ನಮ್ಮ ರೈತ
ನಮ್ಮ ರೈತ
ಹಣೆಯ ಮೇಲೆ ಕೈಯ್ಯನಿಟ್ಟು
ಮಳೆಯ ಕಂಡು ಖುಷಿಯ ಪಟ್ಟು,
ಕಳೆಯ ಕಿತ್ತು ಹದವ ಮಾಡಿ
ನಿಂತ ಭುವಿಗೆ ನೇಗಿಲಿಟ್ಟು..
ರಾಗಿ, ಭತ್ತ, ಹೆಸರು, ತೊಗರಿ,
ಉದ್ದು ಕಾಳುಗಳೆಲ್ಲ ಚೆಲ್ಲಿ,
ಕುಣಿದು ಹಾಡುತ್ತಿಹನು ಖುಷಿಗೆ
ಮಳೆಗೆ ತನ್ನ ಮೈ ಮನವ ಚೆಲ್ಲಿ..
ಹದಕ್ಕೆ ಮಳೆಯು ಬೀಳುತ್ತಿರಲು
ಮೊಳಕೆಯೊಂದು ಚಿಗುರುತ್ತಿರಲು,
ಬೆಳೆಯ ಮಧ್ಯ ಕಳೆಯ ತೆಗೆದು
ಅದಕ್ಕೊಂದಿಷ್ಟು ಗೊಬ್ಬರವ ಹಾಕಲು..
ಬೆಳೆದ ಬೆಳೆಯು ಕೈಗೆ ಸೇರುತ್ತಿರಲು
ಅವನ ಮೊಗವ ನೋಡಲು ಹಿತ,
ಹಂಚಿ ಅಳೆದು ಕೂಡಿ ಜೊತೆಗೆ
ನೀಡುವನೊಬ್ಬನೇ ನಮ್ಮ ರೈತ....
ಮಹದೇವಸ್ವಾಮಿ ಎಂ ಕೆ
ಮಡಹಳ್ಳಿ