹ, ಗಡಿಯಲ್ಲಿ ಕನ್ನಡ ಕಟ್ಟುವಿಕೆ, ಸಾಹಿತ್ಯ ಸಂಘಟನೆ, ಹೊಸ ಬರಹಗಾರರ ಕೃತಿ ಪ್ರಕಟಿಸಿ ಪ್ರೋತ್ಸಾಹಿಸುವಿಕೆ, ಇವೆಲ್ಲವನ್ನು ಅವರು ಸಾಂಸ್ಕೃತಿಕ ಹೊಣೆಗಾರಿಕೆಯಾಗಿ ಅತ್ಯಂತ ಪ್ರಾಮಾಣಿಕತೆಯಿಂದ, ಕಾಳಜಿಯಿಂದ ತಮ್ಮ ಜೀವಿತದ ಕೊನೆಯ ದಿನಗಳವರೆಗೂ ಮಾಡಿಕೊಂಡು ಬಂದ ಹಿರಿಯ ಜೀವಿ.
ಬೀದರ ಜಿಲ್ಲೆಯಲ್ಲಿ ಕನ್ನಡತನವನ್ನು ಬೆಳೆಸಲು ಸಾಹಿತ್ಯಕ ವಾತಾವರಣ ನಿರ್ಮಿಸಲು ದೇಶಾಂಶ ಹುಡಗಿ ಅವರು 'ಧರಿನಾಡು ಕನ್ನಡ ಸಂಘ'ವನ್ನು ಕಟ್ಟಿದರು. ಅದರ ಮೂಲಕ ಸಾಹಿತ್ಯಕ ಚರ್ಚೆ, ಉಪನ್ಯಾಸ, ಸಮ್ಮೇಳನಗಳನ್ನು ನಡೆಸಿಕೊಂಡು ಬಂದಿದ್ದಾರೆ. ಮರಾಠಿ, ಉರ್ದು, ಹಿಂದಿ, ಭಾಷೆಗಳ ಮೇಲೆ ಪ್ರಭುತ್ವ ಹೊಂದಿದ್ದರು. ಹಾಗಾಗಿಯೇ ಬಸವಣ್ಣನವರ ವಚನಗಳನ್ನು ಹಿಂದಿ ಭಾಷೆಗೆ ಅನುವಾದಿಸಿದ್ದಾರೆ. ಹರಿವಂಶರಾಯ ಬಚ್ಚನ ಅವರ 'ಮಧುಶಾಲಾ' ಕನ್ನಡಕ್ಕೆ ತಂದಿದ್ದಾರೆ. ವಚನ, ತತ್ವಪದ, ಜನಪದ ಹಾಡುಗಳ ಪ್ರಭಾವ, ಶಾಂತಪ್ಪ ದೇವರಾಯ ಅವರ ಊರಿನ (ಹುಡಗಿ ಹುಮನಾಬಾದ ತಾಲೂಕು) ಪರಿಸರ, ಒಬ್ಬ ಶಾಲಾ ಮಾಸ್ತರರಾಗಿ ಅವರು ಗ್ರಹಿಸಿದ ಸಾಮಾಜಿಕ ಸಂದರ್ಭಗಳು, ಅವರನ್ನೊಬ್ಬ ಬರಹಗಾರರನ್ನಾಗಿ ರೂಪಿಸಿವೆ. ಆದರೆ ಅವರ ನೆಚ್ಚಿನ ಮಾಧ್ಯಮ ಕಾವ್ಯ. ಕಾವ್ಯ ಪ್ರಕಾರವನ್ನು ಹೆಚ್ಚು ಪ್ರೀತಿಸಿದ್ದರು. ಹಾಗಾಗಿಯೇ ಅವರ ಎಲ್ಲ ಬರಹಗಳಲ್ಲಿ ಕವಿತ್ವದ ಬಿಂಬ ಕಂಡುಬರುತ್ತದೆ. ಅವರು ಬರಹಲೋಕ ಪ್ರವೇಶಿಸಿದ್ದು 'ಗ್ರಾಮಶಿಲ್ಪಿಗಳು' (೧೯೮೦ ವ್ಯಕ್ತಿ ಚಿತ್ರಣ) ಕೃತಿ ಮೂಲಕ. ಅನಂತರದಲ್ಲಿ ಅವರು ಕಾವ್ಯವನ್ನು ಕವಿತೆಯಾಗಿ, ಹನಿಗವಿತೆಯಾಗಿ, ಕಥನಗೀತೆಗಳಾಗಿ, ಮಹಾಕಾವ್ಯಗಳಾಗಿ ಬೆಳೆಸಿದರು. ಬಹುಭಾಷಿಕತೆಯ ಜತೆಗೆ ಬೆಳೆದ ಬೀದರ ಕನ್ನಡಕ್ಕೆಭಾಷಿಕ ಗತ್ತು ಇದೆ. ಅದು ಬೀದರನ ಆಚೆಗಿನವರಿಗೆ ಬೀದರ ಕನ್ನಡ ಅರ್ಥವಾಗದ ಭಾಷೆಯಾಗಿಯೂ ಉಳಿದಿದೆ. ಅದನ್ನು ಒಂದು ನಿಘಂಟಾಗಿ ಕೊಟ್ಟ ಶ್ರೇಯಸ್ಸು ದೇಶಾಂಶ ಹುಡಗಿಯವರದು. ಬೀದರ. ಆಡು ನುಡಿಯಲ್ಲಿನ ಪದಗಳನ್ನು ಸಂಗ್ರಹಿಸಿ ಒಂದು ಬೃಹತ್ ನಿಘಂಟು 'ಬೀದರ ಕನ್ನಡ ಕೋಶ' (೨೦೧೦) ಪ್ರಕಟಿಸಿರುವುದು ದೇಶಾಂಶ ಹುಡಗಿಯವರ ಮಹತ್ವದ ಸಾಧನೆಯಾಗಿದೆ.
ಜನಪದ ಗಾದೆ, ಒಡಗತೆಗಳು, ತತ್ವಪದಕಾರರು ಸೇರಿ ಹಲವು ಕೃತಿಗಳು ಬರೆದಿದ್ದಾರೆ. ದೇಶಾಂಶ ಹುಡಗಿ ಅವರು ವಿದ್ವಾಂಸರಾಗಿರಲಿಲ್ಲ. ಆದರೆ, ಅಕಾಡೆಮಿಕ್ ಶಿಸ್ತು ಮತ್ತು ವಿದ್ವತ್ತಿನ ದೃಷ್ಟಿಕೋನಗಳು ಅವರ ಸಾಹಿತ್ಯದಲ್ಲಿ ಅಡಕವಾಗಿವೆ. ಸರಳತೆ, ಸಜ್ಜನಿಕೆ, ನಿಗರ್ವ ವ್ಯಕ್ತಿತ್ವದ ದೇಶಾಂಶ ಹುಡಗಿಯವರು ತಮ್ಮ ಮೃದು ಮಾತು ಮತ್ತು ಪ್ರಖರ ವೈಚಾರಿಕ ನಿಲುವುಗಳಿಂದ ಗಮನ ಸೆಳೆದಿದ್ದರು. ತಮಗಾದ ಹಲವು ಅನುಭವಗಳು, ತಾವು ಗ್ರಹಿಸಿದ ಸಂಗತಿಗಳು, ಜೀವನಪ್ರೀತಿ ಮತ್ತು ಜೀವನೋತ್ಸಾಹಗಳು ತಮ್ಮ ಬರಹದಲ್ಲಿ ಹೊಸೆದಿದ್ದಾರೆ. ಹುಡಗಿಯವರು ಧರಿನಾಡು ಕನ್ನಡ ಸಂಘದ ಅಧ್ಯಕ್ಷರಾಗಿ ಜಿಲ್ಲೆಯ ತುಂಬಾ ಕನ್ನಡ ಕಟ್ಟುವುದಕ್ಕಾಗಿ ಸುತ್ತಾಡಿದ ಅಕ್ಷರ ಸಂತ. ರಂಗನಟ, ರಂಗಕರ್ಮಿ, ಹಾಡುಗಾರ, ಭಾಷಣಕಾರ, ಅಧ್ಯಾಪಕ. ಎಲ್ಲಕ್ಕಿಂತ ಮೊದಲು ಒಳ್ಳೆಯ ಮನುಷ್ಯರಾಗಿದ್ದರು. ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕಾಯಕ ಸಮ್ಮಾನ, ಜಾನಪದತಜ್ಞ ಸೇರಿ ಹಲವು ಪ್ರಶಸ್ತಿಗಳು ಸಂದಿವೆ.
ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2023 ರಲ್ಲಿ ಹೊರಬಂದ ಈ ವಾಚಿಕೆಯ ಕೃತಿಯು 184 ಪುಟಗಳನ್ನು ಹೊಂದಿದ್ದು 180 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.