ಮಗ್ಗಿನೊಳಗಿದೆ ಸುಗಂಧ ಸೋಸುವ ಸುವಾಸನೆ
ಮಗ್ಗಿನೊಳಗಿದೆ ಸುಗಂಧ ಸೋಸುವ ಸುವಾಸನೆ
ನಮ್ಮ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸ್ತ್ರೀವಾದದ ಸ್ವರೂಪವು ದಟ್ಟವಾಗಿ ಪ್ರಭಾವಿಸಿ ಬೆಳೆದು ನಿಂತಿದೆ. ಸ್ತ್ರೀವಾದಿಯ ನೆಲೆಗಟ್ಟಿನಲ್ಲಿ ನಮ್ಮ ಸಾಮಾಜಿಕದ ಆಗುಹೋಗುಗಳು ಹಾಗೂ ಸಾಹಿತ್ಯಿಕ ಪಠ್ಯಗಳನ್ನು ನೋಡಲು ಬೇಕಾದಂತಹ ಹೊಸ ವ್ಯಾಕರಣದ ಸ್ವರೂಪವನ್ನು ಕಲ್ಪಿಸಿಕೊಟ್ಟಿದೆ. ಆತ್ಮೀಯ ಸ್ನೇಹಿತ ಸ್ನೇಹಜೀವಿ ಕವಿ ರಾಕ್ಷಸ ಅಜೇಯ್ ಪಿ ಎಸ್ (ಎ.ಜೆ) ಅವರ ಪ್ರಥಮ ಕವನ ಸಂಕಲನ 'ಮೊಗ್ಗು' ಎಂಬ ಕೃತಿಯು ಇದಕ್ಕೆ ಸಾಕ್ಷಿಯಾಗಿದೆ.
ಅಜೇಯ್. ಪಿ. ಎಸ್ ಬೀದರ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಮುತ್ತಂಗಿ ಗ್ರಾಮದಲ್ಲಿ ಅನಿತ ಮತ್ತು ಪ್ರಭು ಸಂಗಣೋರ್ ಎಂಬ ಬಡ ದಂಪತಿಗಳ ಪುಣ್ಯ ಉದ್ಧಾರದಲ್ಲಿ ಕ್ರಿ.ಶ 1998 ಜುಲೈ 20 ರಂದು ಜನಿಸಿದರು.
ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡು ಮೋಜು ಮಸ್ತಿಯ ಸಮದಲ್ಲಿ ತಂದೆಯನ್ನು ಕೂಡಾ ಕಳೆದುಕೊಂಡ ನತದೃಷ್ಟ ಯುವಕ , ಬೆಳೆಯುತ್ತಿದ್ದಂತೆ ಜವಾಬ್ದಾರಿಯು ಹೆಗಲೇರಿಸಿಕೊಂಡು ಎಷ್ಟೇ ಕಷ್ಟ ತಾಪತ್ರಗಳು ಬಂದರು ಮತ್ತೊಬ್ಬರ ಮುಂದೆ ಕೈ ಚಾಚದೆ ತನ್ನ ತಂಗಿಗೆ ವಿದ್ಯಾ ಕಲಿಸುವುದರೊಂದಿಗೆ ತಾನು ಕಲಿತು ಇಂಜಿನಿಯರಿಂಗಲ್ಲಿ ಪದವೀಧರನಾದ ಸ್ವಾಭಿಮಾನಿ. ಬಡತನದ ಸಂಕಷ್ಟಗಳ ನೋವು ನುಂಗಿ ಬೆಳೆದು ಗಟ್ಟಿಗನಾಗಿ ನಿಂತು ಕನ್ನಡ ಸಾಹಿತ್ಯ ರಂಗಕ್ಕೆ "ಮೊಗ್ಗು" ಎನ್ನುವ ಕವನ ಸಂಕಲನದ ಮೂಲಕ ಕಾಲಿಟ್ಟಿದ ಒಬ್ಬ ಗಟ್ಟಿ ಬರಹಗಾರ ಅಜೇಯ್. ಪಿ. ಎಸ್.
ಈ ಮೊಗ್ಗಿಗೆ ನನ್ನದೇ ಆಪ್ತ ನುಡಿ. ಅನ್ಯ ಭಾಷೆಯ ವ್ಯಾಮೋಹದಲ್ಲಿ ಸಿಲುಕಿ ಕನ್ನಡ ನಾಡಿನಲ್ಲಿಯೇ ಹುಟ್ಟಿ ಕನ್ನಡವನ್ನು ಕೊಲ್ಲುತ ಬರುತ್ತಿರುವ ಸೋಗಲಾಡಿ ಜೋಕರ್ಗಳಿಗೆ ಕವಿಯು ತನ್ನ ಮೊದಲನೇ ಕವನದ ಶೀರ್ಷಿಕೆಯ ಅಡಿಯಲ್ಲಿಯೇ 'ಬರೀ ಕನ್ನಡಿಗನಲ್ಲ ಶುದ್ಧ ಕನ್ನಡಿಗನಾಗು' ಎಂದು ಖಡಕ್ಕಾಗಿಯೇ ಎಚ್ಚರಿಸಿದಾನೆ.
ಕನ್ನಡದ ಭಾಷಾಭಿಮಾನವ ಎತ್ತಿ ಹಿಡಿಯುತ್ತಾ ಕವಿಯು
*"ನಿಸರ್ಗವು ನೋಡುವ ನೋಟವಾಗಲಿ ಕನ್ನಡ*
*ತಾಯಿ ಕರುಳಿನ ಮಾತಾಗಲಿ ಸವಿಗನ್ನಡ*
*ಮುದ್ದು ಕೂಸಿನ ಮುಗುಳುನಗೆಯಾಗಲಿ ಕನ್ನಡ*
*ಉಸಿರಾಡುವ ಗಾಳಿಯಾಗಲಿ ಶ್ರೀಗಂಧ ಕನ್ನಡ"*
ಎಂದು ಕನ್ನಡದ ಕುರಿತು ಕವಿ ಮಾಡಿದ ವರ್ಣನೆಯು ಓದುಗರಲಿ ಉಲ್ಲಾಸ ಮೂಡಿಸುವಂಥದ್ದು.
'ನಮ್ಮವ್ವ ಭಾಳ್ ಚೆಂದ' ಎನ್ನುವ ಕವನದಲ್ಲಿ
*"ತುತ್ತನ್ನ ಕೇಳಿದ್ರೆ*
*ತಟ್ಟೆ ತುಂಬಾ ಹಾಕ್ತಾಳ*
*ತುತ್ತನ್ನ ಉಳಿಸಿದ್ರ ಸಿಟ್ಟಾಗಿ ನೋಡ್ತಾಳ*
*ತಿಂದು ದಪ್ಪ ಆಗು ಮಗ*
*ಎಸ್ಟು ಸೋರ್ಗಿದಿ ಅಂತ ಬೈದು*
*ಇನ್ನೊಂದು ರೊಟ್ಟಿನಾ ನನ್ನ ತಟ್ಟೆಯಲ್ಲಿ ಹಾಕ್ತಾಳ "*
ಎಂದೇಳುವ ಕವಿಯ ಸಾಲುಗಳು ತಾಯಿಯ ಪ್ರೀತಿ ಪರ್ವತಕ್ಕಿಂತಲೂ ದೊಡ್ಡದೆಂಬುದನ್ನು ಸಾವಿತ್ತು ಪಡಿಸುತ್ತವೆ.
ಯಾವುದೇ ಒಂದು ಹೆಣ್ಣು ವೇಶ್ಯೆ ಎನ್ನುವ ನರಕಯಾತನೆಗೆ ಕಾಲಿಡಲು ಬಯಸುವುದಿಲ್ಲ ಸಂದರ್ಭ ಅನಿವಾರ್ಯತೆಗಳು ಅವಳನ್ನು ಅ ಸ್ಥಿತಿಗೆ ತಳ್ಳಿರುತ್ತವೆ. 'ವೇಶ್ಯೆಯ ಆತ್ಮಕಥೆ' ಎಂಬ ಪುಸ್ತಕದಲ್ಲಿ ಪುಸ್ತಕದ ಲೇಖಕಿ ನಳಿನಿಯವರು ಹೇಳುವಂತೆ; ಒಬ್ಬೊಬ್ಬ ವೇಶ್ಯೆಯ ಹಿಂದೆ ಇಂತಹ ಹಲವಾರು ಕಣ್ಣೀರಿನ ಕಥೆಗಳೂಂಟು.
ಪ್ರಸ್ತುತ ಕೃತಿಯಲ್ಲಿ ಕವಿಯು 'ಸುಖ ಕೊಟ್ಟರು ನಾ ಸುಳ್ಳೆನೆ ಅಲ್ವಾ.?' ಎನ್ನುವ ಕವನದಲ್ಲಿ
*"ಕನಸಿನ ಕಡಲನ್ನೂ ತಲುಪಲು ನನಗೂ ಆಸೆಯವ್ವ
*ನಾ ಕಂಡ ಕನಸೆಲ್ಲವು ಈ ನರಕದಲ್ಲಿಯೇ ಕರಗಿತವ್ವ"
ಎನ್ನುತ್ತಾ ವೇಶ್ಯೆಯ ಭಾವನೆಯ ನೋವಿನ ನುಡಿಗೆ ಮಿಡಿದಿದ್ದಾರೆ. 'ಜಗತ್ತಿಗೆ ನೀ ತೀಟೆತೀರಿಸುವ ತೊಗಲಿನ ಗೊಂಬೆಯಷ್ಟೆ, ನೆನಪಿರಲಿ' ಎನ್ನುವ ಕವನದಲ್ಲಿ
*"ನೀ ಸುಟ್ಟ ಮನಃಸಾಕ್ಷಿಯು ನಿನಗಷ್ಟೆ ಗೊತ್ತು ಓ ಹೆಣ್ಣೆ..*
*ನಿನ್ನ ಸಂಸಾರದ ಹೊಣೆ ತಿಳಿಯದೆ ನಿನ್ನ ಹೆಣಗುವ*
*ಈ ಜೀವಂತ ಹೆಣಗಳಿಗೇನು ಗೊತ್ತು.?"*
ಎನ್ನುತ್ತಾ ವೇಶ್ಯೆಯ ದಾರುಣದ ಬದುಕಿಗೆ ವ್ಯಥೆಯನು ವ್ಯಕ್ತಪಡಿಸಿದ್ದಾರೆ. ಇಲ್ಲಿ ಕವಿಯು ಮೌಲ್ಯಗಳನ್ನು ಸಾಯಲು ಬಿಡಲಿಲ್ಲ ಎನ್ನುವುದು ಗಮನಾರ್ಹ.
'ಮಳಿ ಬಂತ್ರೋ ಯಪ್ಪಾ..!' ಎನ್ನುವ ಕವನದಲ್ಲಿ
"ಬಿಸಿಲು ಬಡಿತಿತ್ತು ಮಿರ ಮಿರ
ಕಪ್ಪೆ ಅಂತಿತ್ತು ಕೊರ ಕೊರ
ಥಟ್ಟಂತ ಮಳೆ ಸುರಿಯಿತು ಸುರ ಸುರ"
ಎಂದು ಪ್ರತಿಯೊಂದು ಸಾಲುಗಳ ಕೊನೆಯಲ್ಲಿ ಜೋಡುನುಡಿಗಳೊಂದಿಗೆ ಅಂತ್ಯ ಪ್ರಾಸ ಹೆಣೆದು ಬರೆಯುವ ಕವಿಯ ಕಾವ್ಯ ಶೈಲಿ ಮೆಚ್ಚುವಂತದ್ದು.
'ಹೀಗಿದರೆ ಹೆಂಗಿರುತಿತ್ತು...?' ಎನ್ನುವ ಕವನದಲ್ಲಿ ಸ್ತ್ರೀಯಲ್ಲಿ ಉಂಟಾಗುವ ಪ್ರಕೃತಿಯ ಸಹಜ ಕ್ರಿಯೆಗೆಯನ್ನು ಕೀಳು ಎಂದು ಬಿಂಬಿಸುವ ಕೆಲವೊಂದಿಷ್ಟು ಪುಂಡ ಪುರುಷರಿಗೆ 'ಹೆಣ್ಣು ಅನುಭವಿಸುವ ನೋವು ಯಾತನೆಗಳು ನಿಮಗಿರಬೇಕಿತ್ತು' ಎಂದು ಹೇಳುವುದರ ಮೂಲಕ ಕವಿಯು ಮಹಿಳಾಪರ ಧ್ವನಿ ಎತ್ತಿದ್ದಾರೆ. ಈ ರೀತಿ ಕವನ ಸಂಕಲನದ ಉದ್ದಕ್ಕೂ ಮಹಿಳೆಯರ ಪರ ಧ್ವನಿಯೆತ್ತಿರುವುದು ಕಂಡುಬರುತ್ತದೆ.
'ದೇವರಿಗೊಂದು ಶಾಪದ ಹರಕೆ' ಎನ್ನುವ ಕವನದಲ್ಲಿ
"ಕಿತ್ತುಕೊಳ್ಳುಲು ನಿಶ್ಚಯ ಮಾಡಿದ ನೀನು
ಅವಳನ್ನು ಕೊಡುವ ಮನಸ್ಸೇಕೆ ಮಾಡಿದೆ ..?
ನಿನ್ನಲ್ಲಿ ಕರೆಸಿಕೊಂಡವರನ್ನು
ನೀ ಮರಳಿ ಕಳಿಸುವುದಿಲ್ಲವೇಕೆ..? ಇದು* *ನಿನ್ನ ನೀಚತನವೋ..?
ಅವಳಿಲ್ಲದೆ ಮಕ್ಕಳು ಪರದಾಡುವ ಪಾಡನ್ನು
ನೋಡಬಯಸುವ ಕಟುಕ ಕುಲದವನೋ..?"
ಎನ್ನುತ್ತಾ ಇಲ್ಲಿ ತಾಯಿಯ ಮೇಲಿನ ಪ್ರೀತಿಗೆ ಆ ದೇವರನ್ನೇ ನ್ಯಾಯದ ಕಟ್ಟಕಟೆಯಲ್ಲಿ ನಿಲ್ಲಿಸಿ ಪ್ರಶ್ನಿಸುವ ಎದೆಗಾರಿಕೆ ತೋರಿದ್ದಾರೆ.
ಹೆಣ್ಣು ಕೊಟ್ಟ ಮನೆಗೆ ಹೋಗುವಳು ಅವಳನ್ನು ಓದಿಸಿ ಏನ್ ಮಾಡುವುದು ಎಂಬ ತಪ್ಪು ಮನೋಭಾವ ಇಂದಿನ ಆಧುನಿಕ ಯುಗದಲ್ಲಿಯೂ ಕೆಲವರಲ್ಲಿ ಮನೆ ಮಾಡಿದೆ. ಇಂತಹ ತಪ್ಪು ಮನೋಭಾವವನ್ನು 'ಹೆಣ್ಣು ಮಗಳನ್ನು ಓದಿಸಿ ಎನ್ ಮಾಡ್ಲಿ..?' ಎನ್ನುವ ಕವನವು ದೂರ ಮಾಡುತ್ತದೆ.
"ಎಷ್ಟೋದಿದ್ರೂ ಕಮ್ಮಿನೆ ಈ ಹೆಣ್ಣು ಮಕ್ಕಳು
ದೇಶದ ಅಭಿವೃದ್ಧಿಯನ್ನು ಹೆಣ್ಣು ಮಕ್ಕಳ
ಸಾಧನೆಯಲ್ಲಿ ಕಾಣಬೇಕು"
ಎಂದು ಕವಿಯು ತಿಳಿಹೇಳುವುದು ನಾವಿಲ್ಲಿ ಕಾಣಬಹುದು.
ಕಲಬೆರಕೆಗಳ ಬಗ್ಗೆ ಸೂಕ್ಷ್ಮವಾಗಿ ವಿವರಿಸುತ್ತ 'ಮಾಡಿದ್ದುಣ್ಣೊ ಮಾರಾಯ' ಎನ್ನುವ ಕವನದಲ್ಲಿ ಕವಿಯು
"ದೇಹವೂ ಹೊಲಸೇದ್ದು ಹೋಗುತ್ತಿದೆ
ಈ ಹೈಬ್ರಿಡ್, ಫಾಸ್ಟಫುಡ್ ಮಿಶ್ರಿತ ಆಹಾರದಿಂದ"
ಎಂದು ಕಳವಳವನ್ನು ವ್ಯಕ್ತಪಡಿಸುತ್ತಾರೆ. ಮುಂದುವರಿದು ನಾನಾ ರೀತಿಯ ಕಲಬೆರಿಕೆಗಳ ಕುರಿತು ಈ ಕವನದಲ್ಲಿ ವಿವರಿಸಿರುವುದು ಕಂಡು ಬರುತ್ತದೆ.
ಓದುತ್ತಿದ್ದಂತೆ ನನ್ನ ಕಣ್ಣಂಚು ಒದ್ದೆ ಗೊಳಿಸಿದ್ದು 'ನೀನಿರಬೇಕಿತ್ತು ಅಪ್ಪ..' ಕವನದ
"ಅಮ್ಮಳು ನಿನ್ನನ್ನು ಅವಳಿದ್ದಲ್ಲಿ ಕರೆದಳಾ..?
ಅಮ್ಮಳಿದ್ದಲ್ಲಿಯೆ ನೀನು... ಬಯಸಿ ಹೋದೆಯಾ..?"
ಎಂಬ ಈ ಸಾಲುಗಳು...
'ತಾಯಿಯ ಕರುಳಿನಂತೆಯಲ್ಲವೇ..?' ಎನ್ನುವ ಕವನದಲ್ಲಿ
"ತಾಯಿಯ ಕರಳು ಬೇರೆಯಾದರೇನು?
ಸ್ನೇಹಿತರ ಬಂಧವೂ ತಾಯಿಯ ಕರುಳಿನಂತೆಯಲ್ಲವೇ..?
ಎನ್ನ ಬಿನ್ನಹವನ್ನು ಕೇಳು ಓ..! ಸೃಷ್ಟಿಕರ್ತನೆ
ವಂಚಿಸಬೇಡ ನನ್ನನ್ನೂ,
ಇವರ ಪ್ರೀತಿಯೂ ನನಗೆ ನನ್ನ ತಂದೆಯಂತೆ"
ಎಂದು ಹೇಳುತ್ತಾ ಸ್ನೇಹಿತರಲ್ಲಿಯೇ ತನ್ನ ತಂದೆ ತಾಯಿಗಳನ್ನು ಕಾಣುವ ಕವಿಯು ಸ್ನೇಹಕ್ಕೆ ಎಷ್ಟೊಂದು ಶಕ್ತಿ ಇದೆ ಎಂಬುವುದು ಸಾಬೀತು ಪಡಿಸುತ್ತಾರೆ.
ನಾವು ಚಿಕ್ಕವರಿದ್ದಾಗ ಅಜ್ಜ ಅಜ್ಜಿಯರೊಂದಿಗೆ ಹೆಚ್ಚು ಬೆರೆಯುತ್ತಿದ್ದೆವು. ಕಥೆ ಹೇಳು ಎಂದು ಪೀಡಿಸುತಿದ್ದೆವು. ಅಂದಿನ ಆ ದಿನಗಳೇ ಅತ್ಯಂತ ಸುಮಧುರ..! ಆದರೆ, ಇಂದಿನ ಮೊಬೈಲ್ ಹಾವಳಿಯಲ್ಲಿ ಈ ಅನ್ಯೋನ್ಯತೆ ಕಡಿಮೆಯಾಗುತ್ತಿದೆ. ಪಿಜ್ಜಾ-ಬರ್ಗರ್, ಮ್ಯಾಗಿ, ನೂಡಲ್ಸ್ ಇತ್ಯಾದಿ ಟುಸ್ ಪುಸ್ ತಿಂಡಿಗಳ ಹಾವಳಿಯಲ್ಲಿ ಅಜ್ಜಿ ಮಾಡುವ ರುಚಿಕರ ತಿನಿಸುಗಳು ಕಾಣೆಯಾಗುತ್ತಿವೆ.
ಈ ಎಲ್ಲ ಅಂಶಗಳನ್ನು ಗಮನಿಸಿದ ಕವಿಯು 'ಅಜ್ಜ ಅಜ್ಜಿ ಇರಬೇಕಿತ್ತು ಅಲ್ವಾ..' ಎನ್ನುವ ಕವನದಲ್ಲಿ
"ಎತ್ತ ನೋಡಿದರತ್ತ ಸೆಲ್ ಫೋನುಗಳು
ಕಮ್ಮಿಯಾಗಿಹರು ಅಜ್ಜ ಅಜ್ಜಿಯಂದಿರು
ಎಲ್ಲಿ ಮಾಯವಾಯಿತು ಅಜ್ಜ ಹೇಳುವ ಕಥೆಗಳು ..?
ಯಾವ ಮೂಲೆ ಸೇರಿತು ಅಜ್ಜಿ ಮಾಡುವ ರುಚಿಕರ ತಿಂಡಿ ತಿನಿಸುಗಳು..?"
ಎಂದು ಹೇಳಿರುವುದು ವಾಸ್ತವಿಕತೆಯಿಂದ ಕೊಂಡಿದೆ.
ಈ ಸಂಕಲನದಲ್ಲಿನ ಕೆಲವು ಕವನಗಳು ಸ್ತ್ರೀ ವೇದನೆಯನ್ನು ಪ್ರಚೋದಪಡಿಸಿದರೆ, ಹಲವು ಕವನಗಳು ತಾಯಿ ಪ್ರೀತಿಯ ಮಹತ್ವ ತಿಳಿಸುತ್ತವೆ.
ಮಾತೃವಿನ ಕುರಿತು ಕವನ ಮೂಡಿಸುವಾಗ ಕವಿಯು ಮಗುವಾಗಿ ತನ್ನ ಭಾವನೆ, ನೋವುಗಳನ್ನು ಹೊರ ಹಾಕಿದ್ದಾರೆ. ಆದರೆ, ಪದಪುಂಜಗಳ ಜೋಡಣೆ ಶಬ್ದಾಲಂಕಾರಗಳಲ್ಲಿ ಹಿರಿಕರನ್ನೇ ಮೀರಿಸಿದ್ದಾರೆ. ಅವ್ವನ ಕುರಿತು ಮೂಡಿದ ಕವನಗಳು ಕಣ್ಣರೆಪ್ಪೆ ಒದ್ದೆಗೊಳಿಸದೆ ಇರಲಾರವು. ಬಾಲ್ಯದಿಂದ ಹಿಡಿದು ತಾನು ಅನುಭವಿಸಿದ ನೋವುಗಳು ಮತ್ಯಾರಿಗೂ ಬರದೆ ಇರಲಿ ಎಂಬಂತ ಸಮಾಜಪರ ಕಾಳಜಿಯೂ ಕವನಗಳ ಮೂಲಕ ಎತ್ತಿ ಹಿಡಿದಿದ್ದಾರೆ. ಹೀಗಾಗಿಯೇ ಇಲ್ಲಿನ ಎಲ್ಲಾ ಕವನಗಳು ತುಂಬಾ ವಿಶೇಷವಾಗಿವೆ.
ಗಟ್ಟಿಯಾದ ಕವನಗಳ ಮೂಲಕ ಸಾಹಿತ್ಯ ಲೋಕಕ್ಕೆ ಹೆಜ್ಜೆ ಇಟ್ಟ ಸ್ನೇಹಜೀವಿ ಅಜೇಯ್ ಪಿ ಎಸ್ ಅವರಿಗೆ ಅಭಿನಂದನೆಗಳು. ಇವರಿಂದ ಇನ್ನಷ್ಟು ಹೆಚ್ಚಿನ ಮೌಲ್ಯಯುತ ಕೃತಿಗಳು ಹೊರಚುಮ್ಮಿ ಕನ್ನಡಮ್ಮನ ಮಡಿಲಿಗೆ ಸೇರಲೆಂದು ಆಶಿಸುತ್ತೇನೆ.
ಲೇಖಕ ಅಶ್ವಜೀತ ದಂಡಿನ ,ಮಾಳೆಗಾಂವ , ಬೀದರ
,ಪ್ರತಿಗಳಿಗಾಗಿ ಸಂಪರ್ಕಿಸಿ:- 7411914320