ಮಲ್ಲಮ್ಮ ಶಿವರಾಜ ಕಾಳಗಿ

ಮಲ್ಲಮ್ಮ  ಶಿವರಾಜ ಕಾಳಗಿ

ಸರಳ ಜೀವನ, ಉನ್ನತ ವಿಚಾರ, ಶುದ್ಧ ಕಾರ್ಯದ ಸಹೋದರಿ ಮಲ್ಲಮ್ಮ ಎಸ್. ಕಾಳಗಿರವರು ನಮ್ಮ ನಡುವಿನ ಬಹುಮುಖ ವ್ಯಕ್ತಿತ್ವದ ಹಿರಿಯ ಜೀವಿಗಳಾಗಿದ್ದಾರೆ. ಅಪರಿಮಿತವಾದ ಜೀವನೋತ್ಸಾಹ, ಆತ್ಮವಿಶ್ವಾಸ, ಅಪಾರ ಕುತೂಹಲ ಮೈಗೂಡಿಸಿಕೊಂಡಿರುವ ಮಲ್ಲಮ್ಮ ಕಾಳಗಿರವರು ಶಿಕ್ಷಣ ಸೇರಿದಂತೆ ಸಮಾಜದ ಬಹುಮುಖ ಆಯಾಮಗಳಲ್ಲಿ ಮೌಲಿಕ ಕಾರ್ಯಗೈದು ಹೆಸರು ಮಾಡಿದವರು.

ಸಮಾಜದ ಒಡಲಿನಿಂದ ಬೆಳೆದು ಬಂದ ಸಹೋದರಿ ಮಲ್ಲಮ್ಮರವರು ವಿದ್ಯಾರ್ಥಿಗಳನ್ನು ಬೆಳೆಸುವುದರೊಂದಿಗೆ ಸಮಾಜದ ಬೆಳವಣಿಗೆಗೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದವರು. ಸಮಾಜದ ಋಣ ತೀರಿಸಲು ಹಿರಿದಾದ ಕನಸು ಕಂಡು ಅದರ ಸಫಲತೆಗಾಗಿ ಲಿಂಗಮೆಚ್ಚಿ ಅಹುದೆನ್ನುವಂತೆ ಜೀವನ ಕ್ರಮ ರೂಢಿಸಿಕೊಂಡವರು.

"ಕೊಲುವನೆಂಬ ಭಾಷೆ ದೇವನದಾದರೆ, ಗೆಲುವೆನೆಂಬ ಭಾಷೆ ಭಕ್ತನದು' ಎಂಬ ಶಿವಶರಣರ ವಾಣಿಗೆ ಕಟ್ಟುಬಿದ್ದಂತೆ ತಮ್ಮ ಇಡೀ ಬದುಕನ್ನು ಶೈಕ್ಷಣಿಕ ರಂಗಕ್ಕೆ, ಸಾಹಿತ್ತಿಕ ಮತ್ತು ಸಾಂಸ್ಕೃತಿಕ ರಂಗಕ್ಕೆ ಮೀಸಲಿಟ್ಟು ಅತ್ಯಂತ ಶೃದ್ದೆಯಿಂದ ದಕ್ಷತೆಯಿಂದ ನಿಭಾಯಿಸುವುದರಲ್ಲೇ ಸವೆಸಿದ್ದು ಸಾರ್ವತ್ರಿಕ ಸತ್ಯ. ನಾಡು ನುಡಿಗೆ ಅದರಲ್ಲಿ ಶಿಕ್ಷಣ ಕ್ಷೇತ್ರಕ್ಕೆ

ಇವರ ಕೊಡುಗೆ ಅಪಾರ. ಬಹುಮುಖ ವ್ಯಕ್ತಿತ್ವದ ಮಲ್ಲಮ್ಮ ಕಾಳಗಿರವರು ಕಲಬುರಗಿಯ ರೋಜಾ ಬಡಾವಣೆಯ ಕೋಣಿನ್ ಸುಸಂಸ್ಕೃತ ಅವಿಭಕ್ತ ಕುಟುಂಬದಲ್ಲಿ ಜನಿಸಿದ ಇವರು ತಮ್ಮ ಶಿಕ್ಷಣವನ್ನು ಹಲವಾರು ಕಷ್ಟಕಾರ್ಪಣ್ಯಗಳ ಮಧ್ಯೆ ಪಡೆದುಕೊಂಡು ಮಹಗಾಠಿವನ ಸುಸಂಸ್ಕೃತ ಮನೆತನದ ಶಿವರಾಜ ಕಾಳಗಿ ಅವರ ಧರ್ಮಪತ್ನಿಯಾಗಿ ಕಲಬುರ್ಗಿಯಲ್ಲಿ ಬಂದು ನೆಲೆಸಿದ್ದಾಗಿನಿಂದ ಒಬ್ಬ ಸಹೋದರನಾಗಿ ಇವರನ್ನು ಅತ್ಯಂತ ಸಮೀಪದಿಂದ ಕಂಡುಕೊಂಡಿದ್ದೇನೆ.

ಮಲ್ಲಮ್ಮ ಎಸ್. ಕಾಳಗಿರವರು ಶೈಕ್ಷಣಿಕ ಕ್ಷೇತ್ರಕ್ಕೆ ಹಿರಿದಾದ ಕೊಡುಗೆ ಸಲ್ಲಿಸುವುದರ ಜೊತೆಗೆ ಕೌಟುಂಬಿಕ ಬದುಕಿನಲ್ಲಿಯೂ ಸಾಕಷ್ಟು ಬೆಳೆವಣಿಗೆಯನ್ನು ಕಂಡವರು. ಇವರಿಗೆ ಒಬ್ಬ ಹೆಣ್ಣು ಮಗಳು ಒಬ್ಬ ಗಂಡುಮಗ, ಇಬ್ಬರು ಮಕ್ಕಳಿಗೆ ಸುಶಿಕ್ಷತರನ್ನಾಗಿಸಿದ್ದರಲ್ಲದೇ ಉತ್ತಮ ಜೀವನ ಸಾಗಿಸುವಪಾಠ ಕಲಿಸಿದ್ದು ಸಂತಸ. ತಂದೆ ತಾಯಿಗೆ ತಕ್ಕದಾದ ರೀತಿಯಲ್ಲಿ ಮಕ್ಕಳು ಉತ್ತಮ ಸಂಸ್ಕಾರ ಉಳ್ಳವರಾಗಿದ್ದಾರೆ. ಇಷ್ಟಕ್ಕೆಲ್ಲ ಸಹೋದರಿಯ ಹೆಗಲಿಗೆ ಹೆಗಲು ಕೊಟ್ಟವರು ಅವರ ಪತಿ ಸಹೋದರ ಶಿವರಾಜ ಕಾಳಗಿ ಅವರನ್ನು ನಾವು ಈ ಸಂದರ್ಭದಲ್ಲಿ ನೆನೆಯಬೇಕು. ಎಷ್ಟೇ ಕೆಲಸದ ಒತ್ತಡವಿದ್ದರೂ ಅವರ ಸಾಹಿತ್ಯ ಕೃಷಿಗೆ ನೀರೆರೆದು ಪೋಷಿಸಿದ ಹೃದಯವಂತ. ವಿದ್ಯಾರ್ಥಿಗಳನ್ನು ಕಂಡರೆ ಅಪಾರ ವಾತ್ಸಲ್ಯ. ತಮ್ಮಲ್ಲಿರುವುದೆಲ್ಲವನ್ನು ಕೊಟ್ಟುಬಿಡಬೇಕೆಂಬ ಧಾರಳತೆ ಮತ್ತು ಬಡಮಕ್ಕಳಿಗೆ ಸಹಾಯ ಮಾಡುವ ಮನೋಧೋರಣೆ ಸಹೋದರಿ ಮಲ್ಲಮ್ಮರಲ್ಲಿದೆ. ತಮ್ಮದೇ ಕೊನೆ ಮಾತೆಂಬ ಗರ್ವವಿಲ್ಲ. ತಮಗೆ ಸಂದೇಹವಿದ್ದಾಗ ಅದನ್ನು ಹೇಳಿಕೊಳ್ಳುವ ಮಟ್ಟಿಗೆ ವಿನಯ. ಇನ್ನೂ ನನಗೆ ಅರ್ಥವಾಗಿಲ್ಲ ಆದ ಮೇಲೆ ಹೇಳುತ್ತೇನೆಂಬ ಸ್ವಭಾವ ಅವರಲ್ಲಿದೆ. ಜೀವನ ಮತ್ತು ಕಲೆ ಎರಡರಲ್ಲಿಯೂ ಶಿಸ್ತುಕಾಯ್ದುಕೊಂಡು ಬಂದಿರುವ ದಾಸೋಹಮೂರ್ತಿ.ಶರಣರ ಮತ್ತು ಧಾರ್ಮಿಕ ತತ್ವಗಳಲ್ಲಿ ಬಲವಾದ ನಂಬಿಕೆ ಇಟ್ಟುಕೊಂಡವರು. ಜೀವನವನ್ನು ಸಮಾಜಕ್ಕೆ ಮತ್ತು ಸರ್ವರ ಸಂವರ್ಧನೆಗೆ ಮೀಸಲಾಗಿಟ್ಟಿದ್ದಾರೆ.

ಎಲ್ಲರನ್ನು ಪ್ರೀತಿಸುವ ಗುಣ, ಉತ್ತಮ ಸಾಹಿತಿ, ಕಲಾವಿದರನ್ನು, ಶಿಕ್ಷಕರನ್ನು, ವಿದ್ಯಾರ್ಥಿಗಳನ್ನು ಕಂಡರೆ ಪ್ರೀತಿ ಮತ್ತು ಗೌರವ. ಎಲ್ಲರ ಜೊತೆ ಬೆರೆತು ಸ್ನೇಹದಿಂದ ಸಾಗಿರುವ ಇವರು ಎಲ್ಲರ ಪ್ರೀತ್ಯಾಧಾರಕ್ಕೆ ಕಾರಣವಾಗಿದ್ದಾರೆ. ಸಂತೋಷದಲ್ಲಿ ಹಿಗ್ಗದೆ ದುಃಖದಲ್ಲಿ ಕುಗ್ಗದೇ ಸಮಚಿತ್ತತೆಯಲ್ಲಿ ಬದುಕು ನಿರ್ವಾಹಿಸಿಕೊಂಡು ಬಂದಿದ್ದಾರೆ.ಸಹೋದರಿ ಮಲ್ಲಮ್ಮ ಕಾಳಗಿ ಅವರ ಮನಸ್ಸು ವಿಶಾಲವಾಗಿದೆ.

ವೃತ್ತಿಯಿಂದ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಎ.ಐ.ಪಿ.ಸಿ, ಕನ್ನಡ ಸಾಹಿತ್ಯ ಪರಿಷತ್ತು, ಕಾವ್ಯಂಜಲಿ,ಮೊದಲಾದ ಸಂಸ್ಥೆಗಳಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸುವುದರೊಂದಿಗೆ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಮಾಡುವುದರ ಜೊತೆ ಜೊತೆಗೆ ಸದಾ ಹಸನ್ಮುಖಿಯಾಗಿ ತುಂಬು ಜೀವನವನ್ನು ಸಾಗಿಸುತ್ತಿದ್ದು ಆಗಾಗ ಬರೆದ, ಅಲ್ಲಲ್ಲಿ ವಾಚಿಸಿದ ಕವಿತೆಗಳನ್ನು ಒಂದೆಡೆ ಸೇರಿಸಿ "ಪಾತಾಳಗಂಗೆ" ಎನ್ನುವ ಕವನ ಸಂಕಲನ ಹೊರತ್ತರುತ್ತಿರುವುದು ಹೆಮ್ಮೆಪಡುವ ವಿಷಯ. ಅವರ ಈ ಸಾಹಿತ್ಯದ ಪಯಣ ಹೀಗೆ ಮುಂದುವರೆಯಲಿ, ಅವರಿಂದ ಇನ್ನೂ ಹೆಚ್ಚು ಹೆಚ್ಚು ಕೃತಿಗಳು ಪ್ರಕಟಗೊಳ್ಳಲಿ ಎಂದು ಬಸವಾದಿ ಶರಣರಲ್ಲಿ ಪ್ರಾರ್ಥಿಸುತ್ತೇನೆ.

                                      ಡಾ. ಶರಣಬಸಪ್ಪ ವಡ್ಡನಕೇರಿ