ನಲಿವಿನಂಗಳದಲ್ಲಿ ನೂರೆಂಟು ನೋವುಗಳು
ನಲಿವಿನಂಗಳದಲ್ಲಿ ನೂರೆಂಟು ನೋವುಗಳು
ಭಾವಕ್ಕೆ ಭಾಷೆಯ ವೇಷತೊಡಿಸಿದಾಗ ಕವಿತೆ ಹುಟ್ಟುತ್ತದೆ. ವಿಶೇಷವಾಗಿ ಭಾವಗೀತೆಯ ಕುರಿತು ಕವಿ ಬೇಂದ್ರೆಯವರು, 'ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತ' ಎಂದಿದ್ದಾರೆ. ನಾದ ಮತ್ತು ಭಾವಗಳು ಭಾವಗೀತೆಯ ಪ್ರಮುಖ ಗುಣಗಳಾದರೂ ಅದರಲ್ಲಿ ಚಿಂತನಾಂಶವೂ ಸೇರಿದಾಗ ಉತ್ತಮ ಕವಿತೆಗಳು ರೂಪುಗೊಳ್ಳುತ್ತವೆ. ಪ್ರಸ್ತುತ ಪ್ರೇಮಾ ಅಪಚಂದರವರ "ನಲಿವಿನಂಗಳದಲ್ಲಿ ನೂರೆಂಟು ನೋವುಗಳು' ಸಂಕಲನದ ಕವಿತೆಗಳಿಗೆ ಭಾವಗೀತೆಯ ಲಕ್ಷಣವಿದೆ. ಈ ಕವಿತೆಗಳಲ್ಲಿ ಪ್ರೀತಿ ಮತ್ತು ಸ್ನೇಹಕ್ಕಾಗಿ ಹಾತೊರೆಯುವ ಮನಸ್ಸಿನ ಮಿಡಿತಗಳಿವೆ. ಹೆಣ್ಣಿಗೊಂದು. ಗಂಡಿಗೊಂದು ಎಂಬ ಸಮಾಜದ ದ್ವಂದ್ವ ನೀತಿಯ ಬಗೆಗೆ ವಿಷಾದವಿದೆ. ತಂದೆಯ ಪ್ರೀತಿಗಾಗಿ ಕಾತರಿಸುವ ಕಂದನ ಹಪಹಪಿಕೆಯಿದೆ. ಕೆಲವು ಕವಿತೆಗಳ ಭಾವ ವ್ಯಕ್ತಿಗತವೆನಿಸಿದರೂ ಆ ನೆಲೆ ಯಲ್ಲಿಯೇ ವಿರಮಿಸದೇ ಅವು ಸಾರ್ವಕಾಲಿಕ ಮನ್ನಣೆ ಪಡೆಯುತ್ತವೆ.
ರಾಜಕೀಯದ ಡೊಂಬರಾಟ, ಜಾಗತೀಕರಣದ ಪೆಡಂಭೂತ ಇವೆಲ್ಲವೂ ಕವಯಿತ್ರಿಯ ಮನಸ್ಸನ್ನು ಕಾಡಿ ಕವನ ರೂಪದಲ್ಲಿ ಅಭಿವ್ಯಕ್ತಿ ಪಡೆದಿವೆ. ಹೀಗೆ ಹತ್ತು ಹಲವು ಸಂಗತಿಗಳು ಇಲ್ಲಿಯ ಕವಿತೆಗಳ ವಸ್ತುವಾಗಿದ್ದರೂ ಸ್ವಮರುಕದ ಛಾಯೆ ಆವರಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಡಾ.ಪ್ರೇಮಾ ಸ್ವ- ಮರುಕದಿಂದ ಹೊರಬಂದು, ಧ್ವನಿಪೂರ್ಣವಾದ ಕವಿತೆಗಳನ್ನು ರಚಿಸಬಲ್ಲರೆಂಬ ಆಶಾಭಾವ ಕೆಲವು ಕವಿತೆಗಳು ಮಿನುಗಿಸುತ್ತವೆ.
ಈ ಪುಸ್ತಕವು ಕಲಬುರಗಿಯ ಬಿಸಿಲನಾಡು ಪ್ರಕಾಶನದಿಂದ 2020 ರಲ್ಲಿ ಪ್ರಕಟಗೊಂಡಿದ್ದು 78 ಪುಟಗಳನ್ನು ಹೊಂದಿರುವ ಪುಸ್ತಕದ ಬೆಲೆ 60 ರೂಪಾಯಿ ನಿಗದಿಪಡಿಸಲಾಗಿದೆ.
ಡಾ. ಶರಣಬಸಪ್ಪ ವಡ್ಡನಕೇರಿ